ಕನ್ನಡವೇ ಜಗತ್ತಿನ ಮೊದಲ ಭಾಷೆ !

  • ಎ.ಆರ್‌. ಮಣಿಕಾಂತ್‌
ಅದು ಕನ್ನಡದ ಹೆಸರಾಂತ ಕವಿ, ವಿದ್ವಾಂಸ ತೀನಂಶ್ರೀಕಂಠಯ್ಯನವರ ಮನೆಯಂಗಳ. ಅಲ್ಲಿಗೆ ಅದೊಮ್ಮೆ ಬೇಂದ್ರೆ ಬಂದಿದ್ದರು. ಅವರನ್ನು ಎರಡು ದಿನ ತಮ್ಮಲ್ಲಿಯೇ ಉಳಿಸಿಕೊಂಡ ತೀ.ನಂ.ಶ್ರೀ-ತಮ್ಮ ಆಪ್ತಮಿತ್ರ ಎ.ಎನ್‌.ಮೂರ್ತಿರಾವ್‌ ಮತ್ತು ಇತರರನ್ನು ಮನೆಗೆ ಕರೆದರು. ಗೆಳೆಯರೆಲ್ಲ ಸೇರಿ ಬೇಂದ್ರೆಯವರ ಜತೆಗೆ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಲಿ ಎಂಬ ಸದಾಶಯ ತೀ.ನಂ.ಶ್ರೀ ಅವರದು.

ಸರಿ, ಮೂರ್ತಿರಾಯರು, ಆಗಿನ್ನೂ ವಿದ್ಯಾರ್ಥಿಯಾಗಿದ್ದ ಎನ್‌.ಎಸ್‌,ಲಕ್ಷ್ಮೀನಾರಾಯಣಭಟ್ಟರು ಸೇರಿದಂತೆ ಗೆಳೆಯರ ಹಿಂಡು ತೀನಂಶ್ರೀ. ಮನೆಗೆ ಬಂದಿತು. ಕಾವ್ಯ, ಸಾಹಿತ್ಯ, ಸಂವಾದ ಅಂದಾಕ್ಷಣ ಛಕ್ಕನೆ ಎದ್ದು ನಿಂತು ಬೇಂದ್ರೆ ತಟಕ್ಕನೆ- ‘ನೋಡೀ, ಕನ್ನಡವೇ ಜಗತ್ತಿನ ಮೊದಲ ಭಾಷೆ’ ಅಂದರು. ಹಿಂದೆಯೇ ‘ಕನ್ನಡಾಂಬೆಗೆ ಶರಣೆನ್ನಿ ’ ಎಂದೂ ಸೇರಿಸಿದರು.

ಬೇಂದ್ರೆಯವರನ್ನು ಕೆಣಕಬೇಕು ಎಂಬ ಉದ್ದೇಶದಿಂದ ಮೂರ್ತಿರಾಯರು ಕನ್ನಡವೇ ಜಗತ್ತಿನ ಮೊದಲ ಭಾಷೆ ಅಂದಿರಲ್ಲ , ಅದಕ್ಕೆ ಸಾಕ್ಷಿ ಕೊಡಿ ಅಂದರು. ಮತ್ತೆ ಎದ್ದು ನಿಂತ ಬೇಂದ್ರೆ- ಕೈಯಿಂದ ತಮ ್ಮಮೈನ ಒಂದೊಂದೂ ಅಂಗ ಮುಟ್ಟಿ ತೋರಿಸುತ್ತ ನೋಡಿ, ‘ಇದು ಕತ್ತು , ಹೌದೆ? ಇದು ಕಂಠ. ಇದು ಕಣ್ಣು. ಇದು ಕಿವಿ. ಇದು ಕೂದಲು. ಇಗೋ ಇದು ಕೈ. ಇದು ಕಾಲು. ಇದು ಕೆನ್ನೆ. ಎಲ್ಲ ವಿವರ ಶುರುವಾಗ್ತಿರೋದು ‘ಕ ’ ಅಕ್ಷರದಿಂದ ತಾನೆ? ಕನ್ನಡವೇ ಜಗತ್ತಿನ ಮೊದಲ ಭಾಷೆ ಅನ್ನೋಕೆ ಇಷ್ಟು ಸಾಕ್ಷಿ ಸಾಕಲ್ವ ಎಂದರು.

ಮೂರ್ತಿರಾಯರು ಬೇಂದ್ರೆಯವರ ಉಪಾಯ ತಿಳಿದು ಅವರನ್ನು ಕೆಡವಲು ಸಿದ್ಧರಾದರು. ತಮ್ಮ ಸೊಂಟದ ಕಡೆ ಬೆರಳು ಮಾಡಿ ‘ಇದು’? ಅಂತ ಕೇಳಿದರು. ಬೇಂದ್ರೆ ಈಗ ಸಿಕ್ಕಿಬಿದ್ದರು ಎಂದು ಅಲ್ಲಿದ್ದವರೆಲ್ಲ ಅಂದು ಕೊಳ್ಳುತ್ತಿರುವಂತೆಯೇ ತಮ್ಮ ಕೈಕೋಲಿನ ತುದಿಯಿಂದ ಮೂರ್ತಿರಾಯರ ಸೊಂಟ ಚುಚ್ಚಿದ ಬೇಂದ್ರೆ -‘ಅದು ಕಟಿ ತಾನೆ’ ಅಂದರು! ಕೂಡಲೇ ಮೂರ್ತಿರಾಯರು ಬೇಂದ್ರೆಯವರ ಪಂಚೆ ಕಡೆ ಬೆರಳು ಮಾಡಿದರು. ‘ಅದು ಕಚ್ಚೆ ಪಂಚೆ’ ಎಂಬ ಉತ್ತರ ಬಂತು! ಮೂರ್ತಿ ರಾಯರು ತಮ್ಮ ಲುಂಗಿ ಕಡೆ ತೋರಿಸುತ್ತ ಇದಕ್ಕೇನು ಹೇಳುತ್ತೀರಪ್ಪಾ? ಎಂದರೆ ಬೇಂದ್ರೆ ಎಳ್ಳಷ್ಟೂ ತಡವರಿಸದೆ ‘ಕೊಳವಿ ಪಂಚೆ’ ಎಂದು ಬಿಟ್ಟರು !

ಅಷ್ಟು ಹೊತ್ತಿಗೆ ಕಾಫಿ ಬಂತು. ಬೇಂದ್ರೆ ಅದನ್ನು ತೆಗೆದುಕೊಳ್ಳುತ್ತ ‘ಇಗೋ, ಇದು ಕಪ್ಪು , ಇದು ಕಾಫಿ, ಇದರ ರುಚಿ ಕಹಿ’ ಎಂದರು. ಅಲ್ಲಿದ್ದವರಿಗೆಲ್ಲ ಹಿಡಿಸಲಾರದ ನಗು. ತೀನಂಶ್ರೀ, ಮೂರ್ತಿರಾಯರನ್ನು ತಡೆಯುತ್ತ ‘ಯಾಕಪ್ಪ ಸುಮ್ಮನೆ ಆಯಾಸ ಮಾಡಿಕೊಳ್ಳುತ್ತೀರಿ? ಬೇಂದ್ರೆ ಹತ್ತಿರ ವಾದ ಮಾಡಿದರೆ ಸರಸ್ವತಿ ಕೂಡ ಸೋತು ಹೋಗ್ತಾಳೆ. ಇನ್ನು ನಮ್ಮ -ನಿಮ್ಮದು ಯಾವ ಲೆಕ್ಕ? ಸುಮ್ಮನಿರಿ ಅಂದರಂತೆ!

ಹಾಗಿದ್ದರು ನಮ್ಮ ಬೇಂದ್ರೆ.

ಜ್ಞಾನಪೀಠಿ ಬೇಂದ್ರೆ ವಿಲಾಸವ ಕುರಿತು ಇನ್ನಷ್ಟು ಓದಿ- ಸಾಧನ ಕೇರಿಯ ಶ್ರಾವಣ ಪ್ರತಿಭೆ !

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+