ಭಾರತ ಜರಿದ ಅಡಿಗ ಬೂಕರ್ಗೆ ಅರ್ಹರೆ?
ದಿ ವೈಟ್ ಟೈಗರ್ ಕೃತಿ ಭಾರತದ ಕರಾಳ ಹಾಗೂ ಭೀಭತ್ಸ ಚಿತ್ರವನ್ನು ಜಗದ ಎದುರಿಗೆ ಇಟ್ಟಿರುವುದರಿಂದ ಅಸಮಾಧಾನ ಮತ್ತು ಬೇಸರ ತಂದಿರುವುದು, ಸಾತ್ವಿಕ ಸಂತಾಪವನ್ನು ಕೆರಳಿಸಿರುವುದು ಒಂದು ರೀತಿಯ ವಿಪರ್ಯಾಸವೇ ಆಗಿದೆ. ಇಂಥ ಮಹತ್ವದ ಪ್ರಶಸ್ತಿಯನ್ನು ಗಳಿಸಲು ಈ ಕೃತಿಗೆ ಅರ್ಹತೆ ಇತ್ತೇ? ಭಾರತೀಯರಿಗೆ ಅವಮಾನಗೊಳಿಸುವ ಕೃತಿಯೆಂದೇ ಇದಕ್ಕೆ ಬಹುಮಾನ ನೀಡಲಾಯಿತೇ? ಈ ವಿಷಯದಲ್ಲಿ ಚರ್ಚೆ ನಡೆಯುತ್ತಲೇ ಇದೆ.
* ಡಾ| ಜೀವಿ ಕುಲಕರ್ಣಿ, ಮುಂಬಯಿ
ಯುನೈಟೆಡ್ ಕಿಂಗ್‌ಡಂನ 2007ನೆಯ ಸಾಲಿನ ಅತ್ಯಂತ ಮಹತ್ವದ ಸಾಹಿತ್ಯಕ ಬಹುಮಾನ ಮ್ಯಾನ್ ಬೂಕರ್ ಪ್ರಶಸ್ತಿ ಈ ಸಲ ಬಹಳ ಚರ್ಚೆಗೀಡಾದ ದಿ ವೈಟ್ ಟೈಗರ್ (The White Tiger) ಎಂಬ ಕಾದಂಬರಿಗೆ ದೊರೆತಿದೆ. ಇದರ ಪ್ರಕಾಶಕರು ಹಾರ್ಪರ್ ಅಂಡ್ ಕಾಲಿನ್ಸ್. ಈ ಕೃತಿಯನ್ನು ರಚಿಸಿದವರು 34 ವರ್ಷದ ತರುಣ ಲೇಖಕರಾದ ಅರವಿಂದ ಅಡಿಗರು ಕನ್ನಡಿಗರು, ಭಾರತೀಯರು. ಇದು ಅವರ ಪ್ರಥಮ ಕಾದಂಬರಿ. ಅವರ ಮಹತ್ ಸಾಧನೆಯ ಬಗ್ಗೆ ನಮಗೆಲ್ಲಾ ಹೆಮ್ಮೆ ಹಾಗೂ ಸಂತಸ ಆಗಬೇಕಾಗಿತ್ತು, ಆದರೆ ಈ ಕಾದಂಬರಿ ಭಾರತದ ಕರಾಳ ಹಾಗೂ ಭೀಭತ್ಸ ಚಿತ್ರವನ್ನು ಜಗದ ಎದುರಿಗೆ ಇಟ್ಟಿರುವುದರಿಂದ ನಮಗೆ ಅಸಮಾಧಾನವನ್ನೂ ಬೇಸರವನ್ನೂ ತಂದಿರುವುದು, ನಮ್ಮಲ್ಲಿ ಸಾತ್ವಿಕ ಸಂತಾಪವನ್ನು ಕೆರಳಿಸಿರುವುದು ಒಂದು ರೀತಿಯ ವಿಪರ್ಯಾಸವೇ ಆಗಿದೆ. ಇಂಥ ಮಹತ್ವದ ಪ್ರಶಸ್ತಿಯನ್ನು ಗಳಿಸಲು ಈ ಕೃತಿಗೆ ಅರ್ಹತೆ ಇತ್ತೇ? ಭಾರತೀಯರಿಗೆ ಅವಮಾನಗೊಳಿಸುವ ಕೃತಿಯೆಂದೇ ಇದಕ್ಕೆ ಬಹುಮಾನ ನೀಡಲಾಯಿತೇ? ಈ ವಿಷಯದಲ್ಲಿ ಚರ್ಚೆ ನಡೆಯುತ್ತಲೇ ಇದೆ.
ಬೂಕರ್ ಪ್ರಶಸ್ತಿ ಕಳೆದ 40 ವರ್ಷಗಳಿಂದ ನಡೆದುಕೊಂಡು ಬಂದಿದೆ (1969ರಿಂದ). ಕಾಮನ್‌ವೆಲ್ಥ್ ರಾಷ್ಟ್ರಗಳಲ್ಲಿ ವಾಸಿಸುವ ಲೇಖಕರ ಸ್ವತಂತ್ರ ಆಂಗ್ಲ ಕಾದಂಬರಿಗೆ ಈ ಬಹುಮಾನವನ್ನು ಕೊಡಲಾಗುತ್ತದೆ. ಇಲ್ಲಿಯವರೆಗೆ ಮೂರು ಜನ ಭಾರತೀಯ ಲೇಖಕರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1997ರಲ್ಲಿ ಅರುಂಧತಿ ರಾಯ್ ಅವರ ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್, 2006ರಲ್ಲಿ ಕಿರಣ್ ದೇಸಾಯಿ ಅವರ ದಿ ಇನೆಹೆರಿಟನ್ಸ್ ಆಫ್ ಲಾಸ್ ಹಾಗೂ 2008ರಲ್ಲಿ ಅರವಿಂದ ಅಡಿಗರ ದಿ ವೈಟ್ ಟೈಗರ್ (The White Tiger) ಎಂಬ ಕಾದಂಬರಿಗಳಿಗೆ ಈ ಪ್ರಶಸ್ತಿ ದೊರೆತಿದೆ. ಭಾರತೀಯ ಮೂಲದ ಇನ್ನಿಬ್ಬರು ವ್ಯಕ್ತಿಗಳಿಗೂ ಈ ಪ್ರಶಸ್ತಿ ಲಭಿಸಿದೆ. 1971ರಲ್ಲಿ ವಿ.ಎಸ್.ನೈಪಾಲ್‌ರ ಕೃತಿ ಇನ್ ಎ ಫ್ರೀ ಸ್ಟೇಟ್, 1981ರಲ್ಲಿ ಸಲ್ಮಾನ್ ರಶ್ದಿಯವರ ಕೃತಿ ಮಿಡ್ನೈಟ್ಸ್ ಚಿಲ್ಡ್ರೆನ್ ಇವುಗಳಿಗೂ ಪ್ರಶಸ್ತಿ ದೊರೆತಿತ್ತು.
ಪ್ರಸ್ತುತ ವರ್ಷ ಈ ಸ್ಪರ್ಧೆಯಲ್ಲಿ ಭಾಗವಹಿಸಿದ 112 ಪುಸ್ತಕಗಳಲ್ಲಿ 13 ಪುಸ್ತಕಗಳನ್ನು ಅಂತಿಮ ಹಂತಕ್ಕೆ ತಲುಪಿದ್ದವು. ಅದರಲ್ಲಿ ಇಬ್ಬರು ಭಾರತೀಯ ಲೇಖಕರ ಕೃತಿಗಳಿದ್ದವು. ಅದರಲ್ಲಿ ಒಂದು ಅಡಿಗರ ಕೃತಿಯಾದರೆ ಇನ್ನೊಂದು ಅಮಿತಾವ್ ಘೋಷ್ ಅವರ ಸೀ ಆಫ್ ಪೊಪೀಜ್ (Sea of Poppies) ಎಂಬ ಕಾದಂಬರಿಯಾಗಿತ್ತು.
ಅರವಿಂದ ಅಡಿಗರು (ಜ. 1974) ಬುದ್ಧಿವಂತರು ಎಂಬ ಬಗ್ಗೆ ಯಾವ ಸಂದೇಹವೂ ಇಲ್ಲ. ಇವರು ಮಂಗಳೂರಿನ ಸೇಂಟ್ ಎಲೋಶಿಯಸ್ ಹೈಸ್ಕೂಲಿನ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಇವರು ಎಸ್.ಎಸ್.ಸಿ. ಕ್ಲಾಸಿನಲ್ಲಿರುವಾಗ, ಪರೀಕ್ಷೆಗೆ ಒಂದು ವಾರ ಮೊದಲೇ, ಇವರ ನೆಚ್ಚಿನ ತಾಯಿ ಸ್ವರ್ಗಸ್ಥರಾದರು. ತಾಯಿ ಇವರ ಸ್ಫೂರ್ತಿಯ ಸೆಲೆಯಾಗಿದ್ದರು. ಅವರ ಆಸೆಯನ್ನು ಪೂರೈಸಲು ತಮಗಾದ ದೈವದುರ್ವಿಪಾಕವನ್ನು, ದುಃಖವನ್ನು ನಿಗ್ರಹಿಸಿ ಎಸ್.ಎಸ್.ಸಿ. ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದರು. ಇವರ ಕಕ್ಕ ಡಾಕ್ಟರರು (ಆರ್ಥೋಪೀಡಿಕ್ ಸಜನ್), ತಂದೆ ಡಾಕ್ಟರರು. ಆದರೆ ಇವರು ತಮ್ಮ ಒಲವಿಗೆ ತಕ್ಕ ದಾರಿಯನ್ನು ಆರಿಸಿಕೊಂಡರು. ಕೆಲಕಾಲ ತಂದೆಯವರೊಂದಿಗೆ ಆಸ್ಟ್ರೇಲಿಯಾದಲ್ಲಿದ್ದರು. ಇವರ ಶಿಕ್ಷಣ ಕೋಲಂಬಿಯ ಹಾಗೂ ಆಕ್ಸ್‌ಫರ್ಡನಲ್ಲಿ ನಡೆಯಿತು. ಪತ್ರಿಕೋದ್ಯಮ ಇವರ ವೃತ್ತಿಯಾಯಿತು. ಇವರು ಮೊದಲು ಟೈಮ್ ಪತ್ರಿಕೆಯ ಭಾರತದ ಕರೆಸ್ಪಾಂಡಟ್ ಆಗಿದ್ದರು. ಆಗ ಬೀಹಾರ್, ದೆಹಲಿ, ಬೆಂಗಳೂರು ಮೊದಲಾದ ಕಡೆಗಳಲ್ಲಿ ಕೆಲಸ ಮಾಡಿದರು ಈಗ ಮುಂಬೈಯಲ್ಲಿ ನೆಲಸಿದ್ದಾರೆ. ಪತ್ರಿಕೋದ್ಯಮಿಯಾಗಿ ಭಾರತದ ಕರಾಳ ಮುಖವನ್ನು ಇವರು ಕಂಡಿದ್ದಾರೆ. ತಮ್ಮ ಅನುಭವ ಹಾಗೂ ಕಲ್ಪನೆಗಳನ್ನು ಬೆರಸಿ ತಮ್ಮ ಪ್ರಥಮ ಕಾದಂಬರಿಯನ್ನು ರಚಿಸಿದ್ದಾರೆ. ಒಂದು ಸಂದರ್ಶನದಲ್ಲಿ ತಮಗೆ ಕಾದಂಬರಿ ಬರೆಯಲು ಸ್ಫೂರ್ತಿ ದೊರೆತದ್ದು ಕಪ್ಪು ಅಮೇರಿಕನ್ ಲೇಖಕರ ಕೃತಿಗಳು ಎಂದಿದ್ದರು. (Ralph Ellisonn's 'Invisible Man', Richard Wright's 'Black Boy').
ಅಡಿಗರ ಕೃತಿಗೆ ಬಹುಮಾನ ದೊರೆತದ್ದು ಬಹಳ ಜನ ವಿಮರ್ಶಕರ ಅಸಮಾಧಾನಕ್ಕೆ, ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ನಮ್ಮ ದೇಶವನ್ನು ಕಡಿಮೆ ಬೆಳಕಿನಲ್ಲಿ ಚಿತ್ರಿಸಿದ್ದಾರೆ, ಎಂದು ಒಬ್ಬರು ಬರೆದರೆ, ಈ ಪುಸ್ತಕ ನಮ್ಮನ್ನು ಮೂರು ದಶಕ ಹಿಂದಕ್ಕೆ ಒಯ್ಯುತ್ತದೆ. ಎಂದು ಇನ್ನೊಬ್ಬರು ಬರೆಯುತ್ತಾರೆ. ಭಾರತದ ಬಗ್ಗೆ ಹೀನಾಯವಾಗಿ ತೆಗಳಿ ಬರೆದ ನೈಪಾಲರನ್ನು ನಾನು ದ್ವೇಷಿಸುತ್ತಿದ್ದೆ ಅಂತಹದೇ ಕೆಲಸ ಅಡಿಗ ಮಾಡಿದ್ದಾರೆ. ಭಾರತದಲ್ಲಿ ಕಂಡುಬಂದ ಕೆಟ್ಟದ್ದು, ಹೀನಾಯವಾದುದರ ಮೇಲೆಯೇ ಇವರು ತಮ್ಮ ದೃಷ್ಟಿ ಕೇಂದ್ರೀಕರಿಸಿದ್ದಾರೆ ಎಂದು ಬರೆದವರೂ ಇದ್ದಾರೆ.
ದಿ ವೈಟ್ ಟೈಗರ್ ಕಾದಂಬರಿಯ ನಾಯಕ ಬಲರಾಮ ಹಲವಾಯಿ ಎಂಬ ವ್ಯಕ್ತಿ ಉತ್ತರದ ಕಪ್ಪು ಪ್ರದೇಶದಲ್ಲಿ ಜನಿಸಿದವ, ಬಹಳ ಶೋಚನೀಯ ಪರಿಸರದಲ್ಲಿ ಬೆಳೆದವ. ಹಳ್ಳಿಯಿಂದ ದಿಳ್ಳಿಗೆ ಬಂದ. ಶ್ರೀಮಂತರ ಮೊಟಾರ್-ಕಾರಿನ ಸಾರಥಿಯಾದ. ಅವರಿಂದ ಶೋಷಿತನಾದ. ಅವರ ಕುಕರ್ಮ ಹಾಗೂ ಕುವ್ಯಾಪಾರಗಳಿಗೆ ಪ್ರತ್ಯಕ್ಷದರ್ಶಿಯಾದ. ಸೇವಕನಾಗಿ ದುಡಿಯುವ ಬಂಧನದಿಂದ ಬಿಡಿಸಿಕೊಳ್ಳಲು ಮಾಲೀಕನನ್ನು ಕೊಂದು, ಹಣವನ್ನು ದೋಚಿಕೊಂಡು ಬೆಂಗಳೂರಿಗೆ ಬಂದು ಬೇರೆ ಹೆಸರಿನಲ್ಲಿ ನೆಲಸಿದ. ಒಂದು ಉದ್ಯಮ ಪ್ರಾರಂಭಿಸಿದ. ತನ್ನನ್ನು ಸಾಮಜವಾದಿ ಉದ್ಯಮಿ ಎಂದು ಕರೆದುಕೊಂಡ. ತಾನು ಮಾಡಿದ ಪಾಪದ ಬಗ್ಗೆ ಅವನಿಗೆ ಎಳ್ಳಷ್ಟೂ ಪಶ್ಚಾತ್ತಾಪವಾಗಲಿಲ್ಲ. ಬಿಳಿಯ ಹುಲಿಯಂತೆ ಬೆಳೆದ. ತನ್ನ ಕತೆಯನ್ನು ಪತ್ರ ರೂಪದಲ್ಲಿ ಭಾರತ ಸಂದರ್ಶಿಸಲಿದ್ದ ಚೀನದ ಪ್ರಧಾನಿಗೆ ಬರೆದ. ಇದು ಕಾಲ್ಪನಿಕ. ಆದರೆ ಕಾಲ್ಪನಿಕ ಕಥೆಯ ಹಂದರದಲ್ಲಿ ಓದುಗರಿಗೆ ಶಾಕ್ ಕೊಡುವಂತಹ ಹಲವಾರು ಸನ್ನಿವೇಶಗಳ ಚಿತ್ರಣವಿದೆ.
ಒಬ್ಬ ಸಂದರ್ಶಕ ಲೇಖಕರನ್ನು ಕೇಳಿದ, 'ನೀವು ಸಮಾಜವನ್ನು ದೊಡ್ದಹೊಟ್ಟೆಯವರು, ಸಣ್ಣಹೊಟ್ಟೆಯವರು ಎಂದು ವಿಭಾಗಿಸುವುದು ಸರಿಯೇ?' ಆಗ ಲೇಖಕರು ಉತ್ತರ ಕೊಟ್ಟದ್ದು ಹೀಗೆ, 'ಈ ರೀತಿಯ ವಿಭಜನೆ ಕಾದಂಬರಿಯ ನಾಯಕ ಬಲರಾಮ ಹಲವಾಯಿಯದು, ನನ್ನದಲ್ಲ' ಎಂದು. ಇದು ಜಾಣತನದ ಉತ್ತರ.
ಒಂದು ಕಲಾಕೃತಿ, ಅದರ ಯೋಗ್ಯತೆ ಏನೇ ಇರಲಿ, ಇಂದು ಪ್ರಕಾಶಕರ, ಉದ್ಯಮದ ಪ್ರಚಾರದ ಒಂದು ಸಾಧನವಾಗುತ್ತಲಿದೆ. ಈ ಪುಸ್ತಕದ ಪ್ರಚಾರ ವೈಖರಿ ನೋಡಿದರೆ ಅಚ್ಚರಿಯಾಗುತ್ತದೆ. ಪುಸ್ತಕದ ಒಳ ಹೊದಿಕೆಯಲ್ಲಿ ಬರೆದ ಕೆಲವು ಸಾಲುಗಳು ಓದುಗರ ದಿಕ್ಕು ಕೆಡಿಸುವಂತಿವೆ. ಅಲ್ಲಿಯ ಒಂದು ವಾಕ್ಯ ಹೀಗಿದೆ: ಮಹತ್ವದ ಸಾಹಿತ್ಯಕ ಪ್ರತಿಭೆಯನ್ನು ಪ್ರಸ್ತುತಪಡಿಸುವ ದಿ ವೈಟ್ ಟೈಗರ್ ಎಂಬ ಕಾದಂಬರಿಯು ಪ್ರಖರಮತಿಯ, ಕುತೂಹಲ ಕೆರಳಿಸುವ, ಪ್ರಶ್ನಾರ್ಹವಾದ ನೈತಿಕನೆಲೆಯ ಕಥೆಯನ್ನು ಒಳಗೊಂಡಿದ್ದು ಈ ಸಹಸ್ರಮಾನವು ಕಂಡ ಅತ್ಯಂತ ಪರಿವರ್ತನಶೀಲ, ಆಕರ್ಷಕ ಹಾಗೂ ಚತುರ ನಿರೂಪಕನ ಕೃತಿಯಾಗಿದೆ.












Click it and Unblock the Notifications