ಎಸ್‌ಆರ್‌ಎಚ್ ಹಾಗೂ ಗುಜರಾತ್ ಟೈಟಾನ್ಸ್ ಪ್ಲೇ-ಆಫ್ ಪ್ರವೇಶಕ್ಕೆ ದಾರಿ ಮಾಡಿಕೊಟ್ಟ ಸಿಎಸ್‌ಕೆ
SRH Entered Playoffs: ಚೆನ್ನೈನ ಚೆಪಾಕ್‌ನಲ್ಲಿ ಸೋಮವಾರ (ಮೇ 19) ನಡೆದ ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಇಶಾನ್ ಕಿಶನ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಎಸ್‌ಆರ್‌ಎಚ್ ಜೊತೆಗೆ ಜಿಟಿ ಸಹ ಪ್ಲೇಆಫ್‌ಗೆ ಲಗ್ಗೆ ಇಟ್ಟಿದೆ.
ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಋತುರಾತ್ ಗಾಯಕ್ವಾಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಸಿಎಸ್‌ಕೆ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 180 ರನ್ ಪೇರಿಸಿತು. ಪರ ಡೆವಾಲ್ಡ್ ಬ್ರೆವಿಸ್ 44 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಆದರೆ ಬಳಿಕ ಬ್ಯಾಟ್ ಬೀಸಿದ ಎಸ್‌ಆರ್‌ಎಚ್ 181 ರನ್‌ಗಳ ಗುರಿಯನ್ನು ಮುಟ್ಟುವ ಮೂಲಕ ಪ್ಲೇಆಫ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

3 ಪ್ರಮುಖ ವಿಕೆಟ್ ಕಬಳಿಸಿದ ಕಮ್ಮಿನ್ಸ್
ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಮಾರಕ ಬೌಲಿಂಗ್ ದಾಳಿ ನಡೆಸಿ 3 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ಸಿಎಸ್‌ಕೆ ರನ್ ವೇಗಕ್ಕೆ ಕಡಿವಾಣ ಹಾಕಿದರು. ಉಳಿದಂತೆ ಸಾಕಿಬ್ ಹುಸೇನ್ 2 ವಿಕೆಟ್ ಕಿತ್ತರೆ, ಪ್ರಫುಲ್ ಹಿಂಗೆ ಹಾಗೂ ಇಶಾನ್ ಮಾಲಿಂಗ ತಲಾ ಒಂದು ವಿಕೆಟ್ ಪಡೆದದರು.
ಇಶಾನ್ ಕಿಶನ್ ಸ್ಪೋಟಕ ಬ್ಯಾಟಿಂಗ್‌ಗೆ ಮಣಿದ ಸಿಎಸ್‌ಕೆ
181 ರನ್‌ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ಆರಂಭದಲ್ಲಿ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಸಂಕಷ್ಟದ ಸಮಯದಲ್ಲಿ ಇಶಾನ್ ಕಿಶನ್ (47 ಎಸೆತಗಳಲ್ಲಿ 70 ರನ್) ಅದ್ಭುತವಾಗಿ ಬ್ಯಾಟ್ ಬೀಸಿದರು. ಅವರಿಗೆ ಸಾಥ್ ನೀಡಿದ ಹೆನ್ರಿಚ್ ಕ್ಲಾಸೆನ್ ಸ್ಫೋಟಕ 47 ರನ್ ಗಳಿಸಿದರು. ಈ ಜೋಡಿಯಿಂದ ಬಂದ ಅದ್ಭುತ ಬ್ಯಾಟಿಂಗ್ ನೆರವಿನಿಂದ ಎಸ್‌ಆರ್‌ಹೆಚ್ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ.
ಎಸ್‌ಆರ್‌ಎಚ್ ಪರ ಯಾರು ಎಷ್ಟು ರನ್ ಸಿಡಿಸಿದರು?
ಎಸ್‌ಆರ್‌ಎಚ್ ಪರ ಬ್ಯಾಟ್ ಬೀಸಿದ ಅಭಿಷೇಕ್ ಶರ್ಮಾ 26(21), ಟ್ರಾವಿಸ್ ಹೆಡ್ 6(6), ಇಶಾನ್ ಕಿಶನ್ 70(47), ಹೆನ್ರಿಚ್ ಕ್ಲಾಸೆನ್ 47(26), ನಿತೀಶ್ ಕುಮಾರ್ ರೆಡ್ಡಿ 11(7), ಸಲಿಲ್ ಅರೋರಾ ಅಜೇಯ 10(5) ರನ್, ಸ್ಮರಣ್ ರವಿಚಂದ್ರನ್ ಅಜೇಯ 5(2) ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇಡಿಸಿದರು.
ಸಿಎಸ್‌ಕೆ ಪರ ಯಾರು ಎಷ್ಟು ರನ್ ಸಿಡಿಸಿದರು?
ಇದಕ್ಕೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಪರ ಬ್ಯಾಟ್ ಬೀಸಿದ ಡೆವಾಲ್ಡ್ ಬ್ರೆವಿಸ್ ಸ್ಫೋಟಕ ಬ್ಯಾಟಿಂಗ್ ಆಡಿ 27 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್‌ಗಳ ಸಹಿತ 44 ರನ್ ಕಲೆಹಾಕಿದರು. ಉಳಿದಂತೆ ಸಂಜು ಸ್ಯಾಮ್ಸನ್ 27(23), ನಾಯಕ ಋತುರಾಜ್ ಗಾಯಕ್ವಾಡ್ 15(21), ಉರ್ವಿಲ್ ಪಟೇಲ್ 13(8), ಕಾರ್ತಿಕ್ ಶರ್ಮಾ 32(19), ಶಿವಂ ದುಬೆ 26(23), ಪ್ರಶಾಂತ್ ವೀರ್ 11(9) ರನ್‌ಗಳನ್ನು ಕಲೆಹಾಕಿದರು. ಆದರೂ ಕೊನೆಗೆ ಎಸ್‌ಆರ್‌ಎಚ್ ಭರ್ಜರಿ ಗೆಲುವು ಸಾಧಿಸಿತು.
ಈ ಗೆಲುವಿನೊಂದಿಗೆ ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ಅಧಿಕೃತವಾಗಿ ಪ್ಲೇ-ಆಫ್ ಹಂತಕ್ಕೆ ಅರ್ಹತೆ ಪಡೆದಿವೆ. ಮತ್ತೊಂದೆಡೆ ಈ ಸೋಲಿನಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇ-ಆಫ್ ಆಸೆ ಈಗ ಬಹುತೇಕ ಮಂಕಾಗಿದೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಗ್ರಸ್ಥಾನದಲ್ಲಿದ್ದು, ಇನ್ನೊಂದು ಸ್ಥಾನಕ್ಕಾಗಿ ಭಾರಿ ಪೈಪೋಟಿ ಮುಂದುವರೆದಿದೆ.












Click it and Unblock the Notifications