Get Updates
Get notified of breaking news, exclusive insights, and must-see stories!

ಕರ್ನಾಟಕ ಬಜೆಟ್ 2026–27: ವಿಶಿಷ್ಟ ಕವರ್ ಪೇಜ್ ವಿನ್ಯಾಸ, ಕನ್ನಡ ಅಂಕಿ-ಸಂಖ್ಯೆ, ಗಮನ ಸೆಳೆದ ಕವನ ಸಾಲುಗಳು

ಕರ್ನಾಟಕ ಸರ್ಕಾರದ 2026 - 2027ನೇ ಸಾಲಿನ ಬಜೆಟ್ ಹಲವು ಕಾರಣಗಳಿಗೆ ಗಮನ ಸೆಳೆದಿದೆ. ಈ ಬಾರಿಯ ಬಜೆಟ್‌ನ ವಿನ್ಯಾಸ, ಕರ್ನಾಟಕದ ಸಂಸ್ಕೃತಿಯ ಉಲ್ಲೇಖ, ಕನ್ನಡ ಸಂಖ್ಯೆಗಳ ಬಳಕೆ ಮತ್ತು ಕವನಗಳ ಉಲ್ಲೇಖ ಸೇರಿದಂತೆ ಹಲವು ವಿಶೇಷಗಳನ್ನು ಒಳಗೊಂಡಿತ್ತು. ಕರ್ನಾಟಕ ಬಜೆಟ್ 2026-27 ಕವರ್ ಪೇಜ್ ವಿನ್ಯಾಸವು ಈ ಬಾರಿ ಗಮನ ಸೆಳೆದಿದೆ. ಕರ್ನಾಟಕ ಬಜೆಟ್ 2026-27ರ ದಾಖಲೆಗಳ ಕವರ್ ಪುಟಗಳನ್ನು ರಾಜ್ಯ ಸರ್ಕಾರದ ಆಡಳಿತ ದೃಷ್ಟಿ ಮತ್ತು ಕರ್ನಾಟಕದ ಸಾಂಸ್ಕೃತಿಕ ಹಾಗೂ ಆರ್ಥಿಕ ಸಮೃದ್ಧಿಯನ್ನು ತೋರಿಸುವ ರೀತಿಯಲ್ಲಿ ವಿನ್ಯಾಸ ಮಾಡಿದ್ದು ವಿಶೇಷವಾಗಿತ್ತು.

ಕರ್ನಾಟಕ ಬಜೆಟ್ 2026-27 ದಾಖಲೆಗಳ ಮುಖಪುಟ, ಪುಟಗಳ ವಿನ್ಯಾಸ ಪರಿಕಲ್ಪನೆ ಹೊಸದಾಗಿತ್ತು. 2026-27ರ ಕರ್ನಾಟಕ ಬಜೆಟ್ ದಾಖಲೆಗಳ ಮುಖಪುಟವನ್ನು ಸರ್ಕಾರದ ಆಡಳಿತ ದೃಷ್ಟಿಕೋನದ ಮಾರ್ಗದರ್ಶಿ ತತ್ವಗಳನ್ನು ಪ್ರತಿಬಿಂಬಿಸುವ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿತ್ತು. ರಾಜ್ಯದ ಸಾಂಸ್ಕೃತಿಕ ಮತ್ತು ಆರ್ಥಿಕ ಶ್ರೀಮಂತಿಕೆಯನ್ನು ಈ ಬಜೆಟ್ ಮುಖಪುಟಗಳಲ್ಲಿ ತೋರಿಸಲಾಗಿದೆ.

Karnataka Budget 2026

ಬಜೆಟ್ ಮುಖಪುಟ

ಇನ್ನು ಕರ್ನಾಟಕದ ಬಜೆಟ್ ಮುಖಪುಟದಲ್ಲಿ ವಿಶ್ವಗುರು ಬಸವಣ್ಣ, ಮಹಾತ್ಮಾ ಗಾಂಧಿ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಅವರ ಫೋಟೋ ಬಳಸಲಾಗಿದೆ. ಅಲ್ಲದೆ ಕೈಗಾರಿಕೆ, ಕೃಷಿ, ಅಭಿವೃದ್ಧಿ, ಮಹಿಳೆಯರು, ಕೃಷಿಕರು ಹಾಗೂ ಯವತಿ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಚಿತ್ರಗಳನ್ನು ಬಳಕೆ ಮಾಡಲಾಗಿದೆ.

ಕರ್ನಾಟಕ ಬಜೆಟ್‌ನ ಹಿಂಭಾಗದ ಪುಟದಲ್ಲಿ ಕರ್ನಾಟಕಕ್ಕೆ ಸಿಕ್ಕಿರುವ / GI ಟ್ಯಾಗ್ ಪಡೆದ ಕರ್ನಾಟಕದ ಉತ್ಪನ್ನಗಳ ಕೊಲಾಜ್ ಅನ್ನು ಒಳಗೊಂಡಿದೆ. ಇದು ರಾಜ್ಯದ ಕರಕುಶಲತೆ, ಕೃಷಿ, ಸಾಂಪ್ರದಾಯಿಕ ಕೈಗಾರಿಕೆಗಳು ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಯ ಶ್ರೀಮಂತ ಪರಂಪರೆಯನ್ನು ಎತ್ತಿ ತೋರಿಸುತ್ತದೆ. ಕರ್ನಾಟಕವು ಅನನ್ಯವಾಗಿ 45 GI ಟ್ಯಾಗ್ ಉತ್ಪನ್ನಗಳನ್ನು ಒಳಗೊಂಡಿದೆ. ಇದು ಕೈಮಗ್ಗ ನೇಯ್ಗೆ, ಕರಕುಶಲ ವಸ್ತುಗಳು, ಹೂ ಕೃಷಿ, ಕೃಷಿ, ಆಹಾರ ಸಂಪ್ರದಾಯಗಳು ಮತ್ತು ಶಾಸ್ತ್ರೀಯ ಕಲಾ ಪ್ರಕಾರಗಳ ವ್ಯಾಪಕ ಶ್ರೇಣಿಯನ್ನು ಪ್ರತಿನಿಧಿಸುತ್ತದೆ. ಈ ಉತ್ಪನ್ನಗಳು ರಾಜ್ಯಾದ್ಯಂತ ಕುಶಲಕರ್ಮಿ ಮತ್ತು ಕೃಷಿ ಸಮುದಾಯಗಳ ಸೃಜನಶೀಲತೆ ಮತ್ತು ಉದ್ಯಮವನ್ನು ಸಾಕಾರಗೊಳಿಸುತ್ತವೆ.

ಕರ್ನಾಟಕದಲ್ಲಿ ಸಾಮಾನ್ಯವಾಗಿ ಬಜೆಟ್ ಮಂಡನೆ ಮಾಡುವ ಸಂದರ್ಭದಲ್ಲಿ ಬಜೆಟ್‌ನ ಮುಖಪುಟಗಳಲ್ಲಿ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳ ಚಿತ್ರಗಳನ್ನು ಅಥವಾ ಆಯಾ ದಾಖಲೆಯ ವಿಷಯಕ್ಕೆ ಸಂಬಂಧಿಸಿದ ದೃಶ್ಯಗಳನ್ನು ಸೇರಿಸಲಾಗುತ್ತಿತ್ತು. ರಾಜ್ಯದ ನೈಸರ್ಗಿಕ ಸೌಂದರ್ಯ, ಐತಿಹಾಸಿಕ ಪರಂಪರೆ ಮತ್ತು ವಲಯದ ಸಾಮರ್ಥ್ಯಗಳನ್ನು ಪ್ರತಿಬಿಂಬಿಸುತ್ತದೆ.

ಬಜೆಟ್‌ನಲ್ಲಿ ಕನ್ನಡ ಅಂಕಿ - ಸಂಖ್ಯೆ ಬಳಕೆ

ಇನ್ನು ಈ ಬಾರಿಯ ಕರ್ನಾಟಕ ಬಜೆಟ್ 2026 - 2027ರಲ್ಲಿ ಸಂಪೂರ್ಣ ಕನ್ನಡ ಅಂಕಿ - ಸಂಖ್ಯೆಗಳನ್ನು ಮಾತ್ರ ಬಳಕೆ ಮಾಡಲಾಗಿರುವುದು ಮತ್ತೊಂದು ವಿಶೇಷವಾಗಿದೆ. ಸಾಮಾನ್ಯವಾಗಿ ಬಜೆಟ್ ಪುಟಗಳಲ್ಲಿ ಇಂಗ್ಲಿಷ್ ಸಂಖ್ಯೆಗಳನ್ನು ಬಳಕೆ ಮಾಡುವುದು ವಾಡಿಕೆ. ಆದರೆ ಈ ಬಾರಿ ಕನ್ನಡ ಸಂಖ್ಯೆಗಳನ್ನು ಬಳಕೆ ಮಾಡುವ ಮೂಲಕ ಗಮನ ಸೆಳೆಯಲಾಗಿದೆ.

ಗಮನ ಸೆಳೆದ ಕವನದ ಸಾಲುಗಳು

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6ರ ಶುಕ್ರವಾರ ದಾಖಲೆಯ 17ನೇ ಬಜೆಟ್ ಮಂಡನೆ ಮಾಡಿದ್ದು. ಈ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಉಲ್ಲೇಖಿಸಿರುವ ಕವನದ ಸಾಲುಗಳು ಗಮನ ಸೆಳೆದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಟ್ಟು 207 ಪುಟಗಳ ಆಯವ್ಯಯವನ್ನು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲೂ ವಚನಗಳು ಮತ್ತು ವಿವಿಧ ಕವಿಗಳ ಕವಿತೆಗಳ ಸಾಲುಗಳು ಗಮನ ಸೆಳೆದಿವೆ.

ಸಿದ್ದರಾಮಯ್ಯ ಉಲ್ಲೇಖಿಸಿದ ಪ್ರಮುಖ ಸಾಲುಗಳು ಇಲ್ಲಿವೆ

ಧನಶೀಲ ಮನಶೀಲ ತನುಶೀಲ, ಸರ್ವಮಯ ದೃಕ್ಕಿಂಗೆ ಕಾಂಬುದೆಲ್ಲವು ಶೀಲ, ಇಂತೀ ವ್ರತಸಂಪದವೆಲ್ಲವೂ ಅದಾರ ಕುರಿತು ಮಾಡುವ ನೇಮ ಎಂಬುದು ತಾನರಿಯಬೇಕು - ವಚನಕಾರ್ತಿ ಅಕ್ಕಮ್ಮ

ನದಿಗಳು ನಮ್ಮೆಲ್ಲ ಮಾನವ ಸಮಾಜ ಮತ್ತು ಸಂಸ್ಕೃತಿಗಳ ಜೀವವಾಹಿನಿ. ಅವು ಕೊಳಕಾದರೆ, ಅವು ಬತ್ತಿದರೆ ನಮ್ಮ ಉಸಿರು ಉಡುಗುತ್ತಾ ಬಂದಂತೆ. - ಸಾಹಿತಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ

ಗುಲಾಬಿಯೆಂದರೆ ಅಮ್ಮನಿಗೆ ಇಷ್ಟ, ಗೊತ್ತು ಅವಳಿಗೆ ಮುಳ್ಳಲ್ಲಿ ಅರಳುವ ಕೃಷ್ಣ. ಹಿರಿಯ ಪತ್ರಕರ್ತ, ಬಿ.ಎಂ ಬಶೀರ್

ಕುರಿಗಳ ಕಾಯುವ ಕುರುಬನ ಕೂಗು, ಜನರ ಮಾತು ಕವನ. ಸೋತ ರಟ್ಟೆಗಳ ಹೂತ ಕಾಲುಗಳ ಬೆವರ ಹಸಿರು ಕವನ - ದಲಿತ ಬಂಡಾಯ ಕವಿ ಸಿದ್ದಲಿಂಗಯ್ಯ

ಮಾನವತೆಯ ಕಟ್ಟಡಕ್ಕೆ ಪ್ರೀತಿಯೊಂದೇ ಇಟ್ಟಿಗೆ, ಇಟ್ಟಿಗೆಗಳ ಬೆಸೆಯಬೇಕು ಕರುಣೆ ಸ್ನೇಹದೊಟ್ಟಿಗೆ. ಕವಿ ಬಿ.ಆರ್ ಲಕ್ಷ್ಮಣ ರಾವ್

ಹಳೆತನದ ಕೊಳೆಯೆಲ್ಲ ಹೊಸಮತಿಯ ಹೊಳೆಯಲ್ಲಿ ಕೊಚ್ಚಿ ಹೋಗಲಿ; ಬರಲಿ ವಿಜ್ಞಾನ ಬುದ್ಧಿ. ರಾಷ್ಟ್ರಕವಿ ಕುವೆಂಪು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+