MS Dhoni: ಎಂಎಸ್ ಧೋನಿ ನಿವೃತ್ತಿ ಘೋಷಣೆ? 5 ವರ್ಷದ ಹಿಂದಿನ ಸುಳಿವು ಭಾರಿ ವೈರಲ್
MS Dhoni: ಐಪಿಎಲ್ 2026ರ ಲೀಗ್ ಹಂತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇಂದಿನ ಎಸ್‌ಆರ್‌ಎಚ್ ವಿರುದ್ಧದ ಪಂದ್ಯ ಬಿಟ್ಟರೆ, ಇನ್ನು ಕೇವಲ ಒಂದು ಮ್ಯಾಚ್ ಬಾಕಿ ಉಳಿಯಲಿದೆ. ಆದರೆ ಎಂ.ಎಸ್. ಧೋನಿ ಈವರೆಗೆ ಒಂದೂ ಪಂದ್ಯವನ್ನು ಆಡಿಲ್ಲ. ಹೊಸ ಸೀಸನ್ ಆರಂಭವಾದಾಗಿನಿಂದ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಈ ನಡುವೆಯೇ ಇಂದು (ಮೇ 12) ರಾತ್ರಿಯೇ ಧೋನಿ ಟಿ20 ಲೀಗ್‌ಗೆ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.
ಐದು ವರ್ಷಗಳ ಹಿಂದೆ ಸ್ವತಃ ಎಂ.ಎಸ್. ಧೋನಿ ಅವರೇ ಮಾಡಿದ್ದ ಘೋಷಣೆಗೆ ಈ ಸಂದರ್ಭವು ಹೊಂದಿಕೆಯಾಗುತ್ತಿದೆ. 2021ರಲ್ಲಿ ಚೆನ್ನೈನಲ್ಲಿ ನಡೆದ ಸಿಎಸ್‌ಕೆ ತಂಡದ ಐಪಿಎಲ್ ಪ್ರಶಸ್ತಿ ಸಂಭ್ರಮಾಚರಣೆಯ ವೇಳೆ ಧೋನಿ ಅವರು ತಮ್ಮ ವೃತ್ತಿಜೀವನದ ಕೊನೆಯ ಟಿ20 ಪಂದ್ಯವನ್ನು ಚೆನ್ನೈನಲ್ಲಿ ಆಡುವ ಆಶಯ ವ್ಯಕ್ತಪಡಿಸಿದ್ದರು. ಕಾಕತಾಳೀಯವೆಂಬಂತೆ ಐದು ವರ್ಷಗಳ ನಂತರ ಸಿಎಸ್‌ಕೆ ತಂಡವು ಚೇಪಾಕ್ ಕ್ರೀಡಾಂಗಣದಲ್ಲಿ ಎಸ್‌ಆರ್‌ಹೆಚ್ ತಂಡದ ವಿರುದ್ಧ ಆಡುತ್ತಿದೆ.

5 ವರ್ಷಗಳ ಹಿಂದೆ ನಿವೃತ್ತಿಯ ಸುಳಿವು
"ನಾನು ಯಾವಾಗಲೂ ನನ್ನ ಕ್ರಿಕೆಟ್ ಜೀವನವನ್ನು ಯೋಜಿಸಿಕೊಂಡೇ ಬಂದಿದ್ದೇನೆ. ನಾನು ಆಡಿದ ಕೊನೆಯ ಏಕದಿನ ಪಂದ್ಯ ನನ್ನ ತವರೂರಾದ ರಾಂಚಿಯಲ್ಲಿತ್ತು. ಅದೇ ರೀತಿ ನನ್ನ ಕೊನೆಯ ಟಿ20 ಪಂದ್ಯವು ಚೆನ್ನೈನಲ್ಲೇ ನಡೆಯಲಿದೆ ಎಂಬ ಭರವಸೆ ನನಗಿದೆ. ಅದು ಮುಂದಿನ ವರ್ಷವೇ ಅಥವಾ ಇನ್ನು ಐದು ವರ್ಷಗಳ ನಂತರವಾಗಿರಲಿ, ಅದನ್ನು ಈಗಲೇ ಹೇಳಲು ಸಾಧ್ಯವಿಲ್ಲ," ಎಂದು ಧೋನಿ 5 ವರ್ಷಗಳ ಹಿಂದೆ ತಮ್ಮ ನಿವೃತ್ತಿಯ ಬಗ್ಗೆ ಸುಳಿವು ನೀಡಿದ್ದರು.
ಸಿಎಸ್‌ಕೆ ಮತ್ತು ಎಸ್‌ಆರ್‌ಎಚ್ ಮುಖಾಮುಖಿ
ಸಿಎಸ್‌ಕೆ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಚೇಪಾಕ್‌ನಲ್ಲಿ ಇಂದು ರಾತ್ರಿ ಮುಖಾಮುಖಿಯಾಗುತ್ತಿವೆ. ಇದೇ ವೇಳೆ ಧೋನಿ ನೀಡಿದ್ದ ಆ ಐದು ವರ್ಷಗಳ ಕಾಲಮಿತಿ ಕೊನೆಗೊಳ್ಳುತ್ತಿದೆ. ವಾಸ್ತವವಾಗಿ ಈ ಪಂದ್ಯದ ನಂತರ ಈ ಸೀಸನ್‌ನಲ್ಲಿ ಚೆನ್ನೈನಲ್ಲಿ ಬೇರೆ ಯಾವುದೇ ಪಂದ್ಯಗಳು ನಿಗದಿಯಾಗಿಲ್ಲ. ಆದ್ದರಿಂದ ಚೇಪಾಕ್ ಪ್ರೇಕ್ಷಕರು ಸಿಎಸ್‌ಕೆ ತಂಡದ ತವರು ಮೈದಾನದಲ್ಲಿ ಧೋನಿ ಅವರನ್ನು ನೋಡಲು ಸಿಗುತ್ತಿರುವ ಕೊನೆಯ ಅವಕಾಶ ಇದೇ ಆಗಿರಬಹುದು ಎಂಬ ಬಲವಾದ ನಂಬಿಕೆ ಇಟ್ಟುಕೊಂಡಿದ್ದರು. ಆದರೆ ಅವರು ಈ ಪಂದ್ಯಕ್ಕೂ ಅಲಭ್ಯರಾಗಿದ್ದು, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಆರ್ ಅಶ್ವಿನ್ ಹೇಳಿದ್ದೇನು?
ಎಂ.ಎಸ್. ಧೋನಿ ಅವರ ಸುದೀರ್ಘ ಕಾಲದ ಅಂತಾರಾಷ್ಟ್ರೀಯ ತಂಡದ ಸಹ ಆಟಗಾರ ರವಿಚಂದ್ರನ್ ಅಶ್ವಿನ್ ಅವರು, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಧೋನಿ ಅವರಿಗೆ ಆಡುವ ಉತ್ತಮ ಅವಕಾಶ ಇದೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಕಳೆದ ಎರಡು ಮೂರು ಪಂದ್ಯಗಳಿಂದಲೇ ಧೋನಿ ಫಿಟ್ ಆಗಿದ್ದಾರೆ ಮತ್ತು ಆಡಲು ಸಿದ್ಧರಾಗಿದ್ದಾರೆ ಎಂದು ಅಶ್ವಿನ್ ತಿಳಿಸಿದ್ದರು.
"ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಧೋನಿ ಆಡುವ ಸಾಧ್ಯತೆ ಹೆಚ್ಚಿದೆ ಎಂದು ನನಗನ್ನಿಸುತ್ತಿದೆ. ಏನಾಗುತ್ತದೆ ಎಂದು ಕಾದು ನೋಡೋಣ. ನಾನು ಕೇಳಿರುವ ಪ್ರಕಾರ, ಅವರು ಕಳೆದ ಎರಡು ಮೂರು ಪಂದ್ಯಗಳಿಂದಲೇ ಕಣಕ್ಕಿಳಿಯಲು ಸಿದ್ಧರಾಗಿದ್ದರು," ಎಂದು ಅಶ್ವಿನ್ ತಿಳಿಸಿದ್ದರು. ಆದರೆ ಎಂಎಸ್ ಧೋನಿ ಅವರು ಈ ಪಂದ್ಯದಿಂದಲೂ ಹೊರಗುಳಿದಿದ್ದು, ಅಶ್ವಿನ್ ಅವರ ಆಸೆ ನಿರಾಸೆ ಆದಂತಾಗಿದೆ. ಒಟ್ಟಿನಲ್ಲಿ ಮಾಹಿತಿ ಪ್ರಕಾರ ಧೋನಿ ಅವರು ಕಳೆದ ಐದು ವರ್ಷದ ಹಿಂದೆ ಹೇಳಿದಂತೆ ಇಂದೇ ರಾತ್ರಿ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆಯಿದೆ. ಇನ್ನೂ ಅಭಿಮಾನಿಗಳು ಇದು ಸುಳ್ಳಾಗಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.












Click it and Unblock the Notifications