ಅಂತರ್ಜಾಲದಲ್ಲಿ ಒಂದು ಲಕ್ಷ ಕನ್ನಡ ಪುಸ್ತಕಗಳು
ಬೆಂಗಳೂರು : ಅಮೆರಿಕಾದ ಕಾರ್ನೆಗಿ ಮೆಲಾನ್ ವಿಶ್ವವಿದ್ಯಾಲಯದ ಅಂತರ್ಜಾಲ ತಾಣದೊಂದಿಗೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು, ಇನ್ನು ಮುಂದೆ ಕನ್ನಡ ಪುಸ್ತಕಗಳು ಜಾಗತಿಕ ಓದುಗರನ್ನು ತಲುಪಲಿವೆ.
ಸೋಮವಾರ ನಗರದ ಕೇಂದ್ರ ಗ್ರಂಥಾಲಯದಲ್ಲಿ ನಡೆದ ಇ-ಗ್ರಂಥಾಲಯ ಕೈಪಿಡಿ ಮತ್ತು ಕಿಯಾಸ್ಕ್ ತಂತ್ರಾಂಶ ಸಿ.ಡಿ. ಬಿಡುಗಡೆ ಮಾಡಿ ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಗ್ರಂಥಾಲಯ ಸಚಿವ ರಾಮಲಿಂಗಾರೆಡ್ಡಿ ಮಾತನಾಡುತ್ತ ಈ ವಿಷಯ ತಿಳಿಸಿದರು.
ಕಥೆ, ಕಾದಂಬರಿ ಸೇರಿದಂತೆ ಕನ್ನಡದ ಅತ್ಯುತ್ತಮ ಒಂದು ಲಕ್ಷ ಪುಸ್ತಕಗಳು ಈ ಯೋಜನೆಯನ್ವಯ ಅಂತರ್ಜಾಲದಲ್ಲಿ ಲಭ್ಯವಾಗಲಿವೆ. ಮುಂದಿನ ವಾರದಿಂದಲೇ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಈ ಉದ್ದೇಶಕ್ಕಾಗಿ ಪುಸ್ತಕಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯದ ಹಂತದಲ್ಲಿದ್ದು, ಮುಂದಿನ ವರ್ಷದೊಳಗೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಈ ವರ್ಷ ಮೂರು ಹೊಸ ಹೈಟೆಕ್ ಗ್ರಂಥಾಲಯ ಪ್ರಾರಂಭಿಸಲಾಗುವುದು. ಶ್ರವಣಬೆಳಗೊಳದಲ್ಲಿ 1.50 ಕೋಟಿ ರೂಪಾಯಿ ವೆಚ್ಚದಲ್ಲಿ, ಗುಲ್ಬರ್ಗ ಮತ್ತು ಬಾಗಲಕೋಟೆಯಲ್ಲಿ ತಲಾ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಗ್ರಂಥಾಲಯಗಳು ತಲೆಯೆತ್ತಲಿವೆ. ಬೆಂಗಳೂರು ನಗರದಲ್ಲಿ ಇನ್ನೆರಡು ಗ್ರಂಥಾಲಯಗಳನ್ನು ಆರಂಭಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
(ಇನ್ಫೋ ವಾರ್ತೆ)












Click it and Unblock the Notifications