ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲಿಷ್ ಮೇಲೆ ದಿಗ್ವಿಜಯ ಸಾಧಿಸಿದ ಮಕ್ಕಳಿಬ್ಬರ ಕಥೆ

By Prasad
|
Google Oneindia Kannada News

ಅಪ್ಪಟ ಕನ್ನಡ ಪ್ರೇಮ ಇರುವ ಪಾಲಕರು ಕೂಡ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸಿರುತ್ತಾರೆ. ಉತ್ತಮ ಇಂಗ್ಲಿಷ್ ಜ್ಞಾನ ದೊರೆಯಬೇಕಿದ್ದರೆ ಇಂಗ್ಲಿಷ್ ಮೀಡಿಯಂನಲ್ಲೇ ಮಕ್ಕಳನ್ನು ಓದಿಸಬೇಕು, ಇಲ್ಲದಿದ್ದರೆ ಮುಂದೆ ಕೆಲಸಕ್ಕೆ ಪ್ರಯತ್ನಿಸಿದಾಗ ತೊಂದರೆ ಅನುಭವಿಸಬೇಕಾಗುತ್ತದೆ ಎಂದೇ ಶೇ.80ರಷ್ಟು ಪಾಲಕರು ಅಂದುಕೊಂಡಿರುತ್ತಾರೆ.

ಮಕ್ಕಳಿಗೆ ಮಾತೃಭಾಷೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ದೊರೆಯಬೇಕು ಎಂಬ ಮಾತಿಗೆ ಸಮಾಜದಲ್ಲಿ ಹೆಚ್ಚು ಕಿಮ್ಮತ್ತಿಲ್ಲ. ಶಿಕ್ಷಣತಜ್ಞರೇ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೂ ಇಂಗ್ಲಿಷ್ ಶಿಕ್ಷಣ ದೊರೆಯಬೇಕು ಎಂದು ಹೇಳುತ್ತಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ, ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿವರೆಗೆ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಲು ಒಪ್ಪುತ್ತೀರಾ? ಇದು ಪ್ರಾಕ್ಟಿಕಲ್ ಅಲ್ಲ ಅಂತ ಅನ್ನುವವರೇ ಜಾಸ್ತಿ.

Success story of Kannada medium children

ಅಂಥದರಲ್ಲಿ, ಎಸ್ಸೆಸ್ಸೆಲ್ಸಿ ಮಾತ್ರವಲ್ಲ ಪಿಯುಸಿವರೆಗೆ ಕನ್ನಡ ಮಾಧ್ಯಮದಲ್ಲೇ ಓದಿ, ಪದವಿ, ಸ್ನಾತಕೋತ್ತರ ಪದವಿಯಲ್ಲೂ ಅತ್ಯುತ್ತಮ ಅಂಕಗಳನ್ನು ಪಡೆದು ಇಂಗ್ಲಿಷ್ ಮೇಲೆ ದಿಗ್ವಿಜಯ ಸಾಧಿಸಿದ ಅಣ್ಣ-ತಂಗಿಯರಿಬ್ಬರ ಯಶೋಗಾಥೆ ಇಲ್ಲಿದೆ. ತಮ್ಮಿಬ್ಬರು ಮಕ್ಕಳು ಮಾಡಿರುವ ಸಾಧನೆಯನ್ನು ಜಗದೀಶ್ ಕೊಪ್ಪ ಅವರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಮಕ್ಕಳಿಬ್ಬರ ಈ ಸಾಧನೆಯ ಹಿಂದೆ ನಮ್ಮಿಬ್ಬರ ಕೈವಾಡವೇನೂ ಇಲ್ಲ, ಎಲ್ಲ ನಿರ್ಧಾರಗಳನ್ನು ಮಕ್ಕಳಿಗೇ ಬಿಟ್ಟಿದ್ದೆವು ಎಂದು ಜಗದೀಶ್ ಕೊಪ್ಪ ಅವರು ಹೆಮ್ಮೆ ಮತ್ತು ನಮ್ರತೆಯಿಂದ ಹೇಳಿದ್ದಾರೆ. ತಮ್ಮ ಆಸೆ, ಆಕಾಂಕ್ಷೆಗಳನ್ನು ಮಕ್ಕಳ ಮೇಲೆ ಹೇರುವ ತಂದೆ-ತಾಯಿಗಳೇ ಎಲ್ಲೆಡೆ ಇರುವಾಗ ಇವರ ಬದುಕು, ತೆಗೆದುಕೊಂಡ ನಿರ್ಣಯಗಳು ನಿಜಕ್ಕೂ ವಿಸ್ಮಯ ಹುಟ್ಟಿಸುತ್ತವೆ. ಈಗ ಹೇಳಿ ನಿಮ್ಮ ಮಕ್ಕಳನ್ನು ಯಾವ ಮಾಧ್ಯಮದಲ್ಲಿ ಓದಿಸುತ್ತೀರಿ?

***
ಕನ್ನಡ ಮಾಧ್ಯಮದಲ್ಲಿ ಮಕ್ಕಳು ಓದಿದರೆ, ಅವರ ಭವಿಷ್ಯ ಹಾಳಾಗಿ ಹೋಗುತ್ತೆ ಎಂದು ನಂಬಿದವರಿಗೆ ಒಂದು ಶಾಕಿಂಗ್ ನ್ಯೂಸ್. ಪಿ.ಯು.ಸಿ.ಯವರೆಗೆ ಅಪ್ಪಟ ಕನ್ನಡ ಮಾಧ್ಯದಲ್ಲಿ ಓದಿದ ನನ್ನ ಮಗಳು ಅಪೂರ್ವ, ಇಂಗ್ಲೀಷ್ ಸಾಹಿತ್ಯದದಲ್ಲಿ ಎಂ.ಎ. ಮಾಡಬೇಕು ಎಂಬ ಉದ್ದೇಶದಿಂದ ಬಿ.ಎ.. ಪದವಿಗೆ ಇಂಗ್ಲೀಷ್ ಮಾಧ್ಯಮ ಆಯ್ಕೆ ಮಾಡಿಕೊಂಡಿದ್ದಳು. ಈದಿನ ಅವಳ ಅಂತಿಮ ಪದವಿಯ ಫಲಿತಾಂಶ ಹೊರಬಿದ್ದಿತು. ಶೇಕಡ 81ರಷ್ಟು ಅಂಕ ಗಳಿಸಿದ್ದಾಳೆ.

***
ಮಿತ್ರರೇ, ನಿನ್ನೆ ನನ್ನ ಮಗಳ ಫಲಿತಾಂಶ ಮತ್ತು ಆಕೆಯ ಮಾಧ್ಯಮ ಆಯ್ಕೆ ಕುರಿತು ನಾನು ಫೇಸ್ ಬುಕ್ ಗೆ ಹಾಕಿದ ಮಾಹಿತಿಗೆ ಬಂದ ಪ್ರತಿಕ್ರಿಯೆ ನೋಡಿ ನನಗೆ ಶಾಕ್ ಆಯಿತು. ಹಾಗೆ ನೋಡಿದರೆ, ಇದರಲ್ಲಿ ನನ್ನದು ಮತ್ತು ಪತ್ನಿಯ ಪಾತ್ರ ಏನೂ ಇರಲಿಲ್ಲ. ನಾವಿಬ್ಬರೂ ಮಕ್ಕಳು ಬೆಳೆಯುತ್ತಿದ್ದಂತೆ ಒಂದು ನಿರ್ಧಾರಕ್ಕೆ ಬಂದಿದ್ದವು. ಯಾವ ಕಾರಣಕ್ಕೂ ನಮ್ಮ ಆಸೆ, ಅಭಿಲಾಸೆಗಳನ್ನು ಮಕ್ಕಳ ಮೇಲೆ ಹೇರಬಾರದು ಎಂಬುದು ನಮ್ಮ ನಿರ್ಧಾರವಾಗಿತ್ತು.

ಎಂದಿಗೂ ಕೂಡ ನಮ್ಮ ಮಕ್ಕಳ ವಿಷಯದಲ್ಲಿ, ಅವರು ಆಯ್ಕೆ ಮಾಡಿಕೊಳ್ಳಬಹುದಾದ ಅಧ್ಯಯನ ಕುರಿತಂತೆ ನಾವು ಹಾಕಿಕೊಂಡಿದ್ದ ಲಕ್ಷಣ ರೇಖೆಯನ್ನು ದಾಟಲಿಲ್ಲ. ಆರು ವರ್ಷದ ಹಿಂದೆ ಮಂಡ್ಯ ನಗರದಲ್ಲಿ ಪಿ.ಯು.ಸಿ. ಮುಗಿಸಿ ಶೇಕಡ 89ರಷ್ಟು ಅಂಕ ಗಳಿಸಿದ್ದ ಮಗ(ಅನನ್ಯ) ಸಿ.ಇ.ಟಿ. ಪರೀಕ್ಷೆ ತೆಗೆದುಕೊಳ್ಳಲಿಲ್ಲ. ನನಗೆ ಇಂಜಿನಿಯರಿಂಗ್, ವೈದ್ಯಕೀಯ ಆಸಕ್ತಿ ಇಲ್ಲ ಎಂದ. ನಾವು ಮರು ಮಾತನಾಡಲಿಲ್ಲ.

ಧಾರವಾಡದಲ್ಲಿ ಜೈವಿಕ ತಂತ್ರ ಜ್ಙಾನ ದಲ್ಲಿ ಪದವಿ (ಶೇಕಡ 91) ನಂತರ ಮೈಸೂರು ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ (ಶೇಕಡ 88) ಸಾಧನೆ ಮಾಡಿದ. ಆತನಿಗೆ ಪಿ.ಹೆಚ್.ಡಿ. ಅಧ್ಯಯನ ಮಾಡುವ ಆಸಕ್ತಿ ಇತ್ತು. ಕಳೆದ 2011ರಲ್ಲಿ ಗೌರಿ-ಗಣೇಶ ಹಬ್ಬಕ್ಕೆ ಬಂದವನು, ನನ್ನಿಂದ ನೂರು ರೂಪಾಯಿ ಪಡೆದು. ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಹಾಕಿದ್ದ. 4700 ಮಂದಿ ಪ್ರಥಮ ದರ್ಜೆಯ ಬಿ.ಎಸ್.ಸಿ. ಪದವೀಧರರ ಪೈಕಿ ಎರಡನೇ ಸ್ಥಾನ ಗಳಿಸಿ. ಹುದ್ದಗೆ ಆಯ್ಕೆಯಾದ. ಕಳೆದ ವರ್ಷ ಜೂನ್ 29 ಕ್ಕೆ ಸ್ನಾತಕೋತ್ತರ ಪದವಿ ಮುಗಿಸಿ ಮೈಸೂರಿನಿಂದ ಧಾರವಾಡಕ್ಕೆ ಬಂದ ಮಗ ಅನನ್ಯ, ಕೇವಲ ನಾಲ್ಕುದಿನ ಮನೆಯಲ್ಲಿದ್ದು, ಜುಲೈ 3ನೇ ತಾರೀಕು ತರಬೇತಿಗಾಗಿ ಅಮ್ಮನ ಜೊತೆ ಮಧ್ಯಪ್ರದೇಶ ಮತ್ತು ಛತ್ತೀಸ್ ಗಡದ ಅರಣ್ಯಕ್ಕೆ ಹೊರಟು ನಿಂತ.

ಆ ವೇಳೆಗೆ ಆತನ ವಯಸ್ಸು 22 ವರ್ಷ, ಮೂರು ತಿಂಗಳು. (ಈ ವಯಸ್ಸಿನಲ್ಲಿ ನಾನು ಪ್ರಥಮ ಬಿ.ಎ. ಓದುತ್ತಿದ್ದೆ. ಏಕೆಂದರೆ, ನನ್ನಪ್ಪ, ನನ್ನನ್ನು ಎಸ್.ಎಸ್.ಎಲ್.ಸಿ. ನಂತರ ಓದಿಸಲಾರದೆ ನಾಲ್ಕು ವರ್ಷಗಳ ಕಾಲ ಹಸು, ಕುರಿ ಮೇಯಿಸಲಿಕ್ಕೆ ಹಾಕಿದ್ದ.)

ನಾವು ಮಕ್ಕಳಿಗೆ ಸದಾ ಹೇಳುತ್ತಿದ್ದ ಮಾತು ಒಂದೇ, ನೀವು ಏನೇ ಆಗಿ ನಮ್ಮ ಅಭ್ಯಂತರವಿಲ್ಲ, ಅದರೆ, ಮನುಷ್ಯರಾಗಿ ಇರಬೇಕು. ಇದೊಂದು ಷರತ್ತನ್ನು ಸದಾ ಮಕ್ಕಳಿಗೆ ವಿಧಿಸುತ್ತಿದ್ದೆವು. ಈ ಕಾರಣಕ್ಕಾಗಿ ಅವರನ್ನು ದೇವರು, ಜಾತಿ, ಧರ್ಮ ಇವುಗಳ ವೃತ್ತದ ಹೊರಗಿಟ್ಟು ಬೆಳಸಿದೆವು. ಕೊನೆಗೂ ನಮ್ಮ ಪ್ರಯೋಗ ವಿಫಲವಾಗಲಿಲ್ಲ. ಅದೋಂದೆ ನಮಗೆ ನೆಮ್ಮದಿಯ ಸಂಗತಿ.

English summary
In which language is your child studying in school? Are you putting burden on your children to study what you want? If so, please think twice and read this inspiring and success story of two children who studied in Kannada medium and mastered English.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X