ಅಡಿಗರಿಗೆ ಬಯ್ಯುವುದನ್ನು ನಿಲ್ಲಿಸಿ,ನಿಲ್ಲಿಸಿ

Indians, Stop criticizing Aravind Adiga, img courtesy: telegraph.co.ukಬುಕರ್ 2008 ಪ್ರಶಸ್ತಿಗಳಿಸಿದ ಅರವಿಂದ ಅಡಿಗ ಅವರ ದಿ ವೈಟ್ ಟೈಗರ್ ಕೃತಿ ಕುರುತು ದಟ್ಸ್ ಕನ್ನಡದಲ್ಲಿ ಚೆಲ್ಲಾಡಿದ ಪ್ರತಿಕ್ರಿಯೆಗಳನ್ನು ಓದಿ ನಿಬ್ಬೆರಗಾದ ಲೇಖಕರು ಆ ಕೃತಿಯ ಜೀವಾಳದ ಬಗೆಗೆ ತಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಇದ್ದದ್ದನ್ನು ಇದ್ದಹಾಗೆ ಹೇಳಿದ್ರೆ ನೀವು ಎದೆಗೆ ಬಂದು ಹೊಡಿಬ್ಯಾಡಿ ಎನ್ನುವುದು ಅವರ ಅಪೇಕ್ಷೆ!

*ಭರತ್ ಶಾಸ್ತ್ರೀ, ನ್ಯೂಜರ್ಸಿ

ದೃಶ್ಯ ಒಂದು:
ಇಸವಿ 1995, ದಿಲ್ಲಿಯ ಕರೋಲ್ ಬಾಗ್; 30 ಗಂಟೆಗಳ ಆಸ್ಪತ್ರೆ ಕೆಲಸ ಮುಗಿಸಿ ಬರುತ್ತಿದ್ದೇನೆ. ಪ್ರಸಾದ್ ನಗರದ ಬಳಿ ಬಸ್ ಇಳಿದು ಸುಸ್ತಾಗಿ ನಡೆಯುತ್ತಿರುವಾಗ, ದಾರಿಯಲ್ಲಿ ನರಸಿಂಹ ದೇವಸ್ಥಾನ ಕಾಣುತ್ತದೆ. (ಎರಡು ವರ್ಷಗಳ ದಿಲ್ಲಿ ವಾಸದಲ್ಲಿ ನನ್ನ ಮನಸ್ಸಿಗೆ ನೆಮ್ಮದಿ ಸಿಕ್ಕುತ್ತಿದ್ದ, ದಕ್ಷಿಣದ ಅರ್ಚಕರಿದ್ದ, ಎಲ್ಲಕ್ಕಿಂತ ಮುಖ್ಯವಾಗಿ, ಶುಚಿಯಾಗಿ ಇರುತ್ತಿದ್ದ ದೇವಸ್ಥಾನಗಳಲ್ಲಿ ಇದೂ ಒಂದು) ಸ್ನಾನ ಮಾಡಿಲ್ಲದ ಕಾರಣ ಹೋಗಲು ಮನಸ್ಸಾಗುವುದಿಲ್ಲ. ದಾರಿಯುದ್ದಕ್ಕೂ ಹಂದಿಗಳು, ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿವೆ, ಅದರ ಜತೆಗೆ ಮಕ್ಕಳೂ ಕೂಡಾ. ದೇವಸ್ಥಾನಕ್ಕೆ ಹೋಗದಿದ್ದುದು ಒಳ್ಳೆಯದಾಯಿತೆಂದುಕೊಳ್ಳುತ್ತ ಮೆಟ್ಟಿಲು ಹತ್ತಿ ಬಂದು ಮನೆಯ ಬೀಗ ತೆಗೆದು ಸ್ನಾನ ಮಾಡುತ್ತೇನೆ.

ದೃಶ್ಯ ಎರಡು: ಇಸವಿ 1997; ಮುಂಬೈ ನಗರದ ಚಿಂಚಪೋಕಳಿಯಲ್ಲಿರುವ ಕಸ್ತೂರಬಾ ಸೋಂಕು ರೋಗಗಳ ಆಸ್ಪತ್ರೆ. ಆರ್ ಎಮ್ ಓ ಆಗಿ ನಿಯುಕ್ತನಾಗಿದ್ದೇನೆ. ಹಾಸ್ಟೆಲಿನಲ್ಲಿ ರೂಮ್ ಕೇಳಲು ಆಸ್ಪತ್ರೆಯ ಕಚೇರಿಗೆ ಬರುತ್ತೇನೆ. ಹೊಸ ದಿಂಬು ಹಾಸಿಗೆ ಮತ್ತು ಬೆಡ್ ಶೀಟು ಬೇಕೆಂದರೆ 50 ರೂ ಗಳನ್ನು ಕಾರಕೂನನಿಗೆ ಕೊಡ ಬೇಕಾಗುತ್ತದೆ. ಇದಕ್ಕೆ ರಸೀತಿ ಇಲ್ಲ. ಕೊಡದಿದ್ದರೆ ರೋಗಿಗಳಿಗೆ ಒಮ್ಮೆ ಬಳಸಲಾದ ಸರಕನ್ನು ದಾಟಿಸಲಾಗುತ್ತದೆ. ಅನಿವಾರ್ಯವಾಗಿ 50 ರೂ ಕೊಟ್ಟು ಹೊಸ ಬಟ್ಟೆಗಳನ್ನು ಪಡೆದುಕೊಳ್ಳುತ್ತೇನೆ.

ದೃಶ್ಯ ಮೂರು: ಇಸವಿ 2000; ವೃತ್ತಿ ನಿಮಿತ್ತ ಮುಂಬೈ ನ ಚೆಂಬೂರಿನಿಂದ ಮಾಹಿಮ್ ನಲ್ಲಿರುವ ಆಸ್ಪತ್ರೆಗೆ ಹೊರಟಿದ್ದೇನೆ. ಬಸ್ಸು ತಪ್ಪಿದ ಕಾರಣ ಹಾರ್ಬರ್ ಮಾರ್ಗದ ಲೋಕಲ್ ಟ್ರೇನ್ ಹಿಡಿದು ವಡಾಳಾ ದಲ್ಲಿ ಅಂಧೇರಿಗೆ ಹೋಗುವ ಟ್ರೇನ್ ನಲ್ಲಿ ಕುಳಿತಿದ್ದೇನೆ. ದಾರಿಯ ಎರಡೂ ಬದಿಯಲ್ಲಿ ಅಸಂಖ್ಯ ಕೊಳೆಗೇರಿಗಳೂ, ರೈಲು ಹಳಿಯ ಅತಿ ಸನಿಹಕ್ಕೇ ಹಳಿಗೆ ಬೆನ್ನು ಮಾಡಿ ಬಹಿರ್ದೆಸೆಗೆ ಕುಳಿತ ಎಷ್ಟೋ ದೇಶ ಬಾಂಧವರೂ ಬೇಡವೆಂದರೂ ಕಾಣುತ್ತಾರೆ. ಹತ್ತಿರದಲ್ಲಿಯೇ ಕೊಳೆಗೇರಿ ವಾಸಿಗಳ "ಆಧ್ಯಾತ್ಮಿಕ ಅವಶ್ಯಕತೆ"ಗಳನ್ನು ಪೂರೈಸಲು ಸಾಯಿ ಬಾಬಾ ಮಂದಿರಗಳೂ, ಜೈ ಸಂತೋಷಿ ಮಾತಾ ಆಲಯಗಳೂ ಇವೆ. ಅರೆ! ನಮ್ಮದು ಜಾತ್ಯತೀತ ರಾಷ್ಟ್ರವಲ್ಲವೆ! ಮುಸ್ಲಿಮರ ಸಂಖ್ಯೆ ಹೆಚ್ಚಿರುವ ಕೊಳೆಗೇರಿಗಳಲ್ಲಿ ಒಂದೆರಡು ಕಡೆ ಮಸೀದಿಯೂ ಇದೆ. ಜತೆಯಲ್ಲಿಯೇ ಅವರ ರಾಜಕೀಯ ಪ್ರಜ್ಞೆಯ ದ್ಯೋತಕವಾಗಿ ಶಿವಸೇನೆಯ, ಬಿಜೆಪಿ, ರಾಷ್ಟ್ರವಾದಿ ಕಾಂಗ್ರೆಸ್ ಪಾರ್ಟಿಯ ಕಚೇರಿಗಳೂ ಇವೆ. ನೋಡಲಾರದೆ ಮುಖ ಹೊರಳಿಸಿ ಒಳಗೆ ತಿರುಗಿದರೂ ಬೆನ್ನಟ್ಟುವ ಘೋರ ವಾಸನೆ.

ಈ ಕೊಳಕಿನ, ಭ್ರಷ್ಟಾಚಾರದ ಕಥೆಗಳನ್ನು ಬಿಟ್ಟು ಪತ್ರಿಕೆಗಳತ್ತ ದೃಷ್ಟಿ ಹರಿಸೋಣ.

ಸುದ್ದಿ 1: ಇಸವಿ 2002; ಹಿಂದಿ ಚಿತ್ರನಟ ಸಲ್ಮಾನ್ ಖಾನ್ ಅತಿವೇಗದಿಂದ ವಾಹನ ಚಲಾಯಿಸಿ, ಬಾಂದ್ರಾದ ರಸ್ತೆಯಲ್ಲಿ ಫುಟ್ ಪಾತ್ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬನ ಸಾವಿಗೆ ಕಾರಣರಾಗುತ್ತಾರೆ. ಘಟನೆ ನಡೆದ ಮರುದಿನ ಪೋಲಿಸರು ಅವರನ್ನು ಬಂಧಿಸುತ್ತಾರೆ. ಘಟನೆ ನಡೆದು ಹಲವು ಗಂಟೆಗಳೇ ಕಳೆದಿದ್ದರೂ ಸಲ್ಮಾನ್ ಖಾನ್ ರ ರಕ್ತದಲ್ಲಿ ಆಲ್ಕೊಹಾಲಿನ ಅಂಶ ಕಾನೂನುಬದ್ಧ ಪರಿಮಿತಿಗಿಂತ ಜಾಸ್ತಿಯಿರುತ್ತದೆ. ಸಲ್ಮಾನ್ ಖಾನ್ ರ ವಕೀಲರು ಕೋರ್ಟಿನಲ್ಲಿ "ವಾಹನ ಚಲಾಯಿಸುತ್ತಿದ್ದವರು ಸಲ್ಮಾನ್ ಅಲ್ಲ, ಅವರ ರಕ್ಷಣೆಗೆಂದು ಮುಂಬೈ ಪೋಲಿಸರು ನಿಯುಕ್ತಿಸಿದ್ದ ಪೋಲಿಸ್ ಕನಿಷ್ಠ ಬಿಲ್ಲೆ.." ಎಂದೇ ವಾದಿಸುತ್ತಾರೆ.

ಛೆ! ಇದು ಬೇಡ.

ಸುದ್ದಿ ಎರಡು 2008: ಬಿ ಎಮ್ ಡಬ್ಲ್ಯು ಕಾರೊಂದನ್ನು ಅತಿವೇಗವಾಗಿ ಚಾಲಿಸಿ, ಪೋಲಿಸ್ ಚೌಕಿಯೊಂದಕ್ಕೆ ಡಿಕ್ಕಿ ಹೊಡೆದು ಮೂರು ಜನ ಪೋಲಿಸರೂ ಸೇರಿದಂತೆ ಆರು ವ್ಯಕ್ತಿಗಳ ಮರಣಕ್ಕೆ ಕಾರಣನಾದ ಸಂಜೀವ್ ನಂದ (ಭಾರತೀಯ ನೌ ಸೇನೆಯ ಪ್ರಧಾನ ದಂಡನಾಯಕರಾಗಿದ್ದ ಅಡ್ಮಿರಲ್ ನಂದಾ ಅವರ ಮೊಮ್ಮಗ) ಗೆ ಕೋರ್ಟು 5 ವರ್ಷಗಳ ಕಠಿಣ ಶಿಕ್ಷೆಯನ್ನು ಕೊಡಮಾಡುತ್ತದೆ.

***
ಸ್ನೇಹಿತರೆ, ಮೇಲೆ ಕಾಣಿಸಿದ್ದು ಯಾವುದೇ "ಫಿಕ್ಷನ್" ಅಲ್ಲ ನಮ್ಮ ದೇಶದ ಪತ್ರಿಕೆಗಳಲ್ಲೇ ಪ್ರಕಟವಾದ ಸುದ್ದಿಗಳು, ಮತ್ತು ನನ್ನದೇ ಅನುಭವಗಳು. ಇದನ್ನು ಓದಿ ಮೇಲೆ ಕಾಣಿಸಿದ ಕೆಲವು ವಿಷಯಗಳನ್ನು ಅರವಿಂದ ಅಡಿಗರ ಪುಸ್ತಕದಲ್ಲೆಲ್ಲೋ ಕಂಡ ಅನುಭವವಾದರೆ ನನ್ನ ಈ ಪತ್ರ ಸಾರ್ಥಕವೆಂದುಕೊಳ್ಳುತ್ತೇನೆ.

ಅರವಿಂದ ಅಡಿಗ ಅವರ "ದ ವ್ಹೈಟ್ ಟೈಗರ್" ಕೃತಿ ಭಾರತವನ್ನು ಜರಿಯುತ್ತದೆ ಎಂಬ ಕಾರಣಕ್ಕೇ ಅದಕ್ಕೆ ಬುಕರ್ ಪ್ರಶಸ್ತಿ ಸಿಕ್ಕಿತು ಎಂಬ ಎಳೆಯನ್ನು ಹಿಡಿದು ಅಡಿಗರನ್ನು ಜರಿಯುತ್ತಿರುವ ಎಲ್ಲ ಮಿತ್ರರಿಗೆ ನನ್ನ ಸಲಹೆ. ಮೊದಲು ಪುಸ್ತಕವನ್ನು ಓದಿ, ಅದರಲ್ಲಿರುವ ಭಾರತದ ಚಿತ್ರಣ ಸತ್ಯಕ್ಕೆ ದೂರವಾಗಿಯೇನೂ ಇಲ್ಲ.

ಈ ಕಥೆಯಲ್ಲಿ ಬರುವ ಪಾತ್ರವೊಂದಾದ "ಮಹಾನ್ ಸಮಾಜವಾದಿ" ಯಲ್ಲಿ ಶ್ರೀ .. ಪ್ರಸಾದ್ ಯಾದವರನ್ನು ಕಾಣಲಾರಿರಾ? ತೋರಿಕೆಗಾಗಿ ಬಡವರನ್ನು ಮಾನ್ಯ ಮಾಡಿದಂತೆ ಕಾಣಲು, ಸೌಜನ್ಯವಿದ್ದ ಶ್ರೀಮಂತರನ್ನೂ, ವಿದ್ಯಾವಂತರನ್ನೂ ತುಚ್ಛವಾಗಿ ಕಾಣುತ್ತಿದ್ದ ಈ ಮನುಷ್ಯನನ್ನು ಈ ಪುಸ್ತಕ್ದಲ್ಲಿ ಚಿತ್ರಿಸಿರುವುದು ನಿಜವಲ್ಲವೆ? ಇಂದು ರೈಲ್ವೆ ಇಲಾಖೆಯನ್ನು ನಷ್ಟದಿಂದ ಲಾಭದ ಕಡೆ ತಿರುಗಿಸಿದೆ ಎಂದು ಸುಳ್ಳೇ ಜಂಭ ಪಡುತ್ತಿರುವ, ದೇಶ ವಿದೇಶದ ಮೇನೇಜ್ ಮೆಂಟ್ ಸಂಸ್ಥೆಗಳಲ್ಲಿ ಪುಕ್ಕಟೆ ಪ್ರಚಾರ ಗಿಟ್ಟಿಸುವ ಈ ಮನುಷ್ಯನ ಮುಖ ಕಾಣದೇ ಹೋದಿರಾ?

ಇಂದು ದೇಶದ ಎಲ್ಲೆಡೆ ಇರುವ ಸಭ್ಯ ಬಿಹಾರಿಗಳನ್ನು (ಅವರ ಸಂಖ್ಯೆಯೂ ಹೆಚ್ಚೇ ಇದೆ!) ಬಿಹಾರವನ್ನೇಕೆ ಬಿಟ್ಟೀರೆಂದು ಕೇಳಿ ನೋಡಿ. ಮೂರು ಕಾರಣಗಳನ್ನು ಕೊಟ್ಟಾರು.. ಲಾಲೂ, ಲಾಲೂ, ಮತ್ತು ಲಾಲೂ.

ಪ್ರಜಾಪ್ರಭುತ್ವದಲ್ಲೇ ನಮ್ಮ ಶಕ್ತಿ ಎಂದೆಲ್ಲ ಭಾವುಕರಾಗಿ ಹನಿಗಣ್ಣಾಗಿಬಿಡುವ ನಮ್ಮ "ಪೊಲಿಟಿಕಲ್ ಕ್ಲಾಸ್" ಯಾರ ವೋಟಿನ ಬಲದ ಮೇಲೆ ಅಧಿಕಾರ ನಡೆಸುತ್ತಿದೆ? "ದ ಮರ್ಡರ್ ವೀಕ್ಲಿ" ಯಂತಹ ಪತ್ರಿಕೆಗಳನ್ನು ಓದುವ, ಮತ್ತು ಅದನ್ನು ಓದಲು ತಿಳಿದಿರುವುದೇ ಸಾಕ್ಷರತೆಯೆಂದು ನಂಬಿರುವ "ತೊನ್ನು ತುಟಿ" (ದ ವ್ಹೈಟ್ ಟೈಗರ್ ನ ಒಂದು ಪಾತ್ರ) ಯವನಂತಹವರ ರಾಜಕೀಯ ಪ್ರಜ್ಞೆಯ ಮೇಲಲ್ಲವೆ? ಇಂತಹ ಅನಾಹುತಕಾರಿ ಪ್ರಜಾಪ್ರಭುತ್ವ ಯಾರ ಉದ್ಧಾರ ಮಾಡಲು ತಾನೇ ಶಕ್ಯ?

ಭಾರತ ಹಲವು ವಿಷಯಗಳಲ್ಲಿ ಮುಂದುವರಿದ ಯಾವುದೇ ದೇಶಕ್ಕೆ ಸಡ್ಡು ಹೊಡೆಯುವ ಸಾಧನೆ ಮಾಡಿರುವುದು ನಿಜ. ಆದರೆ "ದ ವ್ಹೈಟ್ ಟೈಗರ್" ನಲ್ಲಿರುವ ಚಿತ್ರಣ ಕೂಡಾ ಅಷ್ಟೇ ಸತ್ಯ ಎನ್ನುವುದು ನಮ್ಮ ಕಣ್ಣಿಗೇಕೆ ಕಾಣಲಾರದು? ಇರುವ ಸಂಗತಿಗಳನ್ನು ಹಾಗೇ ಒಪ್ಪಿಕೊಳ್ಳುವ ಪ್ರಾಂಜಲತೆಯೇಕಿಲ್ಲ? ಸತ್ಯಮೇವ ಜಯತೇ ಎಂಬ ಉಪನಿಷದ್ ವಾಕ್ಯಕ್ಕೆ ಬೆಲೆಯೆಲ್ಲಿ?

ಇನ್ನು ಕಥೆಯ ಕಥನ ಶೈಲಿ ಮತ್ತದರ ಬೆಳವಣಿಗೆ, ಅಂತ್ಯ ಇವೆಲ್ಲಕ್ಕೂ ಕಥಾಕಾರನ ಸ್ವಾತಂತ್ರ್ಯವಿಲ್ಲವೆ? ಇದೊಂದು "ಅತ್ಯುತ್ತಮ" ಕೃತಿಯೆಂದು ನಾನು ಒಪ್ಪಲಾರೆ. ಇದಕ್ಕಿಂತ ಚೆನ್ನಾಗಿರುವ ಪುಸ್ತಕಗಳನ್ನು ನನ್ನ ಸೀಮಿತ ಅಧ್ಯಯನದಲ್ಲಿ ಕನ್ನಡದಲ್ಲೂ ಇಂಗ್ಲಿಷಿನಲ್ಲೂ ಓದಿದ್ದೇನೆ. ಆದರೆ ಭಾರತದ, ನಗರಗಳ, ಹಳ್ಳಿಗಳ (ಅದರಲ್ಲೂ ಉತ್ತರ ಭಾರತದ ಪಟ್ಟಣ ಹಾಗೂ ಹಳ್ಳಿಗಳ) ಚಿತ್ರಣದಲ್ಲಿ ಅಡಿಗರ ಕೃತಿಯಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ.

ವಾಚಕರೆಲ್ಲರಿಗೂ ನನ್ನ ವಿನಂತಿಯೆಂದರೆ ಪ್ರತಿಕ್ರಿಯಿಸುವ ಮೊದಲು ದಯವಿಟ್ಟು ಈ ಪುಸ್ತಕವನ್ನು ಓದಿ.

The White Tiger : What others Say?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+