ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಕಾದಂಬರಿಯಂತೆಯೇ ಶಾಲೆಯಿದ್ದರೆ ಎಷ್ಟು ಚೆನ್ನ!

By * ಜಯಶ್ರೀ
|
Google Oneindia Kannada News

Kannada novel Tunga by V Gayatri
ಕನ್ನಡ ಸಾಹಿತ್ಯ ಲೋಕದ ಆಪ್ತ ಹೆಸರು ವಿ. ಗಾಯತ್ರಿ. ಅವರು ಲೇಖಕಿಯಾಗಿ ಅಲ್ಲ ನಮ್ಮೊಳಗಿನ ನಾವಾಗುವುದರ ಪ್ರತೀಕವಾಗಿದ್ದಾರೆ. ಸರಳ ಭಾಷೆ, ಮನಕ್ಕೆ ಮುದ ನೀಡುವ ಪ್ರಸಂಗಗಳು - ಇದು ಇವರ ಬರಹದ ಘಮ ಹೆಚ್ಚಿಸುವ ಅಂಶಗಳು. ಗಾಯತ್ರಿ ಅವರ ಕಾದಂಬರಿ 'ತುಂಗಾ' ಇತ್ತೀಚೆಗೆ ಬಿಡುಗಡೆ ಆಯಿತು. ಅದರ ಒಂದೊಂದು ಎಳೆಯು ವಿನೂತನ ಹಾಗೂ ವಿಶೇಷವಾಗಿದೆ.

ಕೆಲವು ಕಾದಂಬರಿಗಳು ಹಿಡಿದರೆ ಮುಗಿಸುವ ತನಕ ಬಿಡುವ ಮನಸ್ಸು ಆಗುವುದೇ ಇಲ್ಲ. ಆದರೆ ಕೆಲವು ಕಾದಂಬರಿಗಳು ಇದು ನಮ್ಮದೇ ಕಥೆಯೇನೋ ಎನ್ನುವಷ್ಟು ಅದ್ಭುತ ರೀತಿಯಲ್ಲಿ ರಚಿತವಾಗಿರುತ್ತದೆ. ಆ ನಿಟ್ಟಿನಲ್ಲಿ ತುಂಗಾ ಸಹ ಮೇಲ್ಗೈ ಪಡೆದಿದೆ. ಇಲ್ಲಿ ತುಂಗಾ ಎನ್ನುವ ಮಲೆನಾಡ ಮಡಿಲಲ್ಲಿ ಬೆಚ್ಚಗೆ ಇರುವ ಪುಟ್ಟ ಹಳ್ಳಿಯೊಂದರ ಬಾಲೆ. ಅಪ್ಪ ಅಮ್ಮ ಸುಸಂಸ್ಕೃತರು. ಹೆಚ್ಚಾಗಿ ಮಗುವಿನ ಮನಸ್ಸು ಅರಿತು ಅದರ ಇಚ್ಛೆ ಸರಿ ದಾರಿಯಲ್ಲಿದ್ದರೆ ಪ್ರೋತ್ಸಾಹಿಸುತ್ತ, ತಪ್ಪಿದ್ದರೆ ಯಾವ ರೀತಿಯಲ್ಲಿ ಅದನ್ನು ಸರಿಪಡಿಸಬೇಕು ಎಂದು ಬಲ್ಲ ಕೆಲವೇ ಕೆಲವು ಪೋಷಕರ ಪ್ರತೀಕ.

ಅದರಲ್ಲೂ ತುಂಗಳ ಅಮ್ಮ ಮುತ್ತಕ್ಕನ ಪಾತ್ರ ಎಲ್ಲರಿಗೂ ಹೀಗೊಬ್ಬ ತಾಯಿ ಇದ್ದರೆಷ್ಟು ಚಂದ ಎನ್ನುವಂತೆ ರಚಿತವಾಗಿದೆ. ಕಥೆಯ ಹೀರೋಯಿನ್ ತುಂಗಳ ವಿಷಯಕ್ಕೆ ಬರುವುದಾದರೆ ಇಲ್ಲಿ ಈಕೆ ಅಸಾಧಾರಣ ಜಾಣೆ. ಅಂತರಂಗ ಬಹಿರಂಗವೆರಡು ಶುದ್ಧಿಯಾಗಿರುವ ಮನ ಆಕೆಯದು. ಆದರೆ ಅದನ್ನು ಅರಿಯುವ ಸೂಕ್ಷ್ಮ ಮನಸ್ಸು ಸಮಾಜದ ಬಹುಭಾಗಕ್ಕೆ ಇರುವುದೇ ಇಲ್ಲ. ಆ ಅಂಶವೇ ಕಥೆಯ ಮೂಲ ಎಳೆ. ಇಂತಹ ವಾತಾವರಣದಲ್ಲಿ ತುಂಗಾ ಮುರಟಿ ಹೋಗುವ ಸಂಭವವೇ ಅಧಿಕ ಆಗಿರುವ ಸಂದರ್ಭದಲ್ಲಿ ಆಕೆಯ ಬದುಕಿಗೆ ಬೆಳಕಾಗಿ ಬರುವುದೇ ಚಿಣ್ಣರ ಲೋಕ.

ತುಂಗಾಳಿಗೆ ಸಿಕ್ಕಂಥ ಶಾಲೆ ನಮಗೂ ಸಿಕ್ಕರೆ ಎಷ್ಟು ಚೆಂದ, ಅಲ್ವಾ?
ಶಾಲೆ ಎಂದರೆ ಎಲ್ಲಾ ಪೀಳಿಗೆಯವರಿಗೂ ಅಸಹನೆ ಹುಟ್ಟಿಸುವ ಸ್ಥಳ. ಮುತ್ತಜ್ಜ, ಅಜ್ಜ, ಅಮ್ಮ, ನಾವು, ನಮ್ಮ ಮುಂದಿನವರು ಒಟ್ಟಾರೆ ಶಾಲೆ ಹೆದರಿಕೆಯ ಗುಮ್ಮ ಆಗಿದೆಯೇ ವಿನಃ ಇಷ್ಟದ ತಮಾಷಿ ಆಗಿಲ್ಲ! ಅಸಹನೆ ಉಂಟುಮಾಡುವ ಕಟ್ಟು ಪಾಡು, ಮಿತಿಯಲ್ಲಿರುವ ಕಲಿಕಾ ಸಾಮಗ್ರಿ, ಧುಮ್ಮಿಕ್ಕುವ ಆಲೋಚನಾ ಪ್ರವಾಹಕ್ಕೆ ಅಣೆಕಟ್ಟು ಹಾಕುವುದಕ್ಕೆ ಪೂರಕ ಆಗಿರುವ ಶಿಕ್ಷಣ ವಿಧಾನ ಇವೆಲ್ಲವೂ ಶಾಲೆಯ ಬಗ್ಗೆ ಬೇಸರ ಹೆಚ್ಚಿಸುವ ಸಂಗತಿಗಳಾಗಿದೆ. ಇದು ಎಂದಿಗೂ ಮುಗಿಯದ ಸಮಸ್ಯೆ.

ಅಂತಹುದೇ ಶಿಕ್ಷಣ ಆರಂಭ ಆಯ್ತು ತುಂಗಳಿಗೆ. ಆದರೆ ಅವಳಲ್ಲಿನ ಶಕ್ತಿಗೆ ಅದು ಸಮ್ಮತ ಆಗದ ಕಾರಣ ಚಿಣ್ಣರ ಲೋಕಕ್ಕೆ ಪ್ರವೇಶ ವಾಗುತ್ತದೆ ಅವಳ ಬದುಕು. ಅಲ್ಲಿ ಇರುವ ಮಾಂಡವಿಯನ್ನು ಟೀಚರ್ ಎಂದು ಕರೆಯಬೇಕಿಲ್ಲ ಅಕ್ಕ ಎಂದು ಕರೆದರೆ ಸಾಕು ಎನ್ನುವ ಸಂಗತಿಯಿಂದ ಆರಂಭಗೊಳ್ಳುತ್ತದೆ ಕಥೆಯ ಖುಷಿ. ಅಲ್ಲಿಂದ ಶಾಲೆಯಂತೆ ಇಂತಹುದೇ ಕಟ್ಟುನಿಟ್ಟು ಜಾಗದಲ್ಲಿ ಕೂರಬೇಕೆನ್ನುವ ಕಟ್ಟಳೆ ಇಲ್ಲ. ಹುಡುಗ ಹುಡುಗಿ ಎನ್ನುವ ತಾರತಮ್ಯ ಇಲ್ಲವೇ ಇಲ್ಲ. ಗಣಿತ ಆದ ಮೇಲೆ ಹಿಂದಿ ಓದಲೇಬೇಕೆನ್ನುವ ನಿಯಮ ಇಲ್ಲ. ಒಟ್ಟಾರೆ ಶಾಲೆಯು ಭರಪೂರ ಖುಷಿ ನೀಡುವ ಸ್ಥಳ, ಅತಿ ಹೆಚ್ಚು ಆರಾಮ ಅನ್ನಿಸುವ ಜಾಗ.

ಇಲ್ಲಿ ಕಲಿಕೆಯ ಪೌಷ್ಟಿಕ ಆಹಾರದತ್ತ ಗಮನ ನೀಡುವುದಲ್ಲದೆ, ಯಾವ ಆಹಾರವೂ ಮೇಲುಕೀಳಲ್ಲ, ಪೌಷ್ಟಿಕತೆಯೇ ಇಲ್ಲಿ ಪ್ರಾಮುಖ್ಯತೆ ಪಡೆದು ಕೊಳ್ಳುತ್ತದೆ ಎನ್ನುವ ಸಂಗತಿಯನ್ನು ಲೇಖಕಿ ಮಕ್ಕಳಿಗೆ ತಿಳಿಸುವ ರೀತಿಯಲ್ಲಿ ಓದುಗರಿಗೆ ತಿಳಿಸುತ್ತಾ ಹೋಗ್ತಾರೆ. ವಿಕಲಚೇತನ ಮಕ್ಕಳು ಮುಖ್ಯವಾಹಿನಿಯಲ್ಲಿ ಸಮಾನ ಸ್ಥಾನ ಪಡೆದಿರುತ್ತಾರೆ, ಅವರಲ್ಲಿ ಅಡಗಿರುವ ಪ್ರತಿಭೆಗಷ್ಟೇ ಬೆಲೆ ನೀಡ ಬೇಕಾದದ್ದು ಅವರ ನ್ಯೂನ್ಯತೆಗಲ್ಲ ಎನ್ನುವ ಸಂಗತಿ ಮನದಟ್ಟು ಮಾಡ್ತಾರೆ.

ಇಷ್ಟರ ನಡುವೆ ಇಣುಕುವ ಜಾತಿ ವ್ಯವಸ್ಥೆ, ಒಂದು ಜಾತಿಯ ತಿನಿಸು ಸಜ್ಜಪ್ಪ ಮತ್ತೊಂದು ಜಾತಿಯ ಮಕ್ಕಳಿಗೆ ಆಶ್ಚರ್ಯದ ಸಂಗತಿ ಆಗುವುದು, ಶರಾವತಿ ನದಿ ಸಮುದ್ರಕ್ಕೆ ಸೇರುವ ವಿಸ್ಮಯ ಸ್ಥಳ, ಟೀ ಪಾರ್ಟಿಯಿಂದ ಪಡೆದ ಸಂತಸ, ಅಷ್ಟೆ ಅಲ್ಲದೆ ಕಥೆಯ ಮಧ್ಯೆ ಮಕ್ಕಳಿಗೆ ಸಾವಿನ ಬಗ್ಗೆ ತಿಳಿಸುವುದು! ಒಟ್ಟಾರೆ ನಮ್ಮ ಬದುಕಿಗೆ ಅಗತ್ಯವಾದ ಪ್ರತಿಯೊಂದು ಸಂಗತಿಗಳನ್ನು ತುಂಗಾ ಕಾದಂಬರಿಯಲ್ಲಿ ಅನಾವರಣ ಮಾಡುತ್ತಾ ಹೊರಟಿದ್ದಾರೆ ಗಾಯತ್ರಿ.

ಒಂದು ಸರ್ತಿ ಓದಿದರೆ ಸಾಕು ಅನ್ನುವ ನಿಯಮ ಈ ಕಾದಂಬರಿಗೆ ಅನ್ವಯಿಸುವುದೇ ಇಲ್ಲ. ನಮ್ಮ ಬಾಲ್ಯದ ಕಾಲವನ್ನು ಮತ್ತೆ ನೆನಪಿಸುತ್ತದೆ ಆದ್ದರಿಂದ ಪ್ರತಿಯೊಬ್ಬರೂ ತಪ್ಪದೆ ಓದಲೇಬೇಕಾದ ಪುಸ್ತಕ. ಆಪ್ತ ವರ್ಗಕ್ಕೆ ಕಾಣಿಕೆಯಾಗಿ ನೀಡುವ ಅರ್ಹತೆ ಪಡೆದ ಪುಸ್ತಕ ಎಂದು ಬೇಕಾದರೂ ಧೈರ್ಯ ಹಾಗೂ ಪ್ರೀತಿಯಿಂದ ತಿಳಿಸ ಬಹುದಾದ ಪುಸ್ತಕ.

ಲೇಖಕಿ : ವಿ ಗಾಯತ್ರಿ
ಪ್ರಕಟಣೆ : ಮೇ ಫ್ಲವರ್ ಮೀಡಿಯ
ದರ : 120 ರು.

<strong>ದಟ್ಸ್ ಕನ್ನಡ ಹೂವಿನಂಗಡಿ 24/7</strong>ದಟ್ಸ್ ಕನ್ನಡ ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X