ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದೇಹಿ ಅವರೊಂದಿಗೆ ಒಂದು ಪಟ್ಟಾಂಗ

By * ರೇಣುಕಾ ನಿಡಗುಂದಿ, ನವದೆಹಲಿ
|
Google Oneindia Kannada News

UR Ananthamurthy and Vaidehi
ದೆಹಲಿಯಲ್ಲಿ ಈಗ ತಾನೆ ಪ್ರಶಸ್ತಿ ಸ್ವೀಕರಿಸಿದ ನಮ್ಮೆಲ್ಲರ ನೆಚ್ಚಿನ ಲೇಖಕಿ ವೈದೇಹಿ ಅವರೊಂದಿಗೆ ದೆಹಲಿ ಕರ್ನಾಟಕ ಸಂಘದ ಆವರಣದಲ್ಲಿ ನಿನ್ನೆ (ಫೆ.17) ನಾವೆಲ್ಲ ದೆಹಲಿ ಕನ್ನಡಿಗರು ಕೆಲಕಾಲ ಪಟ್ಟಾಂಗ ಹೊಡೆಯಲು ಸೇರಿದ್ದೆವು. ಡಾ.ಎಚ್.ಎಸ್.ಶಿವಪ್ರಕಾಶ್, ಡಾ.ಪುರುಷೋತ್ತಮ ಬಿಳಿಮಲೆ, ಶ್ರೀ.ಐ.ರಾಮ್ ಮೋಹನ್ ರಾವ್ ಇನ್ನೂ ಅನೇಕ ಸಾಹಿತ್ಯಾಸಕ್ತರು, ಅಭಿಮಾನಿಗಳ ಮಧ್ಯೆ ಆಕಸ್ಮಿಕವೋ ಎಂಬಂತೆ ಡಾ.ಅನಂತಮೂರ್ತಿಯವರ ಆಗಮನ ಇನ್ನಷ್ಟು ಕಳೆ ತಂದಿತು. ಕರ್ನಾಟಕದಲ್ಲೇ ಒಬ್ಬರನ್ನೊಬ್ಬರು ಕಾಣಲು ಅಪರೂಪವಾಗುವ ಮೇಷ್ತ್ರನ್ನು ಕಂಡು ವೈದೇಹಿಯವರೂ ಕೂಡ ಭಾವ ಪರವಶರಾದರು. ಒಂದೇ ವೇದಿಕೆಯಲ್ಲಿ ಡಾ.ಅನಂತಮೂರ್ತಿ, ವೈದೇಹಿ ಮತ್ತು ಡಾ.ಎಚ್.ಎಸ್.ಶಿವಪ್ರಕಾಶ್ ಅವರನ್ನು ಕಾಣುವ ಅವಕಾಶ ದೆಹಲಿ ಕನ್ನಡಿಗರ ಪಾಲಿಗೆ ಒಂದು ಅನನ್ಯವಾದ ಸುವರ್ಣ ಘಳಿಗೆ.

ಸಂಘದ ಉಪಾಧ್ಯಕ್ಷೆ ಉಷಾ ಭರತಾದ್ರಿ ದೆಹಲಿ ಕನ್ನಡಿಗರ ಪರವಾಗಿ ವೈದೇಹಿಯವರನ್ನು ಅಭಿನಂದಿಸುತ್ತ ಎಲ್ಲರನ್ನೂ ಸ್ವಾಗತಿಸಿದರು. ಡಾ.ಬಿಳಿಮಲೆ ವೈದೇಹಿ ಅವರ "ತಿಳಿಸಾರು" ಮತ್ತು "ನನ್ನ ಅಮ್ಮನ ಸೀರೆ" ವಾಚಿಸುತ್ತ ವೈದೇಹಿಯವರು ಈ ಕವನಗಳಷ್ಟೇ ಸರಳ ಎಂದು ಕಿರು ಪರಿಚಯ ನೀಡಿದರು. ವೈದೇಹಿ ಸರಳವಾದ ಭಾಷೆಯಲ್ಲಿ ಬಹು ಸಂಕೀರ್ಣವಾದುದನ್ನು ತೆರೆದಿಡುತ್ತಾರೆ. ಕರಾವಳಿಯ ಎರಡು ಮುಖ್ಯ ಶಕ್ತಿಗಳೆಂದರೆ ಕಾರಂತರು ಮತ್ತು ವೈದೇಹಿ. ಅವರು ನಮ್ಮ ನಡುವಿನ ಹೆಮ್ಮೆ ಎಂದರು.

ಕವಿ ಮತ್ತು ನಾಟಕಕಾರ ಡಾ.ಎಚ್.ಎಸ್.ಶಿವಪ್ರಕಾಶರು ವೈದೇಹಿ ಅವರ ಕಥೆ, ಕವನಗಳಂತೆ, "ಮ್ಯಾಕ್ ಬೆತ್, "ಗುಲಾಬಿ ಟಾಕೀಸ್" ನಾಟಕಗಳೂ ಒಂದು ಅದ್ಭುತ ಪ್ರಯೋಗ. "ಗುಲಾಬಿ ಟಾಕೀಸ್" ಇಂಗ್ಲೀಷಿಗೆ ಕೂಡ ತರ್ಜುಮೆಯಾಗಿದೆ. ಕರಾವಳಿಯ ಮೂರು ಮಹತ್ತರ ಶಕ್ತಿಗಳೆಂದರೆ ಶಿವರಾಮ್ ಕಾರಂತ, ಗೋಪಾಲಕೃಷ್ಣ ಅಡಿಗ ಮತ್ತು ವೈದೇಹಿ. ಕರಾವಳಿಗೆ ತನ್ನದೇ ಆದ ಒಂದು ವಿಶಿಷ್ಟ ಸಂವೇದನೆಯಿದೆ. 80ರ ದಶಕದಲ್ಲಿ ಸ್ತ್ರೀ ಕೇಂದ್ರಿತ ಕಾವ್ಯದ ಅಭಿವ್ಯಕಿಯನ್ನು ಪ್ರಮುಖವಾಗಿ ದಲಿತ ಸಾಹಿತ್ಯ ಮತ್ತು ಮಹಿಳಾ ಸಾಹಿತ್ಯ ಮಾಡಿದೆ. ವೈದೇಹಿಯವರ ಕಥೆಗಳು "ತ್ರಿವೇಣಿ"ಯವರ ಕಥೆಗಳಷ್ಟೇ ಸರಳ. ವೈದೇಹಿಯವರು ಪ್ರಾದೇಶಿಕತೆಯನ್ನು ತಮ್ಮ ಕಥೆ, ಕವನದಲ್ಲಿ ಹಿತಮಿತವಾಗಿ ಬಳಸಿಕೊಂಡಿದ್ದಾರೆ. ನವ್ಯೊತ್ತರ ಕಥಾ ಸಾಹಿತ್ಯದಲ್ಲಿ ಹೀಗೆ ಬಳಸಿಕೊಂಡವರು ಅಪರೂಪ ಎಂದರು.

ವೈದೇಹಿ ಮಹಿಳಾ ಸಾಹಿತ್ಯದಲ್ಲಿ ಸರ್ವ ಜನ ಮಾನ್ಯವಾಗುವ ಹಾಗೆ ವಿಶಿಷ್ಟವಾದ ಆಯಾಮವನ್ನು ತಂದಿದ್ದಾರೆ. ತ್ರಿವೇಣಿಯವರ ಕಥೆಗಳಲ್ಲಿ ಮನೋವೈಜ್ಞಾನಿಕ ಸೂಕ್ಷ್ಮಗಳಿರುತ್ತವೆ ಮತ್ತು ವೈದೇಹಿಯವರ ಕಥೆಗಳಲ್ಲಿ ಸಾಮಾಜಿಕ ಸೂಕ್ಷ್ಮಗಳಿರುತ್ತವೆ. ವೈದೇಹಿಯವರನ್ನು ಪುರಸ್ಕರಿಸಿ ಸಾಹಿತ್ಯ ಅಕಾಡೆಮಿ ಒಂದು ಸಾರ್ಥಕ ಕೆಲಸ ಮಾಡಿದೆ ಎಂದರು. ಡಾ.ಅನಂತಮೂರ್ತಿಯವರೂ ಕೂಡ ವೈದೇಹಿಯವರನ್ನು ಅಭಿನಂದಿಸುತ್ತ ಒಬ್ಬರಿಗೆ ಪ್ರಶಸ್ತಿ ಸಿಕ್ಕಾಗ ಯೋಗ್ಯರಾದ ಇನ್ನು ಹತ್ತು ಜನ ಆ ಸಾಲಿನಲ್ಲಿರುತ್ತಾರೆಂಬುದನ್ನು ಮರೆಯಬಾರದು ಎಂದರು. ವೈದೇಹಿ ಒಂದು ಪ್ರದೇಶವನ್ನು ಪ್ರತಿನಿಧಿಸಿದರೂ ಆ ಗೌರವ ಎಲ್ಲರದೂ ಎಂದರು.

ನಂತರ ವೈದೇಹಿ ಅವರು ತಾವು ರಚಿಸಿದ ಸಾಹಿತ್ಯದ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳು ಮತ್ತು ಪರಿಸರದ ಬಗ್ಗೆ ಮಾತನಾಡಿದರು. ತಾವು ಬೆಳೆದು ಬಂದ ಕಟ್ಟಾ ಸಂಪ್ರದಾಯದ ಅವಿಭಕ್ತ ಕುಟುಂಬ, ಕುಂದಾಪುರದ ಓದು. ಅಲ್ಲಿನ ಜನರೇ ಮುಗ್ದರು. ಸಾಹಿತ್ಯದಲ್ಲೂ ಕೂಡ ಮುಗ್ದತೆ ಇರಬೇಕು ಎನ್ನುವ ವೈದೇಹಿಲ್ಲೂ ಮುಗ್ಧವಾದ ಸಂಕೋಚ ಅವರನ್ನು ಇನ್ನಷ್ಟು ಸರಳಗೊಳಿಸುತ್ತದೆ. ತಾವು 70ರ ದಶಕದಲ್ಲಿ ಮದುವೆಯಾಗಿ ಶಿವಮೊಗ್ಗೆಗೆ ಬಂದ ನಂತರ ಅವರ ಸಾಹಿತ್ಯ ಕೃಷಿ ಬೆಳೆದದ್ದು. ಆಗಿನ ಲಂಕೇಶ್ ಮತ್ತು ಅನಂತಮೂರ್ತಿಯವರ ಕಾಲ. ಅವರನ್ನು ಅನನ್ಯವಾಗಿ ಪ್ರಭಾವಿಸಿದ ತ್ರಿವೇಣಿಯವರ ಕಾದಂಬರಿಗಳು, ಕಾರಂತರ ಕಾದಂಬರಿಗಳನ್ನು ಓದಿದಾಗ ಆ ಪಾತ್ರಗಳೆಲ್ಲ ತನ್ನವೇ ಎನಿಸುವಷ್ಟು ವೈದೇಹಿ ಪ್ರಬಾವಿತರಾಗಿದ್ದರು. ಅವರು ಮುಂದೆ ತಮ್ಮೆಲ್ಲ ಬರವಣಿಗೆಯಲ್ಲಿ ಕರಾವಳಿಯ ಸತ್ವಯುತ ಭಾಷೆಯಲ್ಲೇ ಮುಂದುವರಿದರು. ಪತಿಯ ಬೆಂಬಲದೊಂದಿಗೆ ನೀನಾಸಂ ನೀಡಿದ ಪ್ರೋತ್ಸಾಹ, ಸುಬ್ಬಣ್ಣನವರ ಬಾಂಧವ್ಯವನ್ನು ಭಾವಪೂರ್ಣರಾಗಿ ನಮ್ಮೊಂದಿಗೆ ಹಂಚಿಕೊಂಡ ವೈದೇಹಿ ಜೊತೆ ಸಮಯ ಕಳೆದುದೇ ಗೊತ್ತಾಗಲಿಲ್ಲ.

ಡಾ.ಅನಂತಮೂರ್ತಿ ಅವರು ವೈದೇಹಿ ಅವರಿಗೆ ಹೂಗುಚ್ಛ ನೀಡಿ, ಶಾಲು ಹೊದೆಸಿ, ದೆಹಲಿ ಕರ್ನಾಟಕದ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ವೈದೇಹಿಯವರು ಸಂಘದ ಪರವಾಗಿ ನಮ್ಮೆಲ್ಲರ ನೆಚ್ಚಿನ ಮೇಷ್ಟ್ರಿಗೆ ಹೂಗುಚ್ಛ ನೀಡಿ ಗೌರವಿಸಿದರು. ಸಂಘದ ಜಂಟಿ ಕಾರ್ಯದರ್ಶಿ ಶ್ರೀನಾಥ ವಂದನಾರ್ಪಣೆ ಮಾಡಿದರು. ರುಚಿಯಾದ ಭೋಜನ, ಮಾತು, ಹರಟೆಗಳಲ್ಲಿ ಸಂಜೆ ಕಳೆದು ರಾತ್ರಿಯಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X