ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಕೀಯದ ವಿರುದ್ಧ ಉರಿದುಬಿದ್ದ ನಂಜುಂಡ

By Staff
|
Google Oneindia Kannada News
  • ಚ.ಹ. ರಘುನಾಥ
Prof M D Nanjundaswamyಕರ್ನಾಟಕದಲ್ಲಿನ ರೈತರ ನೈಜ ಪ್ರತಿನಿಧಿ ಯಾರು ?

ಥಟ್ಟೆಂದು ನೆನಪಾಗುವ ಹೆಸರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರದು. ನಿಧಾನವಾಗಿ ಯೋಚಿಸಿದರೆ ಮನಸ್ಸಿನಲ್ಲಿ ಉಳಿಯುವ ಹೆಸರು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರದು.

ದೇವೇಗೌಡ ಹಾಗೂ ನಂಜುಂಡಸ್ವಾಮಿ ಇಬ್ಬರೂ ರೈತ ನಾಯಕರೆನ್ನುವುದರಲ್ಲಿ ಅನುಮಾನವಿಲ್ಲ : ಆದರೆ, ಇಬ್ಬರ ವ್ಯಕ್ತಿತ್ವದಲ್ಲಿ ಕೆಲವು ವ್ಯತ್ಯಾಸಗಳಿವೆ. ದೇವೇಗೌಡರು ಸತತ ಪ್ರಚಾರದ ಬೆಳಕಿನಲ್ಲಿ ಬೆಳೆದುಬಂದ ರಾಜಕಾರಣಿ ; ಮಣ್ಣಿನ ಮಗ ಎಂದು ತಮ್ಮ ಕುರಿತು ತಾವೇ ಬಣ್ಣಿಸಿಕೊಳ್ಳುವ ನಾಯಕರು. ರೈತರ ತಳಸಮಸ್ಯೆಗಳ ಕುರಿತು ಗೌಡರಿಗೆ ಅರಿವಿದೆ, ಕಾಳಜಿಯೂ ಪ್ರಶ್ನಾತೀತ. ಆದರೆ ದೇವೇಗೌಡರ ಪಾಲಿಗೆ ರೈತರ ಸಮಸ್ಯೆಗಳು ಕೂಡ ಅವರ ವೃತ್ತಿ ರಾಜಕಾರಣ ಒಂದು ಭಾಗವಾಗಿರುವುದನ್ನು ಗಮನಿಸಬೇಕು. ನಂಜುಂಡಸ್ವಾಮಿ ಅವರ ಪಾಲಿಗೆ ಹಾಗಲ್ಲ ; ದೇವೇಗೌಡರಂತೆಯೇ ರೈತರಿಗಾಗಿ ಬೀದಿಗಿಳಿದರೂ, ನಂಜುಂಡಸ್ವಾಮಿ ಮಣ್ಣಿನಮಗ ಎಂದು ತಮ್ಮನ್ನು ತಾವು ಬಣ್ಣಿಸಿಕೊಳ್ಳುವುದಿಲ್ಲ . ಅಲ್ಲದೆ, ನಂಜುಂಡಸ್ವಾಮಿ ಪಾಲಿಗೆ ರೈತರ ಸಮಸ್ಯೆಗಳು ರಾಜಕಾರಣ ವಿಷಯಗಳಷ್ಟೇ ಅಲ್ಲ ; ಸಾಮಾಜಿಕ ಸಮಸ್ಯೆಗಳೂ ಹೌದು. ಚುನಾವಣೆ ಹೊರತಾದ ಹೋರಾಟವೂ ಎಂಡಿಎನ್‌ ಅವರಿಂದ ಸಾಧ್ಯ.

ಖಚಿತ ನಿಲುವು ಹಾಗೂ ಅಪಾರ ತಿಳಿವಳಿಕೆಯಿಂದ ಕೂಡ ಎಂಡಿಎನ್‌ ದೇವೇಗೌಡರಿಗಿಂತ ಮೇಲೆ ನಿಲ್ಲುತ್ತಾರೆ. ಹಾಗಾಗಿಯೇ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಕರ್ನಾಟಕದ ರೈತ ನಾಯಕರಲ್ಲಿ ಮೊದಲ ಪಂಕ್ತಿಗೆ ಸಲ್ಲುವವರು (ಮುದ್ದೆ ಬಸ್ಸಾರು ತಿನ್ನುವುದು, ಕಣ್ಣೀರು ಹಾಕುವುದು ಮುಂತಾದ ಗಿಮಿಕ್ಕುಗಳಿಲ್ಲದೆಯೂ). ಕಳೆದೆರಡು ಮೂರು ದಶಕಗಳಲ್ಲಂತೂ ಎಂಡಿಎನ್‌ ಸಮಕ್ಕೆ ಬೆಳೆದ ರೈತನಾಯಕ ಇನ್ನೊಬ್ಬರಿಲ್ಲ .

ಇತರ ರಾಜಕಾರಣಿಗಳಂತೆ ನಂಜುಂಡಸ್ವಾಮಿ ಕೂಡ ಪಕ್ಷ ಕಟ್ಟಿದರು, ಪಕ್ಷ ರಾಜಕೀಯ ಮಾಡಿದವರು. ಆದರೆ ಪಕ್ಷ ರಾಜಕಾರಣದಲ್ಲಿಯೇ ಅವರು ಸ್ಥಾವರವಾಗಲಿಲ್ಲ . ರಾಜಕಾರಣದ ಹೊರನಿಂತೂ ರೈತರ ಆಂದೋಲನವನ್ನು ರೂಪಿಸಲು ಸಾಧ್ಯ ಎಂದು ನಂಜುಂಡಸ್ವಾಮಿ ನಂಬಿದ್ದರು. ನಂಜುಂಡಸ್ವಾಮಿ ಅವರದು ಜಾಗತಿಕ ದೃಷ್ಟಿಕೋನ. ರೈತರ ಸಮಸ್ಯೆಗಳನ್ನವರು ಜಾಗತಿಕ ಚೌಕಟ್ಟಿನಲ್ಲಿಯೇ ಚರ್ಚಿಸುತ್ತಿದ್ದರು. ಜಾಗತೀಕರಣ ಹಾಗೂ ಉದಾರೀಕರಣ ರೈತರಿಗೆ ಉರುಳಾಗುತ್ತಿದೆ ಎಂದು ನಂಬಿದ್ದ ಎಂಡಿಎನ್‌- ತಮ್ಮ ಈ ನಂಬುಗೆಯಿಂದಾಗಿಯೇ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಹೋರಾಟ ನಡೆಸುತ್ತಿದ್ದರು. ನಂಜುಂಡಸ್ವಾಮಿ ಅವರ ಹೋರಾಟ ವಾಟಾಳ್‌ ಅವರ ಹೋರಾಟವನ್ನು ಅನೇಕ ಸಂದರ್ಭಗಳಲ್ಲಿ ನೆನಪಿಸುತ್ತದೆ. ವಾಟಾಳ್‌ ರೀತಿಯಲ್ಲಿಯೇ ಗುಂಪು ಕಟ್ಟಿಕೊಂಡು ಎಂಡಿಎನ್‌ ದಾಳಿ ನಡೆಸುತ್ತಿದ್ದರು. ಬೆಂಗಳೂರಿನಲ್ಲಿನ ಮಾನ್ಸಾಂಟೊ ಬೀಜ ಕಂಪನಿ, ಕಾರ್ಗಿಲ್‌ ಕಂಪನಿ, ಕೆಂಟಕಿ ಚಿಕನ್‌ ಕಚೇರಿಯ ಮೇಲೆ ಎಂಡಿಎನ್‌ ಬಳಗ ಅನೇಕ ಸಲ ದಾಳಿ ನಡೆಸಿದೆ. ಕಾನೂನು ಪದವೀಧರರಾದ ಎಂಡಿಎನ್‌, ರೈತರ ಹಿತಾಸಕ್ತಿಯ ಪ್ರಶ್ನೆ ಬಂದಾಗ ಕಾನೂನು ಉಲ್ಲಂಘನೆಗೆ ಹಿಂದೆಮುಂದೆ ನೋಡುತ್ತಿರಲಿಲ್ಲ . ಅನೇಕ ಬಾರಿ ಕರ ನಿರಾಕರಣೆ ಚಳವಳಿಯ ಸೂತ್ರ ಹಿಡಿದ ಎಂಡಿಎನ್‌ ಪರ್ಯಾಯ ಪ್ರಭುತ್ವದ ಮಾತುಗಳನ್ನಾಡಿದ್ದುಂಟು. ಉದ್ಧಟ ಅಧಿಕಾರಿಗಳ ಚಳಿ ಬಿಡಿಸುವ ಮೂಲಕ ಉದ್ಧಟ ಎನ್ನುವ ಬಿರುದಿಗೂ ಪಾತ್ರರಾದದ್ದುಂಟು. ಆದರೆ, ವಾಟಾಳ್‌ಗೂ ಎಂಡಿಎನ್‌ಗೂ ವ್ಯತ್ಯಾಸವಿದೆ. ವಾಟಾಳ್‌ ಹುಂಬರಾದರೆ, ಎಂಡಿಎನ್‌ ಒಳನೋಟಗಳನ್ನುಳ್ಳ ತಿಳಿವಳಿಕಸ್ಥ ರು. ವಾಟಾಳರ ಮಾತುಕೃತಿಗಳು ಅಪ್ಪಟ ಪಾಳೇಗಾರಿಕೆಯ ಹಿನ್ನೆಲೆಯವಾದರೆ- ಎಂಡಿಎನ್‌ ದಾಳಿಕೋರತನದ ಹಿಂದೆ ಪ್ರಖರ ವೈಚಾರಿಕತೆಯ ಸಿದ್ಧತೆಯಿತ್ತು .

ಎಂಡಿಎನ್‌ಗೆ ಮೂಗಿನ ಮೇಲೆಯೇ ಸಿಟ್ಟು . ಅವರ ಕೆಂಡಾಮಂಡಲ ಕೋಪ ಹಾಗೂ ಪ್ರತಿಷ್ಠೆಯಿಂದಾಗಿಯೇ ರೈತಸಂಘದ ಸಂಘಟನೆಯಲ್ಲಿ ಬಿರುಕುಂಟಾದದ್ದೂ ನಿಜ. ಕೆಲವು ವರ್ಷಗಳ ಹಿಂದಷ್ಟೇ ರಾಜ್ಯದ ಬಹುತೇಕ ಹಳ್ಳಿಗಳಲ್ಲಿ ರೈತಸಂಘದ ಕಚೇರಿಗಳಿದ್ದವು, ಹಸಿರು ಶಾಲು ಹೊದ್ದ ಕಾರ್ಯಕರ್ತರಿದ್ದರು. ಈ ಹಳ್ಳಿಗಳಲ್ಲಿ ರೈತರದೇ ಆದ ಪರ್ಯಾಯ ಆಡಳಿತವಿತ್ತು . ಜಫ್ತಿಗೆ ಬರುವ, ದಬ್ಬಾಳಿಕೆಯ ಮನೋಭಾವದ ಅಧಿಕಾರಿಗಳ ಪಾಲಿಗೆ ಈ ರೈತಯೋಧರು ಸಿಂಹಸ್ವಪ್ನವಾಗಿದ್ದರು. 1980ರಲ್ಲಿ ರೈತಸಂಘ ಚುನಾವಣೆಗಳನ್ನೂ ಎದುರಿಸಿತು. 1989ರಲ್ಲಿ ನಂಜುಂಡಸ್ವಾಮಿ ವಿಧಾನಸಭೆಗೆ ಆರಿಸಿಬಂದಿದ್ದರು. ಮುಂದಿನ ದಿನಗಳಲ್ಲಿ ರೈತರದೇ ಆದ ಸರ್ಕಾರವೊಂದು ರಾಜ್ಯದಲ್ಲಿ ಸ್ಥಾಪನೆಯಾಗುವ ಆಸೆ ಅನೇಕರಲ್ಲಿ ಮೊಳಕೆಯಾಡೆದದ್ದು ಆಗಲೇ. ಆದರೆ, ಬೆಳವಣಿಗೆಯ ಜೊತೆಜೊತೆಗೇ ರೈತಸಂಘದಲ್ಲಿ ಒಡಕು ಕಾಣಿಸಿಕೊಂಡಿತು. ತಮ್ಮ ಜೊತೆಗಿದ್ದ ಪುಟ್ಟಣ್ಣಯ್ಯ ಬೇರೆಯಾದರೂ, ಕಣ್ಣಮುಂದೆಯೇ ಕಟ್ಟಿದ ಮನೆ ಕುಸಿಯುತ್ತಿದ್ದರೂ ಎಂಡಿಎನ್‌ ಒಂದುರೀತಿ ಧಾಷ್ಟ್ಯದಿಂದ, ನಿರ್ಲಿಪ್ತತೆಯಿಂದ ತಮ್ಮ ಪಾಡಿಗೆ ಸುಮ್ಮನಿದ್ದರು. ಆದರೆ, ರೈತ ಮುಖಂಡರು ಪಕ್ಕಾ ರಾಜಕಾರಣಿಗಳಾಗುತ್ತಿರುವ ಕುರಿತು ಅವರೊಳಗೆ ಅಸಮಾಧಾನ ಇದ್ದೇ ಇತ್ತು .

ನಂಜುಂಡಸ್ವಾಮಿ ಅವರ ಹೋರಾಟ ರೈತರ ಸಮಸ್ಯೆಗಳಿಗಷ್ಟೇ ಮೀಸಲಾಗಿರಲಿಲ್ಲ . ನಾಡುನುಡಿ-ಸಂಸ್ಕೃತಿಗೆ ಅಪಾಯ ಒದಗಿದ ಸಂದರ್ಭದಲ್ಲೆಲ್ಲ ಎಂಡಿಎನ್‌ ವಿರೋಧ ಇದ್ದೇ ಇರುತ್ತಿತ್ತು . 1996ರಲ್ಲಿ ಬೆಂಗಳೂರಿನಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆ ಇದಕ್ಕೊಂದು ಒಳ್ಳೆಯ ಉದಾಹರಣೆ. ವಿಶ್ವ ಸುಂದರಿ ಸ್ಪರ್ಧೆ ದೇಶದ ಸಂಸ್ಕೃತಿಗೆ ಮಾರಕವಾದುದು. ಈ ಸ್ಪರ್ಧೆಯ ಮೂಲಕ ಬಹುರಾಷ್ಟ್ರೀಯ ಕಂಪನಿಗಳು ದೇಶೀ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ಹುನ್ನಾರ ನಡೆಸುತ್ತಿವೆ ಎನ್ನುವ ವಾದದ ಹಿನ್ನೆಲೆಯಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ವಿರೋಧಿಸುವ ಪ್ರತಿಭಟನೆಯಲ್ಲಿ ಎಂಡಿಎನ್‌ ಸಕ್ರಿಯ ಪಾತ್ರ ವಹಿಸಿದ್ದರು.

ಇತ್ತೀಚೆಗೆ ನಡೆದ ನೀರಾ ಚಳವಳಿಯಲ್ಲೂ ನಂಜುಂಡಸ್ವಾಮಿ ಪ್ರತಿಪಕ್ಷದ ಧುರೀಣನ ಪಾತ್ರವನ್ನು ಬಿಟ್ಟುಕೊಟ್ಟಿರಲಿಲ್ಲ . ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ಚಳವಳಿ ಕಾವು ಪಡೆದುಕೊಂಡಾಗ ನೀರಾ ಇಳಿಸಲು ಅನುಮತಿ ನೀಡುವುದು ಸರ್ಕಾರಕ್ಕೆ ಅನಿವಾರ್ಯವಾಯಿತು. ನೀರಾ ಇಳಿಸಲು ಆಸಕ್ತಿ ತೋರಿಸಿದ ನಂಜುಂಡಸ್ವಾಮಿ, ಉತ್ಪಾದಿತ ನೀರಾಗೆ ಮಾರುಕಟ್ಟೆ ಒದಗಿಸುವ ಪ್ರಯತ್ನವನ್ನೇ ನಡೆಸಲಿಲ್ಲ . ಅದು ಅವರ ಮಿತಿ ಹಾಗೂ ಸೋಲು.

ಇತ್ತೀಚಿನ ದಿನಗಳಲ್ಲಿ ನಂಜುಂಡಸ್ವಾಮಿ ದೈಹಿಕ ಹಾಗೂ ಮಾನಸಿಕ ಬಳಲಿಕೆಗೆ ಒಳಗಾದಂತಿದ್ದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಂಜುಂಡಸ್ವಾಮಿ, ಕೆಲವು ದಿನಗಳ ಹಿಂದೆಯಷ್ಟೇ ಸ್ವಾಮೀಜಿಯಾಬ್ಬ (ಸೆಕ್ಸ್‌ ಹಗರಣವೊಂದರಲ್ಲಿ ಸಿಲುಕಿರುವ ಸ್ವಾಮೀಜಿ) ತಮ್ಮ ರೋಗ ವಾಸಿಪಡಿಸಿರುವುದಾಗಿ ಹೇಳಿಕೊಂಡಿದ್ದರು. ಸಾರ್ವಜನಿಕವಾಗಿ ಎಂಡಿಎನ್‌ ಕಾಣಿಸಿಕೊಳ್ಳುವುದೂ ಅಪರೂಪವಾಗಿತ್ತು . ಆದರೆ, ಜಾಗತೀಕರಣ, ಉದಾರೀಕರಣದ ಅಪಾಯಗಳು ಮತ್ತು ರೈತರ ಸಮಸ್ಯೆಗಳ ಕುರಿತು ಎಂಡಿಎನ್‌ ಪತ್ರಿಕೆಗಳಲ್ಲಿ ಲೇಖನ ಬರೆಯುವ ಮೂಲಕ ಒಂದು ಹಂತದ ಕ್ರಿಯಾಶೀಲತೆ ಉಳಿಸಿಕೊಳ್ಳುವ ಪ್ರಯತ್ನಮಾಡುತ್ತಿದ್ದರು.

ಮುಂಗೋಪಿ, ಅಹಂಕಾರಿ, ವಿವೇಕಿ, ರೈತರ ನಾಯಕ, ಅಂತರರಾಷ್ಟ್ರೀಯ ಖ್ಯಾತಿಯ ಮೇಷ್ಟ್ರು- ಮುಂತಾದ ಬಣ್ಣನೆಗೆ ಒಳಗಾದ ಎಂಡಿಎನ್‌ ಈಗ ನಮ್ಮೊಡನಿಲ್ಲ . ವಾಸಿಯಾಯಿತು ಎಂದುಕೊಂಡಿದ್ದ ಕಾಯಿಲೆ ಭುಗಿಲೆದ್ದು ಬಲಿ ತೆಗೆದುಕೊಂಡಿದೆ. ಎಂಡಿಎನ್‌ ನಿರ್ಗಮನದಿಂದಾಗಿ ರೈತ ಚಳವಳಿಗೆ ದೊಡ್ಡ ನಷ್ಟವುಂಟಾಗಿದೆ. ವರ್ತಮಾನದ ದಿಕ್ಕುದೆಸೆಗಳನ್ನು ಗಮನಿಸಿದರೆ ಎಂಡಿಎನ್‌ ನಿರ್ಗಮನ ಸದ್ಯಕ್ಕಂತೂ ತುಂಬಲಾರದ ನಷ್ಟ.


ಪೂರಕ ಓದಿಗೆ-
ಈ ಪ್ರೊಫೆಸರ್‌ರದು ಅವಿವೇಕಿಗಳ, ಅಯೋಗ್ಯರ ರಿಪೇರಿ ಕೆಲ್ಸ !


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X