• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಳ್ಳಿಚುಕ್ಕಿ ಬೆಳ್ಳಿಚುಕ್ಕಿ ಬಿಂಕಾತೋರಿ ಬೆಳಗೋ ಮುಂಜಾನೆ

By Staff
|
ಫಳಫಳನೆ ಹೊಳೆಯುವ ಶುಕ್ರನಿಗೂ ಭೂಮಿಗೂ ಭಾರೀ ನಂಟು. ಆಕಾರದಲ್ಲಿ ಸಾಮ್ಯತೆ ಮಾತ್ರವಲ್ಲ ಭಾವನಾತ್ಮಕವಾಗಿಯೂ ಭೂಮಿಯೊಡನೆ ಶುಕ್ರನ ನಂಟಿದೆ. ಹಿಂದಿನ ಕಾಲದಲ್ಲಿ ರೈತಾಪಿ ಜನ ಬೆಳಗು ಕಾಣುತ್ತಿದ್ದುದೇ ಶುಕ್ರನ ದರ್ಶನದಿಂದ. ಅಷ್ಟಕ್ಕೂ, ಸ್ತ್ರೀಯರು ಶುಕ್ರನಿಂದಲೇ ಬಂದವರೆಂದು ಪ್ರತೀತಿಯಿದೆಯಲ್ಲವೆ? ಇಂತಿಪ್ಪ ಶುಕ್ರನ ವಾತಾವರಣ ಹೇಗಿದೆ? ಮಾನವ ಅಲ್ಲಿ ಅಡಿಯಿಡಲು ಸಾಧ್ಯವೆ? ಲೇಖನ ಓದಿರಿ.

* ವಸಂತ ಕುಲಕರ್ಣಿ, ಸಿಂಗಪುರ

ಓದುಗ ಮಿತ್ರರೊಬ್ಬರು ಈ ಹಿಂದೆ ಪ್ರಕಟವಾದ ನನ್ನ ಖಗೋಲದ ಕುರಿತಾದ ಲೇಖನವನ್ನು ನೋಡಿ, ಬೆಳ್ಳಿ ಚುಕ್ಕಿ ಮೇಲೆ ಒಂದು ಲೇಖನ ಬರೆಯಿರಿ ಎಂದು ಪ್ರೇರೇಪಿಸಿದರು. ಅದರ ಕುರಿತಾಗಿ ಯೋಚಿಸಿ, ಒಂದು ದಿನ ಸಾಯಂಕಾಲ ಆಕಾಶದತ್ತ ಮುಖ ಮಾಡಿದಾಗ ಮನೋಹರವಾದ ಬೆಳ್ಳಿಯಂತೆ ಥಳ ಥಳ ಹೊಳೆಯುತ್ತಿದ್ದ ಶುಕ್ರ! ಆಗ ಮನದಲ್ಲಿ ಮೂಡಿ ಬಂದದ್ದು ಕೆಳಗಿನ ಕವನ.

ಬೆಳ್ಳಿ ಚುಕ್ಕಿ ಎಂಬುದು ಕನ್ನಡಿಗರು ಶುಕ್ರ ಗ್ರಹಕ್ಕೆ ಪ್ರೀತಿಯಿಂದ ನೀಡಿದ ಹೆಸರು. ಚಿಕ್ಕವನಿದ್ದಾಗ ಆಕಾಶದಲ್ಲಿ ಹೊಳೆಯುತ್ತಿದ್ದ ಬೆಳ್ಳಿ ಚುಕ್ಕಿ ನೋಡಿ ಆನಂದಿಸುತ್ತಿದ್ದೆ. ಉಳಿದ ಚುಕ್ಕಿಗಳಿಗಿಂತ ಅದೆಷ್ಟೋ ಪಾಲು ಹೆಚ್ಚಿನ ಹೊಳಪಿನಿಂದ ಮಿನುಗುತ್ತಿದ್ದ ಬೆಳ್ಳಿಚುಕ್ಕಿಯನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದೆ. ಆಗೆಲ್ಲ ಅದೊಂದು ಗ್ರಹ, ನಕ್ಷತ್ರವಲ್ಲ ಎಂದು ತಿಳಿದಿರಲಿಲ್ಲ. ನಾನು ಚಿಕ್ಕವನಿದ್ದಾಗ ನಮ್ಮ ಅಜ್ಜಿಯು ಬೆಳ್ಳಿಚುಕ್ಕಿಯ ಮಹತ್ವವನ್ನು ವರ್ಣಿಸುತ್ತಿದ್ದ ರೀತಿಯೇ ಬೇರೆ. ಸೂರ್ಯದೇವ ತನ್ನ ರಥವನೇರಿ ಮೇಲೆ ಬಂದು ಉಳಿದವರಿಗೆ ದಾರಿ ತೋರಿಸುವುದಕ್ಕಿಂತ ಮೊದಲೇ ಬೆಳ್ಳಂಬೆಳಗ್ಗೆ ಎದ್ದು ಹೊಲಗಳಿಗೆ ಹೊರಡುವ ಬಯಲು ಸೀಮೆಯ ರೈತರಿಗೆಲ್ಲ ಈ ಬೆಳ್ಳಿ ಚುಕ್ಕಿಯೇ ಮಾರ್ಗದರ್ಶಿ ಮತ್ತು ಸಮಯಪಾಲಕ. ಅಂದಿನ ನಮ್ಮ ಮುಗ್ಧ ಮನಸ್ಸಿನಲ್ಲಿ ಬೆಳ್ಳಿಚುಕ್ಕಿಯನ್ನು ನೋಡದೇ ರೈತಾಪಿ ಜನರೆಲ್ಲ ತಮ್ಮ ಕಾರ್ಯ ಪ್ರಾರಂಭಿಸುವುದೇ ಇಲ್ಲ ಎಂಬ ವಿಷಯ ಮನೆಮಾಡಿತ್ತು. ಒಳ್ಳೇ ಕೆಲಸ ಮಾಡುವ ಮೊದಲು ಬೆಳ್ಳಿಚುಕ್ಕಿಯನ್ನು ನೋಡುವದು ಮುಖ್ಯ ಎಂಬ ನಂಬಿಕೆ ಬೇರೆ.

ಪೌರಾಣಿಕವಾಗಿ ಶುಕ್ರ, ಭೃಗು ಮತ್ತು ಉಷಾನಾರ ಮಗ. ಚಿಕ್ಕಂದಿನಿಂದ ಬೃಹಸ್ಪತಿಯೊಡನೆ ಈತನ ಸ್ಪರ್ಧೆ. ಮುಂದೆ ಬೃಹಸ್ಪತಿ ದೇವತೆಗಳ ಗುರುವಾದಾಗ ಈತ ತದ್ವಿರುದ್ಧವಾಗಿ ದೈತ್ಯರ ಗುರುವಾಗಿ ವಿಜೃಂಭಿಸಿದ. ದೈತ್ಯರನ್ನು ತನ್ನ ಅಪಾರ ಜ್ಞಾನದಿಂದ ಮತ್ತು ಮೃತ ಸಂಜೀವಿನಿ ವಿದ್ಯೆಯ ಬಲದಿಂದ ದೇವತೆಗಳ ವಿರುದ್ಧದ ಸಮರದಲ್ಲಿ ಗೆಲ್ಲಿಸಿದ. ಈ ವಿದ್ವಾಂಸ ರಸಾಯನ ಶಾಸ್ತ್ರ, ಲೋಹ ಶಾಸ್ತ್ರ ಮತ್ತು ವೈದ್ಯಕೀಯದ ಮೇಲೆ ಅನೇಕ ಘನ ಗ್ರಂಥಗಳನ್ನು ರಚಿಸಿದ್ದನಂತೆ. ಇಂತಹ ಘನ ಪಂಡಿತ ಶುಕ್ರಾಚಾರ್ಯನಿಗೆ ತನ್ನ ಮಗಳು ದೇವಯಾನಿಯೆಂದರೆ ಕುರುಡು ಮಮತೆ. ಅವಳಿಗಾಗಿ ಏನು ಬೇಕಾದರೂ ಮಾಡಿಬಿಡಬಲ್ಲ. ವಿವೇಚನೆಯಿಲ್ಲದೇ ಸ್ವಂತ ಅಳಿಯ ಯಯಾತಿಯನ್ನು ವೃದ್ಧನಾಗು ಎಂದು ಶಪಿಸಿದ ಮುಂಗೋಪಿ!

ನಮ್ಮ ಭವಿಷ್ಯ ಶಾಸ್ತ್ರದಲ್ಲಿ ಈತನಿಗೆ ವಿಶೇಷ ಸ್ಥಾನಮಾನ. ಶುಕ್ರ ಸಂಪತ್ತು, ಸೌಖ್ಯ ಮತ್ತು ಲಲಿತಕಲೆಗಳನ್ನು ಪ್ರತಿನಿಧಿಸುವ ದೇವತೆ. ನಮ್ಮ ಕುಂಡಲಿಯಲ್ಲಿ ಶುಕ್ರ ಒಳ್ಳೇ ಸ್ಥಾನದಲ್ಲಿದ್ದರೆ, ಸಂಪತ್ತು, ಸುಖ ಮತ್ತು ಸಮೃದ್ಧಿಗಳ ಸುರೆಮಳೆ. ಇದನ್ನೇ ಶುಕ್ರ ದೆಸೆ ಎನ್ನುವದು!

ಪುರಾತನ ಕಾಲದಲ್ಲಿ ಗ್ರೀಕರು ಶುಕ್ರ ಗ್ರಹವನ್ನು ಅಫ್ರೋಡೈಟ್ ಎಂಬ ಹೆಣ್ಣು ದೇವತೆಯಾಗಿ ಪರಿಗಣಿಸಿದ್ದರು. ಅಫ್ರೋಡೈಟ್ ದೇವತೆ ಪ್ರೇಮ, ಕಾಮ ಮತ್ತು ಸೌಂದರ್ಯಗಳ ಅಧಿದೇವತೆ. ಗ್ರೀಕರ ದೇವತೆಯಾದ ಈ ಅಫ್ರೋಡೈಟ್ ಅವರ ಪುರಾಣಗಳ ಅಪ್ರತಿಮ ಸುಂದರಿಯಾಗಿದ್ದಳಂತೆ. ಆವಳು ಸಮುದ್ರದ ನೊರೆಯಲ್ಲಿ, ಸೈಪ್ರಸ್ ದೇಶದ ಪ್ಯಾಫೋಸ್ ಎಂಬಲ್ಲಿ ಜನಿಸಿದಳಂತೆ. ಅವಳನ್ನು ತುಂಬಾ ಶಾಂತ ಸ್ವಭಾವದ ಗ್ರೀಕ್ ದೇವತೆಯಾದ ಹೆಫಾಯಿಸ್ಟಸ್ ಎಂಬಾತ ಮದುವೆಯಾದನಂತೆ. ರೋಮನ್ನರು ಸಹ ಶುಕ್ರ ಗ್ರಹವನ್ನು ವೀನಸ್ ಎಂಬ ಪ್ರೇಮ, ಕಾಮ ಮತ್ತು ಸೌಂದರ್ಯಗಳ ಅಧಿದೇವತೆ ಎಂದು ಪರಿಗಣಿಸಿದ್ದರು.

ಶತಮಾನಗಳಿಂದ ಜನರ ಕುತೂಹಲ, ಕಲ್ಪನೆಗಳಿಗೆ ಗ್ರಾಸವಾದ ಈ ಪ್ರಕಾಶಮಾನವಾದ ಗ್ರಹ ನಿಜಕ್ಕೂ ನಮ್ಮ ಸೌರ ಮಂಡಲದಲ್ಲಿ ಸೂರ್ಯನಿಂದ ಎರಡನೇ ಸ್ಥಾನದಲ್ಲಿರುವ ಚಿಕ್ಕ ಗ್ರಹ. ಮೊದಲ ಸ್ಥಾನದಲ್ಲಿರುವ ಬುಧ ಗ್ರಹ ಮತ್ತು ಮೂರನೇ ಸ್ಥಾನದಲ್ಲಿರುವ ನಮ್ಮ ಭೂಮಿ ಈ ಗ್ರಹದ ನೆರೆಹೊರೆಯವರು. ಭೂಮಿಯಿಂದ ದೂರದರ್ಶಕದಲ್ಲಿ ನೋಡಿದಾಗ ಶುಕ್ರ ನಮ್ಮ ಚಂದ್ರನಂತೆ ಪೂರ್ಣ ಶುಕ್ರ, ಅರ್ಧ ಶುಕ್ರ, ಕಮಾನಿನಾಕಾರದ ಶುಕ್ರ ಇತ್ಯಾದಿಯಾಗಿ ತನ್ನ ಮಜಲುಗಳನ್ನು ಪ್ರದರ್ಶಿಸುತ್ತಾನೆ. ಭೂಮಿ ಮತ್ತು ಶುಕ್ರ ಗ್ರಹಗಳು ನೆರೆಹೊರೆಯವರಷ್ಟೇ ಅಲ್ಲ. ಗಾತ್ರ, ದ್ರವ್ಯರಾಶಿ ಮತ್ತು ಸಾಂದ್ರತೆಯಲ್ಲಿ ಸಾಕಷ್ಟು ಸಾಮ್ಯವನ್ನು ಹೊಂದಿದವರು. ಎರಡೂ ಗ್ರಹಗಳು ಒಂದೇ ನೀಹಾರಿಕೆ(ನೆಬ್ಯೂಲ)ಯಿಂದ ಬೇರ್ಪಟ್ಟು, ಘನೀಭವಿಸಿ ಉತ್ಪತ್ತಿಯಾದ ಗ್ರಹಗಳಂತೆ. ಈ ಕಾರಣದಿಂದ ಈ ಎರಡೂ ಗ್ರಹಗಳಿಗೆ ಅಕ್ಕ ತಮ್ಮ ಎಂದು ಕರೆಯುವದುಂಟು. ಆದರೆ, ಈ ಸಾಮ್ಯ ಇಲ್ಲಿಗೇ ನಿಲ್ಲುತ್ತದೆ.

ನಮ್ಮ ಭೂಮಿಯಲ್ಲಿ ಜೀವಜಗತ್ತಿನ ಸೃಷ್ಟಿ ಮತ್ತು ಪಾಲನೆಗೆ ಕಾರಣಗಳಾದ ನೀರು ಮತ್ತು ಆಮ್ಲಜನಕಗಳು ಹೇರಳವಾಗಿವೆ. ಧ್ರುವ ಪ್ರದೇಶಗಳನ್ನು ಬಿಟ್ಟರೆ ತಾಪಮಾನ ಸಹ ಹತೋಟಿಯಲ್ಲಿದೆ. ಅದಕ್ಕಾಗಿಯೇ ನಮ್ಮಲ್ಲಿ ನದಿ, ಸರೋವರ ಸಾಗರಗಳುಂಟು ಮತ್ತು ಗಿರಿ ಶಿಖರ ಮತ್ತು ಕಂದರಗಳುಂಟು. ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿ ಸಂಕುಲವುಂಟು. ನಮ್ಮ ಶುಕ್ರನ ಅಂಗಳದಲ್ಲಿ ಇವೇನೂ ಇಲ್ಲ. ಶುಕ್ರನ ವಾತಾವರಣ ಶೇಕಡ ತೊಂಭತ್ತಾರರಷ್ಟು ದಟ್ಟವಾದ ಇಂಗಾಲಾಮ್ಲದಿಂದ ಕೂಡಿದೆ. ಉಳಿದದ್ದು ಸಾರಜನಕ. ಭೂಮಿಯ ಮೇಲೆ ವಾತಾವರಣದ ಒತ್ತಡ ಒಂದು ಆಗಿದ್ದರೆ ಶುಕ್ರನಲ್ಲಿ ಅದು 92ರಷ್ಟಿದೆ. ಅಪ್ಪಿ ತಪ್ಪಿ ಶುಕ್ರನ ನೆಲದಲ್ಲಿ ಮನುಷ್ಯ ಪ್ರಾಣಿಯೇನಾದರೂ ಕಾಲಿಟ್ಟರೆ ಅವನು ಅಪ್ಪಚ್ಚಿಯಾಗಿ ಹಾಳೆಗಿಂತ ತೆಳ್ಳಗಾಗುತ್ತಾನಷ್ಟೆ! ಇಲ್ಲ, ಹಾಳೆಯಾಗಿಯೂ ಉಳಿಯುವದಿಲ್ಲ ಕರಗಿ, ಆವಿಯಾಗಿ ಹೋಗುತ್ತಾನೆ! ಏಕೆಂದರೆ ಶುಕ್ರನ ಮೇಲಿನ ಸರಾಸರಿ ತಾಪಮಾನ ನಾನೂರ ಅರವತ್ತು ಡಿಗ್ರಿ ಸೆಲ್ಸಿಯಸ್!

ಶುಕ್ರನ ವೈಶಿಷ್ಟ್ಯಗಳು ಇಲ್ಲಿಗೇ ಮುಗಿಯುವದಿಲ್ಲ. ಶುಕ್ರನ ಪರಿಭ್ರಮಣ (ತನ್ನ ಸುತ್ತ ಸುತ್ತುವದು) ಉಳಿದ ಗ್ರಹಗಳಂತಲ್ಲ. ಅವುಗಳ ವಿರುದ್ಧ. ಅಂದರೆ ಭೂಮಿ, ಬುಧ ಮುಂತಾದ ಗ್ರಹಗಳು ಗಡಿಯಾರದ ಮುಳ್ಳಿನಂತೆ ಸುತ್ತಿದರೆ, ಶುಕ್ರ ವಿರುದ್ಧ ದಿಕ್ಕಿಗೆ ತಿರುಗುತ್ತಾನೆ. ಅಂದರೆ ನಮ್ಮ ಶುಕ್ರನ ಅಂಗಳದಲ್ಲಿ ಸೂರ್ಯ ಪಶ್ಚಿಮಕ್ಕೆ ಹುಟ್ಟುತ್ತಾನೆ. ಅಷ್ಟೇ ಅಲ್ಲ, ಹಾಗೆ ತಿರುಗಲು ನಮ್ಮ ಸೋಮಾರಿ ಶುಕ್ರ ಇನ್ನೂರ ನಲವತ್ಮೂರು (243) ಭೂಮಿಯ ದಿನಗಳನ್ನು ತೆಗೆದುಕೊಳ್ಳುತ್ತಾನೆ. ಅಂದರೆ ಶುಕ್ರನ ಒಂದು ದಿನದಲ್ಲಿ ನಮ್ಮ ಭೂಮಿಯ 243 ದಿನಗಳು ಆಗಿ ಹೋಗುತ್ತವೆ. ಆದರೆ ಸೂರ್ಯನ ಸುತ್ತ ಪರಿಕ್ರಮಣ ಮಾಡಲು ಈತನಿಗೆ ತುಂಬಾ ಅವಸರ. ಕೇವಲ ಇನ್ನೂರ ಇಪ್ಪತ್ನಾಲ್ಕು ಮತ್ತು ಮುಕ್ಕಾಲು (224.7) ಭೂಮಿಯ ದಿನಗಳಲ್ಲಿ ಈ ಕೆಲಸವನ್ನು ಪೂರೈಸುತ್ತಾನೆ. ಅಂದರೆ ಶುಕ್ರನ ಒಂದು ದಿನ, ಅಲ್ಲಿಯ ಒಂದು ವರ್ಷಕ್ಕಿಂತ ದೊಡ್ಡದು!

ಯಾವಾಗಲೂ ದಪ್ಪ ಮತ್ತು ಅಪಾರದರ್ಶಕ ವಾತಾವರಣದಿಂದ ಆವೃತವಾದ ಶುಕ್ರನ ರಹಸ್ಯವನ್ನು ಬೇಧಿಸಲು ರಷಿಯಾ ಮತ್ತು ಅಮೇರಿಕಗಳೆರಡೂ ಅನೇಕ ಅಂತರಿಕ್ಷ ಯಾನಗಳನ್ನು ಅಲ್ಲಿಗೆ ಕಳುಹಿಸಿದವು. ಅವುಗಳಲ್ಲಿ ರಷಿಯಾದ ವೆನೇರ ಸರಣಿಯ ಯಾನಗಳು ಮತ್ತು ಅಮೇರಿಕದ ಮರೀನರ್ ಹಾಗೂ ಪಾಯೋನಿಯರ್ ಸರಣಿಯ ಯಾನಗಳು ಮುಖ್ಯವಾದವು. ಈ ಯಾನಗಳು ಶುಕ್ರನ ವಾತಾವರಣವನು ಭೇದಿಸಿ ಕೆಳಗಿಳಿದು ಅಲ್ಲಿಯ ಉಪಯುಕ್ತ ಮಾಹಿತಿ ಮತ್ತು ಛಾಯಾಚಿತ್ರಗಳನ್ನು ಕಳುಹಿಸಿದವು. ಈ ಮಾಹಿತಿಯಿಂದ ಶುಕ್ರನ ಅಂತರಾಳದಲ್ಲಿಯ ಅಲ್ಲೋಲ ಕಲ್ಲೋಲದ ಬಗ್ಗೆ ಹೆಚ್ಚಿನ ತಿಳಿವು ಉಂಟಾಯಿತು.

ಇಂತಹ ಆಂತರಿಕ ವೈಪರೀತ್ಯಗಳನ್ನು ಹೊಂದಿದ ಶುಕ್ರನಂಗಳಕ್ಕೆ ಹೋಗುವದು ಸಧ್ಯಕ್ಕಂತೂ ಕನಸಿನ ಮಾತು. ಆದರೆ ನಮ್ಮ ವಿಜ್ಞಾನಿಗಳು ಸಾರ್ವಕಾಲಿಕ ಆಶಾವಾದಿಗಳು. ಎಂದಾದರೂ ಒಂದು ದಿನ ಅಲ್ಲಿಗೆ ಹೋಗಿ ತಳವೂರುವ ಯೋಚನೆಗಳನ್ನು ಮಾಡಿಕೊಂಡಿದ್ದಾರೆ. ವಿಪರೀತ ಶಾಖ ಹಾಗೂ ಒತ್ತಡಗಳಿಂದ ಅಲ್ಲಿನ ನೆಲದಲ್ಲಿ ಸಾಧ್ಯವಾಗದಿದ್ದರೆ, ಆಲ್ಲಿಯ ವಾತಾವರಣದಲ್ಲಿ ತೇಲುವ ನಗರಗಳ ಕಲ್ಪನೆ ಮಾಡಿಕೊಂಡಿದ್ದಾರೆ.

ಪರವಾಗಿಲ್ಲ. ಸಧ್ಯಕ್ಕೆ ನಾವಲ್ಲಿಗೆ ಹೋಗಲು ಸಾಧ್ಯವಾಗದಿದ್ದರೆ ಏನಂತೆ? ನಮ್ಮ ಸುಂದರ ಧರೆಯ ಮೇಲಿನಿಂದ ತಣ್ಣಗೆ ಹೊಳೆಯುತ್ತಿರುವ ಬೆಳ್ಳಿ ಬಣ್ಣದ ಬೆಳ್ಳಿ ಚುಕ್ಕಿಯನ್ನು ನೋಡಿ ಕಣ್ಣು ತಂಪು ಮಾಡಿಕೊಳ್ಳಲು ಯಾವ ಅಡೆತಡೆಯಿಲ್ಲ ತಾನೆ? ಭುವಿಯ ಮೇಲಿನ ಕಲಹಗಳನ್ನು ಜನರ ಮನದಿಂದ ಮರೆಸಿ, ಅವರ ಅಂತರಾಳದಲ್ಲಿಯ ಸುಂದರ ಭಾವನೆಗಳನ್ನು ಮೆರೆಸಿ, ಅವರ ಎಲ್ಲ ದಾಕ್ಷಿಣ್ಯವನ್ನು ಮೀರಿಸಿ, ಕಲ್ಪನಾಸಾಗರದಲ್ಲಿ ಮೀಯಿಸುವ ಬೆಳ್ಳಿಚುಕ್ಕಿಯ ಮೇಲೆ ಮಧುರವಾದ ಕವನ ಮತ್ತು ಮಾಹಿತಿಪೂರ್ಣ ಲೇಖನಗಳನ್ನು ಬರೆಯುವದರಲ್ಲಿ ಸಂಕೋಚವೇಕೆ? ಅದಕ್ಕೇ ಬರೆದಿದ್ದೇನೆ. ಓದುಗರಿಗೆ ಇಷ್ಟವಾದರೆ ಉತ್ತರ ಬರೆಯಿರಿ.

ನಸುಕಿನ ಮಸುಕು ಕತ್ತಲಿ ಒಳಗ ಹಸುಗೂಸಿನ್ ನಗೀ ನಕ್ಕೋತ

ಮಸ್ತಾಗಿ ಮಲಕೊಂಡಂಥಾ ಆಕಾಶದ್ ಕಡೆ ನೋಡ್ರಿ

ಸಾವಿರಾರು ದೀಪಾ ಹಚ್ಚಿಟ್ಟಂಗ ಮಿನುಗತಾವ ಥಳ ಥಳ ಅಂತ

ಅದರೊಳಗ ಹೊಳೀತದ ಬೆಳ್ಳಿ ಚುಕ್ಕಿ ಸ್ಫಟಿಕಧಾಂಗ ಕಾಣ್ರಿ

ಬೆಳ್ಳಿ ಕಿರೀಟ, ಬೆಳ್ಳಿ ಕವಚ ಎಲ್ಲಾ ಹಾಕ್ಕೊಂಡು ಮೆರೀತದ

ಅಂಬರದಾಗಿನ ಆಸ್ಥಾನದೊಳಗ ಅರಸನಾಗಿ ಆಳ್ತದ

ಚುಕ್ಕಿಗಳೊಂದಿಗೆ ಚೆಲ್ಲಾಟ ಆಡ್ಕೋತ ಚೆಲುವಾಗಿ ಕಾಣ್ತದ

ಚಂದಿರನಂಗಳ ಕಣ್ಮಣಿ ಆಗಿ ಎಲ್ಲಾರ ಮೆಚ್ಕಿ ಪಡಿತದ

ಸಂಧ್ಯಾ ದೇವಿಯ ಮುದ್ದಿನ ಕೂಸಿದು ಎಂಥಾ ದಿವ್ಯ ಛವಿ

ತಿಂಗಳ ಬೆಳಕಿನ ಮೈ ಬಣ್ಣದ್ದು ಮೆಚ್ತಾನ್ ತಂದೆ ರವಿ

ಅಕ್ಕ ಧರಿಣಿ ಜೊತೆನ ಇರ್ತದ ಮಮಕಾರದ ಒಂದ್ ಸವಿ

ಇದನ್ನೆಲ್ಲಾ ನೋಡಿ ಕವಿತಾ ಗೀಚ್ತಾನ್ ನನ್ನಂಥಾ ಒಬ್ ಕವಿ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more