• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೇವಂತಿ ಯಾ ಮಿಸ್ ಸೇವಂತಿ

By Staff
|

ಜುಲೈ 7, 2009ರಂದು ಬೆಳಗಾವಿ ಯುವರಂಗ ವೇದಿಕೆಯ ಆಶ್ರಯದಲ್ಲಿ ಧಾರವಾಡದ ಆಟ-ಪಾಠ ಸಾಂಸ್ಕೃತಿಕ ವೇದಿಕೆಯಿಂದ ಸಾಹಿತಿ ಜಯಂತ ಕಾಯ್ಕಿಣಿ ಅವರ "ಸೇವಂತಿ ಪ್ರಸಂಗ" ಕಥಾರೂಪ ಆಧಾರಿತ ನಾಟಕ ಪ್ರದರ್ಶನ ನೀಡಿದರು. ನಾಟಕ ಹೇಗಿತ್ತು?

* ಡಾ.ಕೆ.ಎನ್.ದೊಡ್ಡಮನಿ, ಬೆಳಗಾವಿ

ಬೆಳಗಾವಿಯಲ್ಲಿನ ಸಾಹಿತ್ಯ- ಸಾಂಸ್ಕೃತಿಕ ಬೌದ್ಧಿಕ ದಾರಿದ್ರ್ಯತನವನ್ನು ನಿವಾರಿಸುವಲ್ಲಿ ಹವ್ಯಾಸಿ ರಂಗಭೂಮಿಕೆಗಳು ತಕ್ಕಮಟ್ಟಿಗೆ ಕೆಲಸ ಮಾಡುತ್ತಿವೆ. ಬೆಳಗಾವಿಯ ತಂಡಗಳಿಂದಲೇ ವೈಚಾರಿಕ ನಾಟಕಗಳು ಪ್ರದರ್ಶನಗೊಳ್ಳುವುದು ತೀರ ಕಡಿಮೆಯಾದರೂ ನಾಡಿನ ನೀನಾಸಂ ಸೇರಿದಂತೆ ಪ್ರಮುಖ ಹವ್ಯಾಸಿ ರಂಗಭೂಮಿಯ ತಂಡಗಳಿಂದ ಪ್ರಬುದ್ಧ ನಾಟಕಗಳ ಪ್ರದರ್ಶನಗಳನ್ನು ಮಾತ್ರ ನೀಡುತ್ತಿರುವುದು ಸಮಾಧಾನಕರ ಸಂಗತಿ. ನಾಡಿನ ಇತರೆಡೆ ಹಾಸುಹೊಕ್ಕಾಗಿರುವಂತೆ ಬೆಳಗಾವಿಯಲ್ಲೂ ಇನ್ನೊಬ್ಬರ ಮನೆಯ ಗೊಡೆಯಲ್ಲೂ ಬೇರು ಇಳಿಬಿಟ್ಟಿರುವ ಆಲದ ಮರಗಳ ಕೆಳಗೆ ಹೊಸ ಸಸಿಗಳು ಹೊಸಗಾಳಿ ಬೆಳಕಿನೊಂದಿಗೆ ಅರಳುವುದಕ್ಕೆ ಒಂದಿಷ್ಟು ತೊಂದರೆ ತಾಪತ್ರಯಗಳು ಶಾಶ್ವತ ಎನ್ನುವಂತೆ ಉಳಿದುಕೊಂಡಿವೆ.

ಬೆಳಗಾವಿಯ ಇಂತಹ ಅನೇಕತೆಯ ಮಧ್ಯ ರಂಗಭೂಮಿಯ ಅಷ್ಟುಇಷ್ಟು ಅನುಭವಸ್ಥ ಹೊಸ ಹುಡುಗರಿಂದ ಕಣ್ಣು ಬಿಡುತ್ತಿರುವ 'ಯುವ ರಂಗಭೂಮಿಯು ಬದಲಾದ ವ್ಯವಸ್ಥೆಯನ್ನು ಮುಕ್ತವಾಗಿ ಗಮನಿಸುತ್ತ ಅದಕ್ಕೊಂದು ರಚನಾತ್ಮಕ ಸಾಂಸ್ಕೃತಿಕ ವೇದಿಕೆ ಕಲ್ಪಿಸುವ ಹಿನ್ನಲೆಯಲ್ಲಿ ಕಾರ್ಯನಿರತವಾಗಿರುವುದು ಪ್ರಶಂಸನಿಯ. ಈ ಯುವ ರಂಗ ವೇದಿಕೆಯ ನೇತೃತ್ವದಲ್ಲಿ ಜುಲೈ 7, 2009ರಂದು ಜಯಂತ ಕಾಯ್ಕಿಣಿ ಅವರ ಸೇವಂತಿ ಪ್ರಸಂಗ ಕಥಾರೂಪ ಆಧಾರಿತ ನಾಟಕವನ್ನು ಧಾರವಾಡದ ಆಟ ಪಾಠ ಸಾಂಸ್ಕೃತಿಕ ವೇದಿಕೆಯ ಮೂಲಕ ಪ್ರದರ್ಶನ ನೀಡಲಾಯಿತು. ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರವೂ ಇದ್ದಂತೆ ಕುರುಹುಗಳು ಕಾಣಿಸುತ್ತಿದ್ದವು.

ಹಸಿವು- ಬಡತನವನ್ನೇ ಬದುಕಿನ ಆಸ್ತಿಯಾನ್ನಾಗಿರಿಸಿಕೊಂಡಿರುವ ಸಮುದಾಯದಲ್ಲಿನ ಕಾಡಿನ ಹೂವೊಂದು ಸುಂದರ ಬದುಕಿನ ಕನಸು ಕಂಡಾಗ ಏನಾಗಬಹುದು? ಈ ಪ್ರಶ್ನೆಗೆ ಒಂದು ಸರಳ ಮತ್ತು ಮೇಲ್ಪದರಿನ ಉತ್ತರವೇ ಜಯಂತ ಕಾಯ್ಕಿಣಿ ಅವರ ಸೇವಂತಿ ಪ್ರಸಂಗ. ನಗರದ ತಿಪ್ಪೆಕ್ರಾಸಿನಲ್ಲಿ ಬಲೂನ ಮಾರುವ ಅಂದದ ಮತ್ತು ಚುರುಕಾದ ಹುಡುಗಿ ಸೇವಂತಿ ಕನಸ್ಸು ಕಾಣುವಂತೆ ಮಾಡಿ, ಕನಸು ನನಸಾಗುವಲ್ಲಿ ನಡೆಯುವ ನಾಗರಿಕ ಸಮಾಜದ ಪ್ರಯತ್ನಗಳು ಮತ್ತು ಅದರ ಹಿಂದಿನ ವ್ಯಾಪಾರೀಕರಣ ಮನೋವೃತ್ತಿ ನಾಟಕದ ಉದ್ದಕ್ಕೂ ಅನಾವರಣಗೊಳ್ಳುತ್ತ ಹೋಗುತ್ತವೆ. ಸೇವಂತಿ ಬಡವಳಾದರೂ ಸ್ವಾಭಿಮಾನಕ್ಕೇನೂ ಕೊರತೆಯಿಲ್ಲ. ತಂದೆ ಕುಡುಕ. ಮಗಳ ಬಗ್ಗೆ ಆತನ ಕಾಳಜಿಯಂತೂ ದೂರದ ಮಾತು; ವ್ಯವಸ್ಥೆಯ ದೋಷಗಳನ್ನು ಮುಂದುಮಾಡಿ ಮಗಳನ್ನು ಮಾರುವುದಕ್ಕೂ ಹೇಸದ ಪುಣ್ಯಾತ್ಮ. ಭಾಷಾ ಅಧ್ಯಯನ ಮಾಡುವ ಭಾರ್ಗವಶಾಸ್ತ್ರಿ ಹಾಗೂ ಸಾಹಿತ್ಯಿಕ ಆಸಕ್ತಿ ಹೊಂದಿದ ನಿವೃತ್ತ ಕ್ಯಾಪ್ಟನ್ ನಾಗರಿಕ ಜಗತ್ತನ್ನು ಜೀರ್ಣಿಸಿಕೊಂಡವರು ಸೇವಂತಿ ಬದುಕಿನಲ್ಲಿ ವಿಶೇಷ ಪಾತ್ರನಿರ್ವಹಿಸುತ್ತಾರೆ.

ತಿಪ್ಪೆಕ್ರಾಸ್ನಲ್ಲಿ ಪುಗ್ಗಾ ಮಾರುವ ಸೇವಂತಿ ಇವರಿಬ್ಬರ ಕಣ್ಣಿಗೆ ಬಿದ್ದಾಗ ಸೇವಂತಿ ಬರೀ ಸೇವಂತಿಯಾಗಿ ಕಾಣಿಸುವುದಿಲ್ಲ. ಸೇವಂತಿ ತನ್ನ ಭವಣೆಯ ಬದುಕನ್ನು ಕಳ್ಳಿಗೆ ಗಂಟ್ಹಾಕಿ ನಲಿಯುತ ಇರುವ ರೀತಿ, ಮಾತನಾಡುವ ವಿಶಿಷ್ಟ ಶೈಲಿ, ಹುಮ್ಮಸ್ಸು, ಕಣ್ಣಲಿ ಅರಳುವ ಬದುಕಿನ ಕಾಂತಿ, ಸೃಜನಶೀಲ ಮನಸ್ಸು ಇದೆಲ್ಲದ್ದಕ್ಕೂ ಪೂರಕವಾದ ಆಕೆಯ ಸೌಂದರ್ಯ ಶಾಸ್ತ್ರಿ ಮತ್ತು ಕ್ಯಾಪ್ಟನ್ ಅವರನ್ನು ಸೆಳೆಯುತ್ತವೆ. ಸೇವಂತಿಯಲ್ಲಿ ಈ ವಿಶೇಷತೆ ಕಂಡಾಗ ಇಬ್ಬರೂ ಮಿಸ್ ಸೇವಂತಿಯನ್ನಾಗಿಸಲು ಸ್ವಂತ ತಮ್ಮ ಮನೆಗೆ ಆಕೆಯನ್ನು ಕರೆದೊಯ್ಯುತ್ತಾರೆ. ಅವರ ದೃಷ್ಟಿಯಲ್ಲಿ ಅನಾಗರಿಕ ಮತ್ತು ಅನಕ್ಷರಸ್ಥಳಾದ ಸೇವಂತಿಯನ್ನು ಕಷ್ಟಪಟ್ಟು ತಿದ್ದಿತೀಡಿ ನಾಗರಿಕ ಜಗತ್ತಿಗೆ ಸನ್ನದ್ದುಗೊಳಿಸಿ ಮಿಸ್ ಸೇವಂತಿಯನ್ನಾಗಿ ಮಾಡಿಯೇ ತೀರುತ್ತಾರೆ. ಸೇವಂತಿ ಮೂಲಕ ಅವರು ಕಟ್ಟಿದ ಕನಸು ನನಸಾಗುತ್ತದೆ. ಮಿಸ್ ಸೇವಂತಿಯನ್ನಾಗಿಸುವುದು ಸೇವಂತಿಕ್ಕಿಂತ ಭಾರ್ಗವಶಾಸ್ತ್ರಿ ಹಾಗೂ ಕ್ಯಾಪ್ಟನ್ ರಿಗೆ ಹೆಚ್ಚಿನ ಆಸಕ್ತಿ ಇರುವುದರಿಂದ ಮಿಸ್ ಸೇವಂತಿಯನ್ನು ಇವರು ಅದರಲ್ಲೂ ವಿಶೇಷವಾಗಿ ಪ್ರೊಫೆಸರಾದ ಶಾಸ್ತ್ರಿಯವರು ತಮ್ಮ ನಾಗರಿಕ ಬುದ್ಧಿಯನ್ನು ಪ್ರದರ್ಶಿಸಿ ಬಂಡವಾಳವನ್ನಾಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಆಗ ಮಿಸ್ ಸೇವಂತಿ ಪಾಲಿಗೆ ಮಾನವೀಯತೆ ಸತ್ತು ಹೋಗುತ್ತದೆ. ನಾಗರಿಕ ಜಗತ್ತಿನ ಕ್ರೂರತೆಗಳು ಆಕೆಯನ್ನು ಆಕ್ರಮಿಸುತ್ತವೆ. ಇದರಿಂದ ತೀರ ವ್ಯಥೆಪಡುವ ಮಿಸ್ ಸೇವಂತಿ ನೀಚ ನಾಗರಿಕ ಜಗತ್ತಿನಿಂದ ಹೊರಬರಲು ಪ್ರಯತ್ನಿಸಿ ಮತ್ತೇ ಬಲೂನ ಮಾರುವ ತಿಪ್ಪೆಕ್ರಾಸಿನ ಸೇವಂತಿಯಾಗಬೇಕೆಂದು ಬಯಸುತ್ತಾಳೆ. ಆದರೆ, ಆಕೆ ತಿಪ್ಪೆಕ್ರಾಸಿನ ಎಲ್ಲ ಸಹಜ ಗುಣಗಳನ್ನು ಕಳೆದುಕೊಂಡಿದ್ದರಿಂದ ಮಿಸ್ ಸೇವಂತಿ ಅಳಿಸಿ ಸೇವಂತಿಯಾಗುವ ಸ್ಥಿತಿಯಲ್ಲಿರಲಿಲ್ಲ. ಇದರಿಂದ ಸೇವಂತಿ ಮಿಸ್ ಸೇವಂತಿಯಾದರೂ ಜೀವನದಲ್ಲಿ ಕಂಡ ಕನಸಿನ ಸುಖಮಾತ್ರ ಅನುಭವಿಸುವುದಿಲ್ಲ. ಹೀಗಾಗಿ ಸೇವಂತಿಗೆ ಮಿಸ್ ಸೇವಂತಿ ಕನಸು ಮಾರಕವಾಗಿ ಪರಿಣಮಿಸುತ್ತದೆ. ಇದು ಸೇವಂತಿ ಪ್ರಸಂಗ ನಾಟಕದ ತಿರುಳು.

ಈ ಪ್ರಸಂಗವನ್ನು ಧಾರವಾಡದ ಆಟ-ಪಾಠ ತಂಡದ ಕಲಾವಿದರು ತಕ್ಕಮಟ್ಟಿಗೆ ಚೆನ್ನಾಗಿಯೇ ಪ್ರದರ್ಶನ ನೀಡಿದ್ದಾರೆ. ಪ್ರತಿಯೊಂದೂ ಪಾತ್ರವೂ ತನ್ಮಯತೆಯಿಂದ ಅಭಿನಯಿಸಿ ನ್ಯಾಯ ಒದಗಿಸಿವೆ. ಬಲೂನ್ ಮಾರುವ ಸೇವಂತಿ ಪಾತ್ರವನ್ನು ಹುಬ್ಬಳ್ಳಿಯ ಹುಡುಗಿ ಪ್ರೇಮಾಳ ಅನುಪಮ ಅಭಿನಯ ಪ್ರೇಕ್ಷಕರ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಪ್ರೇಮಾಳ ಮೈಸಡಿಲಿಕೆಯ ಸಹಜ ಅಭಿನಯ, ಗಟ್ಟಿಧ್ವನಿಯ ಲಯಬದ್ಧತೆಯ ಸ್ಪಷ್ಟವಾದ ಮಾತುಗಳು ಕಲೆಗಾರಿಕೆಗೆ ಹೇಳಿಮಾಡಿಸಿದ ಸ್ವಭಾವಗಳು. ಸಹಜವೆನ್ನುವಂತೆ ಲಭಿಸಿರುವ ಈ ಕಲೆಯನ್ನು ಪ್ರೇಮಾ ಚೆನ್ನಾಗಿ ದುಡಿಸಿಕೊಂಡರೆ ಬಹಳ ಬೇಗ ಪ್ರಸಿದ್ಧ ಕಲಾವಿದೆಯಾಗುವುದರಲ್ಲಿ ಸಂಶಯವಿಲ್ಲ.

ಈ ನಾಟಕದ ವಿಶೇಷತೆಯೆಂದರೆ ಯಾರೊಬ್ಬ ನಿರ್ದಿಷ್ಟ ನಿರ್ದೇಶಕರಿಲ್ಲ. ಎಲ್ಲ ಪಾತ್ರಧಾರಿಗಳು ತಮ್ಮಷ್ಟಕ್ಕೆ ತಾವೇ ನಿರ್ದೇಶಕರು. ಅವರವರ ಪಾತ್ರಗಳಿಗೆ ಅವರೇ ಜವಾಬ್ದಾರರು. ಅದು ಚೆನ್ನಾಗಿ ನಿರ್ವಹಣೆಯಾಗಿದೆ. ಅರ್ಥಪೂರ್ಣವಾದ ಒಳ್ಳೆಯ ಹಿನ್ನೆಲೆಯ ಗಾಯನ ನಾಟಕಕ್ಕೆ ಮೇರಗು ನೀಡಿದೆ. ಆದರೆ, ಹಿನ್ನೆಲೆ ಗಾಯಕರನ್ನು ವೇದಿಕೆಯ ಮೇಲೆ ಒಂದು ಮೂಲೆಯಲ್ಲಿ ಪ್ರದರ್ಶಿಸುವುದು ಅಷ್ಟೊಂದು ಸೂಕ್ತ ಅನ್ನಿಸುವುದಿಲ್ಲ. ಇಂಥ ಸಣ್ಣ ಪುಟ್ಟ ತೊಂದರೆ ಮತ್ತು ಕೆಲ ಆಭಾಸಗಳನ್ನು ಹೊರತುಪಡೆಸಿದರೆ ನಾಟಕ ಉತ್ತಮವಾಗಿಯೇಮೂಡಿಬಂದಿದೆ.

ಆದರೆ, ಕಥಾ ವಸ್ತುವಿಗೆ ಸಂಬಂಧಿಸಿದಂತೆ ಹೇಳುವುದಾದರೆ ಸೇವಂತಿಯ ಪ್ರತಿಭೆಯನ್ನು ಹೊರಗೆಳೆಯುವಲ್ಲಿ ಭಾರ್ಗವಶಾಸ್ತ್ರಿ ಹಾಗೂ ಕ್ಯಾಪ್ಟನ್ ನಿರ್ವಹಿಸಿದ ಸನ್ನಿವೇಶ ಅತೀ ಹುಡುಗಾಟಿಕೆಯಿಂದ ಕೂಡಿರುವುದರಿಂದ ನಾಟಕದ ಕಥಾವಸ್ತುವಿನ ಗಾಂಭೀರ್ಯತೆಗೆ ಭಂಗವುಂಟಾದಂತಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more