ನುಡಿ ನಮನ : ಪುಷ್ಯ ಹುಣ್ಣಿಮೆಯಂದು ಕುಮಾರವ್ಯಾಸ ಜಯಂತಿ

Posted By: ಡಾ.ಗುರುರಾಜ ಪೋಶೆಟ್ಟಿಹಳ್ಳಿ
Subscribe to Oneindia Kannada

ಕುಮಾರವ್ಯಾಸ ಕಾವ್ಯನಾಮದಿಂದ ಪ್ರಸಿದ್ಧನಾಗಿರುವ ಗದುಗಿನ ನಾರಣಪ್ಪನು ಸಮೀಪದ ಕೋಳಿವಾಡದವನಾದರೂ ಅವನ ಕಾವ್ಯ ಪ್ರತಿಭೆ ಬೆಳಗಿದ್ದು ಗದಗಿನ ವೀರನಾರಯಣ ದೇವಸ್ಥಾನದಲ್ಲಿ. ಪಂಚಮ ವೇದದ ತತ್ವಾರ್ಥದ ಹೂವು ಅರಳಿದ್ದು ಈ ನೆಲದ ಬಳ್ಳಿಯಲ್ಲಿ. ಜನವರಿ 2ರಂದು ಪುಷ್ಯ ಹುಣ್ಣಿಮೆ ಅಂಗವಾಗಿ ಕುಮಾರವ್ಯಾಸ ಜಯಂತಿ ಆಚರಿಸಲಾಗುತ್ತದೆ.

ದುರ್ಯೋಧನನ ಹೆಸರು ಕೇಳುತ್ತಿದ್ದಂತೆ ಆತನ ಕಣ್ಣಲ್ಲಿ ನೀರು ಬಂದಿದ್ದೇಕೆ?
ಗದುಗಿನ ಭಾರತ, ಕರ್ಣಾಟ ಭಾರತ ಕಥಾಮಂಜರಿ, ಕುಮಾರವ್ಯಾಸ ಭಾರತ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಅಪೂರ್ವ ಗ್ರಂಥವನ್ನು ರಚಿಸಿದ ಕುಮಾರವ್ಯಾಸ ಕೊನೇರಿ ತೀರ್ಥದ ಜಲದಲ್ಲಿ ನಿತ್ಯ ಮಿಂದು ವೀರನಾರಯಣ ದೇವಸ್ಥಾನದ ರಂಗ ಮಂಟಪದ ಎರಡನೇ ಕಂಬದ ಹತ್ತಿರ ಶ್ರೀ ವೀರನಾರಯಣನ ಸಮ್ಮುಖದಲ್ಲಿ ಒದ್ದೆ ಬಟ್ಟೆ ಉಟ್ಟು ಬರೆಯಲು ಕುಳಿತರೆ ಶ್ರೀ ವೀರನಾರಯಣನೇ ಕವಿಯಾಗಿ, ಕುಮಾರವ್ಯಾಸ ಲಿಪಿಕಾರನಾಗಿ ಪಂಚಮವೇದವು ಕೃಷ್ಣ ಕಥೆಯಾಗಿ ಬರುತ್ತದೆ.

ಆದರೆ, ಭಾರತ ಕಥೆಯನ್ನು ಹೇಳುವಾಗ ದೇವರು ಒಂದು ಷರತ್ತು ವಿಧಿಸಿರುತ್ತಾನೆ. ಕಥನಕಾರನ ದನಿಯನ್ನು ಮಾತ್ರ ಕೇಳಬೇಕೇ ವಿನಾ ಯಾರು ಎಂದು ನೋಡುವ ಆಸಕ್ತಿ ತೋರಬಾರದು. ಅನೇಕ ವರ್ಷ ಹೀಗೇ ನಡೆಯುತ್ತದೆ.

ಒಮ್ಮೆ ಕುಮಾರವ್ಯಾಸನಿಗೆ ಕಥನಕಾರದ ಕುರಿತು ತಿಳಿಯುವ ಕೂತೂಹಲ ತಡೆಯಲಾಗದೆ ನೋಡುವ ಪ್ರಬಲೇಚ್ಛೆ ತೋಡಿಕೊಳ್ಳುತ್ತಾನೆ. ಪರಮಾದ್ಭುತವೆಂಬಂತೆ ಸ್ವತಃ ದೇವರೇ ಕಥನಕಾರನಾಗಿರುತ್ತಾನೆ. ಆದರೆ ಷರತ್ತು ಮುರಿದಿದ್ದರಿಂದ ದೇವರು ಅದೃಶ್ಯನಾಗಿ ಬಿಡುತ್ತಾನೆ. ಭಾರತ ಕಥೆ ಅಲ್ಲಿಗೇ ನಿಂತುಬಿಡುತ್ತದೆ.

'ಕರ್ಣಾಟ ಭಾರತ ಕಥಾಮಂಜರಿ'ಯನ್ನು ರಚಿಸಿ ತನ್ನನ್ನೂ, ನಾಡನ್ನೂ, ಗದಗಿನ ವೀರನಾರಯಣನನ್ನೂ ಸಾಹಿತ್ಯ ನಕ್ಷೆಯಲ್ಲಿ ಅಜರಾಮರಗೊಳಿಸಿದ್ದಾನೆ. 'ಗದುಗಿನ ಭಾರತ'. 'ಕನ್ನಡ ಭಾರತ' ಎಂಬೆಲ್ಲ ಹೆಸರುಗಳಿಂದ ಜನಜನಿತವಾಗಿರುವ ಕುಮಾರ ವ್ಯಾಸ ಭಾರತ ಕನ್ನಡ ಸಾಹಿತ್ಯಲೋಕದಲ್ಲೊಂದು ಮೈಲಿಗಲ್ಲು. ಈತನ ಕಥನಕ್ರಮಕ್ಕೆ, ಭಾಷೆಯ ನುಡಿಬೆಡಗಿನ ಕುರಿತು ರಾಷ್ಟ್ರಕವಿ ಕುವೆಂಪು- ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪಯುಗವಾಗುವುದು ಭಾರತ ಕಣ್ಣಲ್ಲಿ ಕುಣಿವುದು; ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು- ಎಂದು ಬೆರಗಿನಿಂದ ಬರೆದರು.

ಬರೆಯುವವ ತಾನಾದರೂ ಹೇಳುವವ ಇನ್ನೊಬ್ಬ

ಬರೆಯುವವ ತಾನಾದರೂ ಹೇಳುವವ ಇನ್ನೊಬ್ಬ

ಕುಮಾರವ್ಯಾಸ ಆದಿಪರ್ವದ ಪೀಠಿಕಾ ಸಂಧಿಯಲ್ಲಿ ‘ವೀರನಾರಾಯಣನೆ ಕವಿ' ‘ಲಿಪಿಕಾರ ಕುಮಾರವ್ಯಾಸ' ಎಂದು ಹೇಳಿದ್ದಾನೆ. ಅಂದರೆ, ಬರೆಯುವವ ತಾನಾದರೂ ಹೇಳುವವ ಇನ್ನೊಬ್ಬ ಇದ್ದಾನೆ ಎಂಬ ಭಾವ. ವ್ಯಾಸ ಹೇಳಿದ್ದನ್ನು ಗಣಪತಿ ಬರೆದುಕೊಂಡ ಎಂಬುದು ವ್ಯಾಸಭಾರತದ ಬಗ್ಗೆ ಒಂದು ಕತೆ. ಅದನ್ನು ನೆನಪಿಸುವಂತೆ ಇಲ್ಲಿ ಕವಿ ವೀರನಾರಾಯಣ; ತಾನಲ್ಲ ಎಂಬ ಭಕ್ತಿ. ಈ ಭಕ್ತಿಯ ಆಚೆಯ ಭಾಷೆಯ ಇನ್ನೊಂದು ಅರ್ಥವನ್ನೂ ನಾವು ಗ್ರಹಿಸಬೇಕು. ತಾನು ಕವಿಯಾದರೂ ತನ್ನದು ಮಾತ್ರವಲ್ಲದ ಈ ಲೋಕದ ಕತೆಯನ್ನು, ದೇವರ ಕತೆಯನ್ನು ತಾನೊಬ್ಬ ಬರಹಗಾರ ಮಾತ್ರನಾಗಿ ಹೇಳುತ್ತಿದ್ದೇನೆ ಎಂಬ ಭಾವವನ್ನು ವಿನಯವನ್ನೂ ಗಮನಿಸಬೇಕು. ದೇವರ ಕತೆಯನ್ನು ಲೋಕಾನುಭವದಲ್ಲಿ, ಜನರ ಮಾತುಗಳಲ್ಲಿ (ದೇಸಿ) ಹೇಳುವವ ತಾನು ಎಂಬ ಅಂತಗರ್ತ ನಿಲುವು.ಫೋಟೋ ಕೃಪೆ : ಕಾಮತ್ ಪಾಟ್ ಪೌರಿ

‘ಕುಮಾರವ್ಯಾಸ ಭಾರತ ಹತ್ತೇ ಅಧ್ಯಾಯ?

‘ಕುಮಾರವ್ಯಾಸ ಭಾರತ ಹತ್ತೇ ಅಧ್ಯಾಯ?

‘ಕುಮಾರವ್ಯಾಸ ಭಾರತ ಹತ್ತೇ ಅಧ್ಯಾಯಗಳಿರುವುದು ಎಂಬ ಅಭಿಪ್ರಾಯವಿದೆ. ಆದರೂ ಈ ಕೃತಿಯ ಸೊಬಗು, ಶೈಲಿ ಬಹು ಕಾಲದಿಂದ ರಸಿಕರ ಮನಸೂರೆಗೊಳ್ಳುತ್ತಲೇ ಇದೆ. ಇಲ್ಲಿ ಕವಿಯು ಕೃಷ್ಣನನ್ನು ಕಥಾನಾಯಕನಾಗಿಸಿಕೊಂಡಿದ್ದಾನೆ. ಅದಕ್ಕೆ ಈ ಕೃಷ್ಣ ಕಥೆ, ‘ಹಲವು ಜನ್ಮದ ಪಾಪರಾಶಿಯು ತೊಳೆವ ಜಲವಿದು'. ಇದು ಪದುಮನಾಭನ ಲೀಲಾವಿಲಾಸ.
ಕುಮಾರ ವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಕರ್ನಾಟಕ ಸಾಹಿತ್ಯದ ಮೇರುಪುಷ್ಪ , ಗಮಕ ಕಲಾಭಿಮಾನಿಗಳಿಗೆ ನೆಚ್ಚಿನ ಗ್ರಂಥ. ಕುಮಾರವ್ಯಾಸ ಭಾರತ ಭಾಮಿನೀ ಷಟ್ಟದಿ ಛಂದಸ್ಸಿನಲ್ಲಿ ರಚನೆಯಾಗಿದೆ. ಸುಮಾರು 10 ಪರ್ವಗಳನ್ನು ಒಳಗೊಂಡಿದೆ. ಇದರಲ್ಲಿ ವೀರ ಶೃಂಗಾರ ರಸಗಳ ಸನ್ನಿವೇಶಗಳು ಯಥೇಚ್ಛವಾಗಿ ಬಳಕೆಯಾಗಿದೆ.

ಮೊದಲ ಐದು ಪರ್ವಗಳನ್ನು ಆದಿ ಪಂಚಕ

ಮೊದಲ ಐದು ಪರ್ವಗಳನ್ನು ಆದಿ ಪಂಚಕ

ಮೊದಲ ಐದು ಪರ್ವಗಳನ್ನು ಆದಿ ಪಂಚಕವೆಂದು, ಕರೆಯಲಾಗಿದೆ. ಕುಮಾರವ್ಯಾಸನ ಪದಗಳೆ ಛಂದ ಎನ್ನುವ ಮಾತಿನಂತೆ ಕುಮಾರ ವ್ಯಾಸ ಶೋಭಿಸುವುದು ಆತನ ರೂಪಕಗಳಿಂದ, ಉದಾ: ಬವರವಾದರೆ ಹರನ ವದನಕೆ ಬೆವರ ತಹೆನು (ಅಭಿಮನ್ಯುವಿನ ವೀರೋಕ್ತಿ!) ನರಶರದ ಜುಂಜುವೊಳೆಯಲಿ ಜಾರುವನೆ ಜಾಹ್ನವೀಧರ (ಕಿರಾತಾರ್ಜುನೀಯ ಪ್ರಸಂಗದಲ್ಲಿ) ಜವನ ಮೀಸೆಯ ಮುರಿದನೋ (ಉತ್ತರನ ಪೌರುಷದಲ್ಲಿ). ಕುವೆಂಪುರವರು ತಮ್ಮ ತೋರಣನಾಂದಿಯಲ್ಲಿ ಕುಮಾರವ್ಯಾಸನ ಪ್ರತಿಭೆ ಭಾಷೆಯಲ್ಲಿ ಅವತರಿಸುವ ಸೊಗಸೇ ಸೊಗಸು. ಅಂಥ ಸೊಗಸನ್ನು ಹೆಚ್ಚಿಸಿರುವುದು ಅವನ ರೂಪಕ ನಿರ್ಮಾಣ ಶಕ್ತಿ. ಅವನನ್ನು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದು ಕರೆದಿರುವುದು ಅತ್ಯಂತ ಸೂಕ್ತವೇ ಆಗಿದೆ. ಕುಮಾರವ್ಯಾಸ ಕಾಣುವುದು ರೂಪಕಗಳನ್ನು ಮಾತನಾಡುವುದು ರೂಪಕಗಳನ್ನು ಅಷ್ಟೇ ಏಕೆ ಅವನ ಸಾಧಾರಣತಮ ಭಾಷೆಯೂ ರೂಪಕದಿಂದ ದೀಪ್ತಗೊಂಡಿರುತ್ತದೆ. ಈ ಭೂಮಿಕೆಯಲ್ಲಿ ಅವನನ್ನು ಸರಿಗಟ್ಟುವ ಕವಿ ಕನ್ನಡದಲ್ಲಿ ಇಲ್ಲವೇ ಇಲ್ಲ ಎನ್ನುತ್ತಾರೆ.

ಮಹಾಕಾವ್ಯ ರಚಿಸಿರುವ ಮಹಾಕವಿ

ಮಹಾಕಾವ್ಯ ರಚಿಸಿರುವ ಮಹಾಕವಿ

ಕರ್ಣಾಟ ಭಾರತ ಕಥಾಮಂಜರಿಯ ಕುಮಾರವ್ಯಾಸ ಮಮತೆಯ ಸುಳಿಯನ್ನು ಹಿಡಿದು ಮಹಾಕಾವ್ಯ ರಚಿಸಿರುವ ಮಹಾಕವಿ. ಅವನಿಗೆ ಸಂಬಂಧಗಳ ಪ್ರಪಂಚವೆಂದರೆ ಅಚ್ಚುಮೆಚ್ಚು. ಸಂಬಂಧಮೀಮಾಂಸೆ ಅವನ ಕಾವ್ಯದ ಹೃದಯಕಲಶ ಎಂದರೂ ಸರಿ. ಈ ಕಲಶದಲ್ಲಿ ಅವನು ತನ್ನ ಪರಮಪ್ರಿಯ ಕೃಷ್ಣರೂಪವಾದ ಗದುಗಿನ ವೀರನಾರಾಯಣನನ್ನು ಇರಿಸಿದ್ದಾನೆ.
ನಿಧಾನವಾಗಿ ಸಮಾಧಾನದಲ್ಲಿ ಓದಿದರೆ, ಆಡುಮಾತುಗಳು ಹುದುಗಿರುವ (‘ತಾಯೆಭಿನ್ನಹ: ಇಂದು ನಿಮ್ಮ ರಾಯ ಸೋತನು, ಜೂಜಿನಲ್ಲಿ; ಕುರುರಾಯ ಗೆಲಿದನು; ಕೋಶವಂ ಕರಿ, ತುರಗ, ರಥ ಸಹಿತ) ಕುಮಾರವ್ಯಾಸನನ್ನು ನಾವೇ ಓದಿ ಅರ್ಥಮಾಡಿಕೊಳ್ಳಬಹುದು. ಅವಕಾಶವಿದ್ದರೆ ಗಮಕಿಗಳ ಹಾಡುಗಳ, ವ್ಯಾಖ್ಯಾನಕಾರರ ವಿವರಣೆ ಮೂಲಕವೂ ಕೃತಿ ಪ್ರವೇಶ ಮಾಡಬಹುದು
‘ತಿಳಿಯ ಹೇಳುವೆ ಕೃಷ್ಣ ಕಥೆಯನು'
ತಿಣಿಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ ತಿಂಥಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ!

ಎಂದು ಚಿಂತಿಸಿದ ಗದುಗಿನ ನಾರಣಪ್ಪ, ಕನ್ನಡದಲ್ಲಿ ‘ತಿಳಿಯ ಹೇಳುವೆ ಕೃಷ್ಣ ಕಥೆಯನು' ಎನ್ನುತ್ತ ಮಹಾಭಾರತವನ್ನು ಬರೆದ. ಈ ಕಾರಣದಿಂದಲೇ ಕನ್ನಡದ ‘ವ್ಯಾಸ'ನೆಂದು ಹೆಸರಾದ.

ರೂಪಕ ಸಾಮ್ರಾಜ್ಯದ ಚಕ್ರವರ್ತಿ

ರೂಪಕ ಸಾಮ್ರಾಜ್ಯದ ಚಕ್ರವರ್ತಿ

ನಡುಗನ್ನಡ ಸಾಹಿತ್ಯದಲ್ಲಿ ಹದಿನೈದನೇ ಶತಮಾನದ ಪೂರ್ವಾರ್ಧದಲ್ಲಿದ್ದ ನಾರಾಣಪ್ಪ ‘ರೂಪಕ ಸಾಮ್ರಾಜ್ಯದ ಚಕ್ರವರ್ತಿ' ಎಂದೇ ಬಿರುದಾಂಕಿತ ‘ಕರ್ಣಾಟ ಭಾರತ ಕಥಾ ಮಂಜರಿ', ಕುಮಾರವ್ಯಾಸ ಧಾರ್ಮಿಕ ಗ್ರಂಥವನ್ನು ಕನ್ನಡಕ್ಕೆ ತಂದು ಶ್ರದ್ಧಾವಂತರಿಗೆ ಉಪಕರಿಸಿದ್ದಷ್ಟೇ ಅಲ್ಲ, ಕನ್ನಡ ಸಾಹಿತ್ಯದ ಬೆಳವಣಿಗೆ ಮೇಲೆಯೂ ಬಹಳಷ್ಟು ಪ್ರಭಾವ ಬೀರಿದ್ದಾನೆ. ಕನ್ನಡ ಭಾರತವನ್ನು ಇಂದಿಗೂ ಪಾರಾಯಣ ಮಾಡಲಾಗುತ್ತದೆ, ವ್ಯಾಖ್ಯಾನ ಮಾಡಲಾಗುತ್ತದೆ.

ಚಂಪೂ ಕಾವ್ಯವನ್ನು ವಾಚಿಸಲು ಕನ್ನಡದಲ್ಲಿ ‘ಗಮಕ' ಎಂಬ ಒಂದು ವಿಶಿಷ್ಟ ಶೈಲಿಯೇ ರೂಪುಗೊಂಡಿದ್ದು, ಭಾರತೀಯ ಭಾಷಾ ಪರಂಪರೆಯಲ್ಲಿಯೇ ಬಲು ಅಪರೂಪದ್ದಾಗಿದೆ. ಕುಮಾರವ್ಯಾಸ ಭಾರತವನ್ನು ಸಾಮಾನ್ಯವಾಗಿ ಗಮಕಿಗಳು ಹಾಡುತ್ತಾರೆ ಮತ್ತು ವ್ಯಾಖ್ಯಾನಕಾರರು ಅದರ ಅರ್ಥ ವಿವರಣೆ ಮಾಡುತ್ತಾರೆ. ಇಂತಹ ಗಮಕ ವಾಚನಗಳನ್ನು ಆಯೋಜಿಸಿ ಕಾವ್ಯರಸಿಕರಿಗೆ ಹರ್ಷ ನೀಡುವ ಕಾರ್ಯಕ್ರಮಗಳು ಇಂದಿಗೂ ಅಲ್ಲಲ್ಲಿ ನಡೆಯುತ್ತವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kumaravyasa Jayanti is celebrated on Pushya hunnime day. Kumara Vyasa is the pen name of Gadugina Veera Naranappa, a classical poet of Kannada. Karnata Bharata Kathamanjari is popularly known as Gadugina Bharata is his most famous work.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ