• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಕಾಶದಲ್ಲಿ ಗೃಹ ತಾರೆಗಳ ಮೇಳ

By Staff
|

ಈ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಖಗೋಳ ವೀಕ್ಷಣೆಯಂತಹ ಉಪಯುಕ್ತ ಹವ್ಯಾಸಗಳನ್ನು ಹೇಳಿ ಕೊಡಲು ಅನೇಕ ಸಂಸ್ಥೆಗಳು, ಉಪಕರಣಗಳು ಇತ್ಯಾದಿಗಳ ಸೌಲಭ್ಯವಿದ್ದರೂ, ಮಕ್ಕಳಿಗೆ ಮತ್ತು ಪಾಲಕರಿಗೆ ಸಮಯದ ಆಭಾವವಿದೆ. ಅಲ್ಲದೇ ಸಧ್ಯದ ನಮ್ಮ ಪರೀಕ್ಷಾಕೇಂದ್ರಿತ ಶಿಕ್ಷಣವು ಇಂತಹ ಹವ್ಯಾಸಗಳಿಗೆ ಅಗತ್ಯವಾದ ಪ್ರೋತ್ಸಾಹ ನೀಡುವದಿಲ್ಲ. ಅದರಿಂದ ಮಕ್ಕಳ ಪಾಲಕರೇ ಇಂತಹ ವಿಷಯಗಳಲ್ಲಿ ಆಸಕ್ತಿ ತಳೆದು ಮಕ್ಕಳಿಗೆ ಕೂಡ ಆಸಕ್ತಿ ಹುಟ್ಟುವಂತೆ ಮಾಡುವದು ಒಳ್ಳೆಯದೇನೋ?

* ವಸಂತ ಕುಲಕರ್ಣಿ, ಸಿಂಗಪುರ

ಇತ್ತೀಚೆಗೆ ಎಂದರೆ ಡಿಸೆಂಬರ್ 2008ರ ಮೊದಲ ವಾರದಲ್ಲಿ, ಒಂದು ರಮಣೀಯವಾದ ಘಟನೆ ಮೇಲೆ ಆಕಾಶರಾಜನ ದರ್ಬಾರಿನಲ್ಲಿ ನಡೆಯಿತು. ಅಂದು, ಗೃಹ ದೇವತೆಗಳಾದ ಮಂಗಳ ಮತ್ತು ಗುರು, ಚಂದ್ರನಂಗಳದಲ್ಲಿ ನಸು ನಗುತ್ತ ಸಮಾಲೋಚನೆ ನಡೆಸಲು ಸೇರಿದ್ದರು. ಈ ಸುಂದರ ಘಟನೆ ನಡೆಯಲಿದೆ ಎಂದು ಯಾವದೋ ವೃತ್ತ ಪತ್ರಿಕೆಯಲ್ಲಿ ಓದಿದ್ದೆ. ಆದರೆ ಅದು ಹೇಗೋ ಈ ವಿಷಯ ಮರೆತೇ ಹೋಗಿತ್ತು.

ಅದೊಂದು ಸಂಜೆ ಸುಮಾರು ಏಳು ಗಂಟೆಯಾಗಿರಬೇಕು. ಅಫೀಸಿನಲ್ಲಿ ಕೆಲಸ ಮುಗಿಸಿಕೊಂಡು ಹಿಂದಿರುಗುವಾಗ, ಮನೆಯ ಹತ್ತಿರವೇ ಥಟ್ಟನೇ ದೃಷ್ಟಿ ಆಕಾಶದತ್ತ ಹೋಯಿತು. ಅಲ್ಲೊಂದು ಸುಂದರ ಚಿತ್ತಾರ ಮೂಡಿದೆ! ಬಿದಿಗೆಯ ಚಂದ್ರನ ಕಮಾನಿನೊಂದಿಗೆ ಮಂಗಳ ಮತ್ತು ಗುರುಗಳಿಬ್ಬರೂ ಸೇರಿ ಆಗಸದಂಗಳಲ್ಲಿ ನಗು ಮುಖವೊಂದನ್ನು ಸೃಷ್ಟಿಸಿದ್ದರು. ಇದೇನು? ಪಕ್ಕದಲ್ಲಿಯೇ ನುಗ್ಗಿ ಬರುತ್ತಿರುವ ಮುಗಿಲೆಂಬ ರಕ್ಕಸನು ಈ ದೃಶ್ಯವನ್ನು ನುಂಗಿ ಹಾಕಲು ಅಣಿಯಾಗಿದ್ದಾನೆ! ಆ ಕ್ಷಣದಲ್ಲಿ ನೋಡಿ ಆನಂದಿಸಬೇಕಷ್ಟೆ. ಸಮಯವೆಂಬ ಯಕ್ಷನು ಈ ಕ್ಷಣದಲ್ಲಿ ತನ್ನ ಮಂತ್ರದಂಡದಿಂದ ಇಂದ್ರಜಾಲ ಮಾಡಿ, ಮನೋಜ್ಞವಾದ ಭ್ರಮಾಲೋಕವೊಂದಕ್ಕೆ ಕರೆದೊಯ್ಯುವಂತೆ ಮಾಡಿ, ತತ್‌ಕ್ಷಣ ಮಂಗಮಾಯ ಮಾಡಿದಂತಾಗಿತ್ತು. ನಾನು ನೋಡಿದ್ದು ಹೆಚ್ಚು ಕಡಿಮೆ ಇಲ್ಲಿ ತೋರಿಸಿದ ಛಾಯಾ ಚಿತ್ರದ ಹಾಗೆಯೇ ಇತ್ತು. ಆದರೆ ಸುತ್ತ ಮುತ್ತ ಮೋಡಗಳೂ ಇದ್ದವು ಮತ್ತು ಸ್ವಲ್ಪ ಹೊತ್ತಿನಲ್ಲಿಯೇ ಮೋಡಗಳು ಮುಸುಕಿ ಈ ದೃಶ್ಯವನ್ನು ನುಂಗಿ ಹಾಕಿದವು. ನಾನು ಅಷ್ಟರವರೆಗೆ ಅಲ್ಲಿಯೇ ನಿಂತು ನೋಡಿ, ಮುನ್ನಡೆದೆ. ವಿಶ್ವದ ಅನೇಕ ಭಾಗಗಳಲ್ಲಿ ಈ ದೃಶ್ಯ ಕಂಡು ಬಂದಿದೆ ಮತ್ತು ಅನೇಕರು ಇದನ್ನು ತಮ್ಮ ಕ್ಯಾಮೆರಾಗಳಲ್ಲಿ ಸುಂದರವಾಗಿ ಸೆರೆಹಿಡಿದಿದ್ದಾರೆ. ಆದರೆ ಈ ದೃಶ್ಯವನ್ನು ಮತ್ತೆ ನಮ್ಮ ಕಣ್ಣುಗಳಿಂದ ನೋಡಲು ನಾವು 2036ರವರೆಗೆ ಕಾಯಬೇಕು.

ಇದು ಸಿಂಗಪುರದಲ್ಲಿ ನಾನು ನೋಡಿದ ಎರಡನೇ ಖಗೋಳಗರ್ಭದ ಸುಂದರ ಘಟನೆ. ಇದಕ್ಕೂ ಮುಂಚೆ, 2003ರ ಆಗಸ್ಟ್ ತಿಂಗಳಲ್ಲಿ ಮಂಗಳ ಗೃಹ ಭೂಮಿಯ ಅತ್ಯಂತ ಸಮೀಪದಲ್ಲಿತ್ತು. ಸಾಮಾನ್ಯವಾಗಿ ಬರಿಗಣ್ಣಿನಲ್ಲಿ ಒಂದು ಪ್ರಕಾಶಮಾನ ಚುಕ್ಕೆಯಂತೆ ಕಾಣುವ ಮಂಗಳ, ಆ ಸಮಯದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವ ಒಂದು ಸಣ್ಣ ಚೆಂಡಿನಂತೆ ಕಾಣುತ್ತಿತ್ತು. ಮತ್ತೆ ಅಂತಹ ದೃಶ್ಯ ಈ ಭೂಮಿಯ ಮೇಲೆ ಕಾಣ ಸಿಗುವದು ಕ್ರಿ. ಶ. 2287ನಲ್ಲಿಯೇ ಅಂತೆ. ನಮ್ಮ ಜೀವಮಾನದಲ್ಲಿಯೆ ನೋಡಿದ್ದರಿಂದ ನಾವು ಪುಣ್ಯವಂತರಲ್ಲವೆ?

ಅಲ್ಲದೇ ಮೊನ್ನೆ ಮೊನ್ನೆಯೇ ಅಂದರೆ ಜನವರಿ 26ರಂದು ಸೂರ್ಯಗ್ರಹಣವಿತ್ತು. ಸಿಂಗಪುರದ ವಿಜ್ಞಾನ ಕೇಂದ್ರ (Singapore Science Centre)ದಲ್ಲಿ ದೂರದರ್ಶಕದಲ್ಲಿ ಗ್ರಹಣವನ್ನು ನೋಡಲು ಏರ್ಪಾಡು ಮಾಡಿದ್ದರು. ಸಂಜೆ ಸುಮಾರು 4.30ರಿಂದ ಆರಂಭವಾದ ಸೂರ್ಯಗ್ರಹಣದ ಈ ವ್ಯೋಮ ಪ್ರಸಂಗ ಸುಮಾರು ಒಂದೂ ಕಾಲು ಗಂಟೆಯ ಕಾಲ ನಡೆಯಲಿತ್ತು. ಸೂರ್ಯಗ್ರಹಣವನ್ನು ಕಪ್ಪು ಕನ್ನಡಕ ಧರಿಸಿ ನೋಡಲು ಸಹ ಸಾಧ್ಯ. ಆದರೆ ದೂರದರ್ಶಕದಲ್ಲಿ ನೋಡಲು ಇನ್ನೂ ಸುಂದರ ಅಲ್ಲವೆ? ಅದರಿಂದ ಮಿತ್ರರೊಬ್ಬರ ಸಲಹೆಯಂತೆ ಅಲ್ಲಿಗೆ ಹೋದರೆ ಅಲ್ಲಿ ಅಪಾರ ಜನಜಂಗುಳಿ. ಚೀನೀಯರ ಹೊಸವರ್ಷದ ರಜೆಯಾದ್ದರಿಂದ ಈ ಸುಂದರ ದೃಶ್ಯವನ್ನು ನೋಡಿ ಆನಂದಿಸಲು ಸಿಂಗಪೂರಿನ ಅನೇಕ ಜನರು ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಅಲ್ಲಿ ನೆರೆದಿದ್ದರು. ಆಯೋಜಕರಿಗೂ ಇಷ್ಟೊಂದು ಒಳ್ಳೆಯ ಪ್ರತಿಕ್ರಿಯೆ ಬರುತ್ತದೆಂದು ಗೊತ್ತಿರಲಿಲ್ಲವಂತೆ. ಅಲ್ಲಿಯ ಸ್ವಯಂ ಸೇವಕರು ಜನರೆಲ್ಲರಿಗೂ ಕಪ್ಪು ಕನ್ನಡಕವನ್ನು ಹಂಚಿದರು. ಅಲ್ಲದೇ ಯಾರಿಗೆ ಸಾಲಿನಲ್ಲಿ ನಿಂತು ನೋಡಲು ಸಾಧ್ಯವಿಲ್ಲವೋ ಅವರಿಗೆಲ್ಲ ಈ ಕಪ್ಪು ಕನ್ನಡಕದ ಮೂಲಕ ನೋಡಿ ಆನಂದಿಸಲು ಮನವಿ ಮಾಡಿದರು.

ಅಷ್ಟೊಂದು ದೊಡ್ಡ ಸಾಲಿನಲ್ಲಿ ಬಹಳ ಹೊತ್ತು ನಿಂತುಕೊಳ್ಳಲು ನನ್ನ ನಾಲ್ಕು ವರ್ಷದ ಮಗರಾಯ ತಕರಾರು ಮಾಡತೊಡಗಿದ್ದರಿಂದ, ನಾವು ಹೊರಗೆ ಬಂದು ಕಪ್ಪು ಕನ್ನಡಕ ಧರಿಸಿ ನೋಡಬೇಕಾಯಿತು. ಆ ದಿನದಂದೂ ಸಹ ಆಕಾಶದಲ್ಲಿ ಮೇಘರಾಜನ ದರ್ಬಾರು ನೆರೆದಿತ್ತು. ಪುಣ್ಯಕ್ಕೆ ಮಳೆ ಬರದೇ, ನಡುನಡುವೆ ಸೂರ್ಯ ಇಣುಕಿ ನೋಡುತ್ತಿದ್ದರಿಂದ ನಮಗೆ ಆತನ ರಾಹುಗ್ರಸ್ತ ರೂಪದ ದರ್ಶನವಾಗುತ್ತಿತ್ತು.

ಚಿಕ್ಕಂದಿನಲ್ಲಿ ನಾವು ಕಾಗದ ಸುಟ್ಟು ಅದರಿಂದ ದೊರಕಿದ ಕರಿ ಮಸಿಯನ್ನು ಬಣ್ಣವಿಲ್ಲದ ಪಾರದರ್ಶಕ ಗಾಜಿಗೆ ಹಚ್ಚಿ ಕಪ್ಪು ಮಾಡಿ ಅದರ ಮೂಲಕ ಸೂರ್ಯಗ್ರಹಣ ನೋಡುತ್ತಿದ್ದೆವು. ನನ್ನ ಪತ್ನಿ ಸಿನೇಮಾ ಫಿಲ್ಮಿನ ಮೂಲಕ ಸೂರ್ಯಗ್ರಹಣ ನೋಡುತ್ತಿದ್ದೆವು ಎಂದಳು. ಅಲ್ಲದೇ ನಾವು ಕನ್ನಡಿಯಿಂದ ಸೂರ್ಯನನ್ನು ಮನೆಯ ಗೋಡೆಯ ಮೇಲೆ ವಿಕ್ಷೇಪಿಸುತ್ತಿದ್ದೆವು. ಅದರಿಂದ ಸೂರ್ಯಗ್ರಹಣ ನಮಗೆ ಸುಂದರವಾಗಿ ಮನೆಯ ಗೋಡೆಯ ಮೇಲೆ ಕಾಣುತ್ತಿತ್ತು.

ಸೂರ್ಯಗ್ರಹಣ ಮತ್ತು ಚಂದ್ರ ಗ್ರಹಣಗಳು ತುಂಬ ಸಾಮಾನ್ಯವಾದ ಖಗೋಳ ವಿದ್ಯಮಾನಗಳು. ಆದರೆ ಖಗ್ರಾಸ (ಸಂಪೂರ್ಣ) ಸೂರ್ಯಗ್ರಹಣ ಇವುಗಳಲ್ಲಿ ವಿರಳ. ಪ್ರತಿ 18 ತಿಂಗಳಿಗೊಂದು ಬಾರಿ ಪೃಥ್ವಿಯ ಮೇಲೆ ಎಲ್ಲಿಯಾದರೂ ಸಂಭವಿಸಿದರೂ ಅದೇ ಜಾಗದಲ್ಲೊ ಇನ್ನೊಮ್ಮೆ ಆಗುವದು 370 ವರ್ಷಗಳ ನಂತರವೇ. ಖಗ್ರಾಸ ಚಂದ್ರಗ್ರಹಣ ವಿರಳವಾದರೂ ಸೂರ್ಯಗ್ರಹಣಕ್ಕಿಂತ ಹೆಚ್ಚು ಸಾಮಾನ್ಯ. ವರ್ಷಕ್ಕೆ ಎರಡು ಮೂರು ಬಾರಿ ಸಂಭವಿಸುತ್ತದೆ.

ಇಂದಿನ ಈ ಅತಿ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಖಗೋಳ ವೀಕ್ಷಣೆಯಂತಹ ಉಪಯುಕ್ತ ಹವ್ಯಾಸಗಳನ್ನು ಹೇಳಿ ಕೊಡಲು ಅನೇಕ ಸಂಸ್ಥೆಗಳು, ಉಪಕರಣಗಳು ಇತ್ಯಾದಿಗಳ ಸೌಲಭ್ಯವಿದ್ದರೂ, ಮಕ್ಕಳಿಗೆ ಮತ್ತು ಪಾಲಕರಿಗೆ ಸಮಯದ ಆಭಾವವಿದೆ. ಅಲ್ಲದೇ ಸಧ್ಯದ ನಮ್ಮ ಪರೀಕ್ಷಾಕೇಂದ್ರಿತ ಶಿಕ್ಷಣವು ಇಂತಹ ಹವ್ಯಾಸಗಳಿಗೆ ಅಗತ್ಯವಾದ ಪ್ರೋತ್ಸಾಹ ನೀಡುವದಿಲ್ಲ. ಅದರಿಂದ ಮಕ್ಕಳ ಪಾಲಕರೇ ಇಂತಹ ವಿಷಯಗಳಲ್ಲಿ ಆಸಕ್ತಿ ತಳೆದು ಮಕ್ಕಳಿಗೆ ಕೂಡ ಆಸಕ್ತಿ ಹುಟ್ಟುವಂತೆ ಮಾಡುವದು ಒಳ್ಳೆಯದೇನೋ? ಪುಸ್ತಕಗಳ ಮತ್ತು ಪರೀಕ್ಷೆಗಳ ಹೊರೆಯನ್ನು ಕಡಿಮೆ ಮಾಡಿ, ಮಕ್ಕಳ ಮನವನ್ನು ಖಗೋಳ ವೀಕ್ಷಣೆ, ಪಕ್ಷಿ ವೀಕ್ಷಣೆ, ಜಲಚರ / ವನ್ಯಜೀವಿಗಳ ಅಧ್ಯಯನ, ಸಸ್ಯಗಳ ಅಧ್ಯಯನ, ನಿಸರ್ಗದ ಅರಿವು ಮತ್ತು ಪರಿಸರದ ಬಗ್ಗೆ ತಿಳಿವಳಿಕೆಗಳನ್ನು ಹುಟ್ಟಿಸುವಂತಹ ಚಟುವಟಿಕೆಗಳನ್ನು ಮಾಡಿಸುವದರಿಂದ ಅವರಿಗೆ ಸೃಷ್ಟಿಯ ಮಹತ್ವ ಮತ್ತು ಅದರ ಆಗಾಧತೆಯ ಅರಿವು ಮೂಡುತ್ತದಲ್ಲದೇ, ವೈಜ್ಞಾನಿಕ ಮನೋಭಾವವೂ ಬೆಳೆಯುತ್ತದೆ. ದಿನನಿತ್ಯದ ಕೊಲೆ, ಸುಲಿಗೆ, ಹೊಡೆತ, ಬಾಂಬ್ ಸಿಡಿತ ಇತ್ಯಾದಿ ಋಣಾತ್ಮಕ ಸುದ್ದಿಗಳು ಮಕ್ಕಳ ಸೂಕ್ಷ್ಮ ಮನಸ್ಸಿನ ಮೇಲೇ ನಮಗರಿವಲ್ಲದಂತೆ ಆಗುತ್ತಿರುತ್ತದೆ. ಅಂತಹ ಭಯಾನಕ ಮತ್ತು ಭೀಭತ್ಸ ಸುದ್ದಿಗಳ ದುಷ್ಟಪರಿಣಾಮವನ್ನು ಸಹ ಈ ತರಹದ ಕ್ರಿಯಾಶೀಲ ಮತ್ತು ರಚನಾತ್ಮಕ ಚಟುವಟಿಕೆಗಳಿಂದ ಕಡಿಮೆ ಮಾಡಬಹುದಲ್ಲವೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X