• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಚುಟುಕು ಬ್ರಹ್ಮ' ದೇಸಾಯಿಗೆ ನುಡಿ ನಮನ

By Staff
|

'ಚುಟುಕು' ಎಂದಾಕ್ಷಣ ನಮಗೆ ನೆನಪಿಗೆ ಬರುವವರು ಕವಿ ದಿನಕರ ದೇಸಾಯಿ. ಉತ್ತರ ಕನ್ನಡದ ಹೆಸರಾಂತ ಕವಿ, ಚುಟುಕು ಸಾರ್ವಭೌಮ, 'ಅಭಿನವ ಸರ್ವಜ್ಞ', 'ಚೌಪದಿಯ ಜನಕ' - ಹೀಗೆ ಹಲವಾರು ಹೆಸರನಿತ್ತು ಅಭಿಮಾನಿಗಳು ಕರೆದಿದ್ದಾರೆ. ಈ ವರ್ಷ ಅವರ ಜನ್ಮಶತಮಾನೋತ್ಸವವನ್ನು ಆಚರಿಸಲಾಗುತ್ತದೆ. ಅವರದೇ ಹುಟ್ಟಿದ ದಿನ ಸೆಪ್ಟೆಂಬರ್ 10ರಂದು ಚುಟುಕ ಬ್ರಹ್ಮನಿಗೆ ಚುಟುಕುಗಳ ಮುಖಾಂತರ ನಮನ.

* ಸುಧಾ ಎಂ., ಕರ್ಕಿಸವಲು, ಸಿದ್ಧಾಪುರ, ಉತ್ತರ ಕನ್ನಡ

ನಾನು ಹುಟ್ಟಿದ್ದು ಸೆಪ್ಟಂಬರದ ಹತ್ತು |

ನೆಲತಾಯಿ ಬಸುರಾಗಿ ಕದಿರು ಮಾಡಿತ್ತು |

ಹಸಿರು ಸೀರೆಯನುಟ್ಟು ಧರೆಗೆ ಆನಂದ |

ಇದು ನನ್ನ ಸೌಭಾಗ್ಯವೆನ್ನುವೆನು ಕಂದ |

ಭೂಮಿತಾಯಿ ಹಸಿರು ಸೀರೆಯನ್ನುಟ್ಟು ನಳನಳಿಸುತಿರುವಾಗ, ಪಚ್ಚೆ ಪೈರುಗಳು ಕುಡಿಯೊಡೆದು ಹೊರಬರುವ ಸುಸಮಯದಲ್ಲಿ ತನ್ನ ಜನನವೆಂದು ಬೀಗುತ್ತಾರೆ. ಪ್ರತಿಯೊಂದು ಚುಟುಕವೂ ಹೀಗೆ. ನಮಗೆ ಚಿಕ್ಕದೆನಿಸಿದ ಹಲವಾರು ವಿಷಯಗಳು ಅವರಿಗೆ ಹಿರಿದಾಗಿ ಕಂಡಿದೆ. ಅವರ ಎಲ್ಲ ಮುಕ್ತಕಗಳು ಅದೇ ತೆರನಾಗಿ ಸಾಗುತ್ತವೆ. ಹಾಗಾಗಿ ಅವರ ಚುಟುಕಿನ ರುಚಿ ಹತ್ತಿಸಿಕೊಳ್ಳದ ಜನರೇ ಇರಲಿಕ್ಕಿಲ್ಲ. ಬಾಯಿಂದ ಬಾಯಿಗೆ, ಮಾತು - ಮಾತಿಗೆ ದೇಸಾಯಿ ಚುಟುಕು ಹರಿದಾಡಿವೆ. ಸಮಯೋಚಿತವಾಗಿ ನಲಿದಾಡಿವೆ. ಮಕ್ಕಳ ಬಾಯಲ್ಲಂತೂ ಅವರ ಅನೇಕ ಪದ್ಯಗಳು ಅಭಿನಯದ ಮೂಲಕವೂ ಹೇಳುತ್ತ, ಮಾಡಿತೋರಿಸಿದ್ದುಂಟು.

ಮುದ್ದು ಮುದ್ದಾಗಿ ಹಾಡಿದ 'ಬೆಕ್ಕೆ, ಬೆಕ್ಕೆ | ಮುದ್ದಿನ ಸೊಕ್ಕೆ | ಎಲ್ಲಿಗೆ ಹೋಗಿದ್ದೆ' | ಎಂಬ ಹಾಡು ಮೈ ನವಿರೇಳಿಸಿದ್ದುಂಟು. 'ತಿಪ್ಪಾ ಭಟ್ಟರ ಚಂದ ಕೊಡೆ | ಸಾವಿರ ತೂತುಗಳೆಲ್ಲ ಕಡೆ' | ಈ ಮಕ್ಕಳ ಪದ್ಯ ಕಲಿಸಿದಾಗ, ಅದೇ ಮುಂದೆ ತಿಪ್ಪಾ ಭಟ್ಟರ ಡೊಳ್ಳು | ನೋಡಲು ಮಕ್ಕಳು ಮಳ್ಳು | ಎಂದು ಪಡ್ತಿ ಮಾಸ್ತರರು ಅಭಿನಯದ ಮೂಲಕ ತೋರಿಸಿದಾಗ, ಅವರ ಜೊತೆ ನಾವೂ ನಗುತ್ತಾ ಕಲಿತಿದ್ದಿತ್ತು. ಆದರೆ ಅದೇ ಪದ್ಯವನ್ನು ಈಗ ಓದಿದಾಗ ಹೀಗೊಮ್ಮೆ ಯೋಚಿಸುವಾಗ ಅಪಹಾಸ್ಯ. ಉಪಹಾಸ, ಹಾಸ್ಯಲೇಪದ ನೆರಳು ಕಾಣುತ್ತದೆ. ದೇಸಾಯಿಯವರು ರಚಿಸಿದ ಎಲ್ಲ ಹಾಡುಗಳಲ್ಲೂ ಕಟುವಾದ ಕುಚೇಷ್ಟೆಯಿದೆ, ಮೊನಚಿದೆ, ವ್ಯಂಗ್ಯವಿದೆ. ವಿನೋದವಿದೆ. ಅವರ (ಕವಿತೆಗಳು) ಚುಟುಕುಗಳು 'ನಾದ' ನೀಡುವಂತದಲ್ಲ. ಏನಿದ್ದರೂ 'ಭೋಧ' ಕೊಡುವಂತವುಗಳು. ಏಕೆಂದರೆ ಅವರು ಈ ಜಿಲ್ಲೆಯ ಜನರ ಸಂಕಟವನ್ನು ಕಂಡವರು. ಅವರ ಜೊತೆ ಜೊತೆಗಾದವರು.

ದೇಸಾಯಿ ಬರೀ ಕವಿ ಮಾತ್ರವಲ್ಲ. ಜನಸೇವಕರು. ಸಾರ್ವಜನಿಕ ಸೇವೆಯಲ್ಲಿ ಅವರಿಗೆ ಬಹಳ ಆಸಕ್ತಿ. ಕವಿ ವಿಷ್ಣುನಾಯ್ಕರು 'ದಿನಕರನ ಆಯ್ದ ಚೌಪದಿ' ಕೃತಿಯ ಪ್ರಸ್ತಾವನೆಯಲ್ಲಿ ಹೀಗೆ ಹೇಳುತ್ತಾರೆ. 'ದೇಸಾಯಿಯವರ ಚೌಪದಿಗಳು ಪರಮೋಚ್ಛ ಕಾಳಜಿ, ನೆಮ್ಮದಿಯ ಸಮಾಜ ನಿರ್ಮಾಣ, ಊನವಿಲ್ಲದ, ಕಿಲುಬಿಲ್ಲದ, ಹಸಿವು - ಬೇಗುದಿಯಿಲ್ಲದ, ಮನುಷ್ಯ ಪ್ರೀತಿಯ, ಹೃದಯ ಸಂಪನ್ನತೆಯ ಬದುಕಿಗಾಗಿ ಅವರ ಭಾವಗೀತೆಗಳು ಹೇಗೋ, ಹಾಗೆ ಅವರ ಮುಕ್ತಕ (ಚೌಪದಿ)ಗಳೂ ಹಾತೊರೆಯುತ್ತವೆ. ಹಾರೈಸುತ್ತವೆ. ಭ್ರಷ್ಟ ವ್ಯವಸ್ಥೆಯ ವಿರುದ್ಧ ಕಳವಳಗೊಳ್ಳುತ್ತವೆ. ಕೆಂಡಕಾರುತ್ತವೆ. ನಿಸರ್ಗ, ದೇವರು - ಧರ್ಮದ ಬಗೆಗೆ ಇವರು ಬರೆದರೂ, ಬರೆದದ್ದು ಕಡಿಮೆ ಪ್ರಮಾಣ. ಅವರ ಸೂಕ್ಷ್ಮ ದೃಷ್ಟಿಗೆ ಅಲ್ಲೂ ಒಳಗೆಲ್ಲೋ ಒಂದು ಮೂಲೆಯಲ್ಲಿ ಸಿಗುವುದು ಈ ನೆಲದ ಪ್ರೀತಿ. ಇಲ್ಲಿಯ ಬವಣೆ, ದೇವರು - ಧರ್ಮಗಳ ಹೆಸರಲ್ಲಿ ನಡೆದ ಅನಾಚಾರ, ಕಣ್ಮುಂದೆ ಹಸಿದ ಹೊಟ್ಟೆಗಳಿರುವಾಗ, ಹನಿವ ಕಂಗಳಿರುವಾಗ, ಮುರುಕಲು ಗುಡಿಸಲುಗಳಿರುವಾಗ, ಒಡೆದು ಚೂರಾದ ಎದೆಗಳಿರುವಾಗ, ಚುಟುಕು ಹೊಸೆಯುತ್ತ ಕೂಡ್ರಲಾರರು' ಅಂದಿದ್ದಾರೆ. ಇದು ಒಪ್ಪಬೇಕಾದ ವಿಷಯ. ಅವರ ಸಮಕಾಲೀನರು, ಶಿಷ್ಯರು, ಹತ್ತಿರದಿಂದ ಬಲ್ಲವರು ದೇಸಾಯರನ್ನು ಕೊಂಡಾಡುತ್ತಾರೆ. ದೇಸಾಯಿಯವರು ಕಷ್ಟಗಳಲ್ಲಿ ಬದುಕುವ ಜನತೆಗಾಗಿ ಮಿಡಿಯುತ್ತಾರೆ. ಅವರಿಗಾಗಿ ದುಡಿದಿದ್ದಾರೆ, ಹೋರಾಡಿದ್ದಾರೆ. ಅಂತಹ ಕರ್ಮಯೋಗಿಯ ಒಂದು ಕವಿತೆಯ ತುಣುಕು ಹೀಗಿದೆ.

ಹರಿಗೆ ಎಂದು ಗುಡಿಯನೊಂದ ಕಟ್ಟುತ್ತಿರುವೆಯಾ ?

ಹರಿಯ ಒಲುಮೆ ಪಡೆದು ಪುಣ್ಯಗಳಿಸುತಿರುವೆಯಾ ?

ಎಂದು ಪ್ರಶ್ನಿಸುತ್ತ, ಬಡಜನರು ಸಂಕಷ್ಟ ನೋಡಬೇಕಾದರೆ ಮೊದಲು ಇಲ್ಲಿ ನೋಡು. 'ನೋಡಿ ಮಾಡು' ಅನ್ನುತ್ತಾರೆ.

ಹುಚ್ಚ ನೀನು ಹಳ್ಳಿಗೋಡು | ದೀನ ಜನರ ಪಾಡು ನೋಡು

ಇರಲು ಗುಡಿಯು ಇಲ್ಲವಲ್ಲ | ಹೊಟ್ಟೆ ತುಂಬ ಅನ್ನವಿಲ್ಲ |

ಹರಿಗೆ ಎಂದು ಗುಡಿಯನೊಂದ ಕಟ್ಟುತ್ತಿರುವೆಯಾ |

ಎಂದು ಕನಲುತ್ತಾರೆ.

ದೇವರ ಒಲುಮೆ ಪಡೆದು ಪುಣ್ಯಗಳಿಸುವದಕ್ಕಿಂತ, ದೀನ ಜನರಿಗಾಗಿ ದುಡಿದರೆ, ಮಿಡಿದರೆ, ಕನಿಷ್ಠ ಸೌಲಭ್ಯವನ್ನಾದರೂ ಕೊಟ್ಟರೆ ಅದೇ ದೇವರ ಸೇವೆ ಎಂದು ಬಗೆಯುತ್ತಾರೆ. ಅವರು ಜನಪರ ಕಳಕಳಿಯಿರುವ ಪ್ರಾಮಾಣಿಕ ಕವಿ. ಆ ನಿಲುವಿನಿಂದ ಬಂದಂತ ಅದೆಷ್ಟೋ ಚುಟುಕುಗಳು ನಮಗೆ ಸಿಗುತ್ತವೆ. ಅವರ ಎಲ್ಲಾ ಕವಿತೆ, ಚುಟುಕುಗಳು ಅತೀ ಸರಳವಾಗಿ, ಗ್ರಾಮ್ಯ ಭಾಷೆಯೂ ಸೇರಿಕೊಂಡು ಎಂತವರನ್ನೂ ಸೆಳೆಯುತ್ತದೆ. ಓದಿದರೆ ಮನಸ್ಸು ಅರಳುತ್ತದೆ. ಆ ಕವಿಯ ಆದರ್ಶವೇ ಅಂತಹುದು. ಅವರ ಒಲವು. ನಿಲುವು ಜೊತೆಗೆ ಗೆಲುವು ಕಂಡದ್ದೂ ಕೂಡಾ ಆದರ್ಶದಲ್ಲಿಯೇ.

ಕಲ್ಲಿಗೂ ದೃಢವಾಗಿ ಮನುಜ ಸಂಕಲ್ಪ |

ಹೂವಾಗಿ ಅರಳಿದರೆ ಗೊಮ್ಮಟನ ಶಿಲ್ಪ |

ಉಕ್ಕಿಗೂ ಬಿರುಸಾಗಿ ಮಾನವನ ಹೃದಯ |

ಬೆಣ್ಣೆಯೊಲು ಕರಗಿದರೆ ಗೌತಮನ ಉದಯ |

ವೆನ್ನುತ್ತಾ ತಮ್ಮ ಅನುಭವದ ಆದರ್ಶದ ಸಾರವನ್ನು ಬಿಚ್ಚಿಡುತ್ತಾರೆ. ಅದೇ ಗಟ್ಟಿ ನಿಲುವು ಹೂವಾಗಿ ಅರಳಿ, ಯಾರ ಒತ್ತಡಕ್ಕೂ ಮಣಿಯದೆ ಮುಖವಾಡ ಧರಿಸದೆ ಮುನ್ನಡೆದರೆ ಎಂತಹ ಕೆಲಸವನ್ನೂ ಮಾಡಬಲ್ಲ ಮನುಷ್ಯನಿಗೆ ಇಲ್ಲಿ ನೂರಾರು ಅವಕಾಶಗಳಿವೆ. ಇರುವ ಸಮಯದಲ್ಲಿ ಒಳಿತಿನ ಸತ್ಕಾರ್ಯ ನಮ್ಮಿಂದ ನಡೆಯಲಿ ಅನ್ನುತ್ತಾರೆ. ನಮ್ಮ ಆದರ್ಶದ ಕನವರಿಕೆ ಮುನ್ನಡೆಯಬೇಕಾದರೆ ಔನ್ನತ್ಯವಾಗಿ ಬೆಳೆಯಬೇಕಾದರೆ ನಮ್ಮಲ್ಲಿ ನೂರ್ಮಡಿಯ ಉತ್ಸಾಹವಿರಬೇಕು. ಯಶ ಕಾಣಬೇಕು. ಈ ಯಶಕ್ಕೆ ಜನ ನೋಡಿ ಹೊಗಳಬೇಕು ಎಂಬುದರ ಅವರ ಆಶಯ ಹೀಗಿದೆ.

ಯಾವುದಕ್ಕೂ ಮಗನೆ, ಬೇಕು ಉತ್ಸಾಹ |

ಎಲ್ಲರೂ ತಲೆ ದೂಗಿ ಅನಬೇಕು ವ್ಹಾ | ವ್ಹಾ |

ಶಿಖಿಯ ಉತ್ಸಾಹದಲಿ ಕರಗುವುದು ಬೆಣ್ಣೆ |

ಉತ್ಸಾಹ ಅಡಗಿದರೆ ಮೋರೆ ಹರಳೆಣ್ಣೆ |

ಹೀಗೆ ಆದರ್ಶದ ಕುರಿತು ಹೇಳುತ್ತ, ಉತ್ಸಾಹ ತುಂಬುತ್ತಾರೆ ಹುರುದುಂಬಿಸುತ್ತಾರೆ. ಅವರ ಚುಟುಕುಗಳು ಸರಳವಾಗಿ ನೇರವಾಗಿ ಸ್ಪಷ್ಟವಾಗಿದ್ದು ಅಂತರಾಳವನ್ನು ತಟ್ಟುತ್ತದೆ. ಮಲಗಿದವರನ್ನು ಬಡಿದೆಬ್ಬಿಸುತ್ತದೆ. 'ಚುಟುಕ ಬ್ರಹ್ಮ' ನೆನೆಸಿಕೊಂಡಿರುವ ಇವರು ಮನೋವೃತ್ತಿಯಲ್ಲಿ ಕವಿ. ವೃತ್ತಿಯಲ್ಲಿ ಜನ ಸೇವಕ. ಸಾಮಾಜಿಕ ಕಾರ್ಯಕರ್ತ, ದೀನರ ಬಂಧು, ಜನತೆಯ ಸೇವೆಯಲ್ಲಿ ಜನಾರ್ಧನನನ್ನು ಕಾಣುವ ದೇಸಾಯಿ ಮಾನವತೆಯ ಉಪಾಸಕರಂತೂ ಹೌದು. ಅವರ ಚುಟುಕ, ಕವಿತೆಗಳಲ್ಲಿ ಆದೇಶ, ಉದ್ದೇಶ, ಆವೇಶ ಕಂಡು ಬರುತ್ತದೆ. ನಮ್ಮ ಜಿಲ್ಲೆಯ ಹೆಮ್ಮೆಯ ಈ ಕವಿ ನಮ್ಮ ಮುಂದಿಲ್ಲ. ಅವರು ನಮಗಿತ್ತ ಕೊಡುಗೆ ಅಪಾರ. ಅವರಿಗೆ ಬೇಕಿರಲಿಲ್ಲ ಯಾವ ಪುರಸ್ಕಾರ. ತನ್ನನ್ನು ತಾನೆ ಆತ್ಮಾರ್ಪಣೆ ಮಾಡಿಕೊಳ್ಳುತ್ತ, ಧನ್ಯತೆಯ ಭಾವವನ್ನು ಈ ರೀತಿಯಲ್ಲಿ ಅರ್ಪಿಸುತ್ತಾರೆ.

'ನನ್ನ ದೇಹದ ಬೂದಿ ಗಾಳಿಯಲಿ ತೂರಿ ಬಿಡಿ,

ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ |

ನನ್ನ ದೇಹದ ಬೂದಿ ನೀರಲ್ಲಿ ತೇಲಿ ಬಿಡಿ |

ಹೋಗಿ ಬೀಳಲಿ ಮೀನ ಬಾಯಿಯಲ್ಲಿ |

ಮುಷ್ಟಿ ಬೂದಿಯಲೆಂದು ಪುಷ್ಪವಾಗಲು ಮೀನು,

ಧನ್ಯವಾಯಿತು ಹುಟ್ಟು ಸಾವಿನಲ್ಲಿ |

ಎಂದು ಹಂಬಲಿಸುತ್ತಾರೆ. ನಿವೇದಿಸಿಕೊಳ್ಳುತ್ತಾರೆ. ತನ್ನ ಸಾವಿನ ನಂತರವೂ ದೇಹದ ಬೂದಿ ಎಲ್ಲಕ್ಕೂ ಸೇರಬೇಕು. ಹುಟ್ಟಿನ ಧನ್ಯತೆ ಸಾವಿನಲ್ಲಿ ಸಾರ್ಥಕವಾಗಲಿ ಎಂಬ ಬಯಕೆಯೊಡನೆ ಜೀವನ ಪ್ರೀತಿ, ದೇಹ ಪ್ರೀತಿ ಎರಡನ್ನೂ ಹೇಳುತ್ತಾರೆ. ಕವಿ ಕರ್ಮಯೋಗಿ ದೇಸಾಯಿಯವರಿಗೆ ಇಡೀ ಜಿಲ್ಲೆಯೇಕೆ ? ಕರ್ನಾಟಕವೇ ಅವರಿಗೆ ನುಡಿ-ನಮನ ಸಲ್ಲಿಸುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more