ಪದ್ಮಶ್ರೀಯ ಘನತೆಗೆ ಇತಿಶ್ರೀ!

ಕೇವಲ ಹೆಸರೇ ಯೋಗ್ಯತೆಯಾಗಿರುವ 'ಗುಲಾಂ ಮೊಹಮ್ಮದ್ ಮೀರ್ ಯಾನೆ ಮಾಮಾ ಖಾನ್'ನನ್ನು 'ಪದ್ಮಶ್ರೀ'ಗೆ ಆಯ್ಕೆ ಮಾಡಿರುವುದು ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕೀಯಕ್ಕೆ ಹಿಡಿದ ದಿವ್ಯ ನಿದರ್ಶನವಾಗಿದೆ. ಒಂದು ವೇಳೆ ಅವನು ಒಳ್ಳೆಯವನಾಗಿ ಬದಲಾಗಿದ್ದರೆ ಅವನಿಗೆ 'ಪದ್ಮಶ್ರೀ'ಯ ಸತ್ಕಾರದ ಅನಿವಾರ್ಯತೆಯೇನು?
ಇನ್ನು ಇತ್ಯರ್ಥವಾಗದ ಕೊಲೆ-ಸುಲಿಗೆ ಯಂತಹ ಕ್ರಿಮಿನಲ್ ಮೊಕದ್ದಮೆಗಳಿರುವ ಮಾಜಿ ಭಯೋತ್ಪಾದಕ, 'ಅಲ್ಪಸಂಖ್ಯಾತ ನಾಯಕ'ನ 'ಸಾಮಾಜಿಕ ಸೇವೆ'ಗೆ 'ಪದ್ಮಶ್ರೀ'ಯ ಬಾಗಿಲು ತೆರೆದಿದ್ದು ಕೇಂದ್ರ ಸರ್ಕಾರದ ಸಾಧನೆಯೇ ಸರಿ! ಈವರೆಗೆ 'ಪದ್ಮಶ್ರೀ' ಪಡೆದಿರುವ ಎಲ್ಲ ಗಣ್ಯರಿಗೂ 'ನಗಣ್ಯ' ಪಟ್ಟ ಕೊಟ್ಟಿದ್ದು ಕೇಂದ್ರದ ಸಾಧನೆಯೇ ಸರಿ!
ಇಷ್ಟೆಲ್ಲಾ ನಡೆಯುತ್ತಿದ್ದರೂ, 'ರಾಮಮಂದಿರ ನಿರ್ಮಾಣ' ಎಂಬ ಖಾತರಿ ಯೋಜನೆಯ ರೂವಾರಿ, 'ವಿರೋಧ ಪಕ್ಷ' ಎಂಬ ಸುಪ್ಪತ್ತಿಗೆಯಲ್ಲಿ ಕುಳಿತು ತಮ್ಮ ಪಕ್ಷದ ಸಮಸ್ಯೆಗಳನ್ನೇ ಮೈಮೇಲೆ ಎಳೆದುಕೊಂಡು ಅತೃಪ್ತರ ಮನ ಒಲಿಸುವುದೇ 'ಸಾಮಾಜಿಕ ಕೆಲಸ' ವಾಗಿಬಿಟ್ಟಿದೆ.
ಕೇಂದ್ರದ ಈ ನಿರ್ಧಾರಕ್ಕೆ ಜಮ್ಮು -ಕಾಶ್ಮೀರ ಮುಖ್ಯಮಂತ್ರಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ, ಸಂತೋಷಕ್ಕೋ, ದುಃಖಕ್ಕೋ ಗೊತ್ತಿಲ್ಲ. ಅಂತು ಇಂತೂ 'ಪದ್ಮಶ್ರೀ'ಯ ಘನತೆಗೆ 'ಇತಿಶ್ರೀ' ಹಾಡಿರುವ ಯುಪಿಎ ಸರ್ಕಾರ ಪ್ರಶಸ್ತಿಯನ್ನು 'ಶರಣಾಗತರಾದ ಉಗ್ರ'ರಿಗೊಸ್ಕರವೇ ಮೀಸಲಿಡುವುದು ಒಳಿತು. ಇನ್ಮುಂದೆ ಪ್ರಶಸ್ತಿ ಸ್ವೀಕರಿಸಲು ಯಾವ 'ಸಾಮಾಜಿಕ ಸೇವಾ'ಕರ್ತರೂ ಮನಸ್ಸು ಮಾಡುವುದು ಅನುಮಾನವೇ.












Click it and Unblock the Notifications