ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೀತಿ ಪ್ರೇಮ ಹಂಚಿಕೊಳ್ಳುವುದು ಅಕ್ಷಮ್ಯವೆ?

By * ನಾ ದಿವಾಕರ
|
Google Oneindia Kannada News

Respect love irrespective of caste
(...ಹಿಂದಿನ ಪುಟದಿಂದ)

ವಿಪರ್ಯಾಸವೆಂದರೆ ಮನುಜ ಸಂಬಂಧಗಳನ್ನು ಬೆಸೆಯಬೇಕಾದ ಪ್ರೀತಿ ಪ್ರೇಮಗಳೆಂಬ ಮಾನವೀಯ ಸಂವೇದನೆಗಳೇ ಈಗ ದ್ವೇಷದ ಬೀಜ ಬಿತ್ತುವ ಸಾಧನಗಳಾಗಿ ಪರಿಣಮಿಸಿವೆ. ಪ್ರೀತಿ ಪ್ರೇಮಗಳನ್ನು ಹಂಚಿಕೊಳ್ಳುವುದೇ ಅಕ್ಷಮ್ಯವಾಗುತ್ತಿದೆ. ವಿಭಿನ್ನ ಸಮುದಾಯಗಳನ್ನು ಒಟ್ಟುಗೂಡಿಸಿ ಮಾನವೀಯ ಸಮಾಜವನ್ನು ನಿರ್ಮಿಸುವ ಸಾಮರ್ಥ್ಯವುಳ್ಳ ಪ್ರೀತಿ ಪ್ರೇಮಗಳನ್ನು ಪುನಃ ಸಾಮುದಾಯಿಕ ಅಸ್ಮಿತೆಗಳ ಚೌಕಟ್ಟಿನೊಳಗೆ ಸಿಲುಕಿಸಿ ಮಾನವ ಸಂವೇದನೆಗಳ ದ್ಯೋತಕವಾದ ಭಾವನೆಗಳಿಗೆ ಹಿಂಸಾತ್ಮಕ ಪ್ರವೃತ್ತಿಯ ಜಿಹಾದ್ ಎಂಬ ಪರಿಕಲ್ಪನೆಯನ್ನು ಬೆಸೆದು, ಶಿಥಿಲವಾಗಿದ್ದ ಗೋಡೆಗಳನ್ನು ಗಟ್ಟಿಗೊಳಿಸಲಾಗುತ್ತಿದೆ. ಕ್ಷೀಣಿಸುತ್ತಿರುವ ಕಂದರವನ್ನು ವಿಸ್ತೃತಗೊಳಿಸಲಾಗುತ್ತಿದೆ. ಪ್ರೇಮಿಸುವುದೇ ಅಪರಾಧ, ಅನ್ಯ ಸಮುದಾಯದವರನ್ನು ವಿವಾಹವಾಗುವುದೇ ಪಾತಕಿ ಕೃತ್ಯ ಎಂದು ಬಿಂಬಿಸುವ ಮೂಲಕ ಯುವ ಜನತೆಯ ಪ್ರೇಮ ವಿವಾಹಗಳಿಗೆ ಲವ್ ಜಿಹಾದ್ ಎಂಬ ಹಣೆಪಟ್ಟಿ ಕಟ್ಟಲು ಯತ್ನಿಸಲಾಗುತ್ತಿದೆ.

ಮಂಗಳೂರು, ಕೇರಳದ ಕೆಲವು ಪ್ರದೇಶಗಳಲ್ಲಿ ಹಿಂದೂ ಯುವತಿಯರು ಮುಸ್ಲಿಂ ಯುವಕರನ್ನು ಪ್ರೇಮಿಸಿ ವಿವಾಹವಾಗುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಇದು ಸತ್ಯವೂ ಇರಬಹುದು. ಯುವಜನತೆಯಲ್ಲಿ ಪ್ರೇಮಾಂಕುರವಾಗಲು ಅನೇಕ ಸಾಮಾಜಿಕ ಕಾರಣಗಳೂ ಇರುತ್ತವೆ. ಯಾವುದೇ ಪ್ರೇಮ ಪ್ರಕರಣಗಳಲ್ಲಿ ಪೋಷಕರು ತಮ್ಮ ಮಕ್ಕಳ ಕ್ರಮವನ್ನು ವಿರೋಧಿಸುವುದೂ ಸಾಮಾನ್ಯ ಸಂಗತಿ. ಕೇರಳದಲ್ಲಿ ಕೆಲವು ಪೋಷಕರು ನ್ಯಾಯಾಲಯದ ಮೊರೆ ಹೋಗಿರುವುದೂ ದಾಖಲಾಗಿದೆ. ಒಂದು ಕ್ಷುಲ್ಲಕ ವಿಚಾರವನ್ನು ಅಥವಾ ಘಟನೆಯನ್ನು ರೋಮಾಂಚಕಾರಿಯನ್ನಾಗಿ ಪರಿವರ್ತಿಸಿ, ಯಾವುದೇ ನೇತ್ಯಾತ್ಮಕ ಪರಿಣಾಮ ಬೀರದ ಸಂಗತಿಗಳನ್ನು ಸಾಮಾಜಿಕ ಕ್ಷೋಭೆಯನ್ನಾಗಿ ಪರಿವರ್ತಿಸುವುದರಲ್ಲಿ ಸಂಘ ಪರಿವಾರ ಎತ್ತಿದ ಕೈ. ಹಾಗೆಯೇ ತಮ್ಮ ಜನಪ್ರಿಯತೆಗಾಗಿ ಕೂದಲೆಳೆಯಷ್ಟು ಸುದ್ದಿಯನ್ನು ಬೆಟ್ಟದಷ್ಟು ಮಾಡಿ, ಇಲ್ಲ ಸಲ್ಲದ್ದನ್ನು ಪ್ರಚಾರ ಮಾಡಿ ಜನರಲ್ಲಿ ಸಾಮರಸ್ಯ ಮೂಡಿಸುವ ಬದಲು, ವೈಷಮ್ಯ ಬೆಳೆಸುವುದರಲ್ಲಿ ಕೆಲವು ಮುದ್ರಣ ಮತ್ತು ಪ್ರಸಾರ ಮಾಧ್ಯಮಗಳದ್ದು ಪಳಗಿದ ಕೈ. ಈ ಎರಡೂ ಕೈಗಳು ಸೇರಿ ಚಪ್ಪಾಳೆಯಾದಾಗ ಪ್ರಳಯಾಂತಕ ಸನ್ನಿವೇಶ ಸೃಷ್ಟಿಯಾಗುವ ಸಂಭವವೇ ಹೆಚ್ಚು. ಲವ್ ಜಿಹಾದ್ ಘಟನೆಗಳ ಸಂದರ್ಭದಲ್ಲಿ ಆಗುತ್ತಿರುವುದೂ ಹೀಗೆಯೇ.

ಕೆಲವು ದಿನಗಳ ಹಿಂದೆ ಮಾಧ್ಯಮಗಳಲ್ಲಿ "ಲವ್ ಜಿಹಾದ್ ಎಂಬ ಸಂಘಟನೆಯ ಸದಸ್ಯರು ಹಿಂದೂ ಹುಡುಗಿಯರನ್ನು ಪ್ರೇಮಿಸಿ, ಮತಾಂತರಗೊಳಿಸಿ, ಮದುವೆಯಾಗಿ ನಂತರ ಅವರನ್ನು ತಮ್ಮ ಭಯೋತ್ಪಾದಕ ಚಟುವಟಿಕೆಗಳಿಗೆ ಉಪಯೋಗಿಸುತ್ತಿದ್ದಾರೆ. ಇದೇ ರೀತಿಯಲ್ಲಿ ನಾಲ್ಕು ಸಾವಿರ ಹಿಂದೂ ಯುವತಿಯರು ಕಣ್ಮರೆಯಾಗಿದ್ದಾರೆ. ಕಳೆದ ಆರು ತಿಂಗಳಲ್ಲಿ ಈ ಘಟನೆಗಳು ಹೆಚ್ಚಾಗಿವೆ. ಈ ಕೃತ್ಯ ಎಸಗಲು ಮುಸ್ಲಿಂ ಯುವಕರಿಗೆ ಒಂದು ಲಕ್ಷರೂಗಳನ್ನು ನೀಡಲಾಗುತ್ತಿದ್ದು ಮತ್ತಿತರ ಆಮಿಷಗಳನ್ನು ಒಡ್ಡಲಾಗುತ್ತಿದೆ. ಈ ಲವ್ ಜಿಹಾದ್ ಸಂಘಟನೆಗೆ ಕೊಲ್ಲಿ ರಾಷ್ಟ್ರಗಳಿಂದ ಅಪಾರ ಹಣ ಬರುತ್ತಿದೆ. ನಮ್ಮ ಸೆಕ್ಯುಲರ್ ಪೋಷಕರು ಮತ್ತು ಹಿಂದೂ ಸಮಾಜ ತಮ್ಮ ಮಕ್ಕಳನ್ನು ಸನಾತನ ಧರ್ಮದ ಮಾರ್ಗದಲ್ಲಿ ಬೆಳೆಸದಿದ್ದರೆ ಹಿಂದೂ ಧರ್ಮಕ್ಕೆ ಅಪಾಯ ತಪ್ಪಿದ್ದಲ್ಲ. ಲವ್ ಜಿಹಾದ್ ಕಾರ್ಯಕ್ರಮ ಕೇವಲ ಪ್ರೇಮ ಪ್ರಕರಣಗಳಲ್ಲ. ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಪ್ರೇಮಿಸಿ, ಆಮಿಷ ತೋರಿಸಿ, ತಲೆ ತೊಳೆದು ವಿವಾಹವಾಗುವುದು ಇಸ್ಲಾಮೀಕರಣದ ಯೋಜನೆಯ ಒಂದು ಭಾಗ. ಈ ಕೃತ್ಯಗಳನ್ನು ಪಾಕಿಸ್ತಾನ ಮೂಲದ ಸಂಘಟನೆ ಮಾಡುತ್ತಿದ್ದು ಸ್ಥಳೀಯ ಮುಸ್ಲಿಂ ಯುವಕರನ್ನು ಪ್ರಚೋದಿಸುತ್ತಿದೆ. ಈ ಯುವತಿಯರನ್ನು ಮುಂದೆ ಭಯೋತ್ಪಾದಕ ಚಟುವಟಿಕೆಗಳಿಗೆ ಮಾನವ ಬಾಂಬುಗಳಂತೆ ಉಪಯೋಗಿಸಿಕೊಳ್ಳುವ ಹುನ್ನಾರ ನಡೆದಿದೆ" ಎಂಬ ರೋಚಕ ಸುದ್ದಿ ಪ್ರಕಟವಾಗಿತ್ತು.

ಬಹುಶಃ ಭಾರತೀಯ ಮುಸ್ಲಿಂ ಸಮುದಾಯದ ಬಗ್ಗೆ ಜನಸಾಮಾನ್ಯರಲ್ಲಿ ಮೂಡಿಸಲಾಗಿರುವ ಅಪನಂಬಿಕೆ ಮತ್ತು ಭಿನ್ನಾಭಿಪ್ರಾಯಗಳು ಇಲ್ಲದೆ ಹೋಗಿದ್ದಲ್ಲಿ ಈ ಪ್ರಕರಣಗಳು ಪ್ರೇಮ ಪ್ರಕರಣಗಳಾಗಿಯೇ ಉಳಿದುಬಿಡುತ್ತಿದ್ದವು. ಬಹಳ ದೂ(ದು)ರಾಲೋಚನೆಯಿಂದ ಪ್ರಕರಣಕ್ಕೆ ಜಿಹಾದ್(ಧರ್ಮಯುದ್ಧ) ಎಂದು ನಾಮಕರಣ ಮಾಡುವ ಮೂಲಕ ಹಿಂದು ಮತ್ತು ಕ್ರೈಸ್ತ ಸಂಘಟನೆಗಳು ಮುಸ್ಲಿಮರ ಮೇಲಿನ ಆಕ್ರಮಣವನ್ನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಿವೆ.

ಈ ಹಿನ್ನೆಲೆಯಲ್ಲಿ "ಭಜರಂಗದಳ ಮತ್ತು ಶ್ರೀರಾಮಸೇನೆ ಕಾರ್ಯಪವೃತ್ತರಾಗಿದ್ದು ರಾಷ್ಟ್ರವ್ಯಾಪಿ ಆಂದೋಲನವನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ 150 ಸದಸ್ಯರ ಪಡೆಯನ್ನೂ ತಯಾರಿಸಿದೆ. ಯಾವುದೇ ಅನುಮಾನಾಸ್ಪದ ಘಟನೆಯನ್ನು ಗಮನಿಸಿದ ಕೂಡಲೇ ಅಲ್ಲಿಯೇ ಅದನ್ನು ತಡೆಗಟ್ಟುವಂತಹ ಸಾಂಸ್ಕೃತಿಕ ಆರಕ್ಷಕ ಪಡೆಗಳನ್ನು ರಚಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಸಕ್ರಿಯವಾಗಿರುವ ಈ ಆರಕ್ಷಕ ಪಡೆಗಳಿಗೆ ಲವ್ ಜಿಹಾದ್ ವರದಾನವಾಗಿ ಪರಿಣಮಿಸಿದೆ. 2005ರ ನಂತರ 4500 ಹಿಂದು-ಕ್ರೈಸ್ತ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ. ತನ್ಮೂಲಕ ಮಹಿಳೆಯರನ್ನು ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸುವ ಹುನ್ನಾರ ನಡೆಸಲಾಗುತ್ತಿದೆ. ಲವ್ ಜಿಹಾದ್ ಯೋಜನೆಗೆ ಕೊಲ್ಲಿ ರಾಷ್ಟ್ರಗಳು ಮತ್ತಿತರ ರಾಷ್ಟ್ರಗಳಿಂದ ಅಪಾರ ಹಣ ಹರಿದು ಬರುತ್ತಿದೆ" ಎನ್ನುತ್ತಾರೆ ಶ್ರೀರಾಮಸೇನೆಯ ವಕ್ತಾರರು.

ಇಲ್ಲಿ ಕೆಲವು ಗಂಭೀರ ಪ್ರಶ್ನೆಗಳು ಉದ್ಭವಿಸುತ್ತವೆ. ಪ್ರೇಮ ವಿವಾಹದ ಪ್ರವೃತ್ತಿ ಇಡೀ ಸಮಾಜದಲ್ಲಿ ವ್ಯಾಪಕವಾಗಿರುವಾಗ ಮುಸ್ಲಿಂ ಯುವಕರು ಮಾತ್ರ ಏಕೆ ಜಿಹಾದಿ ಅಪರಾಧಿಗಳಾಗುತ್ತಾರೆ? ಮನುಜ ಸಂಬಂಧಗಳನ್ನು ಬೆಸೆಯುವ ಪ್ರೀತಿ ಪ್ರೇಮಗಳಿಗೆ ಮತ್ತೊಬ್ಬರ ಪರವಾನಗಿ, ಅನುಮತಿ ಅಗತ್ಯವೇ? ಯುವ ಜನತೆ ತಮ್ಮ ಇಚ್ಚೆಗನುಸಾರವಾಗಿ ಪ್ರೇಮಿಸಿ ಅನ್ಯ ಧರ್ಮದವರನ್ನು ವಿವಾಹವಾಗುವುದಾದರೆ ಅಸ್ಮಿತೆಗಳ ಜಂಜಾಟದಲ್ಲಿ ಸಿಲುಕಿ ನಲುಗುತ್ತಿರುವ ಸಮಾಜವನ್ನು ಮುಕ್ತಗೊಳಿಸಬಹುದಲ್ಲವೇ? ಆಧುನಿಕತೆಯ ಸೋಗಿನಲ್ಲೇ ಸಾಂಪ್ರದಾಯಿಕತೆಯ ಚೌಕಟ್ಟಿನಲ್ಲಿ ಬಂಧಿತವಾಗಿರುವ ಭಾರತೀಯ ಸಮಾಜಕ್ಕೆ ಅಂತರ್ಜಾತಿ-ಅಂತರ್ಧಮೀಯ ವಿವಾಹಗಳು ಮುಕ್ತಿ ದೊರಕಿಸಬಹುದಲ್ಲವೇ? ಕೊನೆಯದಾಗಿ ಜನತೆಯ ವೈಯ್ಯಕ್ತಿಕ ಆಯ್ಕೆಗಳನ್ನು, ಆಕಾಂಕ್ಷೆಗಳನ್ನು ಸಾಮುದಾಯಿಕ ಬಂಧನಗಳಿಗೊಳಪಡಿಸುವ ನೈತಿಕ ಹಕ್ಕನ್ನು ಮತೀಯವಾದಿಗಳಿಗೆ ನೀಡಿದವರಾರು? ಇತಿಹಾಸ ಸಂಶೋಧಕರು ಉತ್ತರಿಸಬೇಕು.

ಜಾತಿ ಕಲಹಕ್ಕೆ ಪ್ರೀತಿ ಪ್ರೇಮದ ಮದ್ದು!ಜಾತಿ ಕಲಹಕ್ಕೆ ಪ್ರೀತಿ ಪ್ರೇಮದ ಮದ್ದು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X