ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀಗೂ ಒಂದು ವೇಣುಗಾನ ಕಛೇರಿ!

By Staff
|
Google Oneindia Kannada News


ನಿಗದಿತ ಸಮಯ - ಸಂಜೆ 7 ಗಂಟೆಗೆ ಸರಿಯಾಗಿ ವೇದಿಕೆಯನ್ನೇರಿದೆವು. ಸಾಕಷ್ಟು ಶ್ರೋತೃಗಳು(ಮಹಿಳೆಯರೇ ಜಾಸ್ತಿ) ಆಗಲೇ ಜಮಾಯಿಸಿದ್ದರು. ಪರಶುರಾಮನಿಗೆ ಮನದಲ್ಲೇ ವಂದಿಸಿ, ಚಿರನೂತನ ಗಣೇಶ ವಂದನೆಯಾದ ‘ವಾತಾಪಿ ಗಣಪತಿಂ’ ಕೀರ್ತನೆಯಾಡನೆ ಕಾರ್ಯಕ್ರಮ ಆರಂಭ. ಮುಂದಿನದು ನಾನು ಕೊಳಲು ನುಡಿಸಲು ಹೇಗೆ ಕಲಿತೆ ಎಂಬುದರ ಬಗ್ಗೆ ಒಂದು ಕಿರು ಪ್ರಾತ್ಯಕ್ಷಿಕೆ. ಧರ್ಮಸ್ಠಳ ಜಾತ್ರೆಯಿಂದ ನಾಲ್ಕಾಣೆ ಕೊಳಲು ಖರೀದಿ, ಊದಲು ಪ್ರಯತ್ನಿಸುವಾಗಿನ ಪೀ ಪೀ ರಾಗ, ಒಂದೇ ಕೈಯಿಂದ ‘ಪಾಪಿಯ ಜೀವನ ಪಾವನಗೊಳಿಸುವ’ ಹಾಡು ಮೂಡಿ ಬಂದ ಬಗೆ ಮುಂತಾದವುಗಳನ್ನು ನುಡಿಸಿ ತೋರಿಸಿದೆ.

ಸಂಪ್ರದಾಯಬದ್ಧ ಸಂಗೀತ ಕಛೇರಿಯನ್ನು ನಿರೀಕ್ಷಿಸಿದ್ದವರಿಗೆ ಏನೋ ವಿಚಿತ್ರವೆನ್ನಿಸಿರಬಹುದು. ಅಂತೂ ಎಲ್ಲರೂ ಕಣ್ಣು ಬಾಯಿ ಬಿಟ್ಟು ಗಮನವಿಟ್ಟು ಕೇಳುತ್ತಿದ್ದರು. ನನ್ನ ಕಾಲೇಜು ವಿದ್ಯಾಭ್ಯಾಸದ ನಂತರ ಮಂಗಳೂರು ಸೇರಿದ ಮೇಲೆ ಕಲಾನಿಕೇತನದಲ್ಲಿ ಶಾಸ್ತ್ರೀಯ ತರಬೇತಿ ಇತ್ಯಾದಿಗಳ ಬಗ್ಗೆ ತಿಳಿಸಿ ಎರಡನೆಯ ಹಾಡು ಹಿಂದೋಳ ರಾಗದ ‘ಸಾಮಜವರ ಗಮನ’ ನುಡಿಸಿದೆ. ಮುಂದಿನ ಸಾಲಿನಲ್ಲಿ ಕುಳಿತ ವಿದ್ವಾಂಸರು ತಾಳ ಹಾಕುತ್ತಾ ನನಗೆ ಸಹಾಯ ಮಾಡುತ್ತಿದ್ದರು. (ಅದು ಒಂದು ರೀತಿಯ ಪರೀಕ್ಷೆಯೂ ಹೌದು! )

ಇನ್ನು ಪಂಡಿತರಿಗಿಂತ ಪಾಮರರತ್ತ ಹೆಚ್ಚು ಗಮನ ಕೊಡುವುದು ಸೂಕ್ತವೆಂದೆಣಿಸಿ, ಮಾಧುರ್ಯಕ್ಕೆ ಶಾಸ್ತ್ರೀಯ, ಲಘು, ಭಾವ ಗೀತೆ, ಭಕ್ತಿ ಗೀತೆ, ಚಿತ್ರ ಗೀತೆ ಎಂಬ ಯಾವ ವ್ಯತ್ಯಾಸವೂ ಇಲ್ಲ , ಶಾಸ್ತ್ರೀಯವೆಂದಾಕ್ಷಣ ಎಲ್ಲವೂ ಅತ್ಯುತ್ತಮ, ಉಳಿದದ್ದೆಲ್ಲಾ ಕಳಪೆ ಎಂಬುದು ಸರಿಯಲ್ಲ, ಕಾಳು-ಜೊಳ್ಳು ಎಲ್ಲ ಕಡೆಯೂ ಇದೆ, ಒಂದು ಉತ್ತಮ ಮೌಲ್ಯವುಳ್ಳ ಹಾಡು ಚಲನಚಿತ್ರದಲ್ಲಿ ಬಂದರೆ ಅದು ಸ್ವೀಕಾರಾರ್ಹವಲ್ಲ ಎಂಬ ಮಡಿವಂತಿಕೆ ಸಲ್ಲ, ಜೇನ್ನೊಣವು ವಿವಿಧ ಜಾತಿಯ ಹೂಗಳಿಂದ ಮಕರಂದವನ್ನು ಸಂಗ್ರಹಿಸಿ ಜೇನು ತಯಾರಿಸುವಂತೆ ಯಾವುದೇ ಮೂಲದಿಂದ ಬಂದರೂ ಮಾಧುರ್ಯವನ್ನು ಸ್ವೀಕರಿಸುವವರೇ ನಿಜವಾದ ಸಹೃದಯರು... - ಮುಂತಾದ ವಿಚಾರಗಳನ್ನು ತಿಳಿಸಿ ನುಡಿಸಿದ ‘ಸಂತ ತುಕಾರಾಂ’ ಚಿತ್ರದ ಮೋಹನ ರಾಗದ ‘ಜಯತು ಜಯ ವಿಠಲಾ’ ಹಾಡು ಎಲ್ಲರಿಗೂ ಮೆಚ್ಚಿಗೆಯಾಯಿತು.

ಆ ಮೇಲಿನದು ಶ್ರೋತೃಗಳೂ ನೇರವಾಗಿ ಭಾಗವಹಿಸುವಂತಹ ಐಟಂ. ಮುಂದೆ ನುಡಿಸಲಿರುವ ಹಾಡು ಯಾವುದೆಂದು ಗುರುತಿಸಿದವರಿಗೆ ಅವರು ಮೆಚ್ಚಿದ ಒಂದು ಹಾಡನ್ನು ನುಡಿಸುವ ವಿಶೇಷ ಬಹುಮಾನದ ಘೋಷಣೆ. ನುಡಿಸಿದ್ದು ‘ನೀ ಮಾಯೆಯಾಳಗೋ ನಿನ್ನೊಳು ಮಾಯೆಯೋ...’, ‘ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಾ...’, ‘ಯಾಕೆನ್ನ ಈ ರಾಜ್ಯಕ್ಕೆಳೆತಂದೆ ಹರಿಯೆ...’ ಮುಂತಾದ ಅನೇಕ ಭಜನೆ ಹಾಡುಗಳಿಗೆ ಅನ್ವಯಿಸಬಹುದಾದ ಧಾಟಿ. ನಿರೀಕ್ಷಿಸಿದಂತೆಯೇ ಒಬ್ಬೊಬ್ಬರು ಒಂದೊಂದು ಉತ್ತರ ಹೇಳಿದರು. ಕೊನೆಗೆ ಬಹುಮಾನ ದಕ್ಕಿದ್ದು ‘ಯಾಕೆನ್ನ ಈ ರಾಜ್ಯ’ ಎಂದು ನನ್ನ ಮನಸ್ಸಿನಲ್ಲಿದ್ದ ಹಾಡನ್ನು ಗುರುತಿಸಿದ ಒಬ್ಬ ಸಭಿಕ ಮಹಾನುಭಾವರಿಗೆ! ಆವರ ಇಷ್ಟದ ಒಂದು ಹಾಡನ್ನು ಕಾರ್ಯಕ್ರಮದ ಕೊನೆಯ ಭಾಗದಲ್ಲಿ ನುಡಿಸುವ ಆಶ್ವಾಸನೆ ಕೊಟ್ಟೆ.

ಮುಂದೆ ಅಲ್ಲಿ ಬಹುಸಂಖ್ಯಾಕರಾಗಿದ್ದ ಮಹಿಳೆಯರತ್ತ ಗಮನ. ಹಿಂದಿನ ಕಾಲದಲ್ಲಿ ಮದುವೆ, ಮುಂಜಿಗಳಲ್ಲಿ ಹೆಣ್ಣು ಮಕ್ಕಳು ಹಾಡುತ್ತಿದ್ದುದನ್ನು ನೆನಪಿಸಿ ಅಂತಹುದೇ ಒಂದು ಹಾಡು ‘ಪಾಲಿಸೆಮ್ಮ ಶ್ರೀ ಮೂಕಾಂಬಿಕೆಯೆ’ ನುಡಿಸಿದಾಗ ಎಲ್ಲರಿಗೂ ಖುಷಿಯೋ ಖುಷಿ. ಆನಂತರ ಎಲ್ಲರನ್ನೂ ತಂತಮ್ಮ ಬಾಲ್ಯಕ್ಕೆ ಕರೆದೊಯ್ದದ್ದು - ತಮ್ಮನನ್ನೋ, ತಂಗಿಯನ್ನೋ ಮಲಗಿಸುವ ನೆವದಲ್ಲಿ ತೊಟ್ಟಿಲಿನ ಎರಡೂ ಬದಿಗಳಲ್ಲಿ ಒಬ್ಬೊಬ್ಬರು ಕುಳಿತು ಉಯ್ಯಾಲೆಯಾಡುತ್ತಾ ಹಾಡಿಕೊಳ್ಳುತ್ತಿದ್ದ ಹಾಡು ‘ಬಾರೊ ಬಾರೊ ಬಾರೋ ಗಣಪ’.

ಮತ್ತೆ ಶಾಸ್ತ್ರೀಯ ಸಂಗೀತದತ್ತ ಹೊರಳಿ ‘ರಾರಾ ವೇಣು ಗೋಪಾಬಾಲ’ ಜತಿಸ್ವರ. ತಕ್ಷಣ ಇದೇ ಧಾಟಿಯನ್ನು ಹೋಲುವ ‘ಛುಪ್‌ನೇ ವಾಲೇ ಸಾಮ್‌ನೆ ಆ...’ ನುಡಿಸಿ ಎಲ್ಲ ಸಂಗೀತವೂ ಒಂದೇ ಎಂಬ ವಾದಕ್ಕೆ ಪುಷ್ಟಿ. ಇದಾದೊಡನೆ ಕನ್ನಡವಾದರೆ ಕನ್ನಡ, ಮರಾಠಿಯಾದರೆ ಮರಾಠಿ ಆಗಬಹುದಾದ ‘ಭೀಮ ಪಲಾಸ್‌’ ರಾಗದ ಎರಡು ರಚನೆಗಳು. ಮೊದಲನೆಯದು ‘ಆನಂದಾಚಾ ಕಂದ ಹರಿಲಾ’ (ಮರಾಠಿಯಲ್ಲಿ), ’ಮಾನವ ಜೀವನ ಸುಖಮಯವಾಗಿ’ (ಕನ್ನಡದಲ್ಲಿ). ಹಾಗೆಯೇ ಇನ್ನೊಂದು ‘ಅಮೃತಾಹುನೀ ಗೋಡ’ ಅಭಂಗ ಮತ್ತು ಅದರ ಕನ್ನಡ ರೂಪಾಂತರ ‘ಅಮೃತಕ್ಕೂ ತಾ ರುಚಿ ಹೆಸರು ನಿನ್ನ ದೇವ...’ ಹಾಡು.

ಆರಂಭದಲ್ಲಿ ಶ್ರೋತೃಗಳೊಡನೆ ಸಂವಹನಕ್ಕೆ ಉಪಯೋಗಿಸಿದ ‘ಒಂದೇ ಧಾಟಿ - ಹಲವು ಹಾಡು’ ತತ್ವಕ್ಕೆ ವಿರುದ್ಧವಾದ ‘ಒಂದೇ ಹಾಡು-ಹಲವು ಧಾಟಿ’ ಗೆ ಉದಾಹರಣೆಯಾಗಿ ‘ಭಾಗ್ಯದಾ ಲಕ್ಷ್ಮಿ ಬಾರಮ್ಮ’ದ ವಿವರಣೆಯಾಡನೆ ನುಡಿಸಲು ನಾನು ಆಯ್ದುಕೊಂಡದ್ದು ‘ಭಾಗ್ಯದಾ ಲಕ್ಷ್ಮೀ ಬಾರಮ್ಮ’ ಚಿತ್ರದ ಟೈಟಲ್‌ ಹಾಡು, ಮಧ್ಯಮಾವತಿ ರಾಗದಲ್ಲಿ. ಜತೆಯಲ್ಲೇ ಪುರಂದರದಾಸರ ಮೂಲ ರಚನೆ ಶ್ರೀ ರಾಗದಲ್ಲಿ.

ಮುಂದೆ ಜನಪದ ಜಗತ್ತಿಗೆ ಪ್ರವೇಶಿಸಿ ಜನಪ್ರಿಯ ‘ಭಾಗ್ಯದ ಬಳೆಗಾರ’ದ ಸರದಿ. ನಂತರ ಬಂದವುಗಳು ಕೆಲ ಹಿಂದಿ ಚಿತ್ರಗೀತೆಗಳು - ‘ತೊರಾ ಮನ್‌ ದರ್‌ಪನ್‌ ಕಹಲಾಯೆ’, ‘ಜ್ಯೋತಿ ಕಲಶ್‌ ಛಲ್‌ಕೇ’, ‘ಕುಹೂ ಕುಹೂ ಬೋಲೆ ಕೋಯಲಿಯಾ’ ಮುಂತಾದವು. ಹಾಗೆಯೇ ಈ ಮೊದಲು, ಟ್ಯೂನ್‌ ಕೇಳಿ ಹಾಡು ಗುರುತಿಸಿ ಸ್ಪರ್ಧೆಯನ್ನು ಗೆದ್ದಿದ್ದ ಶ್ರೋತೃವಿನ ಕೋರಿಕೆ - ‘ಜಿಸ್‌ ದೇಶ್‌ ಮೆಂ ಗಂಗಾ ಬಹತೀ ಹೈ’ ಚಿತ್ರದ ‘ಮೇರಾ ನಾಮ್‌ ರಾಜು’ ಹಾಡು. ‘ಗಿಲಿ ಗಿಲಿ ಮ್ಯಾಜಿಕ್‌’ ನಲ್ಲೂ ಸಂದರ್ಭವೊಂದಕ್ಕೆ ಈ ಹಾಡಿನ ತುಣುಕೊಂದನ್ನು ಈಗಲೂ ಉಪಯೋಗಿಸುತ್ತಿರುವುದನ್ನೂ ನೆನಪಿಸಿ ಭೈರವಿ ರಾಗದ ಈ ಹಾಡು ಪ್ರಸ್ತುತಗೊಂಡಿತು. ಅಷ್ಟರಲ್ಲಿ ಕೀ ಬೋರ್ಡ್‌ನಲ್ಲಿ ಸಹಕರಿಸುತ್ತಿದ್ದ ಗಜಾನನ ಮರಾಠೆಯವರ ಕೋರಿಕೆಯಾಂದನ್ನು ತೀರಿಸುವುದೂ ಅನಿವಾರ್ಯವಾಯಿತು. ಅವರಿಗಾಗಿ ‘ಸೆಹ್ರಾ’ ಚಿತ್ರದ ‘ಪಂಖ್‌ ಹೊತೆತೊ ಉಡ್‌ ಆತೀರೆ’ ನುಡಿಸುತ್ತಿದ್ದಂತೆ ಎರಡು ಗಂಟೆಯ ಕಾರ್ಯಕ್ರಮದ ಕೊನೆಯ ಹಂತ ಬಂದೇ ಬಿಟ್ಟಿತ್ತು. ಕೊನೆಗೆ ನುಡಿಸಿದ್ದು ಇತ್ತೀಚಿನ ದಿನಗಳಲ್ಲಿ ಬಹುಜನಪ್ರಿಯವಾಗಿರುವ ‘ಪವಮಾನ... ಜಗದಾ ಪ್ರಾಣ’ ಹಾಡು.

ಕಾರ್ಯಕ್ರಮದುದ್ದಕ್ಕೂ ಯಾರೊಬ್ಬರೂ ಕೂತಲ್ಲಿಂದ ಮಿಸುಕಾಡಿರಲಿಲ್ಲ. ವಿಶೇಷವಾಗಿ ಹೆಂಗಸರಿರುವಲ್ಲಿ ಸಾಮಾನ್ಯವಾಗಿ ಇರುವ ‘ಗುಜು ಗುಜು’ ಸದ್ದೂ ಇರಲಿಲ್ಲ. ಹಾಡಿನಿಂದ ಹಾಡಿಗೆ ಶ್ರೋತೃಗಳ ಸಂಖ್ಯೆ ಏರುತ್ತಲೇ ಇತ್ತು. ಮಹೇಶ್‌ ತನ್ನ ಯಕ್ಷಗಾನದ ಮೃದಂಗದಲ್ಲಿ, ವೆಂಕಟೇಶ ಡೋಂಗ್ರೆ ತಬ್ಲಾದಲ್ಲಿ, ಗಜಾನನ ಮರಾಠೆ ಕೀ ಬೋರ್ಡ್‌ನಲ್ಲಿ ತಾವು ಎಂದೂ ಕೇಳಿರಲಾರದ ಹಾಡುಗಳಿಗೂ ಉತ್ತಮ ಹಿಮ್ಮೇಳ ಒದಗಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ ಸರಣಿಯಲ್ಲಿ ಅದರ ಹಿಂದಿನ ದಿನವೂ ಸಂಗೀತ ಕಾರ್ಯಕ್ರಮವೇ ಇದ್ದುದರಿಂದ ಮೊದಲು ‘ಇವತ್ತೂ ಶಾಸ್ತ್ರೀಯ ಸಂಗೀತವೇ?...’ ಎಂದು ಮೂಗೆಳೆಯುತ್ತಿದ್ದ ಕೆಲವರೂ ವಿಭಿನ್ನ ಶೈಲಿಯ ಪ್ರಸ್ತುತಿಯಿಂದಾಗಿ ತಮ್ಮ ಅಭಿಪ್ರಾಯ ಬದಲಿಸಿದರೆಂದು ಕೆಲವು ಕಾರ್ಯಕರ್ತರು ಮಾತಾಡಿಕೊಳ್ಳುತ್ತಿದ್ದುದು ಕೇಳಿಸುತ್ತಿತ್ತು. ಬೆರಳೆಣಿಕೆಯ ಕೆಲವು ತೀರಾ ಸಂಪ್ರದಾಯಸ್ಥರಿಗೆ ಕಾರ್ಯಕ್ರಮದ ಶೈಲಿ ಇಷ್ಟವಾಗದೇ ಇದ್ದಿರಬಹುದಾದ ಸಾಧ್ಯತೆ ಇದ್ದರೂ ಬಹುತೇಕ ಮಂದಿಯ ಮನದಲ್ಲಿ ಒಂದು ನೆನಪಿಡಬಹುದಾದ ಸಂಜೆಯನ್ನು ಕಳೆದ ಭಾವನೆ ಇತ್ತೆಂದು ನನ್ನ ಅನಿಸಿಕೆ.

ಸಂಗೀತ ಕಛೇರಿಯ ಪ್ರತ್ಯಕ್ಷದರ್ಶಿ ವರದಿ/ವಿಮರ್ಶೆಯಂಥ ಈ ಲೇಖನವನ್ನು ನಾನು ಬರೆದ ಏಕೈಕ ಉದ್ದೇಶ - ಶಾಸ್ತ್ರೀಯ ಸಂಗೀತಕ್ಕೆ ಎಳ್ಳಷ್ಟೂ ಅಪಚಾರವೆಸಗದೆ, ಸರಳ ರೂಪದಲ್ಲಿ ಜನಸಾಮಾನ್ಯರತ್ತ ಅದನ್ನು ಹೇಗೆ ಕರೆದೊಯ್ಯಬಹುದು, ಜನರಲ್ಲಿ ಆ ಬಗ್ಗೆ ಆಸಕ್ತಿ, ಗೌರವ ಮತ್ತು ಆತ್ಮೀಯತೆಗಳನ್ನು ಹೇಗೆ ಮೂಡಿಸಬಹುದು ಎನ್ನುವ ನನ್ನ ಒಂದು ಕಿರುಪ್ರಯತ್ನವನ್ನು ನಿಮಗೆಲ್ಲ ಪರಿಚಯಿಸುವುದು. ಮುಂದೆ ಯಾವಾಗಲಾದರೂ ಇಂಥ ಪ್ರಯೋಗಗಳ ಅವಕಾಶ ಸಂದರ್ಭ ಬಂದಾಗ, ಅದು ಸಾಕಾರಗೊಂಡರೆ ಹೇಗಾಯ್ತು ಎಂಬುದನ್ನು ಬರೆಯುತ್ತೇನೆ. ಅಲ್ಲೀವರೆಗೆ ನಾನಾಯ್ತು, ನನ್ನ ವೃತ್ತಿ-ಪ್ರವೃತ್ತಿಗಳಾದುವು. ಬರುತ್ತೇನೆ, ನಮಸ್ಕಾರ.


ಯಾರೀ ಕಾಕತ್ಕರ್‌ ?
ಕ್ಲರ್ಕ್‌ನಿಂದ ಕಂಪ್ಯೂಟರ್‌ ತಜ್ಞನಾದ ಕೊಳಲು ವಾದಕ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X