ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7ನೇ ಆಳ್ವಾಸ್ ನುಡಿಸಿರಿ ಇಂದಿನಿಂದ ಆರಂಭ

By * ನಮನ ಬಜಗೋಳಿ
|
Google Oneindia Kannada News

Dr Mohan Alva
ಮೂಡಬಿದಿರೆ, ಅ. 29 : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ "ಆಳ್ವಾಸ್ ನುಡಿಸಿರಿ - 2010" ಅಕ್ಟೋಬರ್ 29, 30 ಮತ್ತು 31ರ ಶುಕ್ರ, ಶನಿ ಮತ್ತು ಭಾನುವಾರಗಳಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ.

2004ರಲ್ಲಿ ಆರಂಭಗೊಂಡ ಆಳ್ವಾಸ್ ನುಡಿಸಿರಿ ಸಮ್ಮೇಳನವು ವರ್ಷಂಪ್ರತಿ ನಿರಂತರವಾಗಿ ನಡೆಯುತ್ತಿದ್ದು ಇದು 7ನೇ ವರ್ಷದ ಸಮ್ಮೇಳನವಾಗಲಿದೆ. "ಕನ್ನಡ ಮನಸ್ಸು : ಜೀವನ ಮೌಲ್ಯ" ಎಂಬ ಮುಖ್ಯ ಪರಿಕಲ್ಪನೆಯಲ್ಲಿ ಈ ಬಾರಿಯ ಸಮ್ಮೇಳನ ಮೂಡಿಬರಲಿದೆ. ಕನ್ನಡ ಮನಸ್ಸು: ಸಾಹಿತ್ಯಕ - ಸಾಂಸ್ಕೃತಿಕ ಸವಾಲುಗಳು, ಕನ್ನಡ ಮನಸ್ಸು - ಬೌದ್ಧಿಕ ಸ್ವಾತಂತ್ರ್ಯ , ಕನ್ನಡ ಮನಸ್ಸು - ಪ್ರಚಲಿತ ಪ್ರಶ್ನೆಗಳು, ಕನ್ನಡ ಮನಸ್ಸು : ಸಾಹಿತಿಯ ಜವಾಬ್ದಾರಿಗಳು, ಕನ್ನಡ ಮನಸ್ಸು - ಶಕ್ತಿ ಮತ್ತು ವ್ಯಾಪ್ತಿ, ಹಾಗೂ ಕನ್ನಡ ಮನಸ್ಸು - ಸಮನ್ವಯದೆಡೆಗೆ ಪರಿಕಲ್ಪನೆಯಲ್ಲಿ ಈವರೆಗಿನ ಸಮ್ಮೇಳನಗಳು ನಡೆದಿವೆ.

ನಾಡಿನ ಖ್ಯಾತ ಸಾಹಿತಿಗಳು, ಕವಿಗಳು, ಕತೆಗಾರರು, ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. 29ರಂದು ಬೆಳಗ್ಗೆ ಸಮ್ಮೇಳನ ಉದ್ಘಾಟನೆಗೊಳ್ಳಲಿದ್ದು, 31ರಂದು ಸಾಯಂಕಾಲ ಸಮಾರೋಪಗೊಳ್ಳಲಿದೆ. ಸಮಾರೋಪಸಮಾರಂಭದಲ್ಲಿ ನಾಡಿನ ಗಣ್ಯರನ್ನು "ನುಡಿಸಿರಿ ಪ್ರಶಸ್ತಿ" ನೀಡಿ ಪುರಸ್ಕರಿಸಲಾಗುವುದು ಎಂದು ಡಾ.ಮೋಹನ ಆಳ್ವ ತಿಳಿಸಿದರು.

ಮಾದರಿ ಸಮ್ಮೇಳನ: ಆಳ್ವಾಸ್ ನುಡಿಸಿರಿ ಒಂದು ಮಾದರಿ ಸಮ್ಮೇಳನ. ಅಧ್ಯಕ್ಷರ ಆಯ್ಕೆಯಿಂದ ತೊಡಗಿ, ಸಮ್ಮೇಳನದ ವ್ಯವಸ್ಥೆಯ ತನಕವೂ ಎಲ್ಲವೂ ಶಿಸ್ತುಬದ್ಧ, ಅಚ್ಚುಕಟ್ಟು. ಅಲ್ಲಿ ಗೊಂದಲಗಳಿಲ್ಲ. ಬದಲಾಗಿ ಪಾರದರ್ಶಕತೆಯಿದೆ. ಸಮಯಪ್ರಜ್ಞೆಗೆ ಅಲ್ಲಿ ವಿಶೇಷ ಒತ್ತು. ಯಾವ ಸಮ್ಮೇಳನಗಳಲ್ಲೂ ಕಂಡುಬರದಂತಹ ಅಚ್ಚುಕಟ್ಟುತನ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರಿಸಮಾನಾದ ರೀತಿಯಲ್ಲಿ ಈ ಸಮ್ಮೇಳನ ಮೂಡಿಬರುತ್ತಿದೆ ಎಂದರೆ ಅತಿಶಯೋಕ್ತಿಯಾಗಲಾರದು. ರಾಜ್ಯ, ಹೊರರಾಜ್ಯ, ಹೊರ ರಾಷ್ಟ್ರಗಳಿಂದ ಬಂದಂತಹ ಶಿಸ್ತುಬದ್ಧ ಸಾಹಿತ್ಯಾಭಿಮಾನಿಗಳು ಈ ಸಮ್ಮೇಳನದ ಯಶಸ್ಸಿಗೆ ಸಾಕ್ಷಿ.

ವಿಶೇಷೋಪನ್ಯಾಸ : ಈ ಬಾರಿಯ ನುಡಿಸಿರಿಯಲ್ಲಿ ವಿಶೇಷವಾಗಿ ಪ್ರತಿದಿನ ನಾಡಿನ ಹೆಸರಾಂತ ವಾಗ್ಮಿಗಳಿಂದ ವಿಶೇಷೋಪನ್ಯಾಸವನ್ನು ಹಮ್ಮಿಕೊಳ್ಳಲಾಗಿದೆ. ಅ.29ರಂದು ಸಂಜೆ 5ರಿಂದ ಶತಾವಧಾನಿ ಡಾ.ಆರ್. ಗಣೇಶ್ ಮೌಲ್ಯಗಳ ಪರಿಕಲ್ಪನೆ ಎಂಬ ವಿಷಯದಲ್ಲಿ ಮಾತನಾಡಲಿದ್ದಾರೆ. 30ರಂದು ಸಂಜೆ ಜೀವನ ಸಾಫಲ್ಯ ಎಂಬ ವಿಷಯದಲ್ಲಿ ಕುಮಾರ ನಿಜಗುಣ ಮತ್ತು ನಾಲಗೆನುಲಿ ಎಂಬ ವಿಷಯದಲ್ಲಿ ಜೋತೀಶ್ವರ ಬೆಂಗಳೂರು ಮಾತನಾಡಲಿದ್ದಾರೆ. 31ರಂದು ಮದ್ಯಾಹ್ನ 2ರಿಂದ ಕನ್ನಡ ಮನಸ್ಸು ಮತ್ತು ಪರಿಸರ ಎಂಬ ವಿಷಯದಲ್ಲಿ ನಾಗೇಶ್ ಹೆಗಡೆ ಮಾತನಾಡಲಿದ್ದಾರೆ.

ಸಮ್ಮೇಳನದಲ್ಲಿ ನಾಲ್ಕು ವಿಚಾರಗೋಷ್ಠಿಗಳು ನಡೆಯಲಿದ್ದು ಅ. 29ರಂದು ಅಪರಾಹ್ನ 2.20ರಿಂದ ಧರ್ಮ ಮತ್ತು ಜೀವನ ಮೌಲ್ಯಗಳು ಎಂಬ ಉಪಶೀರ್ಷಿಕೆಯಡಿ ನಡೆವ ಮೊದಲಗೋಷ್ಠಿಯಲ್ಲಿ ಡಾ. ಬಸವರಾಜ ಕಲ್ಗುಡಿ ಮತ್ತು ಡಾ.ಬಸವರಾಜ ಮಲಶೆಟ್ಟಿ ಮಾತನಾಡಲಿದ್ದಾರೆ. ಸಮ್ಮೇಳನದ ಎರಡನೇ ದಿನ ಅ. 30ರಂದು ಬೆಳಗ್ಗೆ ನಡೆವ ಗೋಷ್ಠಿ ಎರಡರಲ್ಲಿ ಪ್ರಭುತ್ವ ಮತ್ತು ಜೀವನಮೌಲ್ಯಗಳು ಎಂಬ ಗೋಷ್ಠಿಯಲ್ಲಿ ಡಾ.ಕೃಷ್ಣಮೂತರ್ ಹನೂರ ಮತ್ತು ಡಾ.ಪಿ.ಕೆ ರಾಜಶೇಖರ ಭಾಗವಹಿಸಲಿದ್ದಾರೆ. ಅಂದು ಅಪರಾಹ್ನ ನಡೆಯುವ ಗೋಷ್ಠಿ ಮೂರರಲ್ಲಿ ಡಾ.ರಾಜೇಂದ್ರ ಚೆನ್ನಿ ಮತ್ತು ಡಾ.ಎಂ.ವಿ. ವಸು ಅವರು ಸಮಾಜ ಮತ್ತು ಜೀವನ ಮೌಲ್ಯಗಳು ಎಂಬ ವಿಚಾರದಲ್ಲಿ ಪ್ರಬಂಧ ಮಂಡನೆ ಮಾಡಲಿದ್ದಾರೆ.

ಕವಿಸಮಯ ಕವಿನಮನ : ಸಮ್ಮೇಳನದ ನಡು ನಡುವೆ ನಡೆವ ಕವಿಸಮಯ ಕವಿನಮನ ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ಧ ಕವಿಗಳಾದ ಹೊರೆಯಾಲ ದೊರೆಸ್ವಾಮಿ, ಸತೀಶ್ ಕುಲಕರ್ಣಿ ಡಾ.ಎಲ್.ಸಿ.ಸುಮಿತ್ರಾ, ಲೋಕೇಶ್ ಅಗಸನ ಕಟ್ಟೆ, ಅರುಂಧತಿ ರಮೇಶ್, ಸರಜೂ ಕಾಟ್ಕರ್, ಜ್ಯೋತಿ ಗುರುಪ್ರಸಾದ್, ಆರಿಫ್ ರಾಜ ಇವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕವಿಗಳು ತಮ್ಮ ಕಾವ್ಯಸ್ಪೂರ್ತಿಯ ಧ್ಯೇಯ ಧೋರಣೆ, ನಿಲುವುಗಳ ಕುರಿತ ಮಾತುಗಳನ್ನಾಡಿ ತಮ್ಮ ಕವಿತೆಯನ್ನು ವಾಚಿಸುತ್ತಾರೆ. ಬಳಿಕ ಎಂ.ಎಸ್ ಗಿರಿಧರ್ ನಿರ್ದೇಶನದಲ್ಲಿ ಆ ಕವಿತೆಗೆ ರಾಗ ಸಂಯೋಜಿಸಿ ಗಾಯಕರು ಹಾಡಲಿದ್ದಾರೆ.

ಕಥಾಸಮಯ : ಕಥಾಸಮಯದಲ್ಲಿ ಹೆಸರಾಂತ ಕತೆಗಾರರಾದ ಡಾ.ಮೊಗಳ್ಳಿ ಗಣೇಶ್, ಫಕೀರ್ ಮಹಮ್ಮದ್ ಕಟ್ಪಾಡಿ, ವಸುಮತಿ ಉಡುಪ ಮತ್ತು ವಿವೇಕ್ ಶಾನುಭಾಗ್ ಭಾಗವಹಿಸಲಿದ್ದಾರೆ. ಇದರಲ್ಲಿ ಕತೆಗಾರರು ತಮ್ಮ ಬರವಣಿಗೆ ಕುರಿತ ವಿಚಾರಗಳನ್ನು ಮಂಡಿಸುತ್ತಾ ಆಯ್ದ ಕತೆಯೊಂದನ್ನು ವಾಚಿಸಲಿದ್ದಾರೆ.

ಹಾಸ್ಯಗೋಷ್ಠಿ : ಈ ಗೋಷ್ಠಿಯನ್ನು ಮಾತಿನ ಮಂಟಪ ಎಂಬ ಶೀರ್ಷಿಕೆಯಡಿಯಲ್ಲಿ ವಿಶಿಷ್ಠವಾಗಿ ನಡೆಸಲಾಗುತ್ತಿದ್ದು ಈ ಬಾರಿ ವಿಭಿನ್ನವಾಗಿ ಅಗಲಿದ ಖ್ಯಾತ ಹಾಸ್ಯ ಹಾಗೂ ಲಲಿತ ಸಾಹಿತಿಗಳಾದ ಬೀ.ಚಿ., ನಾ.ಕಸ್ತೂರಿ, ಹಾಗೂ ಟಿ.ಪಿ.ಕೈಲಾಸಂ ಇವರುಗಳ ಸಾಹಿತ್ಯದಲ್ಲಿ ಒಡಮೂಡಿದ ಹಾಸ್ಯದ ಕುರಿತು ಪ್ರಸಿದ್ಧ ಹಾಸ್ಯಪಟುಗಳೂ ಕನ್ನಡ ವಿದ್ವಾಂಸರುಗಳೂ ಆಗಿರುವ ಪ್ರಾಣೇಶ್, ಪ್ರೊ.ಕೃಷ್ಣೇಗೌಡ ಹಾಗೂ ಬಿ.ಎಸ್.ಕೇಶವ ರಾವ್ ಇವರು ವಿಶೇಷ ಹಾಸ್ಯೋಪಾನ್ಯಾಸಗಳನ್ನು ನಡೆಸಿಕೊಡಲಿದ್ದಾರೆ.

ಸಂಸ್ಮರಣೆ : ಕನ್ನಡದ ಕೈಂಕರ್ಯಕ್ಕಾಗಿ ಬದುಕು ಬರೆಹವನ್ನು ಮೀಸಲಿಟ್ಟ ಅಗಲಿದ ಹಿರಿಯ ಚೇತನಗಳನ್ನು ಸಂಸ್ಮರಿಸುವ ವಿಶಿಷ್ಠ ಕಾರ್ಯಕ್ರಮದಲ್ಲಿ ಈ ಬಾರಿ ಕನ್ನಡದ ಜಂಗಮ ಚಿಂತಿಕ ಎಂದೇ ಖ್ಯಾತರಾದ ಕಿ.ರಂ.ನಾಗರಾಜ್, ಕನ್ನಡ ಸುಗಮ ಸಂಗೀತ ಕ್ಷೇತ್ರಕ್ಕೆ ಅಶ್ವತ್ಥದ ಮುದ್ರೆಯೊತ್ತಿದ ಸಿ.ಅಶ್ವತ್ಥ್ , ನಿಡುಗಾಲ ಬೆಳ್ಳಿತೆರೆಯಲ್ಲಿ ಕನ್ನಡವನ್ನು ಮಿನುಗಿಸಿದ ಸಾಹಸಸಿಂಹ ವಿಷ್ಣುವರ್ಧನ್ , ಲೋಕೋಪಕಾರದ ಕಾಯಕವನ್ನು ಅಸದೃಶವಾಗಿ ನಡೆಸಿಕೊಟ್ಟು ನಮ್ಮನ್ನಗಲಿದ ಗಾನಯೋಗಿ ಪಂಡಿತ ಪುಟ್ಟರಾಜ್ ಗವಾಯಿ ಇವರುಗಳನ್ನು ಅನುಕ್ರಮವಾಗಿ ಡಾ.ಎಸ್.ಜಿ ಸಿದ್ಧರಾಮಯ್ಯ, ಎಂ.ಎನ್ ವ್ಯಾಸರಾವ್, ಎಂ.ನರಸಿಂಹ ಮೂರ್ತಿ, ಶ್ಯಾಮಸುಂದರ ಬಿದರಕುಂದಿ ಇವರುಗಳು ಸಂಸ್ಮರಣೋಪಾನ್ಯಾಸಗೈಯಲಿದ್ದಾರೆ.

ಸಾಂಸ್ಕೃತಿಕ ವೈವಿಧ್ಯ :
ಸಮ್ಮೇಳನದ ಮೂರೂ ದಿನಗಳಲ್ಲೂ ಸಾಯಂಕಾಲ 7ರಿಂದ ಸುಮಾರು 11ಗಂಟೆಯ ವರೆಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಾಲ್ಕು ವೇದಿಕೆಗಳಲ್ಲಿ ವೈಶಿಷ್ಠ್ಯಪೂರ್ಣವಾಗಿ ನಡೆಯಲಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X