ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಸ್ತಕ ಪ್ರೇಮಿಗಳಿಗೆ ಲಾಸ್ಟ್ ಛಾನ್ಸ್

By * ಸುಧೀಂದ್ರ ಹಾಲ್ದೊಡ್ಡೇರಿ, ಬೆಂಗಳೂರು
|
Google Oneindia Kannada News

Kannada book fair
ಶನಿವಾರ ಆರಂಭವಾಗಿ ಇಂದು ಜನವರಿ 5ರ ರಾತ್ರಿ ಎಂಟಕ್ಕೆ ಮುಕ್ತಾಯವಾಗಲಿರುವ 'ಕನ್ನಡ ಪುಸ್ತಕ ಪ್ರದರ್ಶನ ಹಾಗೂ ಮಾರಾಟ" ಅಕ್ಷರಶಃ ಪುಸ್ತಕ ಸಂತೆಯಾಗಿದೆ. ಇಲ್ಲಿ ನಿಮಗೆ 'ರಾಜರತ್ನಂ"ರ ಸಮಗ್ರ ಸಾಹಿತ್ಯ ಬೇಕಾ, ಇಲ್ಲ ಅಗ್ಗದ 'ರತ್ನಗಳು" ಸಾಕಾ?

'ನಿಜಕ್ಕೂ ಕನ್ನಡ ಜನ ಪುಸ್ತಕ ಕೊಂಡುಕೊಳ್ತಾರಾರೇನ್ರಿ"? ಎಂಬ ಪ್ರಶ್ನೆಗೆ 'ಮೊದಲು ಅವರು ಕನ್ನಡ ಪುಸ್ತಕ ಓದುತ್ತಾರಾ ಕೇಳಿ ನೋಡಿ"? ಎಂಬ ಮರುಪ್ರಶ್ನೆ ಸಾಮಾನ್ಯದ್ದು. ಇಂಥ ಪ್ರಶ್ನೆಗಳನ್ನು ಹಾಕುವವರಲ್ಲಿ ನೀವೂ ಒಬ್ಬರಾಗಿದ್ದರೆ ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಎಂ.ಶ್ರೀ. ಪ್ರತಿಷ್ಠಾನ,ರವೀಂದ್ರ ಕಲಾಕ್ಷೇತ್ರ,ಎಚ್.ಎನ್. ಕಲಾಕ್ಷೇತ್ರ,ಕನ್ನಡ ಸಾಹಿತ್ಯ ಪರಿಷತ್. ... ಗಳಿಗೆ ಭಾನುವಾರದ ಬೆಳಗ್ಗೆ ಭೇಟಿ ನೀಡುವವರಲ್ಲ ಎಂಬುದು ಖಾತ್ರಿಯಾಗುತ್ತದೆ.

ಸದ್ಯಕ್ಕೆ ಪ್ರಚಲಿತವಿರುವ ಜೋಕ್ ಎಂದರೆ 'ಬುಕ್" ಬರೆಯುವ ಮೊದಲೇ ಇಂಥ ಸಭಾಂಗಣಗಳನ್ನು 'ಬುಕ್" ಮಾಡಿಕೊಂಡಿರಬೇಕು. ಮದುವೆ ನಿಶ್ಚಯವಾಗುವ ಮೊದಲೇ ಛತ್ರ, ಮಗುವಿನ ಡೆಲಿವರಿಗೆ ನರ್ಸಿಂಗ್ ಹೋಮ್ ಹಾಗೂ ನರ್ಸರಿ ಶಾಲೆಯಲ್ಲಿ ಸೀಟುಗಳನ್ನು 'ಬುಕ್" ಮಾಡಿಟ್ಟುಕೊಳ್ಳುವ ಹಾಗೆ.

ಜನವರಿ 4ರ ಸೋಮವಾರ ಸಂಜೆ ರವೀಂದ್ರ ಕಲಾಕ್ಷೇತ್ರ ಆವರಣವನ್ನು ಕಾಲಿಟ್ಟಾಗ ಥಟ್ಟನೇ ನೆನಪಿಗೆ ಬಂದದ್ದು ಗುರುವಾರದ ಸಂಜೆ ಮಡಿವಾಳದ ತರಕಾರಿ ಸಂತೆ.'ಅದೇನು ಜನಾರಿ, ಎರಡೆರಡೂ ಕೈಯ್ಯಲ್ಲಿ ಪುಸ್ತಕ ಹೊತ್ತ ಬ್ಯಾಗುಗಳನ್ನು ತುಂಬಿಕೊಂಡು ಹೋಗ್ತಾರೆ". 'ಅಯ್ಯೋ, ನನ್ನ ಕತೆ ಕೇಳಿ, ನನ್ನ ಕಾರಿನ ಮುಂದೆ ಈ ಪುಸ್ತಕ ಸಂತೆಗೆ ಬಂದವನು ತನ್ನ ಕಾರ್ ಅಡ್ಡಲಾಗಿ ನಿಲ್ಲಿಸಿ ಹೋಗಿದ್ದ. ಸಂಜೆಯ ತನಕ ನನ್ನ ಕಾರಿಗೆ ಬಿಡುಗಡೆ ಸಿಗಲಿಲ್ಲ". 'ನಾಳೆ ಇನ್ನೊಮ್ಮೆ ಬರಬೇಕ್ರಿ. ಕೊನೆಯ ದಿನ. ನಿನ್ನೆ ಎಲ್ಲಾ ಸ್ಟಾಲ್‍ಗಳನ್ನು ನೋಡೋಕ್ಕೆ ಆಗ್ಲಿಲ್ಲ".

ನೂಕು ನುಗ್ಗಲಿನಲ್ಲಿ ನಿಮ್ಮ ಭುಜಕ್ಕೆ ಭುಜ ತಗುಲಿಸಿದ್ದವರು ಚಿ.ಸು.ಕೃಷ್ಣ ಸೆಟ್ಟಿ ಇರಬಹುದು, ಇಲ್ಲವೆ ಮಾತಿಗೆ ಸಿಕ್ಕವರು ಡಾ.ಸಿದ್ಧಲಿಂಗಯ್ಯ ಇರಬಹುದು.ಅಲ್ಲಿ ಕಂಡವರು ಪಿ.ಶೇಷಾದ್ರಿ ಇರಬಹುದು. ಆ ಕಡೆ ನಿಮ್ಮನ್ನು ದಾಟಿ ಹೋಗಿದ್ದು ಖಂಡಿತವಾಗಿಯೂ ಶಶಿಧರ್ ಭಟ್, ಸರ ಸರನೆ ನುಗ್ಗಿದ್ದು ನಮ್ಮ ಸ.ರ.ಸುದರ್ಶನ್ ಅಲ್ಲವೆ? ... ಸಾಲು ಸಾಲಿನ ಪುಸ್ತಕದಂಗಡಿಯ ನಡುವಿನ ಓಣಿಯಲ್ಲಿ ಯಾರೋ ನಿಮ್ಮ ಮೆಚ್ಚಿನ ಲೇಖಕ ನಿಂತಿದ್ದಾರೆ. ಪ್ರಕಾಶಕರೊಡನೆ ಮುಂದಿನ ಪುಸ್ತಕದ ಬಗೆಗೆ ಚರ್ಚೆಗೆ ನಿಂತಿದ್ದಾರೆ.ಮತ್ತೊಂದೆಡೆ ಕಣ್ಣು ಹಾಯಿಸಿದರೆ ನೀವು ಆಪ್ತವಾಗಿಸಿಕೊಂಡ ಪುಸ್ತಕದ ಲೇಖಕಿ ಅಭಿಮಾನಿಯೊಬ್ಬರಿಗೆ ಆಟೋಗ್ರಾಫ್ ಹಾಕ್ತಿದಾರೆ.ಇದು ಕಳೆದ ಮೂರು ದಿನಗಳಿಂದ ಜಾತ್ರೆಯೋಪಾದಿಯಲ್ಲಿ ಪುಸ್ತಕ ಪ್ರೇಮಿಗಳನ್ನು ಸೆಳೆಯುತ್ತಿರುವ ಅಕ್ಷರಶಃ ಪುಸ್ತಕ ಸಂತೆಯ ದೃಶ್ಯಾವಳಿ. ಸ್ಥಳ, ರವೀಂದ್ರ ಕಲಾಕ್ಷೇತ್ರದ ಹಿತ್ತಿಲು, ಬೆಂಗಳೂರು

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕನ್ನಡ ಪುಸ್ತಕ ಪ್ರಾಧಿಕಾರ, ಮೈಸೂರು ವಿಶ್ವವಿದ್ಯಾಲಯ ಗಳಂಥ ಸರ್ಕಾರಿ ಅನುದಾನಿತ ಸಂಸ್ಥೆಗಳೊಂದಿಗೆ ಪೈಪೋಟಿಗೆ ನವಕರ್ನಾಟಕ, ಅಂಕಿತ, ವಸಂತ ಪ್ರಕಾಶನ, ಸಪ್ನ ಬುಕ್ ಹೌಸ್, ಸುರ, ಪ್ರಿಸಮ್, ಸಾಹಿತ್ಯ ಪ್ರಕಾಶನ ಮುಂತಾದ ಪ್ರಕಾಶನ ಖಾಸಗಿ ಸಂಸ್ಥೆಗಳಗಳ ಮೇಲಾಟ. ಕನಿಷ್ಟ ಶೇ.25ರ ಸೋಡಿ ಮಾರಾಟ. 'ನಿಮ್ಮ ಅಂಗಡಿಗೇ ಬಂದರೆ ಇಷ್ಟೊಂದು ಡಿಸ್ಕೌಂಟ್ ಕೊಡ್ತಿರ್ಲಿಲ್ಲ, ಇದು ಮೋಸ ಅಲ್ವಾ"? - ಪ್ರಕಾಶಕರೊಬ್ಬರಿಗೆ ಪುಸ್ತಕ ಪ್ರೇಮಿಯ ಪ್ರಶ್ನೆ.

'ಎಚ್.ಎನ್. ಅವರ ಹೋರಾಟದ ಹಾದಿ ಮುಟ್ಟಬೇಡ್ರಿ. ಇದು ಆ ಅಂಗ್ಡೀನವ್ರು ಅಷ್ಟೂ ಪ್ರತಿಗಳನ್ನು ಬುಕ್ ಮಾಡಿದಾರೆ" - ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸ್ಟಾಲ್ ಇನ್‍ಚಾರ್ಜ್ ಆದೇಶ. 'ಇದು ಹೋಲ್‍ಸೇಲ್ ಮಾರಾಟನೇನ್ರಿ, ಜನಕ್ಕೆ ತಲುಪಬೇಕು. ನಮಗೆ ಕೊಡೋಲ್ಲ ಎಂದು ಹೇಗೆ ಹೇಳ್ತೀರಿ"? ಪುಸ್ತಕ ಪ್ರೇಮಿ ಹೋರಾಟದ ಹಾದಿ ತುಳಿದರು. ಅದೇ ಪುಸ್ತಕಕ್ಕೆ ಕೈಹಾಕಿದ್ದ ವಿಧಾನಸೌಧದ ಸೆಕ್ರೆಟೆರಿಯೇಟ್‍ನ ಅಧೀನ ಕಾರ್ಯದರ್ಶಿಯವರು ನೇರವಾಗಿ ಮನು ಬಳಿಗಾರ್ ಅವರಿಗೆ ಫೋನ್ ಹಚ್ಚತೊಡಗಿದರು. ಇದರ ನಡುವೆ ತ.ಸು.ಶಾಮರಾಯರ 'ಮೂರು ತಲೆಮಾರು"ವಿನ ಇಡೀ ಬಂಡಲ್ ಅನ್ನು ಬಿಲ್ ಮಾಡಿಸಲು ಹೊರಟಿದ್ದ 'ಸ್ಟಾಲ್‍ವರ್ಟ್" ಅವರ ಬಳಿ 'ಒಂದು ಪುಸ್ತಕ ನನಗೆ ನೀವು ಕೊಡಲೇ ಬೇಕು" ಎನ್ನುವ ಸವಿನಯ ಪ್ರಾರ್ಥನೆ ಸರತಿಯ ಸಾಲಿನಲ್ಲಿದ್ದ ಪುಸ್ತಕ ಪ್ರೇಮಿಯ ರಿಕ್ವೆಸ್ಟ್ಟು.

'ಸರ್. ನಿಘಂಟುಗಳೆಷ್ಟಿದ್ದರೂ ಬೇಕು" ಎಂದವರು ಪುಸ್ತಕದ ದೊಡ್ಡ ಗಂಟೇ ಹೊತ್ತಿದ್ದ ಕನ್ನಡ ಮೇಷ್ಟ್ರು. 'ಋಗ್ವೇದ ಸಂಹಿತಾಕ್ಕೆ ಡಿಸ್ಕೌಂಟ್ ಹೋಗಿ ಎಷ್ಟು ರೇಟು?" ಎಂದು ಮೆಲುದನಿಯಲ್ಲಿ ಕೇಳಿದವರು ಆಧ್ಯಾತ್ಮ ಶಿರೋಮಣಿಗಳು. 'ಹೊರಗಡೆ ಮೂರು ಕಾಫಿ ಕೂಡಿದ್ರೆ ಇದಕ್ಕಿಂತಾ ಜಾಸ್ತಿ ಬೆಲೆಯಾಗತ್ತೆ. ವಿಜ್ಞಾನ ಖಂಡಿತಾ ಚೀಪ್. ನಾಗೇಶ ಹೆಗಡೆ ಸಂಪಾದಿತ ವಿಜ್ಞಾನ ಗಂಗೆಯ ಬಿಂದುಸಾರಕ್ಕೆ ಇಪ್ಪತ್ತೇ ರುಪಾಯಿ" ಎಂಬು ಬಾಯಿ ಚಪ್ಪರಿಸಿದವರು ವಿಜ್ಞಾನಿಯಿರಬಹುದೆ? 'ಕೆದಂಬಾಡಿ ಜತ್ತಪ್ಪ ರೈ ಬೇಟೆಯ ನೆನಪಿಗೆ ಹನ್ನೆರಡೂವರೆ ರುಪಾಯಿ ಕೊಟ್ಟೆ. ಕಾಪೀಸ್ ಇನ್ನೂ ಇದೆಯಾ ನೋಡಿ" ಎಂದವರ ದನಿಯಲ್ಲಿ ಕೊಡಗಿನವರ ಛಾಯೆಯಿತ್ತು.'ವಿ.ಸೀ. ಪಂಪಾಯಾತ್ರೆ ಹತ್ತೊಂಬತ್ತು ರುಪಾಯಿಗೇ ಸಿಗ್ತು, ಗೊತ್ತಾ?" ಎಂದವರು ಇವತ್ತು ಸಂಜೆ ಕೃಷ್ಣದೇವರಾಯ ಪುಸ್ತಕ ಬಿಡುಗಡೆ ಸಾಹಿತ್ಯ ಪರಿಷತ್‍ನಲ್ಲಿ.ನಮ್ಮ ಶಿವಪ್ರಸಾದ್ ಬರೆದ ಪುಸ್ತಕ ಎಂದು ಗಟ್ಟಿ ದನಿಯಲ್ಲಿ ಉಚ್ಛರಿಸಿದರು.'ನಾನಂತೂ ಶ್ರೀರಂಗ ಸಾರಸ್ವತದ ಮೂರು ವಾಲ್ಯೂಮ್ ನೂರಾತೊಂಬತ್ತೆರಡಕ್ಕೆ ಕೊಂಡ್ಕೊಂಡೆ"

ಇಂದು ರಾತ್ರಿ ಎಂಟಕ್ಕೆ ಮುಕ್ತಾಯವಾಗಲಿರುವ ಕನ್ನಡ ಪುಸ್ತಕ ಪ್ರದರ್ಶನ ಹಾಗೂ ಮಾರಾಟಕ್ಕೆ ಸಂಜೆಯೇರಿದಂತೆ ನೂಕು ನುಗ್ಗಲಾಗಬಹುದು. ಸಮಯ ಸಿಕ್ಕರೆ ರವೀಂದ್ರ ಕಲಾಕ್ಷೇತ್ರದ ಆವರಣಕ್ಕೆ ನುಗ್ಗಿ. ಜೇಬು ತುಂಬಿದ್ದರೆ ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಸರಮಾಲೆಯನ್ನು ಆರು ನೂರಾ ತೊಂಬತ್ತು ರುಪಾಯಿಗೆ ಖರೀದಿಸಿ. ಬರಿದಾಗಿದ್ದರೆ ಮೂವತ್ತೇ ರುಪಾಯಿ ಖರ್ಚು ಮಾಡಿ ಕುವೆಂಪು ಹಾಗೂ ಮಾಸ್ತಿ ಸಂಪಾದಿತ 'ಕುಮಾರವ್ಯಾಸನ ಕರ್ಣಾಟ ಭಾರತ ಕಥಾ ಮಂಜರಿ"ಯನ್ನು ಪ್ಯಾಕ್ ಮಾಡಿಸಿ. ಹಳೆಗನ್ನಡ ಅರ್ಥವಾಗುವುದಿಲ್ಲವೆಂದರೆ ಒಂಬತ್ತು ರುಪಾಯಿಗೆ ಅಚ್ಚ ಕನ್ನಡದ ಅವರ 'ರತ್ನಗಳು" (ಟಿ.ಆರ್.ಅನಂತರಾಮು) ಖರೀದಿಸಿ.

'ರತ್ನಪ್ರೇಮಿ"ಯೂ ನೀವಾಗಿದ್ದರೆ 'ಜೀ.ಪಿ.ರಾಜರತ್ನಂ ಸಮಗ್ರ ಮಕ್ಕಳ ಸಾಹಿತ್ಯಕ್ಕೆ ಎಂಬತ್ತೈದು ಅಷ್ಟೇ.ಪ್ರವಾಸಕಥನ ಇಷ್ಟ ಪಡುವವರು ನೀವಾಗಿದ್ದರೆ ಇಸ್ರೇಲಿಗೆ ಭೇಟಿ ಕೊಟ್ಟ ಮೊದಲ ಕನ್ನಡ ಪತ್ರಕರ್ತ ಮತ್ತಿಹಳ್ಳಿ ನಾಗರಾಜರಾವ್ ಅವರ 'ಮರುಭೂಮಿ ಚಿಗುರಿತು" ಖರೀದಿಸಿ, ಮೂವತ್ತು ರುಪಾಯಿಗಳಲ್ಲಿ. ಕಾರಂತರ 'ಕುಡಿಯರ ಕೂಸು", ಯಶವಂತ ಚಿತ್ತಾಲರ 'ಮೂರು ದಾರಿಗಳು" ತಲಾ ಮೂವತ್ತೆರಡಕ್ಕೆ ಸಿಕ್ಕರೆ, ಸಿದ್ಧವನಹಳ್ಳಿ ಕೃಷ್ಣಶರ್ಮರ 'ಪರ್ಣಕುಟಿ", ಕೆ.ಎಸ್.ನ.ರ 'ಶಿಲಾಲತೆ" ಹಾಗೂ ಕೆ.ಎಸ್.ಉಮಾಪತಿಯವರ 'ಮೈಸೂರ್ ಚಲೋ"ಗೆ ತಲಾ ಇಪ್ಪತ್ತೇ ರುಪಾಯಿ.

ಎ.ಆರ್.ಕೃಷ್ಣಶಾಸ್ತ್ರಿಗಳ ಅಭಿಮಾನಿ ನೀವಾಗಿದ್ದು ಅವರ 'ಭಾಷಣಗಳು ಮತ್ತು ಲೇಖನಗಳು" ಆಸ್ವಾದಿಸಬೇಕಿದ್ದಲ್ಲಿ ಖರ್ಚು ಮಾಡಬೇಕಾಗಿರುವುದು ಕೇವಲ ನಲವತ್ತು ರುಪಾಯಿಗಳು ಮಾತ್ರ. ಕಡಿದಾಳ್ ಮಂಜಪ್ಪ, ಸಿದ್ಧವನಹಳ್ಳಿ ನಿಜಲಿಂಗಪ್ಪರ ಬರಹಗಳು, ಚಿಂತನಗಳು, ಚಿತ್ರಸಂಪುಟಗಳೂ ಸುಲಭ ದರದಲ್ಲಿ ಲಭ್ಯ. 'ಮನೆಯಂಗಳದಲ್ಲಿ ಮಾತುಕತೆ"ಗಳಲ್ಲಿ ಭಾಗಿಯಾಗುವವರು ನೀವಾಗಿದ್ದಲ್ಲಿ ಅದೀಗ ಪುಸ್ತಕ ರೂಪದಲ್ಲಿ ಸಂಸ್ಕೃತಿ ಇಲಾಖೆಯ ಮಳಿಗೆಯಲ್ಲಿ ಲಭ್ಯ.

ಪುಸ್ತಕ ಸಂತೆಯ ಈ ಬಾರಿಯ ನಿಮ್ಮ ನೆನಪು ಖಂಡಿತವಾಗಿಯೂ ಸಿಹಿಯಾಗಿರುತ್ತದೆ.ದೇಜಗೌ ಅನುವಾದಿಸಿರುವ ಕೃಷ್ಣ ಹತೀಸಿಂಗ್‍ರ 'ನೆನಪು ಕಹಿಯಲ್ಲ" ಪುಸ್ತಕಕ್ಕೆ ನೀವು ಖರ್ಚು ಮಾಡಬೇಕಿರುವುದು ಕೇವಲ ಇಪ್ಪತ್ತೇಳೂವರೆ ರುಪಾಯಿ ಅಷ್ಟೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X