ನಮ್ಮ ರಾಜ್ಯದ ಪವರ್ ಕಟ್ ಗೆ ಈ ಕಾರಣ ಇರಬಹುದಾ?
ಅದೊಂದು ಬೆಂಗಳೂರು ಕನಕಪುರದ ಹಳ್ಳಿ, ಅಲ್ಲಿ ಕುಮಾರ ಎಂಬ ಹುಡುಗ ವಾಸಿಸುತ್ತಿದ್ದ. ಆತನಿಗೆ ಹಕ್ಕಿ ಎಂದರೆ ಎಲ್ಲಿಲ್ಲದ ಪ್ರೀತಿ, ಹಕ್ಕಿ ಹಾರಾಡುತ್ತಿದ್ದರೆ ಸಾಕು, ಅದನ್ನೇ ನೋಡುವುದರಲ್ಲಿ ಮಗ್ನನಾಗಿರುತ್ತಿದ್ದ.
ತನ್ನ ಮನೆಯಲ್ಲಿಯೂ ಹಕ್ಕಿ ಸಾಕಬೇಕೆಂದು ತುಂಬಾನೇ ಆಸೆಪಟ್ಟಿದ್ದ , ತನ್ನ ಅಪ್ಪನ ಬಳಿ ಆಸೆಯನ್ನು ತಿಳಿಸಿ ಮನೆಯಲ್ಲಿ ಪಾರಿವಾಳ, ಬಾವಲಿ, ಗಿಳಿ ,ಹೀಗೆ ಹಲವು ಹಕ್ಕಿಗಳನ್ನು ಸಾಕಲು ಶುರು ಮಾಡಿದ.
ಸಂಜೆ ತನ್ನ ಶಾಲೆ ಬಿಟ್ಟ ಕೂಡಲೇ , ಓಡಿ ಬಂದು ಹಕ್ಕಿಗಳ ಆರೈಕೆಯಲ್ಲಿ ತೊಡಗಿರುತ್ತಿದ್ದ, ಅವುಗಳನ್ನು ಮಕ್ಕಳಂತೆ ಸಾಕುತ್ತಿದ್ದ. ಪಂಜರದಲ್ಲಿ ಸದಾ ಕಾಲ ಕೂಡಿ ಹಾಕದೇ, ಅವುಗಳಿಗೂ ಸ್ವಲ್ಪ ಸ್ವಾತಂತ್ರ್ಯ ಕೊಡುವ ಬಗ್ಗೆ ಚಿಂತಿಸಿ, ಅವನ್ನು ಹಾರಲು ಬಿಟ್ಟು ಮತ್ತೆ ಗೂಡಿಗೆ ಮರಳುವಂತೆ ತರಬೇತಿಯನ್ನು ನೀಡಿದ್ದ. (ಚಹಾ ಮಾರುವ ಚೇಟನ ಬದುಕು ಬೆಂಗಳೂರಿನಲ್ಲಿ ಹಸನು)
ಈತನ ಪ್ರೀತಿಗೆ ಮಾರುಹೋದ ಹಕ್ಕಿಗಳು , ಸಮಯಕ್ಕೆ ಸರಿಯಾಗಿ ಮರಳಿ ಗೂಡು ಸೇರುತ್ತಿದ್ದವು. ಹೀಗೆ ದಿನಚರಿ ಮುಂದುವರಿಯುತ್ತಿತ್ತು.

ರೂಢಿಯಂತೆ ಆ ಸಂಜೆಯೂ ಹಕ್ಕಿಯನ್ನು ಗೂಡಿನಿಂದ ಬಿಟ್ಟಿದ್ದ, ಪಾರಿವಾಳ ಹಾಗೂ ಗಿಳಿಯನ್ನು ಮೊದಲು ಹಾರಲು ಬಿಟ್ಟು, ಅವುಗಳು ಮರಳಿದ ನಂತರ ಬಾವಲಿಯನ್ನು ಬಿಡುವುದು ದಿನನಿತ್ಯದ ಅಭ್ಯಾಸ.
ಆ ದಿನ ಮಾತ್ರ ಗಿಳಿ ಹಾಗೂ ಪಾರಿವಾಳಗಳು ಮರಳಿ ಬಾರಲೇ ಇಲ್ಲ, ಆತಂಕಗೊಂಡ ಕುಮಾರ ದಾರಿಯುದ್ದಕ್ಕೂ ಹುಡುಕುತ್ತಾ ಹೊರಟ ಎಲ್ಲಾದರೂ ತನ್ನ ಹಕ್ಕಿಗಳು ಹಾರಾಡುತ್ತಿರಬಹುದೇ ಎಂದು?
ಹಾಗೆಯೇ ಹೊರಟವನಿಗೆ ಅಲ್ಲಿನ ದೃಶ್ಯವೊದು ಕಂಡು ಸಿಡಿಲು ಬಡಿದಂತಾಗಿತ್ತು. ತನ್ನ ಹಕ್ಕಿಗಳು ವಿದ್ಯುತ್ ತಂತಿಯಲ್ಲಿ ಸತ್ತು ನೇತಾಡುತ್ತಿದ್ದವು. ಅಳುತ್ತಲೇ ಮರಳಿದ ಆತ, ಊಟ ನಿದ್ದೆ ಬಿಟ್ಟು ಕೊರಗತೊಡಗಿದ.
ಮರುದಿನ ವಿದ್ಯುತ್ ನಿಗಮದ ಕಚೇರಿಗೆ ಹೊರಟ ಕುಮಾರ, ನಡೆದ ಘಟನೆಯನ್ನು ಅಧಿಕಾರಿಗಳಿಗೆ ವಿವರಿಸಿ, ಸಂಜೆ ಹೊತ್ತು ತನ್ನ ಹಕ್ಕಿಗಳನ್ನು ಹಾರಾಡಲು ಬಿಡುವ ಕಾರಣದಿಂದ ವಿದ್ಯುತ್ ಕಡಿತಗೊಳಿಸಬೇಕೆಂದು ಬೇಡಿಕೊಂಡ, ಈತನ ಮಾತನ್ನು ಕೇಳಿ ನಕ್ಕ ಅಧಿಕಾರಿಗಳು, ಹಾಗೆ ಮಾಡಲು ಸಾಧ್ಯವಿಲ್ಲ.
ವಿದ್ಯುತ್ ಕಡಿತ ಮಾಡಲು ಇಂಧನ ಸಚಿವರ ಅನುಮತಿ ಇರಬೇಕೆಂದು ಹೇಳಿ ಕಳುಹಿಸಿದರು. ಇದನ್ನು ಕೇಳಿದ ಕುಮಾರ ಇಂಧನ ಸಚಿವರನ್ನು ಭೇಟಿಯಾದ ಹಾಗೂ ಘಟನೆಯನ್ನು ವಿವರಿಸಿ ಪವರ್ ಕಟ್ ಮಾಡುವಂತೆ ಬೇಡಿಕೊಂಡ, ಈತನ ಮಾತುಗಳನ್ನು ಕೇಳಿ ಕೋಪಗೊಂಡ ಸಚಿವರು ಬೈದು ಕಳುಹಿಸಿಕೊಟ್ಟರು.
ಆ ಬೈಗುಳವ ಕೇಳಿ ಕುಮಾರ ದೃಢ ನಿರ್ಧಾರಕ್ಕೆ ಬರುತ್ತಾನೆ, ಅದೇನಪ್ಪಾ ಅಂದರೆ ದೊಡ್ಡವನಾದ ನಂತರ ತಾನೂ ಇಂಧನ ಸಚಿವನಾಗಿ ಪವರ್ ಕಟ್ ಮಾಡಿ ಹಕ್ಕಿಗಳನ್ನು ಕಾಪಾಡಬೇಕು ಎಂದು.
ಅಂದಿನಿಂದ ರಾಜಕೀಯದ ಕಡೆಗೆ ಒಲವಿಟ್ಟ ಬಾಲಕ ನಿರಂತರ ಪರಿಶ್ರಮ ಪಡುತ್ತಿದ್ದ. ಈಗ ಅದೇ ಬಾಲಕ ದೊಡ್ಡವನಾಗಿ ತನ್ನ ಸಾಧನೆಯ ಮೂಲಕ ಇಂಧನ ಸಚಿವರಾಗಿರಬಹುದೇ ಆ ಮೂಲಕ ಹಕ್ಕಿಗಳ ಸಂರಕ್ಷಿಸಲು ಲೋಡ್ ಶೆಡ್ಡಿಂಗ್ ನೆಪವೊಡ್ಡಿ ಪವರ್ ಕಟ್ ಮಾಡುತ್ತಿರಬಹುದೇ ಅನ್ನುವ ಮಾತು ಕನಕಪುರದ ಬೀದಿಗಳಲ್ಲಿ ಕೇಳುತ್ತಿದೆ ಅನ್ನುವುದು ಪಕ್ಕಾ ಸುಳ್ಳು ಸುದ್ದಿ.











Click it and Unblock the Notifications