ಅಮೆರಿಕ ಮತ್ತು ಬ್ರಿಟನ್ ನಡುವೆ ಬಿರುಕು, ಡೊನಾಲ್ಡ್ ಟ್ರಂಪ್ ತೀವ್ರ ಅಸಮಾಧಾನ | Operation Roaring Lion
ಅಮೆರಿಕ ಮತ್ತು ಯುನೈಟೆಡ್ ಕಿಂಗ್‌ಡಮ್ ನಡುವೆ ದಿನದಿಂದ ದಿನಕ್ಕೆ ಸಂಬಂಧ ಹಳಸುತ್ತಿದ್ದು, ಈ ಮೂಲಕ ಎರಡೂ ಒಕ್ಕೂಟಗಳು ಈಗ ದೂರವಾಗುತ್ತಿವೆ. ಒಂದು ಕಡೆ ಚೀನಾ ಜೊತೆಗೆ ಯುನೈಟೆಡ್ ಕಿಂಗ್‌ಡಮ್ ವ್ಯಾಪಾರ ಒಪ್ಪಂದ ಮಾಡಿಕೊಂಡ ನಂತರ ರೊಚ್ಚಿಗೆದ್ದಿದ್ದ ಡೊನಾಲ್ಡ್ ಟ್ರಂಪ್ ಅವರು, ಎಚ್ಚರಿಕೆ ಸಂದೇಶವನ್ನ ರವಾನೆ ಮಾಡಿದ್ದರು. ಅಲ್ಲದೆ ಚೀನಾ ಜೊತೆಗೆ ನೀವು ಸೇರಿದಂತೆ ಅವರಿಂದಲೇ ನಿಮಗೆ ದೊಡ್ಡ ಅಪಾಯ ಇದೆ ಎಂದು ಮುನ್ನೆಚ್ಚರಿಕೆ ನೀಡಿದ್ದರು. ಈ ಘಟನೆ ನಡೆದು ಕೆಲವು ದಿನ ಕಳೆದಿದ್ದು, ಇದೀಗ ಇರಾನ್ ವಿರುದ್ಧ ಅಮೆರಿಕ ಸೇನಾ ಕಾರ್ಯಾಚರಣೆ ಶುರು ಮಾಡಿದೆ. ಆದರೆ ಈ ಸಮಯದಲ್ಲಿ ಬ್ರಿಟನ್ ಕೈಕೊಡುವ ಲಕ್ಷಣ ಕಾಣಿಸುತ್ತಿದ್ದು ದಿಢೀರ್ ಅಮೆರಿಕ ಅಧ್ಯಕ್ಷರು ಬೇಸರವನ್ನ ಹೊರ ಹಾಕಿದ್ದಾರೆ.
ಇಸ್ರೇಲ್ ಸೇನೆ ದಿಢೀರ್ ಇರಾನ್ ಮೇಲೆ ದಾಳಿ ಆರಂಭಿಸಿ ಈಗಾಗಲೇ 5 ದಿನಗಳೇ ಕಳೆದು ಹೋಗಿದೆ. ಪರಮಾಣು ಒಪ್ಪಂದಕ್ಕೆ ಒಪ್ಪಿಕೊಳ್ಳದೆ ಕಿರಿಕ್ ಮಾಡಿದ್ದ ಇರಾನ್ ವಿರುದ್ಧ, ದಿಢೀರ್ ದಾಳಿ ಶುರು ಮಾಡಿ ಯುದ್ಧ ಆರಂಭಿಸಿದೆ ಇಸ್ರೇಲ್ ಸೇನೆ. ಮೊದಲ ದಿನದ ಕಾರ್ಯಾಚರಣೆ ಸಮಯದಲ್ಲೇ ಸರ್ವಾಧಿಕಾರಿ ಖಮೇನಿ ಕಥೆ ಮುಗಿಸಿದೆ ಇಸ್ರೇಲ್. ಇದು ಅಮೆರಿಕ ಸೇರಿ ಪಾಶ್ಚಿಮಾತ್ಯ ದೇಶಗಳ ಒಕ್ಕೂಟಕ್ಕೂ ಸಿಕ್ಕಾಪಟ್ಟೆ ಖುಷಿ ತರಿಸಿದೆ. ಆದರೆ ಈಗ ಇರಾನ್ ಸೇಡಿನ ಕ್ರಮ ಕೈಗೊಳ್ಳುತ್ತಿದ್ದು, ತಮ್ಮ ಶತ್ರುಗಳ ಮೇಲೆ ಭಾರಿ ಘೋರವಾಗಿ ದಾಳಿ ಮಾಡುತ್ತಿದೆ. ಇಂತಹ ಸಮಯದಲ್ಲೇ ಯುದ್ಧ ಮುಂದುವರಿಸಲು ನ್ಯಾಟೋ ಸೇರಿ, ಯುರೋಪ್ ಹಾಗೂ ಪಾಶ್ಚಿಮಾತ್ಯ ದೇಶಗಳ ಒಕ್ಕೂಟದ ಬೆಂಬಲ ಅಮೆರಿಕಗೆ ಬೇಕಿದೆ. ಆದರೆ ಈಗ ಅಮೆರಿಕಗೆ ಸಾಲು ಸಾಲು ಸಮಸ್ಯೆ ಎದುರಾಗುತ್ತಿರುವುದು ಟ್ರಂಪ್ ಅವರ ಬೇಸರ ಹೆಚ್ಚು ಮಾಡಿದೆ.

ಬ್ರಿಟನ್ ವಿರುದ್ಧ ಟ್ರಂಪ್ ಆಕ್ರೋಶ
ಅಮೆರಿಕ ಹಾಗೂ ಬ್ರಿಟನ್ ನೂರಾರು ವರ್ಷಗಳಿಂದ ಕೂಡ ಒಟ್ಟಾಗಿಯೇ ವ್ಯಾಪಾರ & ವ್ಯವಹಾರಗಳನ್ನ ಮಾಡುತ್ತಿವೆ. ಅದರಲ್ಲೂ ಸೇನಾ ಕಾರ್ಯಾಚರಣೆ ವಿಚಾರದಲ್ಲಿ ಇಬ್ಬರೂ ಒಟ್ಟಾಗಿ ನಿಲ್ಲುತ್ತಾ ಇದ್ದರು. ಆದರೆ ಈಗ ಇಸ್ರೇಲ್ ಜೊತೆ ಸೇರಿಕೊಂಡು ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ದಾಳಿಯ ಬಗ್ಗೆ ಬೇಸರ ಹೊರ ಹಾಕಿದ್ದಾರೆ ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್. ಈ ಬಗ್ಗೆ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೊಚ್ಚಿಗೆದ್ದು ಆಕ್ರೋಶ ಹೊರ ಹಾಕಿದ್ದಾರೆ. ಅಮೆರಿಕದ ಖಾಸಗಿ ಸುದ್ದಿ ಪತ್ರಿಕೆಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಫ್ರಾನ್ಸ್, ಜರ್ಮನಿ ಸೇರಿ ಅಕ್ಕಪಕ್ಕದ ದೇಶಗಳನ್ನು ಹೊಗಳಿದ್ದಾರೆ ಟ್ರಂಪ್ ಅವರು.
ಆದರೆ ಬ್ರಿಟನ್ ವಿಚಾರದಲ್ಲಿ ಮಾತ್ರ ಅಮೆರಿಕದ ಅಧ್ಯಕ್ಷ ಟ್ರಂಪ್ ಬೇಸರ ಹೊರಹಾಕಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಅಮೆರಿಕ & ಬ್ರಿಟನ್ ಬಾಂಧವ್ಯ ಉತ್ತಮವಾಗಿತ್ತು ಆದ್ರೆ ಯಾವಾಗ ಕಿಯರ್ ಸ್ಟಾರ್ಮರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತೋ ಅಲ್ಲಿಂದ ವ್ಯತಿರಿಕ್ತವಾಗಿದೆ. ಅಮೆರಿಕ & ಬ್ರಿಟನ್ ಸಂಬಂಧಕ್ಕೆ ಧಕ್ಕೆ ಉಂಟಾಗಿದೆ ಎಂದಿರುವ ಡೊನಾಲ್ಡ್ ಟ್ರಂಪ್ ಅವರು, ಇರಾನ್ ಮೇಲಿನ ನಮ್ಮ ಸೇನಾ ಕಾರ್ಯಾಚರಣೆ ವಿಚಾರದಲ್ಲಿ ಸ್ಟಾರ್ಮರ್ ಅಮೆರಿಕ ಸಹಾಯಕ್ಕೆ ಬಂದಿಲ್ಲ ಎಂದು ಬೇಸರ ಹೊರಹಾಕಿ ಟೀಕಿಸಿದ್ದಾರೆ. ಈ ಮೂಲಕ ಅಮೆರಿಕ ಮತ್ತು ಬ್ರಿಟನ್ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ವಿಚಾರ ಈಗ ಮತ್ತೆ ಜಗತ್ತಿಗೇ ಗೊತ್ತಾಗಿದೆ.












Click it and Unblock the Notifications