ಅಮೆರಿಕದ ದಾಳಿ ಬೆನ್ನಲ್ಲೇ ಶ್ರೀಲಂಕಾ ಕರಾವಳಿಯಲ್ಲಿ ಇರಾನ್‌ನ ಮತ್ತೊಂದು ನೌಕೆ; ಹಿಂದೂ ಮಹಾಸಾಗರದಲ್ಲಿ ಯುದ್ಧದ ಕಿಚ್ಚು
ಅಮೆರಿಕದ ಜಲಂತರ್ಗಾಮಿ ನೌಕೆಯು ಇರಾನ್‌ನ "ಐರಿಸ್ ದೇನಾ" (IRIS Dena) ಅನ್ನು ಧ್ವಂಸಗೊಳಿಸಿ 87 ನಾವಿಕರನ್ನು ಕೊಂದ ಮರುದಿನವೇ, ಇರಾನ್‌ನ ಎರಡನೇ ಯುದ್ಧನೌಕೆಯೊಂದು ಶ್ರೀಲಂಕಾದತ್ತ ಧಾವಿಸುತ್ತಿದೆ. ಈ ನೌಕೆಯು ದೇಶದ ಪ್ರಾದೇಶಿಕ ಜಲಗಡಿಯ ಹೊರಭಾಗದಲ್ಲಿದೆ ಎಂದು ಶ್ರೀಲಂಕಾದ ಸಚಿವ ನಲಿಂಡ ಜಯತಿಸ್ಸ ಖಚಿತಪಡಿಸಿದ್ದಾರೆ. ಶ್ರೀಲಂಕಾ ಸರ್ಕಾರವು ತನ್ನ ಕರಾವಳಿಯ ಸಮೀಪವಿದ್ದ ಇರಾನ್‌ನ ಎರಡನೇ ಯುದ್ಧನೌಕೆಯಾದ ಐರಿಸ್ ಬೂಶೆಹರ್‌ನಿಂದ (IRIS Bushehr) 208 ಸಿಬ್ಬಂದಿಯನ್ನು ಸ್ಥಳಾಂತರಿಸಲು ಆರಂಭಿಸಿದೆ ಎಂದು ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕ ತಿಳಿಸಿದ್ದಾರೆ.
ಈ ನೌಕೆಯಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿ ಇದ್ದು, ದಕ್ಷಿಣ ಶ್ರೀಲಂಕಾ ಕರಾವಳಿಯಲ್ಲಿ ಮುಳುಗಡೆಯಾದ ನೌಕೆಯಂತೆಯೇ ಇದೂ ಕೂಡ ಗುರಿಯಾಗಬಹುದು ಎಂಬ ಆತಂಕ ಎದುರಾಗಿದೆ. ಯುದ್ಧನೌಕೆಯು ತುರ್ತು ಬಂದರು ಪ್ರವೇಶಕ್ಕೆ ವಿನಂತಿಸಿದೆ. ಈ ಬಗ್ಗೆ ಸರ್ಕಾರದ ನಿಲುವು ಏನೆಂದು ತಕ್ಷಣ ಬಹಿರಂಗಪಡಿಸಬೇಕು ಎಂದು ಸಂಸದ ನಾಮಲ್ ರಾಜಪಕ್ಸೆ ಒತ್ತಾಯಿಸಿದ್ದಾರೆ. ದಾಳಿಯಲ್ಲಿ ಮೃತಪಟ್ಟ 87 ಇರಾನಿ ನಾವಿಕರ ದೇಹಗಳನ್ನು ಹಸ್ತಾಂತರಿಸಲು ಗಾಲೆ (Galle) ಬಂದರು ನಗರದ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಗಾಯಗೊಂಡ 32 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನು 60 ಮಂದಿ ನಾಪತ್ತೆಯಾಗಿದ್ದಾರೆ.

ವಿಶಾಖಪಟ್ಟಣದಲ್ಲಿ ಸೇನಾ ಅಭ್ಯಾಸ ಮುಗಿಸಿ ಮರಳುತ್ತಿದ್ದ 'ಐರಿಸ್ ದೇನಾ' ನೌಕೆಯ ಮೇಲೆ ಅಮೆರಿಕ ದಾಳಿ ನಡೆಸಿತ್ತು. ಇದನ್ನು ಅಮೆರಿಕ ಸೇನೆಯು ಒಪ್ಪಿಕೊಂಡಿದೆ. ಈ ಘಟನೆಯು ಯುದ್ಧದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಇರಾನ್‌ನಿಂದ ಸಾವಿರಾರು ಮೈಲಿ ದೂರದಲ್ಲಿ ಈ ದಾಳಿ ನಡೆದಿದೆ. ಇರಾನ್ ಈಗಾಗಲೇ ಇಸ್ರೇಲ್ ಮತ್ತು ಅಮೆರಿಕದ ನೆಲೆಗಳ ಮೇಲೆ ಹೊಸ ಸುತ್ತಿನ ದಾಳಿಗಳನ್ನು ಆರಂಭಿಸಿದ್ದು, ಅಮೆರಿಕವು ತನ್ನ ಕೃತ್ಯಕ್ಕಾಗಿ ತೀವ್ರವಾಗಿ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಶ್ರೀಲಂಕಾ ಮಹತ್ವದ ಸಭೆ
ಅಮೆರಿಕವು ಸಮುದ್ರದಲ್ಲಿ ಭೀಕರ ಕೃತ್ಯ ಎಸಗಿದೆ. ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಯಾವುದೇ ಮುನ್ಸೂಚನೆ ನೀಡದೆ ದೇನಾ ನೌಕೆಯ ಮೇಲೆ ದಾಳಿ ಮಾಡಲಾಗಿದೆ" ಎಂದು ಇರಾನ್ ಅಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀಲಂಕಾದ ಮುಖ್ಯ ರಫ್ತು ವಸ್ತುವಾದ ಚಹಾವನ್ನು ಅತಿ ಹೆಚ್ಚು ಖರೀದಿಸುವ ದೇಶಗಳಲ್ಲಿ ಇರಾನ್ ಕೂಡ ಒಂದು. ಪ್ರಸ್ತುತ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕ ಅವರು ಈ ಪರಿಸ್ಥಿತಿಯನ್ನು ನಿಭಾಯಿಸಲು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ.
ಅಮೆರಿಕದ ಮತ್ತೊಂದು ಸಂಭಾವ್ಯ ದಾಳಿಯ ಭೀತಿಯಿಂದಾಗಿ, ಶ್ರೀಲಂಕಾ ನೌಕಾಪಡೆಯು ಇರಾನ್‌ನ ಈ ನೌಕೆಯನ್ನು ತನ್ನ ಸುಪರ್ದಿಗೆ ಪಡೆದಿದೆ. ನೌಕೆಯಲ್ಲಿದ್ದ 208 ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಕೊಲೊಂಬೋದ ನೌಕಾ ಶಿಬಿರಕ್ಕೆ ಸ್ಥಳಾಂತರಿಸಲಾಗುತ್ತಿದೆ. ಇಂಜಿನ್ ದೋಷದ ವರದಿಯ ಹಿನ್ನೆಲೆಯಲ್ಲಿ, ಈ ನೌಕೆಯನ್ನು ಕೊಲೊಂಬೋ ಬಂದರಿನ ಬದಲು ಆಯಕಟ್ಟಿನ ದೃಷ್ಟಿಯಿಂದ ಸುರಕ್ಷಿತವಾಗಿರುವ ಈಶಾನ್ಯ ಭಾಗದ ತ್ರಿಕೋಣಮಲಿ ಬಂದರಿಗೆ ಕೊಂಡೊಯ್ಯಲು ನಿರ್ಧರಿಸಲಾಗಿದೆ. ನಾವು ಈ ವಿಚಾರದಲ್ಲಿ ಯಾವ ಪರವೂ ಇಲ್ಲ. ತಟಸ್ಥತೆಯನ್ನು ಕಾಯ್ದುಕೊಳ್ಳುತ್ತಲೇ ಮಾನವೀಯ ಆಧಾರದ ಮೇಲೆ ಜೀವ ಉಳಿಸಲು ಈ ಕ್ರಮ ಕೈಗೊಂಡಿದ್ದೇವೆ ಎಂದು ಶ್ರೀಲಂಕಾ ಅಧ್ಯಕ್ಷ ದಿಸ್ಸಾನಾಯಕ ಸ್ಪಷ್ಟಪಡಿಸಿದ್ದಾರೆ.
ಹಾರ್ಮುಜ್ ಜಲಸಂಧಿ ಬಂದ್
ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ವಿಶ್ವದ ಅತ್ಯಂತ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಭಾಗಶಃ ಮುಚ್ಚುವುದಾಗಿ ಘೋಷಿಸಿದೆ. ಇರಾನ್‌ನ ಸರ್ಕಾರಿ ಮಾಧ್ಯಮ 'IRIB' ಮೂಲಕ ಹೊರಡಿಸಿದ ಆದೇಶದಂತೆ, ಕೆಲ ದೇಶಗಳ ನೌಕೆಗಳಿಗೆ ಹಾರ್ಮುಜ್ ಜಲಸಂಧಿಯಲ್ಲಿ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.\

ಅಮೆರಿಕ, ಇಸ್ರೇಲ್, ಯುರೋಪಿಯನ್ ಒಕ್ಕೂಟದ ದೇಶಗಳು, ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಗೆ ಸೇರಿದ ಅಥವಾ ಇವುಗಳನ್ನು ಬೆಂಬಲಿಸುವ ಯಾವುದೇ ನೌಕೆಗಳು ಜಲಸಂಧಿಯಲ್ಲಿ ಕಂಡುಬಂದಲ್ಲಿ ಅವುಗಳ ಮೇಲೆ ಖಂಡಿತವಾಗಿ ದಾಳಿ ನಡೆಸಲಾಗುವುದು ಎಂದೂ ಐಆರ್‌ಜಿಸಿ ಎಚ್ಚರಿಸಿದೆ. ಇರಾನ್ ಕೇವಲ ಚೀನಾದ ಧ್ವಜವಿರುವ ನೌಕೆಗಳಿಗೆ ಮಾತ್ರ ಈ ಮಾರ್ಗ ಬಳಸಲು ಅನುಮತಿ ನೀಡಿದೆ. ಮಧ್ಯಪ್ರಾಚ್ಯ ಸಂಘರ್ಷದ ಸಮಯದಲ್ಲಿ ಇರಾನ್ ಪರವಾಗಿ ನಿಂತಿದ್ದಕ್ಕಾಗಿ ಬೀಜಿಂಗ್‌ಗೆ ಧನ್ಯವಾದ ಅರ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾರ್ಮುಜ್ ಜಲಸಂಧಿಯು ಪರ್ಷಿಯನ್ ಕೊಲ್ಲಿಯ ದೇಶಗಳಿಗೆ ಇರುವ ಏಕೈಕ ಸಮುದ್ರ ಮಾರ್ಗವಾಗಿದ್ದು, ವಿಶ್ವದ ಒಟ್ಟು ತೈಲ ಪೂರೈಕೆಯ ಸುಮಾರು 20% ರಷ್ಟು ಭಾಗ ಈ ಮಾರ್ಗದ ಮೂಲಕವೇ ಸಾಗುತ್ತದೆ. ಜಲಸಂಧಿ ಮುಚ್ಚಲ್ಪಟ್ಟಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಯುದ್ಧ ಆರಂಭವಾದಾಗಿನಿಂದ ಈ ಮಾರ್ಗದಲ್ಲಿ ಬಹುತೇಕ ವಾಣಿಜ್ಯ ನೌಕೆಗಳ ಸಂಚಾರ ಸ್ಥಗಿತಗೊಂಡಿದೆ. ಯುದ್ಧದ ಸಮಯದಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಸಂಚಾರವನ್ನು ನಿಯಂತ್ರಿಸುವ ಹಕ್ಕು ತನಗಿದೆ ಎಂದು ಇರಾನ್ ಅಂತರಾಷ್ಟ್ರೀಯ ಕಾನೂನುಗಳನ್ನು ಉಲ್ಲೇಖಿಸಿ ವಾದಿಸುತ್ತಿದೆ. ಶನಿವಾರದಿಂದ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಗೆ ಪ್ರತಿಯಾಗಿ ಇರಾನ್ ಈ ಕ್ರಮ ಕೈಗೊಂಡಿದೆ.
ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟು ಭಾರತದ ಪಾಲಿಗೆ ಕೇವಲ ತೈಲದ ಸಮಸ್ಯೆಯಾಗಿ ಉಳಿದಿಲ್ಲ. ಇದು ಚಿನ್ನದ ಬೆಲೆಯ ಮೇಲೂ ಭಾರಿ ಪರಿಣಾಮ ಬೀರುತ್ತಿದೆ. ಜಾಗತಿಕ ಅಸ್ಥಿರತೆಯ ಈ ಸಂದರ್ಭದಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಯುದ್ಧದ ಸಮಯದಲ್ಲಿ ಷೇರು ಮಾರುಕಟ್ಟೆ ಕುಸಿಯುವ ಭೀತಿಯಿಂದಾಗಿ ಹೂಡಿಕೆದಾರರು ತಮ್ಮ ಹಣವನ್ನು ಸುರಕ್ಷಿತವಾಗಿಡಲು ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಹಾರ್ಮುಜ್ ಜಲಸಂಧಿ ಮುಚ್ಚಿರುವುದರಿಂದ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ. ಇದು ಹಣದುಬ್ಬರಕ್ಕೆ (Inflation) ಕಾರಣವಾಗುವುದರಿಂದ ಅದರ ವಿರುದ್ಧ ರಕ್ಷಣೆಯಾಗಿ ಚಿನ್ನದ ಬೇಡಿಕೆ ಹೆಚ್ಚಿದೆ. ಭಾರತಕ್ಕೆ ಆಮದಾಗುವ ಚಿನ್ನ ಮತ್ತು ವಜ್ರದ ಬಹುಪಾಲು ದುಬೈ ಮಾರ್ಗದ ಮೂಲಕ ಬರುತ್ತದೆ. ಹಾರ್ಮುಜ್ ಬಿಕ್ಕಟ್ಟಿನಿಂದಾಗಿ ಈ ಸರಬರಾಜು ಮಾರ್ಗಗಳು ಅಸ್ತವ್ಯಸ್ತಗೊಂಡಿವೆ.
ಭಾರತದ ಒಟ್ಟು ತೈಲ ಆಮದಿನ ಅರ್ಧದಷ್ಟು ಭಾಗ ಹಾರ್ಮುಜ್ ಮೂಲಕ ಬರುತ್ತದೆ. ಪರ್ಯಾಯವಾಗಿ ಭಾರತ ಈಗ ರಷ್ಯಾದ ತೈಲವನ್ನು ಹೆಚ್ಚು ಅವಲಂಬಿಸುತ್ತಿದೆ. ಅಡುಗೆ ಅನಿಲ (ಎಲ್‌ಪಿಜಿ) ಭಾರತವು ತನ್ನ ಸುಮಾರು ಶೇ 80ರಷ್ಟು ಎಲ್‌ಪಿಜಿಗೆ ಕೊಲ್ಲಿ ರಾಷ್ಟ್ರಗಳನ್ನು ಅವಲಂಬಿಸಿದೆ. ಇದರ ಪೂರೈಕೆ ಕಡಿತಗೊಂಡರೆ ಗೃಹಬಳಕೆಯ ಸಿಲಿಂಡರ್ ಬೆಲೆ ಏರಬಹುದು. ಚಿನ್ನ ಮತ್ತು ವಜ್ರ ದುಬೈ ಮೂಲದ ಪೂರೈಕೆ ಸ್ಥಗಿತಗೊಂಡಿರುವುದರಿಂದ ಆಭರಣ ಉದ್ಯಮಕ್ಕೆ ಕಚ್ಚಾ ವಸ್ತುಗಳ ಕೊರತೆಯೂ ಉಂಟಾಗುವ ಆತಂಕವಿದೆ.












Click it and Unblock the Notifications