ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿರಾಟ್ ಹಿಂದೂ ಸಮಾಜೋತ್ಸವದ ಸತ್ಪರಿಣಾಮ

By * ಮತ್ತೂರು ರಘು
|
Google Oneindia Kannada News

ಎರಡು ವರ್ಷಗಳ ಹಿಂದೆ, ಬಹುತೇಕ ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಸಂಘಪರಿವಾರದ ಕಡೆಯಿಂದ ನಡೆದ ವಿರಾಟ್ ಹಿಂದೂ ಸಮಾಜೋತ್ಸವದ ವಿರುದ್ಧ ಅತ್ಯಂತ ಸಹಜವಾಗಿಯೇ ಕೆಲವು ಜನ ಪ್ರತಿಭಟನೆ ಮಾಡಿದ್ದರು. ಆ ಮೂಲಕ ತಮ್ಮ ಪ್ರತಿಭಟನಾ ಹಕ್ಕನ್ನು ಚಲಾಯಿಸಿದ್ದರು. ಆದರೆ ಈ ಕಾರ್ಯಕ್ರಮಗಳ ಕಾರಣದಿಂದ ಸಮಾಜದಲ್ಲುಂಟಾದ ಪರಿಣಾಮಗಳ ಕುರಿತು, ಯಾವ ಪ್ರತಿಭಟನಾಕಾರರಾಗಲೀ, ವಿಚಾರವಾದಿಗಳಾಗಲೀ ಚಿಂತನೆ ನಡೆಸುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ.

ನಡೆದ ಎಲ್ಲ ಹಿಂದೂ ಸಮಾಜೋತ್ಸವಗಳಲ್ಲಿ ಅತ್ಯಂತ ಮಹತ್ವದ ವಿಷಯವಾಗಿ ಅಸ್ಪೃಶ್ಯತೆಯನ್ನು ವಿರೋಧಿಸಲಾಯಿತು. ಸಮಾಜದಲ್ಲಿನ ನೂರಾರು ಪೀಠಾಧಿಪತಿಗಳನ್ನು ಒಂದೇ ವೇದಿಕೆಯಡಿ ಕರೆತಂದು, ಸಮಾಜದ ಎಲ್ಲ ಸಮುದಾಯಗಳಿಗೆ ಅಸ್ಪೃಶ್ಯತೆಯನ್ನು ವಿರೋಧಿಸುವಂತೆ ಕರೆ ನೀಡಿಸಲಾಯಿತು. ಈ ಕಾರಣದಿಂದ ಹಿಂದೂ ಸಮಾಜದಲ್ಲಿ ನಂಬಿಕೆಯಿರುವ ಲಕ್ಷಾಂತರ ಮಂದಿಗೆ ಅಸ್ಪೃಶ್ಯತೆಯನ್ನು ದೂರಗೊಳಿಸುವ ಪ್ರೇರಣೆಯಾಗಿದೆ. ಈ ಪರಿಣಾಮಗಳು ಅಕ್ಷರಶಃ ಸಮಾಜದಲ್ಲಿ ಆಚರಣೆಗೆ ಬರತೊಡಗಿವೆ. ಅವುಗಳ ಕುರಿತು ಕಿಂಚಿತ್ ಅರಿತರೆ ನಮಗೂ ಪ್ರೇರಣೆಯಾಗಬಹುದು.

ಮೇಲ್ವರ್ಗವೆಂಬ ವರ್ಗಕ್ಕೆ ಸೇರಿದ ಯುವಕನೊಬ್ಬ ಬೆಂಗಳೂರಿನಲ್ಲಿ ಮನೆಯೊಂದನ್ನು ಬಾಡಿಗೆಗೆ ಹುಡುಕುತ್ತಿದ್ದ. ಆದರೆ ಸಿಗುತ್ತಿದ್ದ ಎಲ್ಲ ಮನೆಯ ಸುತ್ತ-ಮುತ್ತ ತನ್ನ ಸಮುದಾಯದವರಿಲ್ಲ ಎಂಬ ಕಾರಣಕ್ಕೆ ಆ ಎಲ್ಲ ಮನೆಗಳನ್ನೂ ತಿರಸ್ಕರಿಸಿದ್ದ. ಆದರೆ, ವಿರಾಟ್ ಹಿಂದೂ ಸಮಾಜೋತ್ಸವದ ನಂತರ, ಅದೇ ಯುವಕ ಸ್ವಯಂ ಪ್ರೇರಿತನಾಗಿ ತಿರಸ್ಕರಿಸಿದ ಮನೆಗಳಲ್ಲೇ ಒಂದನ್ನು ಆಯ್ಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ನಗರದ ಪ್ರಮುಖ ಬಡಾವಣೆಯೊಂದರಲ್ಲಿ ವೈದಿಕ ಪರಂಪರೆಯೊಂದರಲ್ಲಿರುವ ಕುಟುಂಬವೊಂದು ತಿಂಗಳಲ್ಲಿ ಒಮ್ಮೆ,ಯಾರು ತಮ್ಮನ್ನು ದಲಿತರು ಎಂದು ಕರೆದುಕೊಳ್ಳುತ್ತಾರೋ ಅವರಲ್ಲೊಬ್ಬರನ್ನು ಮನೆಗೆ ಕರೆದು ಭೋಜನ ನೀಡುವ ಸಂಪ್ರದಾಯವನ್ನು ಪ್ರಾರಂಭಿಸುವ ಮಟ್ಟಿಗೆ ವಿರಾಟ್ ಹಿಂದೂ ಸಮಾಜೋತ್ಸವ ಅವರಿಗೆ ಪರಿಣಾಮ ನೀಡಿದೆ!

ಒಂದೂರಿನಲ್ಲಿ, ಒಂದು ಬೀದಿಯನ್ನು ಶೂದ್ರರ ಬೀದಿ, ಹೊಲೆಯರ ಬೀದಿ ಎಂದು ಕರೆಯುತ್ತಿದ್ದ ಶಾಲಾ ಮಕ್ಕಳು, ವಿರಾಟ್ ಹಿಂದೂ ಸಮಾಜೋತ್ಸವ ನಂತರ ಅವೆಲ್ಲವನ್ನು ರೈತರ ಬೀದಿ ಎನ್ನಲು ಪ್ರಾರಂಭಿಸಿದ್ದಾರೆ. ಅಕಸ್ಮಾತ್ ತಮ್ಮ ತಂದೆ-ತಾಯಿ ಬಾಯಿತಪ್ಪಿ ಹೇಳಿದರೂ ಮಕ್ಕಳೇ ಅವರಿಗೆ ಬುದ್ಧಿ ಹೇಳುತ್ತಾರೆ. ತಾನು ಕೆಳವರ್ಗವೆಂಬ ವರ್ಗಕ್ಕೆ ಸೇರಿದವ ಎಂಬ ಒಂದೇ ಕಾರಣಕ್ಕೆ ಬೇರೆ ಮೇಲ್ವರ್ಗದವರ ಜತೆ ಬೆರೆಯದಿದ್ದ ಒಬ್ಬ ಪ್ರೌಢ ಶಾಲಾ ವಿದ್ಯಾರ್ಥಿ, ವಿರಾಟ್ ಹಿಂದೂ ಸಮಾಜೋತ್ಸವದ ನಂತರ ತನ್ನ ಕೀಳರಿಮೆಯನ್ನು ಬಿಟ್ಟು, ಧೈರ್ಯವಾಗಿ ಎಲ್ಲರ ಜತೆ ಮುಕ್ತ ಮನಸ್ಸಿನಿಂದ ಬೆರೆತು ಆಟವಾಡುತ್ತಿದ್ದಾನೆ.

ಮೊನ್ನೆ ಒಬ್ಬ ಯುವಕ ತನ್ನ ಹುಟ್ಟುಹಬ್ಬವನ್ನು ಯಾವ ರೀತಿಯಲ್ಲಿ ಆಚರಿಸಿದ ಗೊತ್ತೇ? ತನ್ನ ಸುತ್ತಮುತ್ತಲ ಇರುವ 4 ಜನ ಚಮ್ಮಾರರನ್ನು ಪರಿಚಯ ಮಾಡಿಕೊಂಡು ಅವರನ್ನು ಒಂದು ಒಳ್ಳೆಯ ಹೋಟೆಲ್‌ಗೆ ಕರೆದುಕೊಂಡು ಹೋಗಿ ಹೊಟ್ಟೆ ತುಂಬ ಒಳ್ಳೆಯ ಊಟವನ್ನು ನೀಡಿ, ಆಶೀರ್ವಾದವನ್ನು ಬೇಡಿದ್ದಾನೆ. ಇದಕ್ಕೆಲ್ಲ ಪ್ರೇರಣೆ ಏನು ಅಂದು ಕೇಳಿದ್ದಕ್ಕೆ ಅವನ ಉತ್ತರ ವಿರಾಟ್ ಹಿಂದೂ ಸಮಾಜೋತ್ಸವ! ಈ ಎಲ್ಲ ಸತ್ಪರಿಣಾಮಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುವ ತಾಕತ್ತು, ಪ್ರಾಮಾಣಿಕತೆ, ಸಮಾಜದ ಬಗೆಗೆ ನಿಷ್ಠೆ ತಥಾಕಥಿತ ಬುದ್ಧಿಜೀವಿಗಳಿಗೆ, ಪ್ರಗತಿಪರರಿಗೆ, ವಿಚಾರವಾದಿಗಳಿಗೆ, ಜಾತ್ಯತೀತವಾದಿಗಳಿಗಿದೆಯೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X