• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಣ್ಣವಿಲ್ಲದ ಬೆಂಗಳೂರೆಂಬ ಊರಲ್ಲಿ ಂದು ನೆಮ್ಮದಿಯಾಗಿರೊ ಜೀವವಾದರೂ ಎಲ್ಲಿದೆ?

By Staff
|
  • ದಟ್ಸ್‌ಕನ್ನಡ ಬ್ಯೂರೊ
A feeling of Harmony is missing Todayಮುಸ್ಲಿಮರ ನಡವಳಿಕೆಯಲ್ಲಿ ಎಂದಿನ ಸಂಭ್ರಮವಿಲ್ಲ .

ಹಿಂದೂಗಳ ಮುಖದಲ್ಲಿನ ಆತಂಕದ ಗೆರೆಗಳು ಸಡಿಲವಾಗಿಲ್ಲ.

ಕ್ರಿಶ್ಚಿಯನ್ನರನ್ನು ಖಿನ್ನತೆ ಆವರಿಸಿಕೊಂಡಿದೆ.

ಬಹುಶಃ ಇಂಥದೊಂದು ಸಂದರ್ಭ ಬೆಂಗಳೂರಿನಲ್ಲಿ ಈವರೆಗೆ ಸೃಷ್ಟಿಯಾಗಿರಲಿಲ್ಲ . ಹಿಂದೂ- ಮುಸಲ್ಮಾನ ಸಮುದಾಯಗಳು ಒಟ್ಟಿಗೇ ಆತಂಕ ಎದುರಿಸಿದ ಉದಾಹರಣೆಗಳಿವೆ. ಆದರೆ ಮೂರು ಪ್ರಮುಖ ಸಮುದಾಯಗಳು ನೆಮ್ಮದಿ ಕಳಕೊಂಡದ್ದು ಇದೇ ಮೊದಲು. ಅಸಲಿಗೆ, ಬೆಂಗಳೂರೆಂಬ ಬಣ್ಣವಿಲ್ಲದ ಊರಲ್ಲಿ ಈ ಹೊತ್ತು ನೆಮ್ಮದಿಯಾಗಿರುವ ಜೀವವಾದರೂ ಯಾವುದು? ಧರ್ಮಸಿಂಗ್‌ರಂಥ ಭಾರೀ ಘಟವೇ ‘ಧರ್ಮ’ಸಂಕಟದಲ್ಲಿ ಸಿಕ್ಕು ತೊಳಲುತ್ತಿರುವಾಗ ನೆಮ್ಮದಿಯ ಮಾತಾದರೂ ಎಲ್ಲಿಯದು?

ಇದು ಬಕ್ರೀದ್‌ ಸಮಯ. ಹಿಂದೂಗಳಿಗೆ ವರ್ಷಪೂತ್ರಿ ಹಬ್ಬಗಳಾದರೆ ಮುಸಲ್ಮಾನರಿಗೆ ವರ್ಷದ ಮೂರ್ನಾಲ್ಕು ದಿನಗಳಲ್ಲಷ್ಟೇ ಹಬ್ಬದ ಸಂಭ್ರಮ. ಅಂಥದೊಂದು ವಾರ್ಷಿಕ ಸಂಭ್ರಮ -ಬಕ್ರೀದ್‌! ಪ್ರತಿವರ್ಷ ಬಕ್ರೀದ್‌ ಸಂದರ್ಭದಲ್ಲಿ ಬೆಂಗಳೂರು ತುಂಬ ಮುಸಲ್ಮಾನ ಬಂಧುಗಳ ಸಂಭ್ರಮ ಆವರಿಸಿಕೊಳ್ಳುತ್ತಿತ್ತು . ಕೃಷ್ಣರಾಜ ಮಾರುಕಟ್ಟೆ , ಶಿವಾಜಿನಗರ, ಜಯನಗರ, ಮಡಿವಾಳ, ಮುಂತಾದೆಡೆಗಳಲ್ಲಂತೂ ಮುಸ್ಲಿಂರ ಜಾತ್ರೆ. ಮಸೀದಿಗಳಲ್ಲಂತೂ ದಿನವಿಡೀ ಚಟುವಟಿಕೆ. ಹೊಸಬಟ್ಟೆ ತೊಟ್ಟು , ಅತ್ತರು ಪೂಸಿಕೊಂಡು, ಸಣ್ಣದೊಡ್ಡವರ ಭೇದವಿಲ್ಲದೆ ಎದುರಾದವರೆಲ್ಲರಿಗೂ ಸಲಾಂ ಹೇಳುತ್ತಾ, ಖುಷಿಯಿಂದ ಓಡಾಡುವ ಮುಸ್ಲಿಂ ಗೆಳೆಯರನ್ನು ನೋಡುವುದೇ ಒಂದು ಹಬ್ಬ. ಈ ಬಾರಿ?

ಈ ಬಾರಿಯೂ ಮಸೀದಿಗಳಲ್ಲಿ ನಮಾಜು ನಡೆದಿದೆ. ಆದರೆ ಸಂಭ್ರಮಕ್ಕೆ ಬರ ಬಂದಿದೆ. ಬಕ್ರೀದ್‌ ಸಂಭ್ರಮದ ಮೇಲೆ ಬೆನ್ನಿ ಹಿನ್‌ ಕರಿ ನೆರಳು ಆವರಿಸಿಕೊಂಡಿದೆ. ಈಹೊತ್ತು , ನಗರದ ತುಂಬಾ ಮುಸಲ್ಮಾನ ಬಂಧುಗಳು ಓಡಾಡಿಕೊಂಡಿರಬೇಕಿತ್ತು : ಆದರೆ, ಗನ್ನು ಹಿಡಿದ ಪೊಲೀಸರು, ಬೆನ್ನಿಗೆ ಧಿಕ್ಕಾರ ಕೂಗುವ ಪ್ರತಿಭಟನಾಕಾರರು ಎಲ್ಲೆಡೆ ಠಳಾಯಿಸುತ್ತಿದ್ದಾರೆ. ಜಯನಗರ, ಚಾಮರಾಜಪೇಟೆ, ಬಿಟಿಎಂ ಬಡಾವಣೆ, ಶಿವಾಜಿನಗರ, ಕೃಷ್ಣರಾಜ ಮಾರುಕಟ್ಟೆಗಳಲ್ಲಿ ಮುಸ್ಲಿಂರ ಸಾಮೂಹಿಕ ನಮಾಜು ನಡೆದಿದೆಯಾದರೂ ಅಲ್ಲೊಂದು ಆತಂಕದ ಸುನಾಮಿ ಇದ್ದಂತಿದೆ. ಕೆಲವೆಡೆ ಕಲ್ಲು ತೂರಾಟ ನಡೆದಿದೆ. ಕನಿಷ್ಠ ಹದಿನೈದು ಬಸ್ಸುಗಳು ಜಖಂಗೊಂಡಿವೆ ಎಂದು ಸ್ವತಃ ಪೊಲೀಸ್‌ ಆಯುಕ್ತರು ಒಪ್ಪಿಕೊಂಡಿದ್ದಾರೆ.

ಹೋಗಲಿ ಕ್ರಿಶ್ಚಿಯನ್ನರಾದರೂ ನೆಮ್ಮದಿಯಾಗಿದ್ದಾರಾ? ಅವರು ಬಹುಸಂಖ್ಯಾತರ ಸಂಶಯದ ಕಣ್ಣಿಗೆ ತುತ್ತಾಗಿದ್ದಾರೆ. ಸಣ್ಣದೊಂದು ಹಿಂಜರಿಕೆ ಅವರನ್ನು ಆವರಿಸಿದಂತಿದೆ. ಈ ನಡುವೆಯೂ ಊರಿಗೆ ದೊಡ್ಡವರಂತೆ ಓಡಾಡುತ್ತಿರುವವರು ನಿವೃತ್ತ ಪೊಲೀಸ್‌ ಅಧಿಕಾರಿಗಳಾದ ಶ್ರೀನಿವಾಸಲು, ಸಾಂಗ್ಲಿಯಾನ ಹಾಗೂ ಬೆಂಗಳೂರಿನ ಕಣ್ಮಣಿ ನಿವೃತ್ತ ನ್ಯಾಯಮೂರ್ತಿ ಎಂ.ಎಫ್‌. ಸಾಲ್ಡಾನ. ಬಿಜೆಪಿ ಪಕ್ಷ ಬೆನ್ನಿ ವಿರುದ್ಧವಾಗಿ ತೋಳೇರಿಸಿದ್ದರೂ ಬಿಜೆಪಿ ಸಂಸದ ಸಾಂಗ್ಲಿಯಾನಾ ಸಾಹೇಬರು ಬೆನ್ನಿ ಬೆನ್ನಿಗೆ ನಿಂತಿದ್ದಾರೆ. ಧರ್ಮ ಮೊದಲು ; ರಾಜಕೀಯ ಆನಂತರ?

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಂ ಬಾಂಧವರ ಸಂಖ್ಯೆ ಹೆಚ್ಚು . ಇವರೆಲ್ಲರ ಪ್ರತಿನಿಧಿಯಾಗಿರುವ ಸಾಂಗ್ಲಿಯಾನ ಈಹೊತ್ತು ಬಕ್ರೀದ್‌ ಸಂಭ್ರಮದಲ್ಲಿ ಭಾಗಿಯಾಗಬೇಕಿತ್ತು . ವಿಪರ್ಯಾಸವೆಂದರೆ, ಬೆನ್ನಿ ಕಾರ್ಯಕ್ರಮದಲ್ಲಿ ಕಳೆದುಹೋಗಿರುವ ಸಾಂಗ್ಲಿಯಾನರಿಗೆ ಕನಿಷ್ಠ ಒಂದು ಶುಭಾಶಯ ಹೇಳುವ ಪುರುಸೊತ್ತೂ ಇಲ್ಲ. ಬೆಂಗಳೂರಿನ ಉತ್ತರ ಲೋಕಸಭಾ ಕ್ಷೇತ್ರದ ಜನತೆ ಧನ್ಯ ಧನ್ಯ!

ಬೆನ್ನಿ ಹಿನ್‌ ಪ್ರಾರ್ಥನಾ ಸಭೆಯಲ್ಲಿ ಮತಾಂತರಕ್ಕೆ ಪ್ರಚೋದಿಸಲಾಗುತ್ತದೆ ಎನ್ನುವ ಹಿಂದೂ ಸಂಘಟನೆಗಳ ಆರೋಪವನ್ನು ನಾವು ಗಂಭೀರವಾಗಿ ಪರಿಗಣಿಸುವುದು ಬೇಡ. ಧರ್ಮಗಳ ವಿಷಯ ನಮಗೆ ಬೇಡವೇ ಬೇಡ. ಆದರೆ ಯೇಸು ಕ್ರಿಸ್ತನ ಅಪರಾವತಾರ ಎಂದು ಫೋಜು ಕೊಡುತ್ತಿರುವ ಬೆನ್ನಿಯನ್ನು ಬೆಂಬಲಿಸುವುದಾದರೂ ಹೇಗೆ? ಆತನ ಕೃಪೆಗಾಗಿ ಆಯ್ದ ಎರಡು ಸಾವಿರ ರೋಗಿಗಳು ಕಾದು ನಿಂತಿದ್ದಾರೆ. ಅವರಿಗೆ ರೋಗ ಗುಣವಾಗುತ್ತಾ ? ಗೊತ್ತಿಲ್ಲ . ಪ್ರಾರ್ಥನಾ ಸಭೆ ನಡೆದ ನಂತರ ರೋಗಿಗಳ ಕುರಿತು ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ . ಬೆನ್ನಿಯಿಂದ ರೋಗಿಗಳ ಬೇನೆ ಗುಣವಾಗದಿದ್ದಲ್ಲಿ , ಅದರ ನೈತಿಕ ಜವಾಬ್ದಾರಿಯನ್ನು ಬೆನ್ನಿಯ ಬೆನ್ನಿಗೆ ನಿಂತಿರುವ ಶ್ರೀನಿವಾಸಲು, ಸಾಂಗ್ಲಿಯಾನ, ಸಾಲ್ಡಾನಾ ಮುಂತಾದವರು ಹೊರುತ್ತಾರಾ? ಮನಸ್ಸುಗಳ ಜೊತೆ, ಭಾವನೆಗಳ ಜೊತೆ ಕೇವಲ ಬೆನ್ನಿ ಮಾತ್ರ ಆಟವಾಡುತ್ತಿಲ್ಲ , ಬೆನ್ನಿಯ ಬೆನ್ನಿಗೆ ನಿಂತಿರುವವರೂ ಈ ಆಟದಲ್ಲಿ ಪಾಲ್ಗೊಂಡಿದ್ದಾರೆ. ಒಂದು ವ್ಯತ್ಯಾಸವೆಂದರೆ- ಆಟದ ನಂತರ ಬೆನ್ನಿ ಅಮೆರಿಕಾಕ್ಕೆ ವಾಪಸ್ಸಾಗುತ್ತಾನೆ, ಬೆನ್ನಿಗೆ ನಿಂತವರು ಇಲ್ಲಿಯೇ ಉಳಿದು ಜಾತ್ಯತೀತತೆಯ ಉಪದೇಶ ಕೊಡಲು ತೊಡಗುತ್ತಾರೆ. ನಮ್ಮ ನೆನಪಿನ ಶಕ್ತಿ ತುಂಬಾ ಕ್ಷೀಣವಾದದ್ದು !

ನಮ್ಮ ನಡುವೆ ಸಾಯಿಬಾಬಾ ಇದ್ದಾರೆ. ಸಚ್ಚಿದಾನಂದ ಸ್ವಾಮಿ ಇದ್ದಾರೆ. ಅಸ್ಲಾಂ ಬಾಬಾ ಚಿಕಿತ್ಸೆಯೂ ಇದೆ. ಹೀಗಾಗಿ ಬೆನ್ನಿಯನ್ನು ಟೀಕಿಸುವ ನೈತಿಕ ಹಕ್ಕು ನಮಗಿಲ್ಲ ಎನ್ನುವ ಟೀಕೆ ತರ್ಕಕ್ಕಾಗಿ ಮಾತ್ರವೇ ಸಲ್ಲುತ್ತದೆ. ಬಾಬಾಗಳಿಗೆ ನಮ್ಮ ವಿರೋಧ ಯಾವತ್ತಿಗೂ ಇದ್ದದ್ದೇ. ಹಾಗೆಯೇ ಬೆನ್ನಿಯನ್ನೂ ವಿರೋಧಿಸುತ್ತಿದ್ದೇವೆ. ಆದರೆ ನಮ್ಮ ಸಂಕಟ ಬೇರೆಯೇ ಆಗಿದೆ. ಇಂಥದೊಂದು ಸಾಮೂಹಿಕ ವಂಚನೆಯ ಕಾರ್ಯಕ್ರಮದ ಬೆಂಬಲಕ್ಕೆ ಇಡೀ ಆಡಳಿತ ಯಂತ್ರ ಟೊಂಕ ಕಟ್ಟಿ ನಿಂತಿದೆಯಲ್ಲ ; ಬೇಲಿಯೇ ಎದ್ದು ಮೇಯುವಾಗ ಯಾರಿಗೆ ದೂರುವುದು? ನಮ್ಮ ಬಾಬಾಗಳ ಸಂಪಾದನೆಯ ಒಂದು ಭಾಗವಾದರೂ ಜನೋಪಯೋಗಿ ಕಾರ್ಯಗಳಿಗೆ ವಿನಿಯೋಗವಾಗುತ್ತಿದೆ. ಆದರೆ ಈ ಬೆನ್ನಿ ಬಾಬಾ ಕೋಟಿಗಟ್ಟಲೆ ಹಣ ದೋಚಿಕೊಂಡು ಅಮೆರಿಕಾಕ್ಕೆ ಪರಾರಿಯಾಗುತ್ತಾನಲ್ಲ , ಈ ದುರಂತಕ್ಕೆ ಏನನ್ನುವುದು?

ಇನ್ನು ಬೆನ್ನಿಯ ಭಾರತಕ್ಕಾಗಿ ಪ್ರಾರ್ಥನೆಯ ವಿಷಯ. ಬೆನ್ನಿ ಭಾರತಕ್ಕಾಗಿ ಏನೆಂದು ಪ್ರಾರ್ಥಿಸುತ್ತಾರೆ. ಭಾರತದ ಹಳ್ಳಿಗಳು, ರೈತ, ಮಳೆಬೆಳೆ, ಈ ನೆಲದ ಸೊಗಡು-ಕಮಟು, ಇದೆಲ್ಲ ಸಾಂಗ್ಲಿಯಾನ-ಶ್ರೀನಿವಾಸಲು ಅವರಿಗೇ ಗೊತ್ತಿಲ್ಲದಿರುವಾಗ ಬೆನ್ನಿ ಏನೆಂದು ಭಾರತಕ್ಕಾಗಿ ಪ್ರಾರ್ಥಿಸುತ್ತಾರೆ. ಆತನ ಪ್ರಾರ್ಥನೆ ಪ್ರಾಮಾಣಿಕವೇ ಆಗಿದ್ದಲ್ಲಿ , ಆತ ಬೆಂಗಳೂರಿಗೆ ಬರಬೇಕಿರಲಿಲ್ಲ , ತಮಿಳುನಾಡಿಗೆ ಹೋಗಬೇಕಿತ್ತು. ಕಡಲು ನುಂಗಿದ ಊರುಗಳಲ್ಲಿ ಶ್ರೀಮಂತ ಬೆನ್ನಿಗಾದರೂ ಏನು ಕೆಲಸ?

ಬಾಬಾಗಳನ್ನು ವಿರೋಧಿಸಿದ ನರಸಿಂಹಯ್ಯನವರು ಆಸ್ಪತ್ರೆಯಲ್ಲಿ ಏದುಸಿರು ಬಿಡುತ್ತಿರುವ ಹೊತ್ತಿನಲ್ಲೇ ಬೆನ್ನಿ ಬೇನೆ ಬೆಂಗಳೂರನ್ನು ಆವರಿಸಿಕೊಂಡಿದೆ. ಕಾಕತಾಳೀಯ ಎಂದರೆ ಇದಲ್ಲವೆ?

ವಾರ್ತಾ ಸಂಚಯ

ಕ್ರಿಸ್ತನನ್ನು 2 ಸಲ ನೋಡಿದ್ದೇನೆ, ನಾನು ಆತನ ದೂತ- ಬೆಂಗಳೂರಲ್ಲಿ ಬೆನ್ನಿ

ಬೆನ್ನಿ ಸಮ್ಮೋಹಿನಿಗೆ ಸರ್ಪಗಾವಲು ; ಭದ್ರತೆಗಾಗಿ 10000 ಪೊಲೀಸರು

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more