ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸನಾತನ ಧರ್ಮ ಉಳಿದರೆ ಮಾತ್ರ ಕನ್ನಡ ಉಳಿಯುತ್ತದೆ

By ಸಂಪಿಗೆ ಶ್ರೀನಿವಾಸ, ಸನಾತನಿ ಕನ್ನಡಿಗ
|
Google Oneindia Kannada News

ಇತ್ತೀಚಿಗೆ ನಮ್ಮ ನಾಡಿನಲ್ಲಿ ಎರಡು ಗುಂಪುಗಳು ಒಂದಕ್ಕೊಂದು ಪರಸ್ಪರ ವಿರುದ್ಧ ಸಿದ್ಧಾಂತವನ್ನು ಹಿಡಿದು ನಮ್ಮ ಕನ್ನಡ ಭಾಷೆ ಮತ್ತು ಸನಾತನ ಧರ್ಮವನ್ನು ಎರಡೂ ಕಡೆಗಳಿಂದ ಎಳೆದು ಕನ್ನಡ ಮತ್ತು ಸನಾತನ ಧರ್ಮದ ನಡುವೆ ಒಡಕು ಮತ್ತು ಭೇದವನ್ನು ಸೃಷ್ಟಿಸಿದ್ದಾರೆ.

ಒಂದು ಗುಂಪು ಅತಿಯಾದ ಕನ್ನಡ ವ್ಯಾಮೋಹದಿಂದ ಕನ್ನಡವೇ ದೇವರು, ಕನ್ನಡವೇ ಜಾತಿ, ಕನ್ನಡವೇ ಧರ್ಮವೆಂದು, ಹಿಂದಿ ಹೇರಿಕೆ ವಿರುದ್ಧ ಹೋರಾಟ ಮಾಡಿದರೆ, ಮತ್ತೊಂದು ಗುಂಪು ಸನಾತನ ಧರ್ಮದ(ಹಿಂದುತ್ವ) ಪರ ಚಿಂತನೆಗಳಿಗೆ ಹೆಚ್ಚು ಒತ್ತು ನೀಡಿ ಹಿಂದಿ ಹೇರಿಕೆ ಸಮರ್ಥಿಸುತ್ತಿದ್ದಾರೆ. ಇಲ್ಲಿ ಎರಡೂ ಗುಂಪುಗಳು ಪರಸ್ಪರ ಅತಿರೆಕಕ್ಕೆ ಹೋಗುತ್ತಿದ್ದಾರೆ ಎನ್ನಿಸುತ್ತಿದೆ.

ಕನ್ನಡಿಗರ ಮೇಲೆ ಹಿಂದಿ ಸವಾರಿ ಏಕೆ ಅಷ್ಟು ಸುಲಭವೆಂದರೆ...ಕನ್ನಡಿಗರ ಮೇಲೆ ಹಿಂದಿ ಸವಾರಿ ಏಕೆ ಅಷ್ಟು ಸುಲಭವೆಂದರೆ...

ಕನ್ನಡ ಪರ ಗುಂಪು ಕನ್ನಡವನ್ನು ಸಂಸ್ಕೃತ ಪದಗಳಿಂದ ಮುಕ್ತಿಗೊಳಿಸಿ, ಕನ್ನಡಿಗರಿಗೆ ಚಿರಪರಿಚಿತವಾಗಿರುವ ಸಂಸ್ಕೃತ ಪದಗಳಿಗೆ ಪರ್ಯಾಯವಾಗಿ ಕನ್ನಡ ಪದಗಳ ಸೃಷ್ಟಿಗೆ ತೊಡಗಿದ್ದಾರೆ. ಜೊತೆಗೆ ಕನ್ನಡದಿಂದ ಮಹಾಪ್ರಾಣ ಬಳಕೆಯನ್ನು ತೆಗೆಯಬೇಕೆಂದು ಬೇರೆ ಹೊಸದಾಗಿ ಒತ್ತಾಯ ಮಾಡುತ್ತಿದ್ದಾರೆ. ಕನ್ನಡ ಸಂಸ್ಕೃತ ಭಾಷೆಯ ಸಂಭಂದ ಇಂದಿನದಲ್ಲ. ಬೇರೆ ಭಾರತೀಯ ಭಾಷೆಗಳಂತೆ ಕನ್ನಡ ಭಾಷೆ ಕೂಡ ಸಂಸ್ಕೃತ ಪದಗಳಿಂದ ಶ್ರೀಮಂತವಾಗಿದೆ ಹಾಗೂ ಮಧುರವಾಗಿದೆ.

Sanatana Dharma and Kannada Language

ಪ್ರಖ್ಯಾತ ಕನ್ನಡ ಭಾಷಾ ವಿದ್ವಾಂಸರಾದ ಜಿ. ವೆಂಕಟಸುಬ್ಬಯ್ಯನವರ ಕನ್ನಡ ಪದಗಳ ಬಗೆಗಿನ ಇಗೋ ಕನ್ನಡ ಪುಸ್ತಕದಲ್ಲಿ ಸಂಸ್ಕೃತದ ಅನೇಕ ಪದಗಳು ಕನ್ನಡೀಕರಣಗೊಂಡು ತದ್ಭವಗಳಾಗಿ ಪ್ರಸಿದ್ದವಾಗಿರುವುದನ್ನು ತಿಳಿಸಿದ್ದಾರೆ.

ಹೀಗಿರುವಾಗ ಕನ್ನಡದಲ್ಲಿ ಪ್ರಚಲಿತದಲ್ಲಿರುವ ಸಂಸ್ಕೃತದ ತತ್ಸಮ ಹಾಗೂ ತದ್ಭವ ಪದಗಳಿಗೆ ಪರ್ಯಾಯ ಕನ್ನಡ ಪದ ಹುಟ್ಟುಹಾಕುವ ಅವಶ್ಯಕತೆ ಕಾಣಿಸುತ್ತಿಲ್ಲ. ಹೇಗೆ ಪ್ರಚಲಿತದಲ್ಲಿರುವ ಇಂಗ್ಲಿಷ್ ಪದಗಳಿಗೆ ಕಷ್ಟಕರವಾದ ಸಂಸ್ಕೃತ ಪದಗಳ ಬಳಕೆ ಉಚಿತವಲ್ಲವೋ ಹಾಗೆ ಪ್ರಚಲಿತದಲ್ಲಿರುವ ಸಂಸ್ಕೃತ ಪದಗಳಿಗೆ ಕಷ್ಟಕರವಾದ ಹೊಸ ಕನ್ನಡ ಪದಗಳ ಬಳಕೆಗೆ ಹೇರುವುದು ಸರಿಯಿಲ್ಲ, ಸಾಮಾನ್ಯ ಜನಗಳೂ ಒಪ್ಪುವುದಿಲ್ಲ.

ಬಡಗ ಕನ್ನಡಿಗರನ್ನು ಕನ್ನಡಿಗರೇ ಮರೆತಿರುವ ದುರಂತ ಕಥೆಬಡಗ ಕನ್ನಡಿಗರನ್ನು ಕನ್ನಡಿಗರೇ ಮರೆತಿರುವ ದುರಂತ ಕಥೆ

ಇನ್ನು ಕರ್ನಾಟಕದ ಹಿಂದೂ ಪರ ಸಂಘಟನೆಗಳಿಗೆ ಅವರಿಗಿರುವ ಅತಿಯಾದ ಹಿಂದಿ ವ್ಯಾಮೋಹದಿಂದ ಕನ್ನಡಿಗರ ಮೇಲೆ ಕೇಂದ್ರ ಸರ್ಕಾರದಿಂದ ನಡೆಯುತ್ತಿರುವ ಹಿಂದಿ ಹೇರಿಕೆಯ ಪರಿಣಾಮ ಕಾಣಿಸುತ್ತಿಲ್ಲ. ಬ್ಯಾಂಕುಗಳು, ಅಂಚೆ ಕಛೇರಿಗಳು ಮುಂತಾದ ಅನೇಕ ಕೇಂದ್ರ ಸರ್ಕಾರೀ ಸಂಸ್ಥೆಗಳಲ್ಲಿ ರಾಷ್ಟ್ರಭಾಷೆ ಎಂಬ ಹಸಿ ಸುಳ್ಳು ಹೇಳಿ ಕೇಂದ್ರ ಸರ್ಕಾರ ಕನ್ನಡಿಗರ ಮೇಲೆ ಬಲವಂತವಾಗಿ ಹಿಂದಿ ಭಾಷೆ ತುರುಕುತ್ತಿದೆ.

ಕರ್ನಾಟಕದಲ್ಲಿ ವ್ಯವಹರಿಸುತ್ತಿರುವ ಬ್ಯಾಂಕುಗಳ, ಅಂಚೆ ಕಛೇರಿಗಳ ಚಲನ್ ಗಳಲ್ಲಿ ಕನ್ನಡಕ್ಕೆ ಸ್ಥಾನವೇ ಇಲ್ಲ. ಅಲ್ಲಿನ ಸಿಬ್ಬಂದಿ ಕೂಡ ಉತ್ತರ ಭಾರತದಿಂದ ವಲಸೆ ಬಂದು ಕನ್ನಡದಲ್ಲಿ ವ್ಯವಹಾರ ಮಾಡುವ ಸಾಮಾನ್ಯ ಕನ್ನಡ ಗ್ರಾಹಕನಿಗೆ ಕನ್ನಡ ಬಳಸದಂತೆ, ಕನ್ನಡ ಮಾತನಾಡದಂತೆ, ಹಿಂದಿ ಕಲಿಯುವಂತೆ ತಾಕೀತು ಮಾಡಿರುವ ಅನೇಕ ಉದಾಹರಣೆಗಳಿವೆ. ಇದನ್ನು ಹಿಂದೂ ಸಂಘಟನೆಗಳು ಪ್ರತಿಭಟಿಸುವ ಬದಲು ಕನ್ನಡಿಗರಿಗೆ ಹಿಂದಿ ಒಪ್ಪಿಕೊಳ್ಳಬೇಕೆಂದು ತಾಕೀತು ಮಾಡುವುದು ಎಷ್ಟು ಸರಿ? ಕನ್ನಡಿಗರಾಗಿರುವ ಇವರಿಗೆ ಸ್ವಾಭಿಮಾನ ಇಲ್ಲವೇ? ಹಿಂದಿ ಹೇರಿಕೆ ಸಮರ್ಥೀಯವಲ್ಲ. ಅದನ್ನು ವಿರೋಧಿಸೋಣ.

ಕನ್ನಡ ಭಾಷೆಯನ್ನು ದೇವರೆನ್ನುವುದು ಹೇಗೆ ಅಸಂಬದ್ಧವೋ ಹಾಗೆ ಹಿಂದಿ ಭಾಷೆ ಕೂಡ ನಮ್ಮ ರಾಷ್ಟ್ರಭಾಷೆಯೆನ್ನುವುದು ಅಷ್ಟೇ ಅಸಂಬದ್ಧ. ಸನಾತನ ಧರ್ಮದ ಭಾಷೆ ಸಂಸ್ಕೃತ, ಹಿಂದಿಯಲ್ಲ. ಸಂಸ್ಕೃತ ಭಾಷೆಯನ್ನು ಸನಾತನಿ ಕನ್ನಡಿಗರು ಪ್ರೀತಿಸೋಣ. ಹಾಗೆ ಉತ್ತರ ಭಾರತೀಯರ ಗುಲಾಮಗಿರಿಯ ಸಂಕೇತವಾದ ಹಿಂದಿ ಹೇರಿಕೆ ವಿರೋಧಿಸೋಣ. ಹಿಂದಿ ಭಾಷೆ ಸೇರಿದಂತೆ ಭಾರತದ ವಿವಿಧ ಭಾಷೆಗಳನ್ನು ಪ್ರೀತಿಸೋಣ ಹಾಗೂ ಸ್ವಇಚ್ಛೆಯಿಂದ ಕಲಿಯೋಣ. ಒತ್ತಾಯಪೂರ್ವಕ ಹೇರಿಕೆ ಬೇಡ ಅಷ್ಟೆ.

ವಿವಿಧ ಭಾಷೆಗಳನ್ನಾಡುವ ರಾಜ್ಯಗಳ ಒಕ್ಕೂಟವಾದ ಭಾರತ ದೇಶದಲ್ಲಿ ಒಂದು ಭಾಷೆಗೆ ವಿಶೇಷ ಸ್ಥಾನಮಾನ ನೀಡಿ ಇತರ ಭಾಷೆಗಳ ಮೇಲೆ ಹೇರುವುದು ಒಕ್ಕೂಟ ವ್ಯವಸ್ಥೆಗೆ ವಿರೋಧವಾಗುತ್ತದೆ. ಒಂದು ಭಾಷೆಯ ಹೇರಿಕೆಯಿಂದ ದೇಶದಲ್ಲಿ ಅದರಲ್ಲೂ ಹಿಂದಿಯೇತರ ರಾಜ್ಯಗಳಲ್ಲಿ ಕ್ರಮೇಣ ಪ್ರತ್ಯೇಕತಾ ಭಾವನೆ ಬೆಳೆಯುತ್ತದೆ ಎಂಬುದು ಬಾಂಗ್ಲಾದೇಶದ ಸೃಷ್ಟಿಯ ಇತಿಹಾಸದಿಂದ ನಾವು ಕಲಿಯ ಬೇಕಿದೆ.

ಯೂರೋಪಿನ ದೇಶಗಳನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಅಲ್ಲೂ ಭಾಷಾಧಾರಿತ ದೇಶಗಳಿವೆಯೇ ಹೊರತು ಧರ್ಮಾಧಾರಿತ ದೇಶಗಳಿಲ್ಲ. ಅದರೆ ವಿವಿಧ ಭಾಷೆಗಳನ್ನಾಡುವ ನಮ್ಮ ಭಾರತವನ್ನು ಒಂದುಗೂಡಿಸಿರುವುದು ನಮ್ಮ ಸನಾತನ ಧರ್ಮವೊಂದೆ ಎನ್ನುವುದನ್ನು ನಾವೆಲ್ಲಾ ತಿಳಿಯಬೇಕಿದೆ. ಕರುನಾಡಿನಲ್ಲಿ ಸನಾತನ ಧರ್ಮ ಉಳಿದರೆ ಮಾತ್ರ ಕನ್ನಡ ಭಾಷೆ ಉಳಿಯುತ್ತದೆ ಎಂಬುದನ್ನು ನಾವು ಅರಿಯಬೇಕಾಗಿದೆ.

ಕನ್ನಡ ಭಾಷೆ ಹಾಗೂ ಸನಾತನ ಧರ್ಮದ ಸಮನ್ವಯ ಸಾಧಿಸಿ ಎರಡು ಗುಂಪುಗಳೂ ಒಂದಾಗಿ ಕನ್ನಡವನ್ನೂ ಸನಾತನ ಧರ್ಮವನ್ನು ಉಳಿಸುವ ಪಣ ತೊಡೋಣ. ಸನಾತನಿ ಕನ್ನಡಿಗರಾಗೋಣ!

English summary
Sanatana Dharma and Kannada language both have to go hand in hand if Kannadigas have to prosper in Karnataka. At any cost Hindi language should not be imposed on Kannadigas. Sampige Srinivas explains how both the factions are going in two different directions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X