ಕರ್ನಾಟಕ ರೈಲು ಯೋಜನೆಗಳಿಗೆ ಬಜೆಟ್‌ನಲ್ಲಿ 1200 ಕೋಟಿ ರೂ ಹಂಚಿಕೆ, ಉಪನಗರ ರೈಲಿಗೆ ಸಿಕ್ಕಿದ್ದೆಷ್ಟು?
ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆ ಸೇರಿದಂತೆ ರಾಜ್ಯದಲ್ಲಿ ವಿವಿಧ ಮಾರ್ಗಗಳಲ್ಲಿ ರೈಲು ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರಿಸಮಾನವಾಗಿ ಅನುದಾನ ಒದಗಿಸುತ್ತವೆ. ಈ ಪೈಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನ ಕರ್ನಾಟಕ ಬಜೆಟ್ 2026-27 ನಲ್ಲಿ ರೈಲು ಯೋಜನೆಗಳಿಗೆ ಒಟ್ಟು 1200 ಕೋಟಿ ರೂಪಾಯಿ ಅನುದಾನ ಹಂಚಿಕೆ ಮಾಡಿದ್ದಾರೆ. ಯಾವೆಲ್ಲ ಯೋಜನೆಗಳಿಗೆ ಎಷ್ಟು ಅನುದಾನ ಸಿಕ್ಕಿದೆ? ಎಂಬ ವಿವರ ಇಲ್ಲದೆ.
ರೈಲ್ವೆ ಇಲಾಖೆಯೊಂದಿಗೆ ರಾಜ್ಯ ಸರ್ಕಾರ ರೈಲು ಯೋಜನೆಗಳಿಗೆ 50:50 ಅನುಪಾತದಡಿ ಅನುದಾನ ಒದಗಿಸುತ್ತದೆ. ಅದರ ಆಧಾರದಲ್ಲಿ ರಾಜ್ಯದಲ್ಲಿನ ಒಟ್ಟು 09 ರೈಲು ಮಾರ್ಗಗಳನ್ನು ಕೈಗೊಳ್ಳಲಾಗುತ್ತಿದೆ. ಈ ಪೈಕಿ ಏಳು ರೈಲು ಮಾರ್ಗಗಳಿಗೆ ಭೂಸ್ವಾಧೀನಕ್ಕಾಗಿ 2,950 ಕೋಟಿ ರೂ. ಗಳನ್ನು ಹಾಗೂ ನಿರ್ಮಾಣ ಕಾಮಗಾರಿಗಳಿಗಾಗಿ 2,682 ಕೋಟಿ ರೂ.ಗಳನ್ನು ವೆಚ್ಚವನ್ನು ಈಗಾಗಲೇ ಮಾಡಲಾಗಿದೆ. ಅದಕ್ಕೆ ಮುಂದುವರಿದ ತನ್ನ ಪಾಲಿನಲ್ಲಿ ಸದರಿ ಮಾರ್ಗಗಳಿಗೆ 600 ಕೋಟಿ ರೂ.ಗಳನ್ನು ಸರ್ಕಾರ ಬಜೆಟ್‌ನಲ್ಲಿ ಮೀಸಲಿಟ್ಟಿದ್ದಾಗಿ ಸಿದ್ದರಾಮಯ್ಯ ಘೋಷಿಸಿದರು.

ಬೆಂಗಳೂರಿನ ಬೈಯಪ್ಪನಹಳ್ಳಿ-ಹೊಸೂರು ಹಾಗೂ ಯಶವಂತಪುರ-ಚನ್ನಸಂದ್ರ ರೈಲು ಮಾರ್ಗವನ್ನು ದ್ವಿಪಥೀಕರಣ (ಹಳಿ ಡಬಲಿಂಗ್) ಮಾಡಲಾಗುತ್ತಿದೆ. ಒಟ್ಟು 70 ಕಿ.ಮೀ. ರೈಲು ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದೆ. ಈ ಯೋಜನೆಗೆ ರಾಜ್ಯ ಸರ್ಕಾರದ ಪಾಲು 406 ಕೋಟಿ ರೂ. ಸೇರಿದಂತೆ ಒಟ್ಟಾರೆ 812 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಸದರಿ ಮಾರ್ಗದಲ್ಲಿ 14 ಕಿ.ಮೀ ದ್ವಿಗುಣಗೊಳಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಲೋಕಾರ್ಪಣೆ ಸಹ ಆಗಿದೆ. ಉಳಿದ ಕಾಮಗಾರಿಗಾಗಿ ತಾನು ಒದಗಿಸಬೇಕಿದ್ದ ಅನುದಾನ ಪೈಕಿ ಪ್ರಸಕ್ತ ಸಾಲಿನಲ್ಲಿ 100 ಕೋಟಿ ರೂಪಾಯಿಯನ್ನು ಹಂಚಿಕೆ ಮಾಡಿದೆ.
ಬೆಂಗಳೂರು ಉಪನಗರ ರೈಲಿಗೆ ಸಿಕ್ಕಿದ್ದೆಷ್ಟು?
ಈ ಬಾರಿ ಕರ್ನಾಟಕ ಸರ್ಕಾರ ಬೆಂಗಳೂರು ಉಪನಗರ ರೈಲು ಯೋಜನೆಯ (BSRP) ಕಾರಿಡಾರ್-2 ಹಾಗೂ ಕಾರಿಡಾರ್ 4ಕ್ಕೆ ಒಟ್ಟು 500 ಕೋಟಿ ರೂಪಾಯಿ ಹಣ ಹಂಚಿಕೆ ಮಾಡಿದ್ದಾಗಿ ತಿಳಿಸಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ತನ್ನ ಬಜೆಟ್‌ನಲ್ಲಿ 500 ಕೋಟಿ ರೂಪಾಯಿ ಘೋಷಿಸಿತ್ತು, ಕಳೆದ ಬಾರಿ ಕೇಂದ್ರ 350 ಕೋಟಿ ರೂಪಾಯಿ ಒದಗಿಸಿತ್ತು.
ಬೆಂಗಳೂರು ಉಪನಗರ ರೈಲು ಯೋಜನೆಯ (BSRP) ನಾಲ್ಕು ಕಾರಿಡಾರ್‌ಗಳ ಪೈಕಿ ಕಾರಿಡಾರ್-2ಕ್ಕೆ (ಬೆನ್ನಿಗಾನಹಳ್ಳಿ-ಚಿಕ್ಕಬಾಣಾವರ) ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಕೊಳ್ಳಲಾಗಿದೆ. ಕಾಮಗಾರಿ ನಿಧಾನಗತಿಯಲ್ಲಿದೆ. ಅದೇ ರೀತಿ ಹೀಲಲಿಗೆ-ರಾಜಾನುಕುಂಟೆವರೆಗಿನ ಕಾರಿಡಾರ್-4ಕ್ಕೆ ಬೇಕಾದ ಭೂಮಿಯ ಭೂಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿದೆ. 2030 ಡಿಸೆಂಬರ್ ಅಂತ್ಯಕ್ಕೆ ಎರಡು ಕಾರಿಡಾರ್‌ಗಳನ್ನು ಪೂರ್ಣಗೊಳಿಸುವ ಗುರಿ ಕೆ-ರೈಡ್‌ಗೆ ಇದೆ.












Click it and Unblock the Notifications