Darshan: ಇಂದು ಮದುವೆ ವಾರ್ಷಿಕೋತ್ಸವ; ಹೆಂಡತಿ-ಮಗನ ಭೇಟಿಗೆ ದಯವಿಟ್ಟು ಅವಕಾಶ ಕೊಡಿ: ಜೈಲಾಧಿಕಾರಿಗಳಿಗೆ ನಟ ದರ್ಶನ್ ಮನವಿ
ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಹಾಗೂ ವಿಜಯಲಕ್ಷ್ಮಿ ದಂಪತಿಗೆ ಇಂದು (ಮೇ 19) 23ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಎದುರಿಸುತ್ತಾ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಅವರು ಈ ವಿಶೇಷ ಸಂದರ್ಭದಲ್ಲಿ ಮುಖಾಮುಖಿ ಭೇಟಿಗೆ ಅವಕಾಶ ಕಲ್ಪಿಸುವಂತೆ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಇಬ್ಬರೂ ಜೈಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಮಹತ್ವದ ಮಾಹಿತಿ ನೀಡಿದ್ದಾರೆ.
'ದರ್ಶನ್ ಮಾನಸಿಕವಾಗಿ ಕುಗ್ಗಿದ್ದಾರೆ'
ದರ್ಶನ್ ಅವರನ್ನು ವಿವಾಹವಾಗಿ ಇಂದು (ಮೇ 19) 23 ವರ್ಷಗಳು ತುಂಬಲಿವೆ. ಈ ಹಿನ್ನೆಲೆ ಕಾರಾಗೃಹಗಳ ಮುಖ್ಯಸ್ಥರಾದ ಅಲೋಕ್ ಕುಮಾರ್ ಅವರಿಗೆ ವಿಜಯಲಕ್ಷ್ಮಿ ಅವರು ಮನವಿ ಪತ್ರವೊಂದನ್ನು ನೀಡಿದ್ದಾರೆ. "ಇತ್ತೀಚೆಗೆ ಸುಪ್ರೀಂಕೋರ್ಟ್‌ನಲ್ಲಿ ದರ್ಶನ್‌ಗೆ ಹಿನ್ನಡೆ ಹಾಗೂ ಪ್ರಸ್ತುತ ಪರಿಸ್ಥಿತಿಯಿಂದ ದರ್ಶನ್ ಅವರು ಮಾನಸಿಕವಾಗಿ ಕುಗ್ಗಿದ್ದಾರೆ, ಅವರಿಗೆ ಧೈರ್ಯ ತುಂಬುವ ಅಗತ್ಯವಿದೆ. ಜೈಲಿನ ನಿಯಮಾವಳಿಗಳ ಅನ್ವಯವೇ ಪತಿಯನ್ನು ಹತ್ತಿರದಿಂದ ಭೇಟಿ ಮಾಡಲು ಮತ್ತು ಅವರೊಂದಿಗೆ ಸ್ವಲ್ಪ ಸಮಯ ಕಳೆಯಲು ನಮಗೆ ಅವಕಾಶ ಮಾಡಿಕೊಡಿ" ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಕೊಠಡಿಯೊಳಗೆ ಭೇಟಿಗೆ ದರ್ಶನ್ ಕೂಡ ಕೋರಿಕೆ
ಮತ್ತೊಂದೆಡೆ, ನಟ ದರ್ಶನ್ ಕೂಡ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕರಾದ ಅಂಶುಕುಮಾರ್ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದ್ದಾರೆ. "ಸಾಮಾನ್ಯವಾಗಿ ಕುಟುಂಬಸ್ಥರು ಭೇಟಿಗೆ ಬಂದಾಗ ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ಬಾರಿ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಜೊತೆಗೆ ಕೊಠಡಿಯೊಳಗೆ ಮುಖಾಮುಖಿ ಮಾತುಕತೆಗೆ ಪ್ರತ್ಯೇಕವಾಗಿ ಅವಕಾಶ ನೀಡಿ" ಎಂದು ಕೇಳಿಕೊಂಡಿರುವುದಾಗಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಮುಖಾಮುಖಿ ಭೇಟಿಗೆ ಅವಕಾಶ ಸಿಗುತ್ತಾ?
ವಿಜಯಲಕ್ಷ್ಮಿ ಅವರ ಮನವಿ ಪತ್ರದ ಕುರಿತು ಪ್ರತಿಕ್ರಿಯಿಸಿರುವ ಅಲೋಕ್ ಕುಮಾರ್, "ವಿಜಯಲಕ್ಷ್ಮಿ ಅವರು ಬರೆದಿರುವ ಪತ್ರವನ್ನು ಜೈಲಿನ ಮುಖ್ಯ ಅಧೀಕ್ಷಕ ಅಂಶುಕುಮಾರ್ ಅವರಿಗೆ ರವಾನಿಸಲಾಗಿದ್ದು, ಅವರೇ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ. "ಸಾಮಾನ್ಯವಾಗಿ ಜೈಲಿನಲ್ಲಿ ಕೈದಿಗಳನ್ನು ನೋಡಲು ಕುಟುಂಬಸ್ಥರು ಬಂದಾಗ ಇಬ್ಬರ ನಡುವೆ ಗಾಜಿನ ಗೋಡೆ ಇರುತ್ತದೆ. ಆಗ ಇಂಟರ್‌ಕಾಮ್ ಫೋನ್ ಮೂಲಕ ಮಾತನಾಡಬೇಕಾಗುತ್ತದೆ. ಆದರೆ ಇಂತಹ ವಿಶೇಷ ಸಂದರ್ಭಗಳಲ್ಲಿ ಮಾತ್ರ ಆ ಗಾಜಿನ ಗೋಡೆ ಇಲ್ಲದೆಯೇ, ಮುಖಾಮುಖಿಯಾಗಿ ನೇರವಾಗಿ ಕುಳಿತು ಮಾತನಾಡಲು ವಿಶೇಷ ಅವಕಾಶ ಕಲ್ಪಿಸಿಕೊಡಲಾಗುತ್ತದೆ" ಎಂದು ಅಲೋಕ್ ಕುಮಾರ್ ಅವರು ನಿಯಮದ ಬಗ್ಗೆ ಮಾಹಿತಿ ನೀಡಿದ್ದಾರೆ.

ದರ್ಶನ್ ಸೆಲ್‌ಗೆ ಭೇಟಿ ನೀಡಿದ್ದ ಅಲೋಕ್ ಕುಮಾರ್
ಇತ್ತೀಚೆಗಷ್ಟೇ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಕೈದಿಗಳ ಕುಂದುಕೊರತೆ ಆಲಿಸಿದ್ದಾಗಿ ಹೇಳಿದ ಅಲೋಕ್ ಕುಮಾರ್, "ನಾನು ದರ್ಶನ್ ಇರುವ ಸೆಲ್‌ಗೂ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕುಟುಂಬದವರನ್ನು ಭೇಟಿ ಮಾಡಲು ಸೂಕ್ತ ಅವಕಾಶ ನೀಡಬೇಕು ಮತ್ತು ಫೋನ್ ಮಾಡಲು ಹೆಚ್ಚಿನ ಸಮಯ ಕೊಡಬೇಕು ಎಂಬುದನ್ನು ಬಿಟ್ಟರೆ ಜೈಲಿನಲ್ಲಿ ಬೇರೆ ಯಾವುದೇ ಸಮಸ್ಯೆಗಳಿಲ್ಲ ಎಂದು ದರ್ಶನ್ ತಿಳಿಸಿದ್ದಾಗಿ ಹೇಳಿದ್ದಾರೆ. ದರ್ಶನ್ ದಂಪತಿಯ ಈ ಮನವಿಗೆ ಜೈಲು ಅಧಿಕಾರಿಗಳು ಸ್ಪಂದಿಸಿ, ಇಂದಿನ ಅವರ ವಿವಾಹ ವಾರ್ಷಿಕೋತ್ಸವಕ್ಕೆ ಮುಖಾಮುಖಿ ಭೇಟಿಯ ವಿಶೇಷ ಅನುಮತಿ ನೀಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.













Click it and Unblock the Notifications