ಲಘು ಪ್ರಬಂಧ: ಕನ್ನಡ ಗಾದೆಗಳಲ್ಲಿ ಕಿಲಕಿಲ ಪ್ರಜ್ಞೆ!
'ಅಟ್ಟದಿಂದ ಬಿದ್ದವನ ದಡಿಯಿಂದ ಚಚ್ಚಿದರು', 'ಗಂಗೆಗೆ ಹೋದರೂ ತಂಬಿಗೆ ಮ್ಯಾಲೆ ಜ್ಞಾನ', 'ಅಜ್ಜಾ ಮದುವೆ ಎಂದರೆ,ಎನಗೋ? ಎಂದ', 'ಅನಂತಯ್ಯನ ಮಾತ್ರೆ ವೈಕುಂಠ ಯಾತ್ರೆ!' ಈ ರೀತಿಯ ಗಾದೆಗಳನ್ನು ಕೇಳಿದಾಗ ಪಕ್ಕನೆ ನಗೆ ಬಾರದೆ ಇರದು. ನಮ್ಮ ಹಿರಿಯರು ಗಾದೆಗಳಲ್ಲಿ ಈ ರೀತಿ ಹಾಸ್ಯರಸವನ್ನು ಹದವಾಗಿ ಬೆರಸಿ ಸೂಕ್ಷ್ಮವಾಗಿ ತಿಳಿಹೇಳಿರುವುದುಗಾದೆಮಾತಿನ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ.
ಗಾದೆ ವೇದಕ್ಕೆ ತಲೆದಿಂಬು, ಗಾದೆ ವೇದಕ್ಕೆ ಸಮ ಎನ್ನುವ ಮಾತುಗಳೆಒಂದು ರೀತಿ 'ವೇದ'ವಾಕ್ಯಗಳಿದ್ದ ಹಾಗೆ, ಗಾದೆಗಳು ಅನುಭವದ ನುಡಿಮುತ್ತುಗಳು. ಯಾಕೊ ಬರಬರುತ್ತ ನಮ್ಮ ಮಾತಿನಲ್ಲಿಗಾದೆಮಾತಿನ ಬಳಕೆ ಕಡಿಮೆಯಾಗುತ್ತಿದೆ. ಹಾಗೆಯೆ ನಮ್ಮಲ್ಲಿ ಹಾಸ್ಯಪ್ರಜ್ಞೆಯು 'ಅವರ್ಗೀಯ ವ್ಯಂಜನ'ವಾಗುತ್ತಿದೆ. ಸಮಯಕ್ಕೆ ಬಾರದ ಗಾದೆ ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗಿ 'ಎಂದೂ ಇಲ್ಲದ ಗೌಡ ಹಿಂದುಮುಂದಾಗಿ ಕುದುರೆ ಹತ್ತಿದಂಗೆ'ಗಾದೆಗಳನ್ನೂ ಬಳಸುತ್ತಿದ್ದಾರೆ.
'ಶೀಲವಂತ ಓಣೀಲಿ ಕೋಳಿ ಮಾಯವಾಯ್ತಂತೆ!' ಅನ್ನುವ ಗಾದೆ ಮಾತು ನಾನಾರ್ಥಗಳನ್ನು ಹೊಮ್ಮಿಸುತ್ತದೆ. ಕೋಳಿಯನ್ನು ಬೇರೆ ಓಣಿಯವರು ಕದ್ದಿರುವಸಾಧ್ಯತೆಗಳಿರಬಹುದು ಅಲ್ಲವೆ ? ಶೀಲವಂತರನ್ನೆ ಕೇಳ ಬೇಕು! 'ಅಜ್ಞಾತವಾಸದಲ್ಲಿಯೂ ಅಜ್ಞಾನಿಗಳ ಕಾಟ ತಪ್ಪಲಿಲ್ಲ' ಎನ್ನುವಮಾತು ಇಂದಿಗೂ ಎಷ್ಟು ಪ್ರಸ್ತುತ ನೋಡಿ, ನಾವು ಎಲ್ಲೊ ಅಜ್ಞಾತದಲ್ಲಿ ಕುಳಿತಿದ್ದರೂ ಮೊಬೈಲ್ ಫೋನ್ ರಿಂಗಾಗಿ ಕಾಟಕೊಡೋದು ತಪ್ಪೋದಿಲ್ಲ! 'ಅಪ್ಪ ಸತ್ತ ಆರು ತಿಂಗಳಿಗೆ ಹುಚ್ಚು ಮಾವ ಬಂದು ಕೊರಳು ತಬ್ಬಿಕೊಂಡು ಅತ್ತ' ಎನ್ನುವ ದುಃಖದಮಾತೂ ಹಾಸ್ಯಕ್ಕೆ ಹೊರತಾಗಿಲ್ಲ. 'ಅವುಟು ಇದ್ದವಗೆ ಸವುಟಿನಿಂದ ಹೊಡೆದ ಹಾಗೆ' ಎನ್ನುವ ಮಾತು ಸೌಟಿನ ಬಳಕೆಯಪ್ರಾಚೀನತೆಯನ್ನು ತಿಳಿಸುವುದರ ಜೊತೆಗೆ ಅವುಟು(ಸಣ್ಣ ಫಿರಂಗಿ)ಇದ್ದವನ ತೊಂದರೆಯನ್ನು ತಿಳಿಸುತ್ತದೆ!
ಇತ್ತೀಚೆಗೆ ಅಲ್ಲ ಸಲ್ಲದಕೆಲಸಗಳಲ್ಲಿ ಕೈಹಾಕುವುದು ಸಾಮಾನ್ಯವಾಗಿ 'ಅಲ್ಲದ ಕೆಲಸಕ್ಕೆ ಹೋಗಿ ಹಲ್ಲು ಮುರಿಸಿಕೊಳ್ಳುವು ಸಾಮಾನ್ಯವಾಗಿದೆ'. ಪಕ್ಕದಮನೆಯ ಆದರ್ಶ ದಂಪತಿಗಳ ಕಿತ್ತಾಟ ನೋಡಲು, ಕ್ಷಮಿಸಿ ಬಿಡಿಸಲು ಹೋಗಿ ಹಲ್ಲೇನು ಮೂಳೆನೂ ಮುರಿಸಿಕೊಳ್ಳುವಸಂಭವವೆ ಹೆಚ್ಚು. 'ಅಂಗಿ ಕೊಟ್ಟು ಬಂಗಿ ಸೇದಿ ಮಂಗನಾದ' ಅನ್ನುವ ಮಾತನ್ನು ದೀರ್ಘವಾಗಿ ಆಲೋಚಿಸಿದರೆ ಬಂಗಿ ಸೇದಿ ಮಂಗನಾದ ಮೇಲೆ ಅಂಗಿ ಬಿಚ್ಚಿದ್ದರೆ ಚನ್ನಾಗಿತ್ತು ಅನ್ನಿಸುತ್ತದೆ. 'ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ', 'ಆಡಿಬಂದ ಕತ್ತೆ ಅಡಿಕೆ ತಂದ ಕತ್ತೆಯನ್ನು ಓಡ್ಯಾಡಿಸಿ ಒದ್ದಿತಂತೆ' ಈ ಎರಡು ಗಾದೆಗಳನ್ನು ಕೇಳಿದ ಮೇಲೆ ವಿಧಿ ವೈಚಿತ್ರ್ಯವನ್ನದೆವಿಧಿ ಇಲ್ಲ. 'ಆನೆ ಮೇಲೆ ಹೋಗುವವನ ಸುಣ್ಣ ಕೇಳಿದ ಹಾಗೆ' ಅಂದರೆ ಸುಣ್ಣಕ್ಕೆ ಬದಲಾಗಿ ಮತ್ತಿನ್ನೇನಾದರು ಕೇಳಬೇಕಾಗಿತ್ತಾ ಎಂಬ ಅನುಮಾನ ಕಾಡುತ್ತದೆ.
ಈಗೀಗ ಮರೆಗುಳಿತನ ಹೆಚ್ಚುತ್ತಿದೆ ಜ್ಞಾಪಕ ಶಕ್ತಿ ವರ್ಧನೆಗೆ ಅನೇಕ ಗುಳಿಗೆಗಳು ಬಂದು ಆ ಗುಳಿಗೆಗಳ ಹೆಸರೆಜ್ಞಾಪಕವಿಲ್ಲದಂತಾಗಿದೆ. ಈ ಮರೆಗುಳಿಗಳನ್ನು ನೋಡಿಯೆ 'ಇಟ್ಟದ್ದು ಮರೆತು ಕುಟ್ಟಿಕೊಂಡ' ಎನ್ನುವ ಮಾತುಹುಟ್ಟಿಕೊಂಡಿರಬೇಕು? ಈ ಗಾದೆ ಕೇಳಿದ ಮೇಲಾದರೂ ಪೂರ್ವದಿಂದಲೂ ಮರೆಗುಳಿಗಳಿದ್ದಾರೆ ಅಂಥ ಮರೆಗುಳಿಗಳು ಕೊಂಚ ಸಮಾಧಾನ ಪಡಬಹುದು.
ಇತ್ತಿತ್ತಲಾಗಿ ನಗರ ಪ್ರದೇಶಗಳಲ್ಲಿ ಭೂಗಳ್ಳರು ಅಧಿಕವಾಗಿ 'ಭೂಮಿ' ಕಳಕೊಂಡವರ ಸಂಖ್ಯೆಯು ಅಧಿಕವಾಗುತ್ತಿದೆ. 'ಇತ್ತಿತ್ತಬಾ ಅಂದರೆ ಇದ್ದ ಮನೆಯನ್ನು ಕಿತ್ತು ಕೊಂಡ', 'ಇತ್ತಿತ್ತ ಬಾ ಅಂದರೆ ಹೆಗಲ ಮೇಲೆ ಹತ್ತಿಕೊಂಡ' ಅನ್ನುವಮಾತುಗಳೆರಡನ್ನೂ ಸೇರಿಸಿ ಇತ್ತಿತ್ತ ಬಾ ಅಂದರೆ ಹೆಗಲ ಮೇಲೆ ಹತ್ತಿಕೊಂಡು ಮನೆಯನ್ನು ಕಿತ್ತುಕೊಂಡ ಅಂತಬದಲಾಯಿಸಿದರೆ ಚೆನ್ನಾಗಿರುತ್ತದೇನೊ? ಯಾಕೆಂದರೆ ನಗರದಲ್ಲಿನ ಭೂಗಳ್ಳರನ್ನೆ ಉದ್ದೇಶಿಸಿ ಈ ಮಾತನ್ನು ಸೂಚ್ಯವಾಗಿಹೇಳಿರುವುದರಿಂದ?
ಇನ್ನು 'ಇರುಳು ನೋಡಿ ಮರುಳುಗೊಂಡ' ಎನ್ನುವ ಮಾತನ್ನು ನಮ್ಮ ಆಧುನಿಕ ಕವಿಪುಂಗವರಿಗೆ ಅನ್ವಯಿಸಬಹುದೇನೊ? ಏಕೆಂದರೆ ಪ್ರಕೃತಿಯ ರಮಣೀಯತೆಯಲ್ಲ ಬರಡಾಗಿ ಇರುಳೊಂದೆ ಇವರ ಮುಂದೆ ಕವಿದಿರುವುದರಿಂದ.'ಈತನಿಗಿಂತ ಆತ ವಾಸಿ ಎಬ್ಬಿಸಿದರೆ ಉಣ್ಣುತ್ತಾನೆ' ಅಂದರೆ ಆತ ಈಗಾಗಲೆ ಉಣ್ಣಿದ್ದಾನೆ ಎಂದೆ?ಕಂಡ ಕಂಡಲ್ಲಿ ಉಗುಳುವುದು ಕೆಲವರ ಶೋಕಿ 'ಉಗುಳಿ ಉಗುಳಿ ರೋಗ ಬೊಗಳಿ ಬೊಗಳಿ ರಾಗ' ಅನ್ನುವ ಮಾತುಇಂತಹವರನ್ನು ನೋಡಿಯೆ ಅಂದಿರ ಬೇಕು. ನಗರದಲ್ಲಿ ಉಗುಳುವವರ ಹಾಗು ಬೊಗಳುವವರ ಜಾತಿ ಎರಡೂ ಹೆಚ್ಚಾಗಿಯೆಇರುವುದರಿಂದಲೂ ಹಾಗೆ ಹೇಳಿರಬಹುದು. ಇನ್ನು ಬೊಗಳುವುದು ನಾಯಿಗಳೆ ಆದ್ದರಿಂದ ಊಳಿಡುವುದೆ ರಾಗ ಎನ್ನಬಹುದೆ?
ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಕಾಳಜಿ ಇಲ್ಲಸಲ್ಲದ ವೈದ್ಯಪದ್ಧತಿಗಳನ್ನು ಅರಸಿ 'ಉಚ್ಚೆ ಕುಡಿಯಲಿಕ್ಕೆ ಉಪ್ಪು ಕೇಳಿದ' ಅನ್ನುವ ಮಾತು ಬಹುಶಃ ಮೂತ್ರಪಾನ ಆರಂಭಿಸಿರುವವರನ್ನು ಉದ್ದೇಶಿಸಿ ಹೇಳಿರಬೇಕು. 'ಉಬ್ಬೆ ಮಳೆಗೆ ಗುಬ್ಬಿ ತಲೆ ನೆನೆಯುವುದಿಲ್ಲ',ಬೆಂಗಳೂರಿನಲ್ಲಿ ಗುಬ್ಬಿಗಳೆ ಇಲ್ಲ ಅಂದ ಮೇಲೆ ತಲೆ ನೆನೆಯುವುದು ಎಲ್ಲಿಂದ ಬಂತು. 'ಉರಿಶೀತವಾಗಿ ನರಿ ಸತ್ತಿತು' ಅಂದರೆ ಶೀತಕ್ಕೆ ಕಾರಣ ಕದ್ದು ತಿಂದ ಹುಳಿದ್ರಾಕ್ಷಿಯೆ ಇರಬೇಕು. 'ಎತ್ತಿನ ಮುಂದೆ ತೆಂಗಿನ ಕಾಯಿ ಹೊಡೆದ ಹಾಗೆ' ಎಂದರೆ ತೆಂಗಿನಕಾಯಿ ಆಯುವವರಿಗೆ ಎತ್ತು ಹಾಯುತ್ತದೆ ಎನ್ನುವ ಸೂಚನೆಯೆ? ಇಲ್ಲಾ ಎತ್ತು ಗಾಬರಿ ಬಿದ್ದು ಜಾಡಿಸಿ ಒದೆಯುತ್ತದೆ ಎಂಬ ಭಯವೆ? 'ಎರಡುದಾಸರಿಗೆ ನಂಬಿ ಕುರುಡು ದಾಸ ಕೆಟ್ಟ' ಈ ಗಾದೆ ಕೇಳಿ ಪಾಪ ಎನ್ನದೆ ವಿಧಿ ಇಲ್ಲ. 'ಎಲ್ಲರೂ ನಕ್ಕರೆ ಹುಚ್ಚ ತಾನೂ ನಕ್ಕ' ಅಂದರೆಹುಚ್ಚ ನಗಬಾರದಾಗಿತ್ತು ಎಂತಲೆ? ಹುಚ್ಚ ಏನು ಮಾಡಿದರೂ ಪಾಪ ಹುಚ್ಚ ತಾನೆ ಅವುನು. 'ಎಂದೂ ಇಲ್ಲದ ಮಾಣಿಅಮಾವಸೇ ದಿನ ಓದಕೂತ' ಪಾಪ ಲೋಡ್ ಶೆಡ್ಡಿಂಗ್‌ನಿಂದ ಪ್ರತಿ ದಿನವೂ ಅಮಾವಾಸ್ಯೆ ಆಗಿದ್ದರೆ ಇನ್ನೇನು ತಾನೆ ಮಾಡಿಯಾನು.
ಇನ್ನು 'ಗೌಡರ' ಕುರಿತು ಇರುವ ಗಾದೆಗಳಿಗೆ ಬರವಿಲ್ಲ. 'ಏನು ಗವುಡ ಅಂದರೆ ಕಂಬಳಿಗೆ ಮೂರು ಹಣ' ಅಂದನಂತೆ, ಅನ್ನದೆಇನ್ನೇನು ಮಾಡುತ್ತಾನೆ. ಗೌಡರಿಗೊ ನಿದ್ದೆಯ ಸಮಸ್ಯೆ ಕಂಬಳಿ ಹೊದ್ದರೆ ಗಡದ್ದಾಗಿ ನಿದ್ದೆ ಹೋಗಬಹುದು ಅನ್ನಿಸಿ ಕಂಬಳಿಯೆಮುಖ್ಯವಾಗಿರಬೇಕು. 'ಒಳ್ಳೆಯವರ ಮಾನ ಹಳ್ಳೀಲಿ ಹೋಯಿತು' ಅಂದರೆ ಹಳ್ಳಿಯವರ ಮಾನ ನಗರದಲ್ಲಿ ಹೋಯಿತು ಎಂದೆ?
'ಒರಳಲ್ಲಿ ಕೂತರೆ ಒನಕೆ ಪೆಟ್ಟು ತಪ್ಪೀತೆ?' ಕೂರಕ್ಕೆ ಎಲ್ಲೂ ಸ್ಥಳ ಸಿಗದಾಗ ಒರಳಲ್ಲಿ ಕೂತಿರ ಬೇಕು ಹಾಗಾಗಿ ಒನಕೆಯಲ್ಲಿಕುಟ್ಟಿಸಿಕೊಂಡವನೆ ಈ ಗಾದೆ ಹೆಣೆದಿರಬೇಕು. 'ಕನ್ನಂಬಾಡಿಯಲ್ಲಿ ಕಂಬಳಿ ಕಿತ್ತುಕೊಂಡರೆ ಬಲಮುರಿಯಲ್ಲಿ ಹಲ್ಲುಮುರಿಕಚ್ಚಿಕೊಂಡನಂತೆ', ಬಲಮುರಿಯಲ್ಲಿ ಚಳಿಯಾಗಿರಬೇಕು ಅನ್ನಿಸುತ್ತದೆ. 'ಕಳ್ಳಗೆ ಚೇಳು ಬಡಿದ' ಹಾಗೆ ಅನ್ನುವ ಮಾತು 'ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ' ಅನ್ನುವ ಮಾತಿಗೆ ಪ್ರೇರಣೆಯಾಗಿರಬೇಕು.
'ಕಾಟನಾಯಕನ ಮನೆಗೆ ಕನ್ನಾ ಹಾಕಿದರೆನೇತಾಡುವುದು ಎರಡು ಬಂಗೀ ಚೀಲ' ಅಂದರೆ ಕಳ್ಳ 'ನಾಯಕನ' ಮನೆಗೆ ಕನ್ನಾ ಹಾಕಬೇಕಾಗಿತ್ತು ಎಂದೆ? 'ಕಾಲ ಕೆಟ್ಟಿತು ಕಾಗೆರಾಗಿ ತಿಂತು' ಅಂದರೆ ರಾಗಿ ತಿಂದೋನು ನಿರೋಗಿ ಅನ್ನುವ ಮಾತು ಕಾಗೆಗೂ ಅರ್ಥವಾಗಿರಬೇಕು. ಕೋಗಿಲೆ ಸುತ್ತಲೂಕಾಗೆಗಳು ಕೂಡಿದ ಹಾಗೆ ಏಕೆಂದರೆ ಕೋಗಿಲೆಯ ಸುಶ್ರಾವ್ಯ ಕಂಠವನ್ನು ಕೇಳಲು ಇರಬಹುದೆ? 'ಕೊಳ್ಳಿ ತೆಗೆದುಕೊಂಡು ತಲೆತುರಿಸಿಕೊಂಡರೆ' ಉಚಿತ ಕೇಶ ಮುಂಡನವಾಗುತ್ತದೆ, ಅದೇ ಬೊಕ್ಕ ತಲೆಯಾದರೇನೆ ಸಮಸ್ಯೆ. 'ಚೋಟುದ್ದ ಮಗುವಿಗೆಗೇಣುದ್ದ ಕುಲಾವಿ', ಇನ್ನೇನಾಗುತ್ತದೆ ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲೆಸಿದರೆ. 'ತುಳ್ಳಾಡಿ, ತುಳ್ಳಾಡಿ ಮುಳ್ಳಿನ ಮೇಲೆಬಿದ್ದ' ಅಂದರೆ ಬಹುಶಃ ತಲೆಸುತ್ತಿ ಬಿದ್ದಿರಬೇಕು, ಬಿದ್ದ ತಕ್ಷಣೆ ಜ್ಞಾನಬಂದಿರುತ್ತದೆ! 'ತೇಗಿ ತೇಗಿ ಬೀಗಿ ಬಿದ್ದ' ಅನ್ನುವ ಮಾತುಇದಕ್ಕೆ ಜೊತೆಯಾಗಬಹುದು.
ಹೀಗೇ ನಾವು ಹುಡುಕುತ್ತಾ ಹೋದರೆ ಗಾದೆಗಳಲ್ಲೂ ಹಾಸ್ಯ ಲಾಸ್ಯವಾಡುತ್ತದೆ. ಗಾದೆಗಳಲ್ಲಿ ಬರೀ ಹಾಸ್ಯವನ್ನಷ್ಟೇ ಹುಡುಕಿದರೆ 'ಓದಿಬೂದಿ ಹುಯ್ಕೊಂಡಂತಾಗುತ್ತದೆ ಅಷ್ಟೆ', ಹಾಗಾಗಬಾರದು. 'ಉಪ್ಪಿನ ರಾಸೀ ಮೇಲೆ ಮಜ್ಜಿಗೆ ತಟಕಿ'ನಂಗೆ ಈ ಹಾಸ್ಯಮಯಗಾದೆಗಳು. 'ತುತೂರಿ ಧ್ವನಿ ಕೇಳಿ ತುರಿಸಿಕೊಂಡು ಓಡಿಹೋಗುವ' ಹಾಗೆ ಈ ಗಾದೆಗಳನ್ನು ಕೇಳಿ ತುರಿಸಿಕೊಳ್ಳದೆ ನೋವ ಮರೆಸಿಕೊಳ್ಳಬೇಕು. ನಮ್ಮ ಪೂರ್ವಿಕರ ಕಿಲಕಿಲ ಪ್ರಜ್ಞೆಗೆ ತಲೆಬಾಗಲೇ ಬೇಕು. ನೀವೇನಂತೀರಿ?












Click it and Unblock the Notifications