ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾತಿ ಕಲಹಕ್ಕೆ ಪ್ರೀತಿ ಪ್ರೇಮದ ಮದ್ದು!

By Prasad
|
Google Oneindia Kannada News

Love : Huge responsibility on young mind
ಭಾರತೀಯ ಸಮಾಜವನ್ನು ಒಂದು ಹೊಸ ದಿಕ್ಕಿನತ್ತ, ಹೊಸ ಆಯಾಮದತ್ತ ಕೊಂಡೊಯ್ಯುವ ಗುರುತರ ಜವಾಬ್ದಾರಿ ಭಾರತದ ಯುವಪೀಳಿಗೆಯ ಮೇಲಿದೆ. ಜಾತಿ, ಮತ, ಧರ್ಮ, ಭಾಷೆ ಮತ್ತು ಪ್ರಾಂತೀಯ ಅಸ್ಮಿತೆಗಳ ಚೌಕಟ್ಟಿಗೆ ಸಿಲುಕಿ, ದ್ವೇಷದ ಜ್ವಾಲೆಯಲ್ಲಿ ಬೇಯುತ್ತಿರುವ ಭಾರತೀಯ ಸಮಾಜಕ್ಕೆ ಹಿಂದೆಂದಿಗಿಂತಲೂ ಪ್ರೀತಿ ಪ್ರೇಮಗಳ ಅವಶ್ಯಕತೆ ಇಂದು ಹೆಚ್ಚಾಗಿದೆ.

* ನಾ ದಿವಾಕರ

ಪ್ರೀತಿ ಪ್ರೇಮ ಎನ್ನುವ ಪರಿಕಲ್ಪನೆ ಮನುಕುಲದ ಮೂಲ ತಳಹದಿ. ಮಾನವ ಸಮಾಜವಾಗಲೀ ಇತರ ಜೀವಿಗಳಾಗಲೀ ವಿಕಾಸ ಹೊಂದಿರುವುದೇ ಪರಸ್ಪರ ವಿಶ್ವಾಸದ ಬುನಾದಿಯ ಮೇಲೆ. ಜಗತ್ತಿನಲ್ಲಿ ಏನನ್ನಾದರೂ ಮಾರುಕಟ್ಟೆಯಲ್ಲಿ ಖರೀದಿಸಬಹುದು, ಮಾನವ ಸಂವೇದನೆಗಳನ್ನು ಹೊರತುಪಡಿಸಿ. ಇದು ಸರ್ವಕಾಲಿಕ ಸತ್ಯವೆಂದೇ ಮಾನವ ಸಮಾಜ ನಂಬಿಕೊಂಡು ಬಂದಿದೆ. ಆಧುನಿಕ ಜಗತ್ತಿನಲ್ಲಿಯೂ ಸಹ ಎಲ್ಲವೂ ಮಾರುಕಟ್ಟೆಮಯವಾಗಿದ್ದರೂ ಮಾನವ ಸಂವೇದನೆಗಳು ಮಾತ್ರ ಇಂದಿಗೂ ತಮ್ಮ ಮೌಲ್ಯಗಳನ್ನು ಉಳಿಸಿಕೊಂಡುಬಂದಿವೆ. ಪ್ರೀತಿ, ಪ್ರೇಮಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಲಾಗುವುದಿಲ್ಲ ಎಂಬ ಪರಿಕಲ್ಪನೆ ತನ್ನ ಸತ್ವವನ್ನು ಇಂದಿಗೂ ಉಳಿಸಿಕೊಂಡುಬಂದಿದೆ. ಹಾಗೆಯೇ ಪ್ರೀತಿಗೆ ಭಾಷೆ, ಧರ್ಮ, ಜಾತಿ, ದೇಶ, ಲಿಂಗಬೇಧಗಳಿಲ್ಲ ಎಂಬ ನಂಬಿಕೆಯೂ ಗಾಢವಾಗಿ ಬೇರೂರಿದೆ.

ಇತಿಹಾಸ ಕಾಲದಿಂದಲೂ ಮಾನವ ಸಮಾಜ ಒಂದು ಸಾಮಾಜಿಕ ಚೌಕಟ್ಟಿನೊಳಗೆ ತನ್ನನ್ನು ತಾನೇ ಬಂಧಿಸಿಕೊಳ್ಳುವುದರ ಮೂಲಕ ಅಗೋಚರ ಅಡ್ಡಗೋಡೆಗಳನ್ನು ನಿರ್ಮಿಸಿಕೊಂಡು ಬಂದಿದೆ. ಸಮುದಾಯಗಳ ನಡುವೆ ಕಂದರಗಳನ್ನೂ ಸೃಷ್ಟಿಸುತ್ತಾ ಬಂದಿವೆ. ಇಡೀ ಸಮಾಜವನ್ನು ತಮ್ಮ ನಿಯಂತ್ರಣದಲ್ಲಿರಿಸಿಕೊಳ್ಳಲು ಪಟ್ಟಭದ್ರ ಹಿತಾಸಕ್ತಿಗಳು, ಆಳುವ ಪ್ರಬಲ ವರ್ಗಗಳು ಈ ಕಂದರ, ಗೋಡೆಗಳನ್ನು ಗಟ್ಟಿಗೊಳಿಸಲು ಸರ್ವಪ್ರಯತ್ನಗಳನ್ನೂ ಮಾಡುತ್ತಾ ಬಂದಿವೆ. ಆದಾಗ್ಯೂ ವಿಭಿನ್ನ ಕಾಲಘಟ್ಟಗಳಲ್ಲಿ ಸಾಮಾನ್ಯ ಜನತೆ ಈ ಗೋಡೆಗಳನ್ನು ಕೆಡವಿ, ಕಂದರಗಳನ್ನು ದಾಟಿ ಮುನ್ನಡೆದಿರುವ ಸಂದರ್ಭಗಳೂ ಹೇರಳವಾಗಿವೆ. ಭಾರತೀಯ, ಗ್ರೀಕ್ ಮತ್ತು ಇತರ ನಾಗರಿಕತೆಗಳ ಇತಿಹಾಸದಲ್ಲೂ ಪ್ರೀತಿ ಪ್ರೇಮಗಳಿಗಾಗಿ ಯುದ್ಧಗಳೇ ಸಂಭವಿಸಿವೆ. ಪ್ರೇಯಸಿಗಾಗಿ ಇಡೀ ರಾಜ್ಯವನ್ನೇ ತ್ಯಾಗ ಮಾಡಿದ ರಾಜರುಗಳ ಕಥೆಗಳೂ ಜನಜನಿತವಾಗಿವೆ. ಪೌರಾಣಿಕ-ಕಾಲ್ಪನಿಕ ಕಥೆಗಳೇ ಆದರೂ ಹೀರ್-ರಾಂಝ, ಲೈಲಾ-ಮಜ್ನು, ಸೋಹ್ನಿ-ಮಹಿವಾಲ್, ಸಲೀಂ-ಅನಾರ್ಕಲಿ, ದುಷ್ಯಂತ-ಶಾಕುಂತಲೆ ಮುಂತಾದ ಪ್ರೇಮಗಾಥೆಗಳು ಪ್ರೀತಿ ಪ್ರೇಮಗಳಿಗಾಗಿ ತುಡಿಯುವ ಮಾನವ ಸಮಾಜದ ಹಪಹಪಿಕೆಗೆ ಪ್ರತೀಕವಾಗಿವೆ.

ಪ್ರಾಚೀನ ಜನಸಮುದಾಯಗಳನ್ನು ನಾಗರಿಕತೆಯ ಪರಿಕಲ್ಪನೆಯಿಂದ ಹೊರಗಿಟ್ಟು ನೋಡುವ ಪ್ರವೃತ್ತಿ ಈ ಆಧುನಿಕ ನಾಗರಿಕ ಸಮಾಜದಲ್ಲಿ ಸಾಮಾನ್ಯ ಸಂಗತಿ. ಪ್ರೀತಿ ಪ್ರೇಮಗಳಿಗೆ ಹೊಸ ವ್ಯಾಖ್ಯಾನವೂ ದೊರೆತಿದೆ. ಒಂದು ನಿರ್ದಿಷ್ಟ ಸಾಮುದಾಯಿಕ ಚೌಕಟ್ಟಿನೊಳಗೇ ಬಂಧಿತವಾಗಿದ್ದ ಮಾನವ ಸಂವೇದನೆಗಳನ್ನು ಮಾನವ ನಿರ್ಮಿತ ಗಡಿಗಳಿಂದಾಚೆಗೆ ಕೊಂಡೊಯ್ಯುವ ಮೂಲಕ ಹೊಸ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುವಲ್ಲೂ ಆಧುನಿಕ ನಾಗರಿಕತೆ ಸಫಲವಾಗಿದೆ. ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲೂ ಅನೇಕ ವಿಚಾರಶೀಲರು, ಸಂತರು ಮನುಜ ಸಂಬಂಧಗಳನ್ನು ವ್ಯಾವಹಾರಿಕ ಬಂಧನಗಳಿಂದ ಮುಕ್ತಗೊಳಿಸಿ ವ್ಯಾಖ್ಯಾನಿಸುವುದರ ಮೂಲಕ ಶ್ರೇಣೀಕೃತ ಜಾತಿ ವ್ಯವಸ್ಥೆಯ ಶೃಂಖಲೆಗಳನ್ನು ತೊಡೆದು ಹಾಕಲು ಯತ್ನಿಸಿದ್ದಾರೆ. ಯಶಸ್ಸನ್ನೂ ಕಂಡಿದ್ದಾರೆ. ಅಂತರ್ಜಾತೀಯ, ಅಂತರ್ಧಮೀಯ ವಿವಾಹಗಳು ಭಾರತೀಯ ಸಮಾಜದ ಪಾರಂಪರಿಕ ಕರಾಳ ಚಹರೆಯನ್ನು ಕೊಂಚ ಮಟ್ಟಿಗಾದರೂ ಬದಿಗೆ ಸರಿಸಿವೆ.

ಈ ಸಂದರ್ಭದಲ್ಲಿ ಭಾರತೀಯ ಸಮಾಜವನ್ನು ಒಂದು ಹೊಸ ದಿಕ್ಕಿನತ್ತ, ಹೊಸ ಆಯಾಮದತ್ತ ಕೊಂಡೊಯ್ಯುವ ಗುರುತರ ಜವಾಬ್ದಾರಿ ಭಾರತದ ಯುವಪೀಳಿಗೆಯ ಮೇಲಿದೆ. ಜಾತಿ, ಮತ, ಧರ್ಮ, ಭಾಷೆ ಮತ್ತು ಪ್ರಾಂತೀಯ ಅಸ್ಮಿತೆಗಳ ಚೌಕಟ್ಟಿಗೆ ಸಿಲುಕಿ, ದ್ವೇಷದ ಜ್ವಾಲೆಯಲ್ಲಿ ಬೇಯುತ್ತಿರುವ ಭಾರತೀಯ ಸಮಾಜಕ್ಕೆ ಹಿಂದೆಂದಿಗಿಂತಲೂ ಪ್ರೀತಿ ಪ್ರೇಮಗಳ ಅವಶ್ಯಕತೆ ಇಂದು ಹೆಚ್ಚಾಗಿದೆ. ಕೇವಲ ಭಾವನೆಗಳಲ್ಲಿ ವ್ಯಕ್ತವಾಗುವ ಪ್ರೀತಿ ಪ್ರೇಮಗಳು ಮನುಷ್ಯರನ್ನು ಭಾವುಕರನ್ನಾಗಿಸುತ್ತವೇ ಹೊರತು ಪರಸ್ಪರ ಸಂಬಂಧಗಳನ್ನು ಬೆಸೆಯುವುದಿಲ್ಲ. ಪರಸ್ಪರ ಸಂಬಂಧಗಳ ಬೆಸುಗೆ ಆಗದಿದ್ದಲ್ಲಿ ಯಾವುದೇ ಸಾಂಪ್ರದಾಯಿಕ ಸಮಾಜ ತನ್ನ ಚಿಪ್ಪಿನೊಳಗಿಂದ ಹೊರಬರಲೂ ಆಗುವುದಿಲ್ಲ. ಈ ಬೆಸುಗೆಗೆ ಆಧುನಿಕ ವಿಚಾರಶೀಲ, ಚಲನಶೀಲ ಸಮಾಜ ಕಂಡುಕೊಂಡ ಅತ್ಯುತ್ತಮ ಮಾರ್ಗವೆಂದರೆ ವರ್ಣಸಂಕರಕ್ಕೆ ಎಡೆಮಾಡಿಕೊಡುವ ಅಂತರ್ಜಾತಿ-ಅಂತರ್ಧಮೀಯ ವಿವಾಹಗಳು.

ಪ್ರೀತಿ ಪ್ರೇಮ ಹಂಚಿಕೊಳ್ಳುವುದು ಅಕ್ಷಮ್ಯವೆ? »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X