ಅಪೂರ್ವ ಅಂಚೆ ಚೀಟಿ ಸಂಗ್ರಹಕಾರ ಮೇಲೂರಿನ ಪ್ರಭಾಕರ್

By: ಡಿ.ಜಿ.ಮಲ್ಲಿಕಾರ್ಜುನ
Subscribe to Oneindia Kannada

ಇಂದು (ಅಕ್ಟೋಬರ್ 9) ವಿಶ್ವ ಅಂಚೆ ದಿನ. ವಿಶ್ವದ ಸುಮಾರು 150 ರಾಷ್ಟ್ರಗಳಲ್ಲಿ ವಿಶ್ವ ಅಂಚೆ ದಿನ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿಡ್ಲಘಟ್ಟ ತಾಲೂಕು ಮೇಲೂರಿನ ಪ್ರಭಾಕರ್ ಅವರನ್ನು ಪರಿಚಯಿಸಿದರೆ ಹೇಗೆ ಎಂಬ ಆಲೋಚನೆ ಬಂತು. ಅದರ ಫಲಿತಾಂಶವೇ ಇಂದಿನ ಲೇಖನ. ಅಂಚೆ ದಿನಕ್ಕೂ ಈ ಪ್ರಭಾಕರ್ ಗೂ ಅದೇನು ಸಂಬಂಧ ಅಂತೀರಾ? ಈ ಲೇಖನ ಓದಿದ ನಂತರ ನಿಮಗೆ ಗೊತ್ತಾಗುತ್ತದೆ.

ಪುರಾತನ ಕಾಲದ ನೀರಾವರಿ ಪದ್ಧತಿ, ಬೇಸಾಯದ ವಿಧಾನ, 120 ವರ್ಷಗಳ ಹಿಂದೆ ನೀರೆತ್ತಲು ಸ್ವಯಂ ಚಾಲಿತ ಯಂತ್ರ, ಕೃಷಿ ಪರಿಕರಗಳು ಸೇರಿದಂತೆ ಕಾಲಾನುಕ್ರಮದಲ್ಲಿ ವಿಶ್ವದ ಕೃಷಿ ಚರಿತ್ರೆ ಮತ್ತು ವರ್ತಮಾನವನ್ನು ಅಂಚೆ ಚೀಟಿಗಳ ಮೂಲಕ ವಿವರಣೆಗಳೊಂದಿಗೆ ಪ್ರದರ್ಶಿಸಿ ಸಿಂಗಾಪೂರ್, ಜಪಾನ್ ಮತ್ತು ಥಾಯ್ಲೆಂಡ್ ದೇಶಗಳಲ್ಲಿ ಪ್ರಶಸ್ತಿ ಪಡೆದಿದ್ದೇನೆ' ಎಂದು ಮಾತೇ ನಿಲ್ಲಿಸಿಬಿಟ್ಟರು ಮೇಲೂರಿನ ಎಂ.ಆರ್.ಪ್ರಭಾಕರ್.[ಹಿಂದು ದೇವತೆಗಳೊಂದಿಗೆ ಅಮೆರಿಕ ಅಂಚೆಚೀಟಿ]

ಅವರ ಪರಿಚಯ, ಸಾಧನೆ ಖಂಡಿತಾ ಅಷ್ಟಕ್ಕೇ ನಿಲ್ಲೋದಿಲ್ಲ. ಮೇಲೂರಿನ ಎಂ.ಆರ್.ಪ್ರಭಾಕರ್ ಅವರಿಗೆ ಅಂಚೆ ಚೀಟಿ ಸಂಗ್ರಹ, ನಾಣ್ಯ- ನೋಟುಗಳ ಸಂಗ್ರಹ, ಸುಂದರ ಹಸ್ತಾಕ್ಷರ ಕಲೆ ಕ್ಯಾಲಿಗ್ರಫಿ ಮತ್ತು ಅಂಚೆ ಚೀಟಿಗಳನ್ನು ಬಳಸಿ ಕೊಲಾಜ್ ಚಿತ್ರಣಗಳ ವೈವಿಧ್ಯಮಯ ಹವ್ಯಾಸ ಇದೆ. ದೇಶಾದ್ಯಂತ 1,250 ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ಸಹ ನೀಡಿದ್ದಾರೆ.

ವಿಮಾನಯಾನ, ಮಕ್ಕಳ ಚಿತ್ರಕಲೆ, ವಿಶ್ವಸಂಸ್ಥೆ, ಒಲಿಂಪಿಕ್ ಗೇಮ್ಸ್, ವಿಶ್ವ ಅಂಗವಿಕಲರ ಕಲ್ಯಾಣ, ಅಂಚೆ ಸಾಮಗ್ರಿ, ಪತ್ರಿಕೋದ್ಯಮ, ಅಂಚೆ ಚೀಟಿ ಅವಿಷ್ಕರಿಸಿದ್ದ ಸರ್ ರೊಲ್ಯಾಂಡ್ ಹೆಲ್, ಸ್ಕೌಟ್ಸ್ ಮತ್ತು ಗೈಡ್ಸ್, ಮಾಹಿತಿ ತಂತ್ರಜ್ಞಾನ, ಪ್ರಕೃತಿ, ಪರಿಸರ, ನೃತ್ಯ, ಸಂಗೀತ, ಸಿನಿಮಾ..

ವಿಶ್ವಶಾಂತಿದೂತ ಬಾಪು, ವಾಸ್ತುಶಿಲ್ಪ, ಆರೋಗ್ಯ, ವಜ್ರ, ಮುತ್ತು, ರತ್ನ, ಪರಿಸರ ಸಂರಕ್ಷಣೆ, ವ್ಯವಸಾಯ, ಹಣ್ಣು ತರಕಾರಿ,ಕ್ರಿಮಿ ಕೀಟಗಳು, ಪತಂಗ, ರಕ್ತದಾನ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಅಂಚೆ ಚೀಟಿಗಳು ಮತ್ತು ಸುಂದರ ಅಕ್ಷರಗಳಲ್ಲಿ ವಿವರಣೆಯನ್ನು ಒದಗಿಸಿ, ಮಾಹಿತಿ ಕೋಶವನ್ನಾಗಿಸಿದ್ದಾರೆ.[ತೇಜಸ್ವಿ ಜನ್ಮದಿನಕ್ಕೆ ಫೋಟೋಗ್ರಾಫರ್ ಹಂಚಿಕೊಂಡ ಅನುಭವ]

ಮೈಸೂರು ಅರಸರು, ಟಿಪ್ಪು ಕಾಲದ ನಾಣ್ಯಗಳು, ಅಮೆರಿಕಾ, ರಷ್ಯಾ, ಫ್ರಾನ್ಸ್, ಇಂಗ್ಲಂಡ್, ಇಟಲಿ, ವಿಯೆಟ್ನಾಂ, ಜೆಕಸ್ಲೋವಿಯ, ಕೊಲಂಬಿಯ, ಬರ್ಮಾ, ಜಪಾನ್, ಕ್ರೋಷಿಯಾ, ಯೆಮೆನ್, ಗ್ರೀಸ್, ಬ್ರೆಜಿಲ್, ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳ ನಾಣ್ಯ ಮತ್ತು ನೋಟುಗಳ ಸಂಗ್ರಹವೇ ಮೇಲೂರು ಪ್ರಭಾಕರ್ ಬಳಿ ಇವೆ.

ಗ್ರಾಮಾಂತರ ಜನತೆಗಾಗಿ ಅಂಚೆ ಚೀಟಿ ಸಂಗ್ರಹಣೆ' ಎಂಬ ಇವರ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದೆ. ಗ್ರಾಮೀಣ ಭಾಗದ ಮಕ್ಕಳಿಗಾಗಿ ಮತ್ತು ಜನರಿಗಾಗಿ ಅಂಚೆ ಚೀಟಿ ಮತ್ತು ನಾಣ್ಯ ನೋಟುಗಳ ಸಂಗ್ರಹದ ಮೂಲಕ ನಮ್ಮ ಹಿರಿಮೆಯನ್ನು ತಿಳಿಸಲೆಂದೇ 1978ರಲ್ಲಿ ಪ್ರಥಮ ಬಾರಿಗೆ ಮೇಲೂರಿನಲ್ಲಿ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘವನ್ನು ಸ್ಥಾಪಿಸಿ, ಪ್ರದರ್ಶನ ನಡೆಸಿದ್ದೆವು' ಎನ್ನುತ್ತಾರೆ ಪ್ರಭಾಕರ್.[ಬೆರಗು ಮೂಡಿಸುವ ಕಂಬಳಿಹುಳುಗಳ ಮೋಹಕ ಲೋಕ]

'ಈಗ ಈ ಸಂಘದಿಂದ 1,250 ಪ್ರದರ್ಶನಗಳನ್ನು ಗ್ರಾಮೀಣ ಭಾಗಗಳಲ್ಲಿ ನಡೆಸಿದ್ದೇವೆ. ವಿಶ್ವಶಾಂತಿ, ಸ್ನೇಹ ಸೌಹಾರ್ದತೆ, ಭಾವೈಕ್ಯದ ಸಂದೇಶವನ್ನು ಸಮಾಜಕ್ಕೆ ತಲುಪಿಸುವುದು, ಸಂಸ್ಕೃತಿ, ಪರಿಸರ ಪ್ರೇಮ ಹಾಗೂ ಪರಿಸರ ಸಂರಕ್ಷಣೆ ಪ್ರಾಮುಖ್ಯತೆಯನ್ನು ಅಂಚೆ ಚೀಟಿಗಳ ಮೂಲಕ ಪರಿಚಯಿಸುವುದು ನನ್ನ ಉದ್ದೇಶ' ಎನ್ನುತ್ತಾರೆ ಮೇಲೂರು ಎಂ.ಆರ್.ಪ್ರಭಾಕರ್. ಅವರ ಸಂಪರ್ಕ ಸಂಖ್ಯೆ 9731733303

ಸನ್ಮಾನ, ಪುರಸ್ಕಾರ

ಸನ್ಮಾನ, ಪುರಸ್ಕಾರ

ಥಾಯ್ಲೆಂಡ್, ಸಿಂಗಾಪೂರ್, ಕೊರಿಯಾ, ಕೆನಡಾ ದೇಶಗಳ ಪದಕಗಳು, ಕರ್ನಾಟಕ ಸರಕಾರದ ಪರಿಸರ ಪ್ರಶಸ್ತಿ, ಬೆಳಗಾಂನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಸೇರಿದಂತೆ ವಿವಿಧ ಪುರಸ್ಕಾರಗಳು ಪ್ರಭಾಕರ್ ಅವರ ಸಂಗ್ರಹಕ್ಕೆ ಸಂದಿವೆ. ಇವರ ಸಂಗ್ರಹದಲ್ಲಿನ ವಿವಿಧ ದೇಶಗಳ ನೂರಾರು ಅಂಚೆಚೀಟಿಗಳನ್ನು ವಿವರಣೆಗಳೊಂದಿಗೆ ಜೋಡಿಸಿಟ್ಟು ಕಥಾನಕವನ್ನಾಗಿಸಿರುವ ಮೇಲೂರು ಎಂ.ಆರ್.ಪ್ರಭಾಕರ್, ಡಾ.ರಾಜಕುಮಾರ್ ಅವರೊಂದಿಗೆ.

ದೇಶ-ರಾಜ್ಯ ಪರ್ಯಟನೆ

ದೇಶ-ರಾಜ್ಯ ಪರ್ಯಟನೆ

ಓದಿದ್ದು ಎಸ್‍ಎಸ್‍ಎಲ್ ಸಿ. ಎಚ್ ಎಎಲ್ ನಲ್ಲಿ ಕೆಲಸ ನಿರ್ವಹಿಸುತ್ತಲೇ ಅಂಚೆ ಚೀಟಿಗಳ ಪ್ರದರ್ಶನಕ್ಕಾಗಿ ವಿದೇಶಗಳಿಗೂ ಹೋಗಿ ಬಂದಿದ್ದಾರೆ. ಅಂಚೆ ಚೀಟಿಗಳ ಮೂಲಕ ವಿಶ್ವಶಾಂತಿ, ಸ್ನೇಹ ಸೌಹಾರ್ದ ಮತ್ತು ಭಾವೈಕ್ಯದ ಸಂದೇಶವನ್ನು ತಿಳಿಸುವ ಉದ್ದೇಶದಿಂದ ಸೈಕಲ್ ನಲ್ಲಿ ಒಮ್ಮೆ ಭಾರತ ಪ್ರವಾಸ, ಮತ್ತೊಮ್ಮೆ ಕರ್ನಾಟಕ ಪರ್ಯಟನೆ ಮಾಡಿದ್ದಾರೆ. ಅಖಂಡ ಕೋಲಾರ ಜಿಲ್ಲೆಯನ್ನು ಪಾದಯಾತ್ರೆಯಲ್ಲಿಯೇ ಕ್ರಮಿಸಿದ ಪ್ರಭಾಕರ್, ಗಗನಯಾತ್ರಿ ರಾಕೇಶ್ ಶರ್ಮ ಅವರೊಂದಿಗೆ.

ಜಾನಪದ ಅಕಾಡೆಮಿ ಪುಸ್ತಕ

ಜಾನಪದ ಅಕಾಡೆಮಿ ಪುಸ್ತಕ

ಕರ್ನಾಟಕ ಜಾನಪದ ಅಕಾಡೆಮಿ ಪ್ರಕಟಿಸಿರುವ `ಅಂಚೆ ಜಾನಪದ' ಎಂಬ ಅಪರೂಪದ ಪುಸ್ತಕವನ್ನು ಇವರು ರಚಿಸಿದ್ದಾರೆ. ಜಾನಪದಕ್ಕೆ ಸಂಬಂಧಿಸಿದ ಅಂಚೆಚೀಟಿಗಳ ಸಂಗ್ರಹವುಳ್ಳ ಈ ಬಣ್ಣದ ಚಿತ್ರಗಳ ಪುಸ್ತಕವನ್ನು ಇವರ ಹಸ್ತಾಕ್ಷರ ಬಳಸಿಯೇ ಮುದ್ರಿಸಿರುವುದು ವಿಶೇಷವಾಗಿದೆ.

ಅಂಚೆ ಚೀಟಿ ಪ್ರದರ್ಶನ

ಅಂಚೆ ಚೀಟಿ ಪ್ರದರ್ಶನ

ಅಂಚೆ ಚೀಟಿಯ ಪ್ರದರ್ಶನದಲ್ಲಿ ಅಂಚೆ ಚೀಟಿಗಳ ಕುರಿತಂತೆ ವಿವರಣೆ ನೀಡುತ್ತಿರುವ ಮೇಲೂರು ಪ್ರಭಾಕರ್.

ತಿರುಪತಿ ಪಾದಯಾತ್ರೆ

ತಿರುಪತಿ ಪಾದಯಾತ್ರೆ

ಮೇಲೂರು ಎಂ.ಆರ್.ಪ್ರಭಾಕರ್ ಮತ್ತು ತಂಡದವರು ಪ್ರತಿ ವರ್ಷ ತಿರುಪತಿಗೆ ಪಾದಯಾತ್ರೆಯನ್ನು ಕೈಗೊಳ್ಳುತ್ತಾರೆ, ದಾರಿಯಲ್ಲಿ ಸಿಗುವ ಮತ್ತು ತಂಗುವ ಊರುಗಳಲ್ಲಿ ವೈವಿಧ್ಯಮಯ ಅಂಚೆ ಚೀಟಿಗಳ ಮೂಲಕ ವಿಶ್ವ ಶಾಂತಿಯನ್ನು ಸಾರುತ್ತಾ ಸಾಗುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Melur Prabhakar from Shidlaghatta taluk is a unique stamp collector. He worked in HAL and got so many awards, recognition for stamp collection. He has also collected rare currencies and coins.
Please Wait while comments are loading...