ಕಣ್ಮನ ತಣಿಸುವ ಹೂವು ಬಿಗ್ನೋನಿಯ
ಈ ಸುಮರಾಣಿ ಅಮೆರಿಕಾದಿಂದ ಮಲೆನಾಡಿನ ಅಂಗಳಕ್ಕೆ ಬಂದದ್ದು ಹೇಗೆ? ಕರೆತಂದವರು ಯಾರು?
- ಆರ್. ಶರ್ಮಾ, ತಲವಾಟ
[email protected]
ಮನೆಯ ಮಾಡು ಕೆಂಪು ಬಣ್ಣದ ಹೂವುಗಳಿಂದ ಅಂದವಾಗಿ ಕಾಣಿಸುತ್ತಿತ್ತು ಎಂದು ಹೇಳಿದರೆ ಅಭಾಸವಾದೀತಲ್ಲವೆ? ವಾಕ್ಯದ ಆರಂಭದಲ್ಲಿ ಮನೆಯೆದುರಿನ ಗಾರ್ಡನ್ ಎಂದಾಗಬೇಕಾಗಿತ್ತು ಅಂತ ಅನ್ನಿಸಲೂಬಹುದು. ಆದರೆ ನಿಮ್ಮ ಮನೆಯ ಹೊರಗಡೆ ಗೋಡೆಯ ಸಮೀಪ ಬಿಗ್ನೋನಿಯಾ ಬಳ್ಳಿಯ ಗಿಡ ನೆಟ್ಟರೆ ಮೊದಲು ಹೇಳಿದ ಮಾತಿನ ಅರ್ಥವಾಗುತ್ತದೆ. ಮತ್ತು ಸತ್ಯ ತಿಳಿಯುತ್ತದೆ.
ಬಿಗ್ನೋನಿಯಾ ನಿರಂತರ 2 ತಿಂಗಳುಗಳ ಕಾಲ ಬಾಡದೆ ಬಿರು ಬಿಸಿಲಿನ ದಿನಗಳಲ್ಲಿ ಕಣ್ಣಿಗೆ ತಂಪು ನೀಡುವ ಹೂವುಗಳ ಬಳ್ಳಿ. ಕಹಳೆಯಾಕಾರದ ಈ ಹೂ ಪ್ಲಾಸ್ಟಿಕ್ ಹಾಳೆಗಳನ್ನು ಕತ್ತರಿಸಿ ಮಾಡಲಾಗಿದೆಯೇನೋ ಎಂಬಂತಿರುತ್ತದೆ. ಫೆಬ್ರವರಿಯಿಂದ ಹೂ ಅರಳಲಾರಂಭಿಸಿದರೆ ಏಪ್ರಿಲ್ ಅಂತ್ಯದವರೆಗೂ ನಿರಂತರ ಹೂ ಬಿಡುತ್ತಲೆ ಇರುತ್ತದೆ. ಮಲೆನಾಡಿನಲ್ಲಿನ ಬಂಗಾರದ ಬೆಳೆ ಎಂದು ಹೆಸರಾಗಿದ್ದ ವೆನಿಲಾಕ್ಕೂ ಇದಕ್ಕೂ ಬಹಳ ಸಾಮ್ಯತೆ ಇದೆ. ವೆನಿಲಾ ಕೂಡ ಇದೇ ಸಮಯದಲ್ಲಿ ಹೂವು ಬಿಡುತ್ತದೆ.
ಬಿಗ್ನೋನಿಯಾ ಬಳ್ಳಿಯ ಮೂಲ ದಕ್ಷಿಣ ಅಮೆರಿಕ. ಆ ನಾಡಿನಿಂದ ಮಲೆನಾಡಿಗೆ ಬಂದದ್ದು ಹೇಗೆ ಎನ್ನುವ ಮಾಹಿತಿ ತಿಳಿದಿಲ್ಲ. ಇದು ಫಿಗ್ ವರ್ಟ್ ಫ್ಯಾಮಿಲಿಗೆ ಸೇರಿದೆ. ಉಷ್ಣ ವಲಯದ ಕಾಡುಗಳಲ್ಲಿ ಕಲಾಬಾಷ್ ಮರಗಳಿಗೆ ಹಬ್ಬುವ ಬಿಗ್ನೋನಿಯ ಆ ಮರಗಳಿಗೆ ಸೌಂದರ್ಯ ತರಿಸುತ್ತದೆ. ಇದರ ಹೂ ಮಕರಂದವನ್ನು ಹೊಂದಿದ್ದು ತುಡುವೆ ಜೇನನ್ನು ಆಕರ್ಷಿಸುತ್ತದೆಯಾದರೂ ಫಲಿತಗೊಂಡು ಕಾಯಿ ನಮ್ಮ ಮಲೆನಾಡಿನಲ್ಲಿ ಬಿಡುವುದಿಲ್ಲ. ಗೆಲ್ಲುಗಳಿಂದ ತಳಿ ಅಭಿವೃದ್ದಿಯಾಗುತ್ತದೆ. ಮನೆಯ ಬಳಿ ನೆಟ್ಟರೆ ಮನೆಗೆಲ್ಲಾ ಹಬ್ಬಿ ಕಣ್ಮನ ತಣಿಸುವುದು ನಿಶ್ಚಿತ.
ಮಲೆನಾಡಿನಲ್ಲಿ 10 ವರ್ಷದ ಹಿಂದೆ ಗಾರ್ಡನ್ ಪ್ರಿಯರ ಮನೆ ಪ್ರವೇಶಿಸಿದ ಬಿಗ್ನೋನಿಯಾ ಜನವರಿ ತಿಂಗಳಿನಿಂದ ನಾಲ್ಕು ತಿಂಗಳ ಕಾಲ ಕಣ್ಣಿಗೆ ತಂಪು ನೀಡುತ್ತಿರುವುದು ಸತ್ಯ. ಅಮೆರಿಕಾದ ತುದಿಯಿಂದ ಇಲ್ಲಿಗೆ ತಂದವರ್ಯಾರು ಎನ್ನುವುದು ತಿಳಿದಿದ್ದರೆ ಆ ಸತ್ಯ ಇನ್ನಷ್ಟು ಅರ್ಥಪೂರ್ಣವಾಗಿರುತ್ತಿತ್ತು. ನಿಮಗೇನಾದರೂ ಗೊತ್ತಾ?












Click it and Unblock the Notifications