ಕೋಮುಗಲಭೆಯ ಬೀಡಾಗಿರುವ ಚಿಕ್ಕಮಗಳೂರು

ಆಗಸ್ಟ್ 4ರಂದು ನಡೆದದು ಇಷ್ಟೇ, ಚಿಕ್ಕಮಗಳೂರಿನ ಬಸವನಹಳ್ಳಿ ರಸ್ತೆಯಲ್ಲಿರುವ ಶಂಕರ ಮಠಕ್ಕೆ ಅಂಟಿಕೊಂಡಿರುವ ಒಂದು ನಾಗನ ಬನವಿದೆ. ಬೆಂಗಳೂರಿನಲ್ಲಿರುವಂತೆ ಹಾದಿ ಬೀದಿಗೆ ಒಂದರಂತೆ ಬನಗಳು ಅಲ್ಲಿಲ್ಲ. ಸುತಮುತ್ತಲಿಗೆಲ್ಲ ಅಲ್ಲಿರುವುದು ಒಂದೇ. ಈ ಬನಕೆ ಯಾರೋ ಕಿಡಿಗೇಡಿಗಳು, ಮುರ್ಖರು ಚಪ್ಪಲಿಯನ್ನು ನಾಗನ ಕಲ್ಲಿನ ಬಳಿ ತಂದು ಹಾಕಿದರಂತೆ. ಇದಕೆ ಪ್ರತಿಯಾಗಿ ಯಾರೋ ಪ್ರಜ್ಞಾಹೀನರು ಈ ಮಠದಿಂದ ಸುಮಾರು ಒಂದು ಮೈಲಿ ದೂರದಲ್ಲಿರುವ ಕೆಂಪನಹಳ್ಳಿ ರಸ್ತೆಯಲ್ಲಿರುವ ಮಸೀದಿಗೆ ಹಂದಿಯ ತಲೆ ತಂದು ಹಾಕಿದರು. ಇದಿಷ್ಟು ನಡೆದ ಘಟನೆ. ಅದೃಷ್ಟವಶಾತ್ ನಮ್ಮ ಗೃಹ ಇಲಾಖೆ ಪರಿಸ್ಥಿತಿಯ ಗಾಂಭೀರ್ಯವನ್ನರಿತು, ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರಿಂದ ಹೆಚ್ಚಿನ ಘರ್ಷಣೆ ಸಂಭವಿಸಲಿಲ್ಲ. ಈ ಸುದ್ದಿ ಯಾವ ಸುದ್ದಿವಾಹಿನಿಯ ಬೇಟೆಗೆ ಸಿಗದೇ ಇಲ್ಲಿಗೆ ಮುಗಿಯಿತು.
ಬಿಜೆಪಿಗೆ ಇಂಥ ಸಣ್ಣಪುಟ್ಟ ಘಟನೆಗಳಿಂದ ದೇಶಾದ್ಯಂತ ಸುದ್ದಿಯಾಗುವ ಶಾಪವಿದೆ. ಪುಣ್ಯಕ್ಕೆ ಇದು ಇಲ್ಲಿಗೆ ಮುಗಿಯಿತು ಬಿಜೆಪಿಗೆ ಸ್ವಲ್ಪಮಟ್ಟಿಗೆ ನೆಮ್ಮದಿ ಸಿಕ್ಕಿತು. ಒಂದು ದಶಕದ ಹಿಂದೆ ಚಿಕ್ಕಮಗಳೂರಿನ ವಿಜಯಪುರದಲ್ಲಿರುವ ಆಂಜನೇಯ ದೇವಸ್ಥಾನದ ಕಟ್ಟಡದಲ್ಲಿರುವ ವಿಗ್ರಹಕ್ಕೆ ಚಪ್ಪಲಿಹಾರ ಹಾಕಿದರಿಂದ ನಗರ ಹೊಡೆದಾಟ, ರಕ್ತಪಾತದಲ್ಲಿ ಜರ್ಝರಿತವಾಗಿತ್ತು. ಸಿಆರ್ ಪಿಸಿ ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ ಕೂಡ ಜಾರಿಗೆಬಂತು. ಇದರ ಬೆನ್ನಲ್ಲೇ ದತ್ತಪೀಠ ಗಲಭೆ. ಕೆಲವು ಬುದ್ದಿಜೀವಿಗಳು ಚಿಕ್ಕಮಗಳೂರನ್ನು ಎರಡನೆಯ ಅಯೋಧ್ಯೆ ಎಂದು ರಂಗುಹಚ್ಚಿ ಇನ್ನಷ್ಟು ತುಪ್ಪಸುರಿದರು.
ನಾ ಕಂಡಂತೆ ಅಲ್ಲಿ ಎಲ್ಲಾ ಕೋಮುವಿನವರು ಒಟ್ಟಾಗಿ ಬಾಳುತ್ತಿದ್ದಾರೆ. ಆದರೆ ಕೆಲವೊಮ್ಮೆ ಕಿಡಿಗೀಡಿಗಳ ಕೆಲವು ಕೃತ್ಯ ದಿಂದ ಇಲ್ಲಿ ಶಾಂತಿಭಂಗವಾಗುತ್ತಿದೆ. ನೀವೇ ಯೋಚಿಸಿ, ಚಪ್ಪಲಿ ಹಾರ ಹಾಕಿದ ಕೃತ್ಯವಾಗಲಿ, ಹಂದಿಯ ತಲೆಯನ್ನು ಮಸೀದಿಗೆ ಹಾಕಿದ ಘಟನೆಯಾಗಲಿ ಇಂಥದೇ ಕೋಮುವಿನವರು ಹಾಕಿದಾರೆ ಎಂದು ಸಾಕ್ಷಿ ನೀಡುತ್ತದೆಯೆ? ಯಾರೋ ಕುಡಿದ ಅಮಲಿನಲ್ಲಿ ಅಥವಾ ಯಾವುದೋ ರಾಜಕೀಯ ಪಕ್ಷ ಶಾಂತಿಯನ್ನು ಕದಡಲು ಈ ಕೆಲಸವನ್ನು ಮಾಡಿರಬಹುದಲ್ಲ? ಇಂಥ ಕೆಲಸಗಳನ್ನು ಮಾಡುವವರು ಯಾವ ಧರ್ಮಕ್ಕೂ ಸೇರಿರುವುದಿಲ್ಲ. ಏಕೆಂದರೆ ಇಂತಹ ಕೆಲಸಕ್ಕೆ ಯಾವ ಧರ್ಮವು ಪ್ರೇರಣೆ ನೀಡುವುದಿಲ್ಲ. ಎಲ್ಲ ತಪ್ಪುತಿಳಿವಳಿಕೆಯಿಂದ ಇಂಥ ಘಟನೆಗಳು ಮರುಕಳಿಸುತ್ತಿವೆ.
ಗಲಾಟೆ ಮಾಡಲು ಎಷ್ಟು ಹೊತ್ತು ಬೇಕು? ಆದರೆ, ಪರಿಸ್ಥಿತಿ ಶಾಂತವಾದೊಡನೆ ಜನಜೀವನ ಸಹಜಸ್ಥಿತಿಗೆ ಬರಲು ವಾರಗಟ್ಟಲೆ ಬೇಕು. ಇನ್ನೇನು ಎಲ್ಲ ಶಾಂತವಾಗಿದೆ ಎನ್ನುವಷ್ಟರಲ್ಲಿ ಇನ್ನೊಂದು ಸಂಭವಿಸಿರುತ್ತದೆ. ಮತ್ತೊಂದು ಕೋಮುಗಲಭೆ. ಇಂಥ ಘಟನೆಗಳಿಂದ ಚಿಕ್ಕಮಗಳೂರು ಜನತೆಗೆ ಬಿಡುಗಡೆಯಾದರೂ ಎಂದು?












Click it and Unblock the Notifications