ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರೋದ್‌ ಅಮ್ಜದ್‌ರೊಳಗೊ ಅಮ್ಜದರೊಳಗೆ ಸರೋದೊ

By Staff
|
Google Oneindia Kannada News

(ಇನ್ಫೋ ವಿಶೇಷ)

ಅಲ್ಲಿ ಕೇಳಬರುವುದು ಸಂಗೀತ ಮಾತ್ರವಲ್ಲ , ಮನಸ್ಸು ತುಂಬುವುದು ಬರಿಯ ಸರೋದ್‌ ವಾದನವಲ್ಲ . ಆತ, ಆಳವಾದ ಮಾನವ ಸ್ಫೂರ್ತಿಯ ಹೊತ್ತು ಪ್ರವಹಿಸುತ್ತಾನೆ, ಮನಸ್ಸುಗಳಿಗೆ ಮುಟ್ಟಿಸುತ್ತಾನೆ . ಆಗ ಬೆಚ್ಚನೆಯ ಹಿತಕರ ಅನುಭವವೊಂದು ಆವರಿಸಿಕೊಳ್ಳುತ್ತದೆ, ಅದೊಂದು ದಿವ್ಯಾನುಭವ.

ಉಸ್ತಾದ್‌ ಅಮ್ಜದ್‌ ಆಲಿ ಖಾನ್‌ರ ಸರೋದ್‌ ವಾದನವನ್ನು ಕೇಳಿ ದಲಾಯಿ ಲಾಮಾ ಈ ರೀತಿ ಪ್ರತಿಕ್ರಿಯಿಸಿದರೆ, ಸಾಕ್ಷಾತ್‌ ಅಮ್ಜದ್‌ರೆ ಸಂಗೀತವನ್ನು ಅಮೃತಮಯ ಅನುಭವ ಎಂದು ಬಣ್ಣಿಸುತ್ತಾರೆ. ಅವರು ಹೇಳುವಂತೆ ಸಂಗೀತವನ್ನು ಅನುಭವಿಸಲಿಕ್ಕೆ ಸಂಗೀತ ಜ್ಞಾನ ಇರಲೇಬೇಕೆಂದಿಲ್ಲ , ಆಸ್ವಾದಿಸುವ ಮನಸ್ಸಿದರೆ ಸಾಕು. ಸಂಗೀತ ಆತ್ಮವನ್ನು ತೃಪ್ತಗೊಳಿಸುವಂತದು.

ಉಸ್ತಾದರ ಮಾತು ನಿಜ. ಅವರು ದಶಕಗಳಿಂದ ಲಕ್ಷಾಂತರ ಆತ್ಮಗಳನ್ನು ತಣಿಸುತ್ತಲೇ ಬಂದಿದ್ದಾರೆ. ಎಂಟು ತಂತಿಗಳ ವಾದ್ಯ ಸರೋದನ್ನು ಅವರ ಬೆರಳುಗಳು ನುಡಿಸಿದಂತೆಲ್ಲ ಮಿಡಿವ ತರಂಗಗಳು ಶಾಂತಿರಸವ ಸಹೃದಯನೆದೆಗೆ ಹೊತ್ತೊಯ್ದಿವೆ. ಈ ಹೊತ್ತು , ಭಾರತದ ಶಾಸ್ತ್ರೀಯ ಸಂಗೀತ ದಿಗ್ಗಜರಲ್ಲಿ ಅಮ್ಜದ್‌ರೂ ಒಬ್ಬರು. ಸರೋದ್‌ ಎಂದಕೂಡಲೇ ನೆನಪಿಗೆ ಬರುವ ಅವರು, ಸರೋದ್‌ಗೆ ಬದುಕನ್ನು ಅರ್ಪಿಸಿಕೊಂಡವರು.

ತಾನ್‌ಸೇನ್‌ರ ನೆನಪುಗಳುಳ್ಳ ಸೇನಿಯಾ ಬಂಗಾಷ್‌ ಶಾಲೆಯಲ್ಲಿ ಸಂಗೀತ ಕಲಿತ ಆರನೇ ಜನಾಂಗದ ಹಾಡುಗಾರ ಅಮ್ಜದ್‌ ಆಲಿ ಖಾನ್‌. ಅಮ್ಜದ್‌ ಜನಿಸಿದ್ದು 1945 ರ ಅಕ್ಟೋಬರ್‌ 9 ರಂದು. ಹುಟ್ಟಿನಿಂದಲೇ ಸಂಗೀತದ ಗಂಧವನ್ನು ಉಸಿರಾಡಿದ್ದ ರು. ಸರೋದ್‌ನ ಮೂಲ ಎಂದು ಭಾವಿಸಲಾಗಿರುವ ಆಪ್ಘನ್‌ನ ಜಾನಪದ ವಾದ್ಯ ರಬಾಬ್‌ನ ಶೋಧಕರು ಅಮ್ಜದ್‌ನ ಪೂರ್ವಜರೇ. ಅಮ್ಜದ್‌ ಶಾಸ್ತ್ರೋಕ್ತವಾಗಿ ಸರೋದ್‌ ನುಡಿಸಲು ಶುರು ಮಾಡಿದ್ದು 12 ನೆಯ ವಯಸ್ಸಿನಲ್ಲಿ . ಅಪ್ಪ ಹಫೀಜ್‌ ಆಲಿ ಖಾನ್‌ ಸಂಗೀತದ ಪಾಠ, ಪಟ್ಟುಗಳನ್ನು ಹೇಳಿಕೊಟ್ಟರು. ಆ ಕಾಲಕ್ಕೆ ಗ್ವಾಲಿಯರ್‌ನಲ್ಲಿ ಹಫೀಜ್‌ ಅವರದ್ದು ದೊಡ್ಡ ಮನೆತನ. ಅಂಥಾ ವಂಶದಲ್ಲಿ ಜನಿಸಿದ ಅಮ್ಜದ್‌ ಸರೋದ್‌ನ ಸಾಧ್ಯತೆಗಳನ್ನು ಹೆಚ್ಚಿಸಿದ, ಹೊಸ ದಿಕ್ಕು ದೆಶೆಗಳನ್ನು ಕಲ್ಪಿಸಿದ ಕೀರ್ತಿಗೆ ಭಾಜನರು.

ಹಾಂಗ್‌ಕಾಂಗ್‌ನ ಫಿಲ್‌ಹಾರ್ಮೊನಿಕ್‌ ಆರ್ಕೆಸ್ಟ್ರ, ಚಾರ್ಲೆ ಬೈರ್ಡ್‌, ಗ್ಲೆಂಡಾ ಸಿಂಪ್ಸನ್‌ ಹಾಗೂ ಬ್ಯಾರಿ ಮಾಸನ್‌ ಮುಂತಾದ ವಿದೇಶಿ ಸಂಗೀತ ತಂಡಗಳೊಂದಿಗೆ ದುಡಿದ ಅಗ್ಗಳಿಕೆ ಅಮ್ಜದ್‌ ಅವರದು. ಯಾರ್ಕ್‌ಶೈರ್‌ ಹಾಗೂ ನ್ಯೂ ಮೆಕ್ಸಿಕೊ ವಿಶ್ವ ವಿದ್ಯಾಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕರೂ ಹೌದು. ಅವರ ಈವರೆಗಿನ ಸಾಧನೆಗೆ ಯುನೆಸ್ಕೋ ಪ್ರಶಸ್ತಿ , ಪದ್ಮಭೂಷಣ, ಪದ್ಮ ವಿಭೂಷಣ, ಇಂಗ್ಲೆಂಡ್‌ನ ಯಾರ್ಕ್‌ ವಿವಿ ಗೌರವ ಡಾಕ್ಟರೇಟ್‌, ಯುನಿಸೆಫ್‌ ರಾಷ್ಟ್ರೀಯ ರಾಯಭಾರಿ ಸಮ್ಮಾನಗಳು ಸಂದಿವೆ. ಅವರ ಭೈರವ್‌ ಹೆಸರಿನ ಸಿಡಿ, 1995 ರ ವಿಶ್ವದ ಅತ್ಯುತ್ತಮ 50 ಶಾಸ್ತ್ರೀಯ ಸಂಗೀತ ಆಲ್ಬಂಗಳಲ್ಲಿ ಒಂದೆಂದು ಬಿಬಿಸಿ ಮ್ಯಾಗರಿkುನ್‌ ವರದಿ ಮಾಡಿದೆ.

ಅಮ್ಜದ್‌ ಪುತ್ರರಾದ ಆಮಾನ್‌ ಆಲಿ ಬಂಗಾಷ್‌ ಹಾಗೂ ಅಯಾನ್‌ ಆಲಿ ಬಂಗಾಷ್‌ ಕೂಡ ಸರೋದ್‌ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಅಲ್ಲಿಗೆ, ಏಳನೇ ಜನಾಂಗದ ಸರೋದ್‌ ಪರಂಪರೆ ಮುಂದುವರಿದಂತಾಯಿತು. ಆ ಪರಂಪರೆ ಸಾಕಷ್ಟು ಕಾಲ, ಬೇರೆ ಬೇರೆ ಬೇರುಗಳಲ್ಲಿ ಮುಂದುವರಿಯುತ್ತಲೇ ಇರುತ್ತದೆ. ಏಕೆಂದರೆ, ಅಮ್ಜದ್‌ರ ಸಾಧನೆ ಒಂದೆರಡು ತಲಮಾರು ಅರಗಿಸಿಕೊಳ್ಳಲಿಕ್ಕೆ ಸಾಧ್ಯವಾಗುವಂಥದ್ದಲ್ಲ.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X