ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಯಾಮೃಗದ ಲಕ್ಷ್ಮೀ ಚಂದ್ರಶೇಖರ್‌ ಸಂದರ್ಶನ

By Staff
|
Google Oneindia Kannada News
  • ಅನೇಕ ದೇಶ ಮತ್ತು ಸಂಸ್ಕೃತಿಗಳನ್ನು ಕಂಡವರು ನೀವು. ಬೇರೆ ಬೇರೆ ದೇಶಗಳ ರಂಗಭೂಮಿಯಲ್ಲಿ ನಡೆಯುವ ಪ್ರಯೋಗಗಳ ಮಾದರಿಯಲ್ಲಿ ನಮ್ಮಲ್ಲೂ ಪ್ರಯೋಗಗಳು ನಡೆಯುತ್ತಿವೆಯೇ ? ಬೇರೆ ಬೇರೆ ರಂಗಭೂಮಿಗಳ ಅಡ್ವಾನ್ಸ್‌ಮೆಂಟ್‌ಗಳು ನಮ್ಮಲ್ಲಿಗೂ ಹರಿಯುತ್ತಿವೆಯೇ ?
ಪ್ರಯೋಗಗಳು ಖಂಡಿತಾ ನಡೆಯುತ್ತಿವೆ. ಆದರೆ ಮುಂದುವರೆದ ರಾಷ್ಟ್ರಗಳಲ್ಲಿ ನಡೆಯುವಷ್ಟು ದೊಡ್ಡ ಮಟ್ಟದಲ್ಲಿ ನಡೆಸಲು ನಮ್ಮ ಆರ್ಥಿಕ ಸ್ಥಿತಿ ಅಡ್ಡ ಬರುತ್ತಿದೆ. ಉದಾಹರಣೆಗೆ ಅಮೆರಿಕಾದಲ್ಲಿ ನಡೆಯುವ ನಾಟಕಗಳ ಪ್ರದರ್ಶನಗಳ ಬಗ್ಗೆಯೇ ತೆಗೆದುಕೊಳ್ಳಿ. ಅತ್ಯಾಧುನಿಕ ಸುಸಜ್ಜಿತವಾದ ರಂಗಮಂದಿರಗಳು ಯಾವ ತರಹದ ಪ್ರಯೋಗಗಳಿಗೂ ಸದಾ ಸಿದ್ಧವಾಗಿರುತ್ತವೆ. ತಂತ್ರಜ್ಞಾನ ಅಳವಡಿಕೆ ಬಹಳ ವೇಗವಾಗಿ ನಡೆಯುತ್ತದೆ. ಅಷ್ಟರ ನಡುವೆಯೂ ಪ್ರೇಕ್ಷಕ ವರ್ಗವೂ ಆರ್ಥಿಕವಾಗಿ ಶ್ರೀಮಂತವೇ. ಕೆಲವು ನಾಟಕಗಳು ದುಬಾರಿ ಎನಿಸುವಂತೆ ಟಿಕೇಟು ದರ ಹೊಂದಿದ್ದರೂ ರಂಗಮಂದಿರಗಳು ಭರ್ತಿಯಾಗಿರುತ್ತವೆ. ಇದು ಹೊಸ ತಂತ್ರಜ್ಞಾನ ಅಳವಡಿಕೆಯ ಖರ್ಚು ವೆಚ್ಚಗಳನ್ನು ತೂಗಿ ಕೊಡುತ್ತದೆ. ನಮ್ಮ ಸ್ಥಿತಿ ಹಾಗಲ್ಲ. ಆರ್ಥಿಕವಾಗಿ ಮಧ್ಯಮ ಹಾಗೂ ಕೆಳವರ್ಗದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ನಮ್ಮ ಮಿತಿಗಳ ವರ್ತುಲದಲ್ಲೇ ನಾವು ಪ್ರಯೋಗಗಳನ್ನು ನಡೆಸಬೇಕಾಗುತ್ತದೆ.

ನನಗೆ ತಿಳಿದಂತೆ ಬೇರೆ ಬೇರೆ ದೇಶಗಳಲ್ಲಿ ರಂಗಭೂಮಿಯ ಚಟುವಟಿಕೆಗಳಲ್ಲಿ ಸರ್ಕಾರ ಸಕ್ರಿಯವಾಗಿ ಭಾಗವಹಿಸುತ್ತದೆ. ಆರ್ಥಿಕವಾಗಿ ಬೆಂಗಾವಲಾಗಿ ನಿಲ್ಲುತ್ತದೆ. ನಮ್ಮಲ್ಲಿ ಕನ್ನಡ ರಂಗಭೂಮಿಯ ಬಗ್ಗೆ ಸರಕಾರಗಳು ದಿವ್ಯ ನಿರ್ಲಕ್ಷ್ಯ ತಾಳಿವೆ. ಸರಕಾರ ನೀಡುವ ಪ್ರೋತ್ಸಾಹ ಧನ ಯಾವುದಕ್ಕೂ ಸಾಲದು. ಕನ್ನಡ ನಾಟಕ ಅಕಾಡೆಮಿಗೆ ಪ್ರತಿವರ್ಷ ಸರಕಾರದಿಂದ ಸಿಗುವ ಪ್ರೋತ್ಸಾಹ ಧನ ನಾಲ್ಕು ಲಕ್ಷ ರೂಪಾಯಿಗಳು. ನಮ್ಮ ಯುವ ನಿರ್ದೇಶಕರು ಬಹಳ ಪ್ರತಿಭಾವಂತರು. ಬಹಳ ಐಡಿಯಾಗಳನ್ನು ಹೊಂದಿರುವವರು. ಆದರೆ ಐಡಿಯಾಗಳ ಅಳವಡಿಕೆಯಲ್ಲಿ ಆಗುವ ಖರ್ಚುಗಳಿಗೆ ಹಾಗೂ ಸಫಲನಾಗದಿದ್ದರೆ ಗತಿ ಏನು ಎಂಬ ಯೋಚನೆಗಳಿಂದ ಹಿಂಜರಿಯುತ್ತಾರೆ.

ಹೀಗಾಗಿ ರಿಸ್ಕ್‌ ಇಲ್ಲದೇ ತೆಗೆದುಕೊಳ್ಳಬಹುದಾದ ಸೃಜನಶೀಲ ಪ್ರಯೋಗಗಳ ಕಡೆಗೆ ವಾಲುತ್ತಾರೆ. ಇಷ್ಟು ಸಮಸ್ಯೆಗಳ ನಡುವೆಯೂ ಪ್ರೇಕ್ಷಕನನ್ನು ಆಕರ್ಷಿಸಲು ನಾಟಕಗಳಲ್ಲಿ ಬ್ಯಾಲೆ, ಸರ್ಕಸ್‌, ಫೈಟಿಂಗ್‌, sculpture ಗಳನ್ನು ಒಳಗೊಂಡ ಪ್ರಯೋಗಗಳನ್ನು ಪಾಶ್ಚಿಮಾತ್ಯ ರಂಗಭೂಮಿಯಿಂದ ತೆಗೆದುಕೊಳ್ಳುತ್ತಿದ್ದೇವೆ ಹಾಗೂ, ನಮ್ಮ ಸಂಸ್ಕೃತಿಗೆ ತಕ್ಕಂತೆ ಅಳವಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ.

  • ಟಿ.ವಿ. ಧಾರಾವಾಹಿಗಳ ಜನಪ್ರಿಯತೆ ನಾಟಕ ರಂಗದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ? ಇಂದು ಒಬ್ಬ ರಂಗಭೂಮಿಯ ಕಲಾವಿದ ರಂಗಭೂಮಿಯಲ್ಲಿಯೇ ಮುಂದುವರೆಯುವ ಬದಲು ದೂರದರ್ಶನದ ಕಡೆ ವಾಲುವುದು ಒಂದು ರೀತಿಯ pattern ಆಗಿದೆ ಅಲ್ಲವೇ ?
ಹೌದು, ಈ ರೀತಿಯ transititon ಈಗ ಅನಿವಾರ್ಯವಾಗಿದೆ. ನಾಟಕಗಳನ್ನು ಜೀವನಾಧಾರಕ್ಕೆ ನಂಬಿದವರು ಆರ್ಥಿಕ ತೊಂದರೆಗಳಿಂದಾಗಿ ಟಿ.ವಿ. ಧಾರಾವಾಹಿಗಳ ಕಡೆ ಹೋಗುತ್ತಿದ್ದಾರೆ. ಕೆಲವರು ಎರಡನ್ನೂ ನಿಭಾಯಿಸಲು ಪ್ರಯತ್ನ ಪಡುತ್ತಿದ್ದಾರೆ. ಜೀವನೋಪಾಯಕ್ಕಾಗಿ ಟಿವಿ, ಆತ್ಮ ತೃಪ್ತಿಗಾಗಿ ನಾಟಕ ಹೀಗಾಗಿದೆ ಕಲಾವಿದರ ಪಾಡು. ಟಿವಿಯಲ್ಲಿ ಜನಪ್ರಿಯರಾಗಿ ನಾಟಕ ರಂಗಕ್ಕೆ ಬರುವವರಿಂದ ನಾಟಕ ರಂಗಭೂಮಿಗೆ ಒಂದು ರೀತಿಯ ಸಹಾಯವಾಗುತ್ತಿದೆ. ಟಿವಿ ಕಲಾವಿದರ ಜನಪ್ರಿಯತೆ ನಾಟಕಗಳಿಗೆ ಪ್ರೇಕ್ಷಕರನ್ನು ಎಳೆದುತರುತ್ತಿದೆ.

  • ರಂಗಭೂಮಿಯಲ್ಲಿ ಭಾರತೀಯ ಭಾಷೆಗಳ ನಡುವೆ ಅತ್ಯುನ್ನತ ಸ್ಥಾನದಲ್ಲಿರುವ ನಾವು ಸಿನಿಮಾ ರಂಗದಲ್ಲಿ ಶೋಚನೀಯವಾದ ಸ್ಥಾನದಲ್ಲಿದ್ದೇವೆ. ಅದರಲ್ಲೂ ಮಲಯಾಳಂನಲ್ಲಿ ಬರುವ ಸಿನಿಮಾ ಗುಣಮಟ್ಟಕ್ಕೆ ನಮ್ಮಲ್ಲಿ ಅಲ್ಲೊಂದು ಇಲ್ಲೊಂದು ಬರುವ ಅತೀ ಕೆಲವು ಸಿನಿಮಾಗಳನ್ನು ಬಿಟ್ಟು ಹೋಲಿಸಲೂ ಸಾಧ್ಯವಿಲ್ಲ. ಹೀಗೇಕಾಯಿತು ?
ಸಿನಿಮಾ ನನಗೆ ರಂಗಭೂಮಿಯಷ್ಟು ಹತ್ತಿರದ ಕ್ಷೇತ್ರವಲ್ಲ. ಆದರೂ ನನ್ನ ಅನುಭವಕ್ಕೆ ಬಂದುದನ್ನು ಹೇಳುತ್ತೇನೆ. ಕನ್ನಡ ಚಿತ್ರರಂಗ ಇಂದು ಗಾಂಧಿನಗರದ ಕೆಲವರ ಕಪಿಮುಷ್ಟಿಯಲ್ಲಿದೆ. ನಮಗೆ ಯಾವ ತರಹದ ಸಿನಿಮಾ ಬೇಕು ಅನ್ನುವುದನ್ನ ಪ್ರೇಕ್ಷಕರನ್ನು ಹೊರತುಪಡಿಸಿ ಗಾಂಧೀ ನಗರದ ಕೆಲವರು ನಿರ್ಧಾರ ಮಾಡುತ್ತಾರೆ ! ಯಾರಾದರೂ ಕಷ್ಟಪಟ್ಟು ಒಂದು ಕ್ಲಾಸಿಕ್‌ ಚಿತ್ರವನ್ನು ಮಾಡಿದರೆ ಯಾವ ಹಂಚಿಕೆದಾರರೂ ಮುಂದೆ ಬರುವುದಿಲ್ಲ. ಕ್ಲಾಸಿಕ್‌ ಸಿನೆಮಾಗಳಿಗೆ ಥಿಯೇಟರ್‌ ಸಿಗುವುದಿಲ್ಲ. ಕನ್ನಡ ಸಿನೆಮಾರಂಗದಲ್ಲೂ ಕೂಡ ಒಳ್ಳೆಯ ನಿರ್ದೇಶಕರಿದ್ದಾರೆ. ಆದರೆ ಒಂದು ಒಳ್ಳೆಯ ಸಿನಿಮಾವನ್ನು ಕೊಡುವಲ್ಲಿ ಈ ಎಲ್ಲಾ ಸಮಸ್ಯೆಗಳು ಕಾಡುತ್ತವೆ. ಗಿರೀಶ್‌ ಕಾಸರವಳ್ಳಿ ಅಂತಹವರನ್ನು ಎನ್‌. ಎಫ್‌. ಡಿ.ಸಿ ಗುರುತಿಸಿ ಸಿನೆಮಾಗಳಿಗೆ ಹಣ ಹೂಡುತ್ತದೆ. ಆದರೆ ಆ ಅದೃಷ್ಟ ಎಲ್ಲಾ ಒಳ್ಳೆಯ ನಿರ್ದೇಶಕರಿಗೆ ಇಲ್ಲ.

ಒಮ್ಮೊಮ್ಮೆ ನಮ್ಮ ಪ್ರೇಕ್ಷಕರನ್ನೂ ಕಮರ್ಷಿಯಲ್‌ ಸಿನಿಮಾಗಳಿಗೆ ಟ್ಯೂನ್‌ ಮಾಡಿಬಿಟ್ಟಿದ್ದೇವೆಯೇನೋ ಎನ್ನಿಸುತ್ತದೆ. ತುಂಬಾ ಸೀರಿಯಸ್ಸಾದ ಸಿನಿಮಾಗಳನ್ನು ಜನ ನೋಡುವುದಿಲ್ಲ. ಹಾಗೆಯೇ ಕಲಾತ್ಮಕವಾಗಿಯೂ ಮತ್ತು ಕಮರ್ಷಿಯಲ್‌ ಆಗಿ ಯಶಸ್ವಿಯಾಗುವಂತಹ ಸಿನಿಮಾಗಳನ್ನು ಮಾಡುವುದು ಬಹಳ ಇಬ್ಬಂದಿಯ ವಿಚಾರ. ಸಿನೆಮಾ ಒಂದು ಲಾಭಗಳಿಸುವ ಉದ್ಯಮ ಮಾತ್ರ ಎಂದು ಯೋಚಿಸುವವರ ಮುಷ್ಟಿಯಲ್ಲಿ ಕನ್ನಡ ಚಿತ್ರರಂಗ ಸಿಕ್ಕಿಹೋಗಿದೆ. ಇಂತಹ ಮನೋಧರ್ಮದವರು ಇಡೀ ಚಿತ್ರರಂಗವನ್ನೇ ಆಕ್ರಮಿಸಿಕೊಂಡಿದ್ದಾರೆ. ಬೇರೆ ರೀತಿಯ ಹಾಗೂ ಕಲಾತ್ಮಕ ಚಿತ್ರಗಳು ಬರಲು ಅವರು ಬಿಡುವುದೇ ಇಲ್ಲ. ಪ್ರೇಕ್ಷಕರೂ ಒಂದು ರೀತಿಯ ಕೆಟ್ಟ ಟೇಸ್ಟ್‌ ಸಿನಿಮಾಗಳಿಗೆ ಒಗ್ಗಿ ಹೋಗಿದ್ದಾರೆ. ಅವರು ನೋಡುವುದಿಲ್ಲ ಎಂದು ಇವರು ಮಾಡುವುದಿಲ್ಲ. ಇವರು ಮಾಡುವುದಿಲ್ಲ ಎಂದು ಅವರು ನೋಡುವುದಿಲ್ಲ. ಒಂದು ರೀತಿಯಲ್ಲಿ ಇದೊಂದು ವಿಷವೃತ್ತ.

  • ಮಾಯಾಮೃಗ ಪ್ರಶಸ್ತಿ ವಿವಾದದಿಂದ ನಿಮಗೆ ತುಂಬಾ ಬೇಸರವಾಗಿದೆ. ಪ್ರಶಸ್ತಿಯನ್ನು ಹಿಂದಿರುಗಿಸುವ ಮಟ್ಟಕ್ಕೂ ಹೋಗಿದ್ದೀರಿ. ಇದಕ್ಕೆಲ್ಲಾ ಯಾರು ಕಾರಣ ಅಂತೀರಿ ?
ಮಾಯಾಮೃಗ ಧಾರಾವಾಹಿಗೆ ಸಿಕ್ಕ ಪ್ರಶಸ್ತಿ ವಿವಾದ ನಡೆದ ಸಂದರ್ಭದಲ್ಲಿ ನಾನು ಅಮೆರಿಕಾದಲ್ಲಿದ್ದೆ. ಆ ಬಗ್ಗೆ ತೀರಾ ಬೇಸರವಾಗಿದ್ದೂ ಹೌದು. ಇನ್ನು ಮುಂದೆ, ನನ್ನ ಪತಿ ಚಂದ್ರಶೇಖರ್‌ ಅವರು ಸಚಿವ ಸ್ಥಾನದಲ್ಲಿರುವವರೆಗೆ ಸರಕಾರದಿಂದ ಯಾವುದೇ ಪ್ರಶಸ್ತಿಗಳನ್ನು ತೆಗೆದುಕೊಳ್ಳಬಾರದು ಎಂದು ನಿರ್ಧರಿಸಿದ್ದೇನೆ. ಆಗ ಯಾವ ವಿವಾದಗಳಿಗೂ ಎಡೆ ಇರುವುದಿಲ್ಲ ಅಲ್ಲವೇ ?

  • ಪ್ರಸ್ತುತ ಯಾವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೀರಿ ?
ಪ್ರಸ್ತುತ ನಾನು ಭೈರಪ್ಪ ಅವರ ‘ಗೃಹಭಂಗ ’ ಕಾದಂಬರಿ ಆಧಾರಿತ ಧಾರಾವಾಹಿಯಲ್ಲಿ ನಟಿಸುತ್ತಿದ್ದು , ದಿನ ಪೂರ್ತಿ ವ್ಯಸ್ತಳಾಗಿದ್ದೇನೆ. ಧಾರಾವಾಹಿ ಗಿರೀಶ್‌ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ಹೊರಬರುತ್ತಿದ್ದು, ಅದರಲ್ಲಿ ನಾನು ಗಂಗವ್ವ ಎಂಬ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಪ್ರತಿಭಾವಂತ ನಿರ್ದೇಶಕ ಗಿರಿಶ್‌ ಕಾಸರವಳ್ಳಿ ಅವರೊಂದಿಗೆ ಕೆಲಸ ಮಾಡುವುದೇ ಒಂದು ಹಬ್ಬ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X