ಜೀವಸೆಲೆಯಾದ ತಾಯಿಗೆ ತಲೆಬಾಗಿ : ಕಾವೇರಮ್ಮ... ಕಾಪಾಡಮ್ಮ...

By: ಬಿ.ಎಂ.ಲವಕುಮಾರ್
Subscribe to Oneindia Kannada

ಕಾವೇರಿ ತುಂಬಿ ಹರಿದರೆ ಸುಭಿಕ್ಷ ಅನ್ನೋದು ನಿಜ. ಅದೇ ಮುನಿದರೆ ಏನಾಗುತ್ತದೆ ಎಂಬುದು ಈ ಬಾರಿ ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ನೀರಿನ ವಿವಾದದಿಂದ ಗೊತ್ತಾಗಿದೆ. ಮಂಡ್ಯ, ಬೆಂಗಳೂರು ಹೊತ್ತಿ ಉರಿದಿರುವುದು ಗೊತ್ತೇ ಇದೆ. ಇನ್ನೂ ಕೂಡ ವಿವಾದ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಾಗಿಯೇ ಎಲ್ಲರೂ ಈ ಬಾರಿ ಕಾವೇರಿಯತ್ತ ದೃಷ್ಟಿ ನೆಟ್ಟು ಕೂತಿದ್ದಾರೆ. ಎಲ್ಲರದೂ ಒಂದೇ ಪ್ರಾರ್ಥನೆ: ಕಾವೇರಮ್ಮ ಕಾಪಾಡಮ್ಮ..

ಕಾವೇರಿ ಹುಟ್ಟಿದ್ದೇ ಲೋಕ ಕಲ್ಯಾಣಕ್ಕೆ ಎಂಬುವುದರಲ್ಲಿ ಎರಡು ಮಾತಿಲ್ಲ. ಒಂದು ವೇಳೆ ಬ್ರಹ್ಮಗಿರಿ ಪರ್ವತ ಶ್ರೇಣಿಯ ಹಿಂಭಾಗಕ್ಕೆ ಹರಿದಿದ್ದರೆ ಕೆಲವೇ ಕೆಲವು ಕಿಲೋ ಮೀಟರ್ ಅಂತರದಲ್ಲಿ ಅರಬ್ಬಿ ಸಮುದ್ರವನ್ನು ಸೇರಿ ಬಿಡುತ್ತಿದ್ದಳು. ಆಗ ಅವಳ ಲೋಕ ಕಲ್ಯಾಣದ ಸಂಕಲ್ಪ ಈಡೇರುತ್ತಿರಲಿಲ್ಲ. ಹೀಗಾಗಿಯೇ ಆಕೆ ಗುಪ್ತಗಾಮಿಯಾಗಿ ಹರಿದು ತಾನು ಹರಿದೆಡೆಯೆಲ್ಲ ಜೀವಸೆಲೆಯಾಗಿದ್ದಾಳೆ.[6.29ಕ್ಕೆ ತೀರ್ಥಸ್ವರೂಪಿಣಿಯಾಗಿ ಉಕ್ಕಿಹರಿದ ಕಾವೇರಿ ತಾಯಿ]

ಕಾವೇರಿ ಲೋಕ ಕಲ್ಯಾಣಕ್ಕಾಗಿ ಏಕೆ ಸಂಕಲ್ಪ ತೊಟ್ಟಳು ಮತ್ತು ಅದನ್ನು ಹೇಗೆ ಈಡೇರಿಸಿಕೊಂಡಳು ಎಂಬುವುದನ್ನು ಪೌರಾಣಿಕ ಕತೆಗಳಲ್ಲಿ ಕಾಣಬಹುದು. ಅದು ಪುರಾಣದ ದಿನಗಳು. ತಲಕಾವೇರಿ ಸಮೀಪದ ಬ್ರಹ್ಮಗಿರಿ ಬೆಟ್ಟದಲ್ಲಿ ಕವೇರನೆಂಬ ಮುನಿ ವಾಸವಾಗಿದ್ದ. ಅವನಿಗೊಬ್ಬಳು ಪುತ್ರಿ ಬೇಕೆಂಬ ಅಭಿಲಾಷೆವುಂಟಾಗಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡತೊಡಗಿದನು. ತಪಸ್ಸಿಗೆ ಮೆಚ್ಚಿದ ಬ್ರಹ್ಮ, ತನ್ನ ಮಾನಸ ಪುತ್ರಿ ಲೋಪಾಮುದ್ರೆಯನ್ನು ದತ್ತು ಮಗಳಾಗಿ ನೀಡಿದ.

Mother Cauvery, save us

ಕವೇರ ಮುನಿಯ ಆಶ್ರಮದಲ್ಲಿ ಲೋಪಾಮುದ್ರೆ ಬೆಳೆಯತೊಡಗಿದಳು. ಕವೇರ ಮುನಿಯ ಆಶ್ರಮದಲ್ಲಿ ಬೆಳೆದಿದ್ದರಿಂದ ಆಕೆ ಕಾವೇರಿಯಾದಳು. ಒಂದು ದಿನ ಅಗಸ್ತ್ಯ ಮುನಿಗಳು ಕವೇರನ ಆಶ್ರಮಕ್ಕೆ ಬರುತ್ತಾರೆ. ಅಲ್ಲಿ ಕಾವೇರಿಯನ್ನು ಕಂಡು ಮನಸೋತು ಆಕೆಯನ್ನು ವಿವಾಹವಾಗುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ.[ತಲಕಾವೇರಿ: ಬ್ರಹ್ಮಗಿರಿ ಬೆಟ್ಟವನ್ನೇರಲು ನಿರ್ಬಂಧ ಇಲ್ಲ!]

ಆಗ ಕಾವೇರಿ, ನನಗೆ ಲೋಕಕಲ್ಯಾಣ ಮಾಡುವ ಅಭಿಲಾಷೆಯಿದ್ದು, ನೀವು ಸದಾ ನನ್ನೊಂದಿಗೆ ಇರಬೇಕು. ನನ್ನನ್ನು ಬಿಟ್ಟು ಎಲ್ಲೂ ಹೋಗಬಾರದು. ಹಾಗೊಂದು ವೇಳೆ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದದ್ದೇ ಆದರೆ ನಾನು ನದಿಯಾಗಿ ಹರಿಯುವುದಾಗಿ ಹೇಳುತ್ತಾಳೆ. ಕಾವೇರಿಯ ಷರತ್ತಿಗೆ ಒಪ್ಪಿದ ಅಗಸ್ತ್ಯ ಮುನಿಗಳು, ಆಕೆಯನ್ನು ವಿವಾಹವಾಗಿ ತನ್ನ ಆಶ್ರಮಕ್ಕೆ ಕರೆದೊಯ್ಯುತ್ತಾರೆ.

ಕಾವೇರಿಗೆ ಕೊಟ್ಟ ಮಾತಿನಂತೆ ಅಗಸ್ತ್ಯ ಮುನಿಗಳು ತಮ್ಮ ಆಶ್ರಮದಲ್ಲಿ ಕಾವೇರಿಯೊಂದಿಗೆ ಆನಂದದಿಂದ ದಿನ ಕಳೆಯುತ್ತಿರುತ್ತಾರೆ. ಒಂದು ದಿನ ಅಗಸ್ತ್ಯ ಮುನಿಗಳು ತಾವಿದ್ದ ಆಶ್ರಮದಿಂದ ಬೆಟ್ಟದಾಚೆಗಿರುವ ಕನ್ನಿಕೆ ನದಿಯಲ್ಲಿ ಸ್ನಾನ ಮಾಡಲೆಂದು ಹೊರಡುತ್ತಾರೆ. ಕಾವೇರಿ ನಿದ್ದೆಯಲ್ಲಿರುವುದರಿಂದ ಅವಳು ಎಚ್ಚರವಾಗುವ ವೇಳೆಗೆ ಹಿಂತಿರುಗಿ ಬರಬಹುದು ಎಂದುಕೊಳ್ಳುತ್ತಾರೆ.[ಮಳೆ ಕಡಿಮೆ ಆಗಿದ್ದಕ್ಕೆ ತಲಕಾವೇರಿಗಾದ ಅಪಚಾರ ಕಾರಣವೇ?]

ಆದರೆ, ಅಗಸ್ತ್ಯ ಮುನಿಗಳು ಅತ್ತ ಸ್ನಾನಕ್ಕೆ ತೆರಳುತ್ತಿದ್ದಂತೆಯೇ ಇತ್ತ ನಿದ್ದೆಯಲ್ಲಿದ್ದ ಕಾವೇರಿಗೆ ಎಚ್ಚರವಾಗುತ್ತದೆ. ಸನಿಹದಲ್ಲಿ ಅಗಸ್ತ್ಯಮುನಿಗಳು ಇಲ್ಲದನ್ನು ಕಂಡು ಆಕೆಗೆ ಪತಿಯ ಮೇಲೆ ಕೋಪಬರುತ್ತದೆ ಅಲ್ಲದೆ ಷರತ್ತು ಮೀರಿದ ಪತಿಯಿಂದ ದೂರವಾಗಿ ನದಿಯಾಗಿ ಹರಿದು ಲೋಕಕಲ್ಯಾಣ ಮಾಡಲು ಇದು ಸೂಕ್ತ ಸಮಯ ಎಂದುಕೊಂಡು ಅಲ್ಲೇ ಇದ್ದ ಕೊಳಕ್ಕೆ ಇಳಿದು, ಅಗಸ್ತ್ಯ ಮುನಿಗಳಿಗೆ ತಿಳಿಯದಂತೆ ಅಲ್ಲಿಂದ ಗುಪ್ತಗಾಮಿನಿಯಾಗಿ ಹರಿದು ಭಾಗಮಂಡಲ ಸೇರುತ್ತಾಳೆ.

ಅಲ್ಲಿ ಕನ್ನಿಕೆ, ಸುಜ್ಯೋತಿ ನದಿಗಳೊಂದಿಗೆ ಸಂಗಮವಾಗಿ ಮುಂದೆ ಹರಿಯುತ್ತಾಳೆ. ಹೀಗೆ ಲೋಕಕಲ್ಯಾಣಕ್ಕೆ ಹೊರಟ ಕಾವೇರಿ ಪ್ರತಿ ವರ್ಷ ತುಲಾ ಸಂಕ್ರಮಣದಂದು ಭಕ್ತರಿಗೆ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಜಲರೂಪಿಣಿಯಾಗಿ ದರ್ಶನ ನೀಡುತ್ತಾ ಬಂದಿದ್ದಾಳೆ.[ಕಾವೇರಿ ಸಮಸ್ಯೆ ಕಾವೇರಿಯಿಂದಲೇ ಪರಿಹಾರ ಕಾಣಬೇಕು]

ತಲಕಾವೇರಿಯಲ್ಲಿ ಉಗಮವಾಗಿ ಭಾಗಮಂಡಲ, ಬಲಮುರಿ, ಗುಹ್ಯ, ಕಣಿವೆ ಮೂಲಕ ಕೊಡಗಿನಿಂದ ಹೊರಹರಿದು ಬಳಿಕ ಕರ್ನಾಟಕದಲ್ಲಿ ಸುಮಾರು 381 ಕಿ.ಮೀ. ಹರಿದು, ಆ ನಂತರ ತಮಿಳುನಾಡು, ಪಾಂಡಿಚೇರಿ ಮೂಲಕ 802 ಕಿ.ಮೀ. ಕ್ರಮಿಸಿ ಕಾವೇರಿ ಪಟ್ಟಣಂನಲ್ಲಿ ಬಂಗಾಳಕೊಲ್ಲಿಯನ್ನು ಸೇರುವುದರೊಂದಿಗೆ ತಾನು ಹರಿದಲ್ಲಿ ಎಲ್ಲ ಪವಿತ್ರಕ್ಷೇತ್ರಗಳನ್ನು ಸೃಷ್ಟಿಸಿ, ಲಕ್ಷಾಂತರ ಮಂದಿಯ ಪಾಲಿಗೆ ಅನ್ನದಾತೆಯಾಗಿದ್ದಾಳೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cauvery teertodbhava at Talakaveri in Bhagamandala of Madikeri district on Monday. We should pray mother Cauvery to resolve all water issues.
Please Wait while comments are loading...