• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿವಮೊಗ್ಗ ಹಳೆ ವಿದ್ಯಾರ್ಥಿಗಳ ಸ್ನೇಹಮಿಲನ

By * ಬಿ.ಎನ್.ವಿಶ್ವನಾಥರಾವ್, ಮುಂಬೈ
|
Glimpses from Shivamogga Old boys meet function
ಶಿವಮೊಗ್ಗದ ಸರ್ಕಾರೀ ಪ್ರೌಢಶಾಲೆಯಲ್ಲಿ (1950-53) ಹಾಗೂ ಇಂಟರ್‌ಮೀಡಿಯಟ್ (ಈಗ ಅದು ಸಹ್ಯಾದ್ರಿ) ಕಾಲೇಜ್‌ನಲ್ಲಿ (1953-55) ಓದುತ್ತಿದ್ದ ಸಹಪಾಠಿಗಳ ವಾರ್ಷಿಕ ಸ್ನೇಹಮಿಲನ ಈ ಬಾರಿ ಕಳೆದ 17 ಜನವರಿ ಭಾನವಾರದಂದು ಬೆಂಗಳೂರಿನಲ್ಲಿ ಜರುಗಿತು. ಹಳೆ ವಿದ್ಯಾರ್ಥಿಗಳ ಈ ಸಮ್ಮಿಳನವನ್ನು ರಾಜೇಶ್ವರಿ ಭಟ್ಟ ಮತ್ತು ಎ.ವಿ.ಶ್ರೀಪಾದಭಟ್ಟ ಅವರ ಸ್ವಗೃಹದಲ್ಲಿ ಏರ್ಪಡಿಸಲಾಗಿತ್ತು. ಇದು ಈ ಸಹಪಾಠಿಗಳ ಮೂರನೆಯ ವಾರ್ಷಿಕ ಮಿಲನ. ಈ ವರ್ಷವೂ ಕಳೆದ ಬಾರಿಯಂತೆ ಸಾಕಷ್ಟು ಸಂಖ್ಯೆಯಲ್ಲಿ ಸಹಪಾಠಿಗಳು ಉಪಸ್ಥಿತರಿದ್ದರು.

ಶಿವಮೊಗ್ಗದ ಪ್ರಖ್ಯಾತ ಸುಗಮ ಸಂಗೀತ ಗಾಯಕ ಗರ್ತೀಕೆರೆ ರಾಘಣ್ಣ ಅವರ ಮೊಮ್ಮಗಳಾದ ಚಾಂದಿನಿ ರಾಘವೇಂದ್ರ ಅವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಆತಿಥೇಯರಾದ ಶ್ರೀಪಾದಭಟ್ಟರು ಎಲ್ಲಾ ಸಹಪಾಠಿಗಳಿಗೂ ಹಾಗೂ ಗುರುಗಳಿಗೂ ಸ್ವಾಗತ ಕೋರಿದರು. ತಮ್ಮ ಸ್ವಾಗತ ಭಾಷಣದಲ್ಲಿ “ಸಹಪಾಠಿಗಳು ಹೀಗೆ ವರುಷಕ್ಕೊಮ್ಮೆಯಾದರೂ ಸೇರಿ ಸಂತೋಷವಾಗಿ ಕಾಲ ಕಳೆಯುವದರ ಅಗತ್ಯ ಮತ್ತು ಮಹತ್ವ; ಎಷ್ಟೋ ದಿನಗಳ ನಂತರ ಮೊದಲಬಾರಿಗೆ ಗೆಳೆಯಗೆಳತಿಯರನ್ನು ಗುರುಗಳನ್ನು ಭೇಟಿಯಾದಾಗ ಆಗುವ ಸಂತೋಷ; ಎಲ್ಲ ಕೆಲಸಗಳನ್ನು ಬದಿಗೊತ್ತಿ ದೂರದೂರದಿಂದ ಇದಕ್ಕಾಗಿಯೇ ಬೆಂಗಳೂರಿನ ಈ ಕೂಟಕ್ಕೆ ಬಂದಿರುವವರಿಗೆ ವಿಶೇಷ ಧನ್ಯವಾದ; ಕಾರ್ಯಕ್ರಮದ ಸ್ಥೂಲ ರೂಪರೇಷೆ"ಗಳನ್ನು ಭಟ್ಟರು ಸ್ವಾಗತ ಮಾತುಗಳಲ್ಲಿ ಪ್ರಸ್ತಾಪಿಸಿದರು.

ಕಳೆದ ವರ್ಷ ದಿವಂಗತರಾದ ಸಹಪಾಠಿಗಳಾದ ಕೆ.ರಂಗನಾಥ್ ರಾವ್ ಹಾಗೂ ಜಿ.ಕೆ.ಗೋಪಾಲರಾವ್ ಮತ್ತು ಡಾ|ವಾಮನ್‌ರಾವ್ ಬಾಪಟ್ ಅವರ ಪತ್ನಿಯಾದ ವೀಣಾ ಬಾಪಟ್ ಅವರ ಸಂತಾಪ ಸೂಚಕವಾಗಿ ಸಭೆ ಎದ್ದುನಿಂತು ಒಂದು ನಿಮಿಷ ಮೌನವನ್ನಾಚರಿಸಿತು.

ಕಾರ್ಯಕ್ರಮದ ಮುಂದಿನ ಭಾಗವಾಗಿ ಶಿಕಾರಿಪುರ ಹರಿಹರೇಶ್ವರ ಅವರು ತಯಾರಿಸಿದ ಛಾಯಾಚಿತ್ರ ಪ್ರಾತ್ಯಕ್ಷಿಕೆಯ ಪ್ರದರ್ಶನವನ್ನು ತೋರಿಸಲಾಯಿತು. ಅದರಲ್ಲಿದ್ದ ಕಾಲೇಜಿನ ದಿನಗಳ ಸಹಪಾಠಿಗಳ ಭಾವಚಿತ್ರ ಮತ್ತು ಕಳೆದ ಎರಡು ವಾರ್ಷಿಕ ಸಂತೋಷಕೂಟಗಳ ಆಯ್ದ ಕೆಲವು ಛಾಯಾಚಿತ್ರಗಳ ಪ್ರದರ್ಶನವನ್ನು ನೋಡಿ ಸಹಪಾಠಿಗಳು ಬಹಳ ಸಂತೋಷಪಟ್ಟರು. ಗುರುವಂದನಾ ಕಾರ್ಯಕ್ರಮದಲ್ಲಿ ಆಯಾ ಗುರುಗಳ ಪರಿಚಯ, ಅವರ ಛಾಯಾಚಿತ್ರಗಳು ಮತ್ತು ಅವರು ಬರೆದ ಪುಸ್ತಕಗಳ ವಿವರಗಳನ್ನೂ ಈ ಪ್ರದರ್ಶನದಲ್ಲಿ ತೋರಿಸಲಾಯಿತು. ನಾಗಲಕ್ಷ್ಮೀ ಹರಿಹರೇಶ್ವರ ಅವರು ಅಧ್ಯಾಪಕರುಗಳ ಕಿರುಪರಿಚಯವನ್ನು ಗುರುವಂದನೆಯ ಸಮಯದಲ್ಲಿ ಮಾಡಿಕೊಟ್ಟರು.

ಗುರುವಂದನೆ : ಆಹ್ವಾನವನ್ನು ಮನ್ನಿಸಿ ಆಗಮಿಸಿದ್ದ ಗುರುಗಳಿಗೆ ಫಲಪುಷ್ಪಗಳನ್ನಿತ್ತು ಶಾಲುಹೊದಿಸಿ ಗೌರವಧನದೊಂದಿಗೆ ಸಹಪಾಠಿಗಳು ಗೌರವಿಸಿದರು. ಒಬ್ಬೊಬ್ಬ ಗುರುವರ್ಯರನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ವೇದಿಕೆಗೆ ಆಹ್ವಾನಿಸಿ, ಸಹಪಾಠಿಗಳ ಪರವಾಗಿ ಒಬ್ಬೊಬ್ಬ ವಿದ್ಯಾರ್ಥಿ ಮತ್ತು ಅವರ ಮಡದಿ ವೇದಿಕೆಯನ್ನೇರಿ, ಅತಿಥೇಯರಾದ ರಾಜೇಶ್ವರಿ ಭಟ್ಟ ಮತ್ತು ಶ್ರೀಪಾದ ಭಟ್ಟ ಅವರೊಂದಿಗೆ ಇದ್ದು ಸನ್ಮಾನಿಸಲಾಯಿತು.

ಪ್ರಾಣಿಶಾಸ್ತ್ರದ ಪ್ರೊ|ದೇವರಾಜ್ ಸರ್ಕಾರ್ ಅವರನ್ನು ಡಾ| ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ ಅವರು, ರಸಾಯನಶಾಸ್ತ್ರದ ಪ್ರೊ| ಎಚ್.ಜಿ. ಸುಬ್ಬರಾವ್ ಅವರನ್ನು ಪ್ರೊ| ರಾಘವೇಂದ್ರ ಹೊಳ್ಳ ಅವರು, ಇಂಗ್ಲೀಷ್‌ನ ಪ್ರೊ| ಕೆ.ಬಿ. ಪ್ರಭುಪ್ರಸಾದ್ ಅವರನ್ನು ಅನುಸೂಯ ಮತ್ತು ಬಿ.ಎನ್. ವಿಶ್ವನಾಥ ಅವರು, ಇಂಗ್ಲಿಷ್‌ನ ಪ್ರೊ| ಎಲ್. ಸೂರ್ಯಪ್ರಸಾದ್ ಅವರನ್ನು ಶಕುಂತಲ ಮತ್ತು ಡಾ| ಕೆ.ಎಸ್. ಭಾಸ್ಕರ ರಾವ್ ಅವರು ಮತ್ತು ಕೊನೆಯಲ್ಲಿ ಶಿವಮೊಗ್ಗದ ಸರ್ಕಾರೀ ಪ್ರೌಢಶಾಲಾ ಗಣಿತ ಅಧ್ಯಾಪಕರಾದ ಕೆ.ಎಸ್.ರಾಮರಾವ್ ಅವರನ್ನು ಅರುಣ ಮೂರ್ತಿ ಮತ್ತು ಅರಕೆರೆ ವೆಂಕಟೇಶಮೂರ್ತಿ ಅವರು ಸಹಪಾಠಿಗಳ ಪರವಾಗಿ ಸನ್ಮಾನಿಸಿದರು.

ಅನಿವಾರ್ಯ ಕಾರಣಗಳಿಗಾಗಿ ಬರಲಾಗದ ಶಿವಮೊಗ್ಗದ ಭೌತಶಾಸ್ತ್ರದ ಪ್ರೊ| ಎಂವಿ ವರದರಾಜ ಅಯ್ಯಂಗಾರ್, ಬೆಂಗಳೂರಿನ ಕನ್ನಡದ ಪ್ರೊ|ಜೆ ಎಸ್ ಶಿವರುದ್ರಪ್ಪ ಮತ್ತು ಚರಿತ್ರೆಯ ಪ್ರೊ|ಎಸ್ ಸತ್ಯನಾರಾಯಣ ಅವರುಗಳು ಸಮಾರಂಭಕ್ಕೆ ಶುಭ ಕೋರಿ ಸಂದೇಶ ಕಳಿಸಿದ್ದರು.

ಈ ಸಂದರ್ಭದಲ್ಲಿ ಪ್ರೊ| ದೇವರಾಜ್ ಸರ್ಕಾರ್ ಅವರು ತಮ್ಮ ಹಳೆಯ ನೆನಪುಗಳನ್ನು ಸಭಿಕರೊಡನೆ ಹಂಚಿಕೊಂಡರು. ಕನ್ನಡದ ಬಗ್ಗೆ ಅಭಿಮಾನವಿದ್ದರೂ ಇತರ ಭಾಷೆಗಳ ಬಗ್ಗೆ ತಿರಸ್ಕಾರವನ್ನು ಬೆಳೆಸಿಕೊಳ್ಳಬಾರದೆಂದು ಹಿತವಚನವನ್ನು ಹೇಳಿದರು. ಅಧ್ಯಾಪಕರುಗಳ ಪರವಾಗಿ ಪ್ರೊ| ಕೆ.ಬಿ. ಪ್ರಭುಪ್ರಸಾದ್ ಅವರು ಮಾತನಾಡಿ ಶಿಷ್ಯರುಗಳಿಂದ ಸಂದ ಗೌರವಕ್ಕೆ ಆಭಾರ ಮನ್ನಣೆಯನ್ನು ಸೂಚಿಸಿ ಎಲ್ಲರಿಗೂ ಶುಭ ಹಾರೈಸಿದರು.

ಸಂಘಟಕರಲ್ಲೊಬ್ಬರಾದ ಬಿ.ಎನ್. ವಿಶ್ವನಾಥ್ ರಾವ್ ಮಾತನಾಡಿ ಒಕ್ಕೂಟದ ಬಗ್ಗೆ ಕಿರುಪರಿಚಯ ಮಾಡಿಕೊಟ್ಟರು. ಇನ್ನೂ ಅನೇಕ ಸಹಪಾಠಿಗಳ ಸರಿಯಾದ ವಿಳಾಸಗಳು ಸಿಗದಿರುವುದರಿಂದ ಅದರ ಬಗ್ಗೆ ಸಹಾಯ ಮಾಡುವಂತೆ ಸಭಿಕರಲ್ಲಿ ವಿನಂತಿಸಿಕೊಂಡರು. ಮುಂದಿನ ವರ್ಷದ ಕಾರ್ಯಕ್ರಮವು ಶಿವಮೊಗ್ಗದಲ್ಲಿ ನಡೆಸಬೇಕೆಂದು ಕೆಲವರ ಅಭಿಲಾಷೆ ಇರುವುದರಿಂದ ಅದರ ಬಗ್ಗೆ ರೂಪುರೇಷೆಗಳನ್ನು ಚರ್ಚಿಸಲೆಂದು ಸಭಿಕರನ್ನು ಆಹ್ವಾನಿಸಿದರು.

ಈ ಚರ್ಚೆಯಲ್ಲಿ ಎಂ. ಆರ್. ರಾಘವೇಂದ್ರಾಚಾರ್ ಅವರು ಮಾತನಾಡಿ, “ಶಿವಮೊಗ್ಗದಲ್ಲಿ ನಡೆಸುವುದು ಉತ್ತಮ. ನಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳಲು ಇದು ಸಹಕಾರಿಯಾಗುತ್ತದೆಂದೂ ಮತ್ತು ಮುಂದಿನ ಕಾರ್ಯಕ್ರಮಗಳಲ್ಲಿ ಆಗುವ ಖರ್ಚನ್ನು ಎಲ್ಲರೂ ಹಂಚಿಕೊಳ್ಳಬೇಕೆಂದೂ" ಸಲಹೆ ನೀಡಿದರು. ಶಿವಮೊಗ್ಗದ ಡಾ| ಕೆ.ಎಸ್. ಭಾಸ್ಕರ ರಾವ್ ತಾವು ಮುಂದಾಳತ್ವವನ್ನು ವಹಿಸಿಕೊಳ್ಳುವ ಆಸಕ್ತಿಯನ್ನು ವ್ಯಕ್ತಪಡಿಸಿದರು. ಎಲ್ಲರೂ ಸಹಕರಿಸುವುದಾಗಿ ಸಹಪಾಠಿಗಳು ಸೂಚಿಸಿದರು. ಸಹಪಾಠಿ ಡಾ| ಕೆ.ಎಸ್. ಭಾಸ್ಕರ ಅವರ ಮಕ್ಕಳಾದ ಕಾಸರವಳ್ಳಿ ವಿದುಷಿ ಸೋದರಿಯರು ರೂಪಾ ಕಿರಣ್ ಮತ್ತು ದೀಪಾ ಅನಂದ್ ರವರಿಂದ ಸುಗಮ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಹಪಾಠಿಗಳ ಸಮ್ಮಿಳನಕ್ಕೆ ಆಗಮಿಸಿದ್ದ ಗೆಳೆಯರಿಗೆ ಮತ್ತು ಗುರುಗಳಿಗೆ ಹರಿಹರೇಶ್ವರ, ಡಾ| ಬಿ.ಎನ್. ಸತ್ಯನಾರಾಯಣ ಮತ್ತು ಡಾ| ಲಕ್ಷ್ಮೀನಾರಾಯಣ ಭಟ್ಟ ರವರುಗಳು ತಾವು ಬರೆದ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು. ಹರಿಹರೇಶ್ವರ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

[ಲೇಖಕರ ಇಮೇಲ್ : rao_bnv@yahoo.co.in]

ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನದ ಗ್ಯಾಲರಿ ನೋಡಿರಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more