ಎರಡನೇ ವಿಶ್ವೇಶ್ವರಯ್ಯ : ಎಸ್.ಜಿ.ಬಾಳೆಕುಂದ್ರಿ

Posted By:
Subscribe to Oneindia Kannada
ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ನೀರಾವರಿ ತಜ್ಞರಲ್ಲಿ ನೆನಪಿಗೆ ಬರುವ ಒಂದೇ ಒಂದು ಹೆಸರೆಂದರೆ ಸರ್ ಎಂ ವಿಶ್ವೇಶ್ವರಯ್ಯನವರದು. ಆದರೆ ಅವರಷ್ಟೇ ಸಮರ್ಥರಾದ ಇಂಜಿನಿಯರೊಬ್ಬರು ಉತ್ತರ ಕರ್ನಾಟಕದಲ್ಲಿ ಕನ್ನಡಿಗರಿಗಾಗಿ ನೀರಿನ ಹೋರಾಟ ಮಾಡಿದ್ದರು ಎಂಬುದು ಅನೇಕರಿಗೆ ಗೊತ್ತಿಲ್ಲ. ಅವರೇ ಎಸ್ ಜಿ ಬಾಳೆಕುಂದ್ರಿ. ಮೇ 5ರಂದು ಅವರ ಜನ್ಮದಿನ ಆಚರಿಸಲಾಯಿತು.

***

ಎರಡನೆಯ ವಿಶ್ವೇಶ್ವರಯ್ಯ ಎಂದೇ ಖ್ಯಾತರಾದವರು ಎಸ್.ಜಿ.ಬಾಳೆಕುಂದ್ರಿಯವರು. ಶ್ರೇಷ್ಠ ನೀರಾವರಿ ತಜ್ಞ ಇಂಜಿನಿಯರಾಗಿ ತಮ್ಮ ಬುದ್ದಿಮತ್ತೆ, ದಕ್ಷತೆ, ಪರಿಶ್ರಮ ಹಾಗು ಪ್ರಾಮಾಣಿಕ ಸೇವೆಗಳಿಂದಾಗಿ ಪ್ರಸಿದ್ಧರಾಗಿದ್ದ ಶಿವಪ್ಪ ಗುರುಸಿದ್ದಪ್ಪ ಬಾಳೆಕುಂದ್ರಿಯವರ ಮೂರ್ತಿಯೊಂದು ಧಾರವಾಡದ ಇನ್ಸ್ಟಿಟ್ಯೂಟ್ ಆಫ್ ಇಂಜನಿಯರ್ಸ್ ಆವರಣದಲ್ಲಿದೆ. ಬನ್ನಿ, ಬಾಳೆಕುಂದ್ರಿಯವರ ಕೊಡುಗೆಯನ್ನು ನೆನಪಿಸಿಕೊಂಡು ಅವರ ಮೂರ್ತಿಪೂಜೆ ಮಾಡೋಣ. ಈ ಮೂರ್ತಿಯ ಸ್ಥಾಪನೆಯಾದದ್ದು 27ನೇ ನವಂಬರ್ 2003ರಂದು.

ಬಾಳೆಕುಂದ್ರಿಯವರ ಜನನವಾದದ್ದು 1922 ಮೇ 5ರಂದು, ಬೆಳಗಾವಿಯಲ್ಲಿ. ತಾಯಿ ಲಕ್ಷ್ಮೀದೇವಿ; ತಂದೆ ಗುರುಸಿದ್ದಪ್ಪ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಬ್ಬಳ್ಳಿಯಲ್ಲಿ ಮುಗಿಸಿ, ಬಾಳೆಕುಂದ್ರಿಯವರು ಬೆಳಗಾವಿಯಲ್ಲಿ ಹೈಸ್ಕೂಲು ಮತ್ತು ಪದವೀಪೂರ್ವ ಶಿಕ್ಷಣ ಮುಗಿಸಿದರು. ನಂತರ ಪುಣೆಯ ಸರಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದು 1944ರಲ್ಲಿ ಪ್ರಥಮ ಶ್ರೇಣಿಯಲ್ಲಿ ಪದವಿ ಪಡೆದರು.

1945ರಲ್ಲಿ ಆಗಿನ ಮುಂಬಯಿ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ ಆಗಿ ವೃತ್ತಿ ಜೀವನವನ್ನು ಶುರುಮಾಡಿದರು. ಮುಂಬಯಿ ಸರಕಾರ ಇವರನ್ನು ನೀರಾವರಿ ವಿಷಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಎಡಿನ್ಬರೊ ವಿಶ್ವವಿದ್ಯಾಲಯಕ್ಕೆ ಕಳುಹಿಸಿತು. ಅನಂತರ ಪುಣೆ ವಿಭಾಗದ ನೀರಾವರಿ ಕಾಲುವೆಗಳ ಉಸ್ತುವಾರಿಯನ್ನು ನಿರ್ವಹಿಸಿದರು. ನಂತರ ನಾಸಿಕ ಬಳಿ ನಿರ್ಮಾಣವಾಗುತ್ತಿದ್ದ ಗಂಗಾ ಆಣೆಕಟ್ಟಿನ ಉಸ್ತುವಾರಿ, ಆ ಬಳಿಕ ಧೂಲಿಯಾ ಆಣೆಕಟ್ಟು ಹೀಗೆ ಹಲವು ಕಡೆ ಕರ್ತವ್ಯ ನಿರ್ವಹಿಸಿದರು.

ಆ ನಂತರ ಇವರು ಸೇವೆಯನ್ನು ಕೇಂದ್ರ ಸರಕಾರದ ಪ್ಲ್ಯಾನಿಂಗ್ ಕಮಿಶನ್ನಿನಲ್ಲಿ ಕೆಲಸಮಾಡುತ್ತಿದ್ದಾಗ, ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗುತ್ತಿದ್ದ ಅನ್ಯಾಯವನ್ನು ಬಾಳೆಕುಂದ್ರಿಯವರು ಗಮನಿಸಿ ಕರ್ನಾಟಕದ ನಾಯಕರನ್ನು ಎಚ್ಚರಿಸಿದರು. ಇದರಿಂದ ಪ್ರಭಾವಿತರಾದ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಬಿ.ಡಿ.ಜತ್ತಿಯವರು ಬಾಳೆಕುಂದ್ರಿಯವರನ್ನು ರಾಜ್ಯಕ್ಕೆ ಕರೆಯಿಸಿಕೊಂಡರು. 1959ರಲ್ಲಿ ಮರಳಿ ರಾಜ್ಯಕ್ಕೆ ಬಂದ ನಂತರ ಅಂತಾರಾಜ್ಯ ನದಿ ವಿವಾದ ವಿಷಯದ ಹೊಣೆ ಹೊತ್ತುಕೊಂಡ ಬಾಳೆಕುಂದ್ರಿಯವರು ಕರ್ನಾಟಕದ ನ್ಯಾಯಬದ್ಧ ಹಕ್ಕಿಗಾಗಿ ಸಮರ್ಥವಾಗಿ ಹೋರಾಡಿದರು, ಘಟಪ್ರಭಾ, ಮಲಪ್ರಭಾ ಹಾಗು ಕೃಷ್ಣಾ ನೀರಾವರಿ ಯೋಜನೆ ಹಾಗು ನಿರ್ಮಾಣಗಳಲ್ಲಿ ಮಹತ್ವದ ಪಾತ್ರ ವಹಿಸಿದರು.

ನಿವೃತ್ತಿಯ ನಂತರ, ತುಂಗಭದ್ರಾ ಯೋಜನೆಯ ಮಾರ್ಪಾಡಿನ ತಜ್ಞ ಸಲಹಾ ಸಮಿತಿಯ ಅಧ್ಯಕ್ಷ, ಬಾಗಲಕೋಟೆ ಪುನರ್ನಿರ್ಮಾಣ ಮತ್ತು ಪುನರ್ವಸತಿ ಪರಿಶೀಲನಾ ಸಮಿತಿ ಅಧ್ಯಕ್ಷ, ಬೃಹತ್ ನೀರಾವರಿ ಯೋಜನೆಗಳ ನಿಯಂತ್ರಣ ಮಂಡಳದ ಅಧ್ಯಕ್ಷ ಕರ್ನಾಟಕದಲ್ಲಿ ತಾಂತ್ರಿಕ ವಿಶ್ವವಿದ್ಯಾಲಯ ಪ್ರಾರಂಭಿಸುವ ಕುರಿತು ನೇಮಿಸಿದ ಏಕಸದಸ್ಯ ಸಮಿತಿ ಅಧ್ಯಕ್ಷ ಹೀಗೆ ವಿವಿಧ ಸಾಮರ್ಥ್ಯಗಳಲ್ಲಿ ಕರ್ನಾಟಕಕ್ಕೆ ಸೇವೆ ಸಲ್ಲಿಸಿದ್ದರು. (ಕೃಪೆ : ಮೂರ್ತಿಪೂಜೆ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Please Wait while comments are loading...