ಗುಲಾಮ್‌ ಆಲಿ ಜತೆ

  • ಸಚ್ಚಿದಾನಂದ ಹೆಗಡೆ
Gulam Aliಮೊನ್ನೆ ಕೊನೆಗೂ ಗುಲಾಮ್‌ ಆಲಿಯ ಕಾರ್ಯಕ್ರಮ ನೋಡಾಯಿತು.

ಚೀಟಿಯಿಂದ ಎಂಟು ತಿಂಗಳ ಕಾಲ ಹಣ ಒಟ್ಟು ಮಾಡಿ, ವಾಕ್‌ಮನ್‌ ಕೊಂಡಾಗ ನಾನು ಮೊದಲು ತೆಗೆದುಕೊಂಡ ಕ್ಯಾಸೆಟ್‌ ಇದೇ ಗುಲಾಮ್‌ ಆಲಿಯದ್ದು. ಕ್ಯಾಸೆಟ್ಟಿನ ಹೆಸರು Greatest Hits Of Gulam Ali ಅದರಲ್ಲಿ ನನ್ನ ಪ್ರೀತಿಯ ಹಾಡುಗಳಾದ ಚುಪ್ಕೆ ಚುಪ್ಕೆ, ಹಂಗಾಮಾ ಹೇ ಕ್ಯೂ ಬರಾಪಾ ಇದ್ದವು. ಸ್ಟುಡಿಯಾ ರೆಕಾರ್ಡಿಂಗ್‌ಗಿಂತ ಲೈವ್‌ ಕ್ಯಾಸೆಟ್‌ ಇಷ್ಟವಾಗಲು ಪ್ರಾರಂಭವಾಗಿದ್ದೆ ಈ ಕ್ಯಾಸೆಟ್‌ನಿಂದ. ಹಾಡಿನ ಬಗ್ಗೆ ಮಾತಾಡುವುದು, ಪ್ರೇಕ್ಷಕರ ಚಪ್ಪಾಳೆ ವ್ಹಾ ವ್ಹಾಗಳು ನಿಜವಾದ ಗಜಲ್‌ ಕಾರ್ಯಕ್ರಮದ ವಾತಾವರಣವನ್ನು ಸೃಷ್ಟಿಸಿದ್ದವು. ಅದಾದ ಮೇಲೆ ಪ್ರತಿ ಸಂಕಷ್ಟಿಗೆ ಹೋದಂತೆ ಕ್ಯಾಸೆಟ್‌ ಅಂಗಡಿಗೆ ಹೋಗಿದ್ದೇನೆ. ಪ್ರತಿಸಾರಿಯೂ ಕ್ಯಾಸೆಟ್‌ ತೆಗೆದುಕೊಂಡಿದ್ದೇನೆ. great hits ಎನ್ನುವ ತಲೆ ಬರಹದ ಕ್ಯಾಸೆಟ್‌ ಎಷ್ಟಿವೆ ಎಂದು ಹಾಡಿದ ಅವನಿಗೂ, ಕೇಳಿದ ನಮಗೂ ಇನ್ನೂ ಗೊತ್ತಾಗಿಲ್ಲ.

ಗುಲಾಮ್‌ ಆಲಿಯ ಕ್ಯಾಸೆಟ್‌ಗಳು ಹಾಸ್ಟೆಲಿನ ನನ್ನ ಹಾಸಿಗೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದವು. ನನಗೊಂದು ಧೈರ್ಯವಿತ್ತು -ಇಂತಹ ಕ್ಯಾಸೆಟ್ಟುಗಳನ್ನು ಯಾರೂ ಕಳ್ಳತನ ಮಾಡುವುದಿಲ್ಲವೆಂದು. ಹಾಸ್ಟೆಲಿನಲ್ಲಿ ಬಹಳಷ್ಟು ಜನ ಕ್ಯಾಸೆಟನ್ನು ನೋಡಿ ಈ ಕೆಟ್ಟ ಮುಖ ಯಾರದ್ದು ಎಂದು ಕೇಳಿ ಆಶ್ಚರ್ಯಗೊಂಡಿದ್ದಾರೆ. ನನಗೆ ಮಾತ್ರ ಆತನ ಮುಖದ ಪ್ರತಿ ಕಲೆಯೂ ಒಂದೊಂದು ಮಿಶ್ರ ರಾಗದಲ್ಲಿ ಸಂಯೋಜಿಸಿದ ಶ್ರೇಷ್ಠ ಗಜಲ್‌ಗಳಂತೆ ಭಾಸವಾಗಿವೆ.

ಕಲಿಕೆ ಮುಗಿದು ಕೆಲಸಕ್ಕೆ ಸೇರಿದ ಮೇಲೆ ನನ್ನಲಿರುವ ಎಲ್ಲಾ ಕ್ಯಾಸೆಟ್‌ಗೆ ಪರ್ಯಾಯವಾಗಿ ಸಿಡಿಯನ್ನು ತಂದಿರಿಸಿದ್ದೆ. ನಂತರದ ನನ್ನ ವಿದೇಶಿ ಪ್ರವಾಸದ ವೇಳೆ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಲಗೇಜು ಎಂದು ತೋರಿಸಿದಲ್ಲಿ, ಉಪ್ಪಿನಕಾಯಿ, ಎಂಟಿಆರ್‌ ಪೌಡರ್‌, ಹಲಸಿನ ಹಪ್ಪಳಕ್ಕಿಂತ ಹೆಚ್ಚಾಗಿ ಗುಲಾಮ್‌ ಆಲಿ ಸಿಡಿಗಳ ಭಾರವೇ ಹೆಚ್ಚಾಗಿತ್ತು. ಡೆಟ್ರಾಯಿಟ್‌ನ ಒಂದು ವಿಡಿಯೋ ಪಾರ್ಲರ್‌ನಲ್ಲಿ ಗುಲಾಮ್‌ ಆಲಿಯ ಒಂದು ಡಿವಿಡಿ ನೋಡಿ ಅತ್ಯಂತ ಖುಷಿ ಪಟ್ಟಿದ್ದೆ. ನಂತರ ಖರೀದಿಸಿ ನೋಡಿದರೆ ಅದರ ರೆಕಾರ್ಡಿಂಗ್‌ ಒಂದು ಮದುವೆ ಮನೆಯಲ್ಲಿ ಮಾಡಿದ್ದ ಖಾಸಗೀ ಕಾರ್ಯಕ್ರಮದ್ದು. ಎದುರು ನಡೆದಾಡುವವರು, ಹಿಂದಿನಿಂದ ನೋಡುವವರು, ಮದುವೆಯ ಮನೆಯಲ್ಲಿನ ಮಕ್ಕಳ ಮುಟ್ಟಾಟ ಹಾಗೂ ಆ ಡಿವಿಡಿಯ ಪ್ರಿಂಟು ಬೇಸರ ತಂದಿದ್ದವು.

ಎರಡು ತಿಂಗಳ ಹಿಂದೆ ಗುಲಾಮ್‌ ಆಲಿಯ ಕಾರ್ಯಕ್ರಮವನ್ನು ಟೀವಿಯಲ್ಲಿ ನೋಡಿದ್ದೆ, ಆತನಿಗೆ ಧ್ವನಿ, ಆ ಪೂಟು ಇರಲಿಲ್ಲ, ಧ್ವನಿಯನ್ನು ಏರಿಸಲಿಕ್ಕಂತಲೂ ಆಗುತ್ತಲೆ ಇರಲಿಲ್ಲ. ನಾನು ತುಂಬಾ ಆತಂಕಗೊಂಡೆ. ಇನ್ನು ಇವರು ಹಾಡುವುದು ಮುಗಿಯಿತು ಎಂದುಕೊಂಡೆ.

ಇತ್ತೀಚೆಗೆ ಗುಲಾಮ್‌ ಆಲಿ ಭಾರತಕ್ಕೆ ಬಂದಿದ್ದು ಮದುವೆ ಸಮಾರಂಭಕ್ಕೆ. ಶ್ರೇಷ್ಠ ಸಂಗೀತಗಾರರಾದ ರಾಜನ್‌-ಸಾಜನ್‌ ಮಿಶ್ರಾ ಅವರ ಮದುವೆಗೆ. ಆ ನೆಪದಲ್ಲಿ ದೂರದ ಬೆಂಗಳೂರಿಗೆ ಕಾರ್ಯಕ್ರಮದ ಸಲುವಾಗಿ ಅವರು ಬಂದದ್ದು ನನಗಂತೂ ತುಂಬ ಖುಷಿ ಕೊಟ್ಟಿತು.

ಮೊದಲಿನಂತೆ ಕಾರ್ಯಕ್ರಮದ ದಿನ ಮ್ಯೂಸಿಕ್‌ ಹಾಲಿನ ಎದುರು ಟಿಕೆಟ್‌ ತೆಗೆದುಕೊಳ್ಳುವ ಕಾಲವಲ್ಲ ಇದು. ವಾರ, ಹದಿನೈದು ದಿನಗಳ ಮುಂಚೆ ಟಿಕೆಟ್‌ ಪಡೆಯಬೇಕು. ಟಿಕೆಟ್‌ ಬೆಲೆಯಂತೂ ನಿಜವಾದ ಆಸಕ್ತಿಯುಳ್ಳ ಮಧ್ಯಮ ವರ್ಗದವರಿಗೆ ಎಟಕುವಂಥದಲ್ಲ. ಆದರೂ ಏಳೆಂಟು ವರ್ಷಗಳಿಂದ ನನ್ನನ್ನು ಖುಷಿಯಲ್ಲಿಟ್ಟ ಗುಲಾಮ್‌ ಆಲಿಯನ್ನು ಒಂದು ಸಾರಿ ನೋೕಡಬೇಕು, ಎದುರು ಕುಂತು ಹಾಡು ಕೇಳಬೇಕು ಎಂದು ಕೊಂಡಿದ್ದೆ. ಪ್ರತಿ ತಿಂಗಳು ನಾವು ಖರ್ಚು ಮಾಡುವ ಬಟ್ಟೆಯ ಬಾಬ್ತು, ಕೇಬಲ್‌ ಹಣ, ಐಬ್ರೊ, ಫೇಶಿಯಾದ ಖರ್ಚನ್ನು ಗಮನಿಸಿದರೆ, ಕಾರ್ಯಕ್ರಮದ ರೇಟು ಏನೂ ಅಲ್ಲ ಅನಿಸಿತು. ಆ ಕಾರ್ಯಕ್ರಮದ ನೆನಪಿನ ಗಂಟುಗಳು ಜೀವನದುದ್ದಕ್ಕೂ ಶಾಶ್ವತ. ಜೀವನದ ಎಲ್ಲಾ ಘಟನೆಗಳು ಬ್ಯಾಕಪ್ಪುಗಳಾಗಿ, ಮೆಮೊರಿಗಳಾಗಿ ಪರಿವರ್ತನೆಯಾಗುತ್ತದೆ. ಮೆಮರಿ ವಿಚಾರಕ್ಕೆ ಬಂದರೆ ಅದು ನಮ್ಮೆಲ್ಲರ ಜೀವನದ ಹಾರ್ಡ್‌ವೇರು ಹೌದು, ಸಾಫ್ಟ್‌ವೇರು ಹೌದು. ಬೇಕಾದಾಗ ನೆನಪಿಸಿಕೊಂಡು ಆ ಲೋಕದಲ್ಲಿ ಅಡ್ಡಾಡಬಹುದಾದ ವರ್ಚುವಲ್‌ ರಿಯಾಲಿಟಿ!

ಕೊನೆಗೂ ಕಾರ್ಯಕ್ರಮ ಆರಂಭವಾಯಿತು. ಮೊದಲೆರಡು ಹಾಡುಗಳಲ್ಲಿನ ಇಳಿಧ್ವನಿ ನನಗೆ ಮತ್ತೆ ಆತಂಕಕ್ಕೆ ಎಡೆ ಮಾಡಿತ್ತು. ಆದರೆ ಎರಡು ಹಾಡಿನ ನಂತರ ಒಂದು ರೀತಿಯ ವಿದ್ಯುತ್‌ ಸಂಚಾರ, ಧ್ವನಿಯ ಬದಲಾವಣೆ, ಮಂದ್ರ, ತಾರಸಪ್ತಕಗಳಲ್ಲಿ ಅವರ ಧ್ವನಿ ಸಂಚಾರ. ಪ್ರಸ್ತುತ ಪಡಿಸಿದ ರೀತಿ ನೋಡಿ ಅತ್ಯಂತ ಖುಷಿಪಟ್ಟಿದ್ದೆ. ನೂರಾ ಒಂದನೇ ಸಾರಿ ಅದೇ ಅದೇ ಹಾಡುಗಳನ್ನು ಕೇಳಿದೆ. ಎಲ್ಲವೂ ಹೊಸತು!

ಗುಲಾಮ್‌ ಆಲಿ ಶ್ರೇಷ್ಠ ಹಿಂದುಸ್ಥಾನಿ ಸಂಗೀತಗಾರರಿಗೂ ಸವಾಲಾದವನು. ಮೆಂಹದಿ ಹಸನ್‌ ಗಜಲನ್ನು ಒಂದು ಸುಂದರ ಹೆಣ್ಣನ್ನಾಗಿ ಮಾಡಿದರೆ ಈತ ಗಜಲನ್ನು ಮದುವಣಗಿತ್ತಿಯನ್ನಾಗಿ ಪರಿವರ್ತಿಸಿದಾತ. ಗಜಲ್‌ಗಳ ನಾಲ್ಕನೇ ಸಾಲಿನಲ್ಲಿರುವ ತಿರುವು ಉಳಿದ ಮೂರು ಸಾಲುಗಳನ್ನು ನಿಷ್ಕಿೃಯೆ ಮಾಡಬಹುದು ಅಥಾವ ಮೂರು ಸಾಲುಗಳಿಂದ ತಿಳಿದುಕೊಂಡ ವಿಚಾರಗಳನ್ನು ಗಟ್ಟಿ ಅಥವಾ ಬೇರೆ ದಿಕ್ಕುಗಳಿಗೆ ತೆಗೆದುಕೊಂಡು ಹೋಗಬಹುದು. ಈ ಗಜಲ್‌ ಸಾಹಿತ್ಯದ ಮೂಲ ಶೈಲಿಯನ್ನು ತನ್ನ ಸಂಗೀತ ಸಂಯೋಜನೆಯಲ್ಲಿ ಮಿಶ್ರ ರಾಗಗಳ ಬಳಕೆಯಿಂದ ಅಂದಾಜು ಮಾಡಲಾಗದ ರೀತಿಯಲ್ಲಿ ಕಟ್ಟಿಕೊಟ್ಟವನು ಗುಲಾಮ್‌ ಆಲಿ.

ಇದೆಲ್ಲಾ ನೆನಪಿಗೆ ಬಂದದ್ದು ಇತ್ತೀಚೆಗೆ ನನ್ನ ಕಾರಿನಲ್ಲಿ ಕಳ್ಳತನವಾದಾಗ; ಕಾರಿನ ಗ್ಲಾಸು ಒಡೆದು ಅಲ್ಲಿನ ಆಡಿಯೋ ಪ್ಯಾನಲ್‌ ಮತ್ತು ಹತ್ತು ಹನ್ನೆರಡು ಕ್ಯಾಸೆಟ್‌ ಕದ್ದಿದ್ದರು. ಎಲ್ಲಾ ಕ್ಯಾಸೆಟ್‌ ಕದ್ದ ಆತ, ಗುಲಾಮ್‌ ಆಲಿಯ ಕ್ಯಾಸೆಟ್‌ ಬಿಟ್ಟು ಹೋಗಿದ್ದ !

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+