ಮತ್ತೆ ಬಂದಿದೆ ಮಹಿಳಾ ದಿನ...

  • ಅಲಕಾ ಕೆ.
ಮಹಿಳಾ ದಿನ ಮತ್ತೆ ಬಂದಿದೆ. ಮಾರ್ಚ್‌ 8 ರಂದು, ಹೆಚ್ಚೆಂದರೆ ಇಡೀ ತಿಂಗಳು ಮಹಿಳಾ ದಿನ ಆಚರಿಸಬಹುದು, ಥೇಟ್‌ ಕನ್ನಡ ರಾಜ್ಯೋತ್ಸವದಂತೆ!

ವಿಶ್ವಸಂಸ್ಥೆಯಿಂದ ಹಿಡಿದು ಸ್ಥಳೀಯ ಮಹಿಳಾ ಸಂಘಟನೆಗಳವರೆಗೆ, ಕೊನೆಗೆ ವೈಯಕ್ತಿಕ ಮಟ್ಟದಲ್ಲೂ ವಿವಿಧ ರೀತಿಯ ಆಚರಣೆಗಳು ನಡೆಯುತ್ತದೆ. ವರ್ಷವಿಡೀ ಕುಳಿತು ಸಿದ್ಧಪಡಿಸಿದ ಕೆಲವು ವರದಿಗಳನ್ನು ಬಿಡುಗಡೆ ಮಾಡಿ, ಅದಕ್ಕೂ ಹೆಚ್ಚೆಂದರೆ ಒಂದೆರಡು ಅಂತರರಾಷ್ಟ್ರೀಯ ಮಟ್ಟದ ಸಭೆ, ಸಮ್ಮೇಳನಗಳನ್ನು ಆಯೋಜಿಸಿ ವಿಶ್ವಸಂಸ್ಥೆ ಕೈತೊಳೆದುಕೊಳ್ಳುತ್ತದೆ.

ಇನ್ನು ಸರಕಾರಗಳಂತೂ ಮಾತಲ್ಲೇ ಸ್ವರ್ಗ ತೋರಿಸಿಬಿಡುತ್ತವೆ. ಚುನಾವಣೆ ಸಹ ಸಮೀಪಿಸಿರುವುದರಿಂದ ಭರವಸೆಗಳ ಭರ್ಜರಿ ತುತ್ತೂರಿ ಊದುತ್ತವೆ. ಸಬಲೀಕರಣದ ಬಗ್ಗೆ ರಾಜಕಾರಣಿಗಳು ಉದ್ದುದ್ದ ಭಾಷಣ ಬಿಗಿಯುತ್ತಾರೆ. ಜತೆಗೆ ಮಹಿಳಾ ಪರ ಘೋಷಣೆ, ಪ್ರಶಸ್ತಿಗಳ ಸ್ಥಾಪನೆ, ಮೀಸಲಾತಿ ವಿಧೇಯಕ ಒಂದೇ ಎರಡೇ?

ಪತ್ರಿಕೆಗಳಲ್ಲಿ ಈ ಕುರಿತ ವಿಶೇಷಾಂಕ, ವರದಿ. ಟಿವಿ ಚಾನೆಲ್‌ಗಳು ಒಂದಿಷ್ಟು ವಿಶೇಷ ಕಾರ್ಯಕ್ರಮಗಳು, ಮಹಿಳಾ ಪ್ರಧಾನ ಚಲನಚಿತ್ರಗಳನ್ನು ಪ್ರಸಾರ ಮಾಡಿ ತಣ್ಣಗಾಗುತ್ತವೆ.

ಇದನ್ನೇ ಬಂಡವಾಳ ಮಾಡಿಕೊಳ್ಳಲು ಯತ್ನಿಸುವ ಕೆಲವು ಬಹುರಾಷ್ಟ್ರೀಯ ಸಂಸ್ಥೆಗಳು ಸಾಧಕಿಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸುತ್ತವೆ. ಪ್ರಮುಖ ಮಹಿಳಾ ಸಂಘಟನೆಗಳಿಂದ ವಿಚಾರ ಸಂಕಿರಣಗಳು, ಜಾಗೃತಿ ಸಭೆಗಳು, ಪ್ರದರ್ಶನ, ಮಾನವ ಸರಪಳಿ...

ಈ ಬಾರಿ ಆಗುವುದೂ ಇಷ್ಟೆ ! ನೀಡಿದಷ್ಟು ಹಕ್ಕು ಪಡೆದು, ಧನ್ಯತಾ ಭಾವ ಹೊತ್ತು, ಮನೆಗಳಿಗೆ ಮರಳಿ ಎಂಬ ಸೂಚ್ಯ ಸಂದೇಶದೊಂದಿಗೆ ಮಹಿಳಾ ದಿನ ಕೊನೆಗೊಳ್ಳುತ್ತದೆ.

ಹಿನ್ನೆಲೆ : 1907 ರ ಮಾರ್ಚ್‌ 8 ರಂದು ನ್ಯೂಯಾರ್ಕಿನ ಸಿದ್ಧ ಉಡುಪಿನ ಕಾರ್ಖಾನೆಯ ಮಹಿಳೆಯರು ತಮ್ಮ ಬೇಡಿಕೆಗಳೊಂದಿಗೆ ಬೀದಿಗಿಳಿದರು. ಈ ಪ್ರತಿಭಟನೆಯಿಂದ ಅವರ ಬೇಡಿಕೆ ಈಡೇರಿತೋ ಇಲ್ಲವೋ, ಆದರೆ ಮಹಿಳಾ ದನಿ ಸಂಘಟಿತ ರೂಪು ಪಡೆಯುವಲ್ಲಿ ಮೊದಲ ಹೆಜ್ಜೆಯಾಯಿತು.

1910 ರಲ್ಲಿ ಈ ದಿನವನ್ನು ಅಂತರರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಬೇಕೆಂದು ಮಹಿಳಾ ಚಳವಳಿಯ ನಾಯಕಿ ಕ್ಲಾರಾ ಜೆಟ್‌ಕಿನ್‌ ಸಮಾವೇಶವೊಂದರಲ್ಲಿ ನಿರ್ಣಯ ಮಂಡಿಸಿದರು.

1975 ನ್ನು ಅಂತರರಾಷ್ಟ್ರೀಯ ಮಹಿಳಾ ವರ್ಷವೆಂದು ಘೋಷಿಸಿದ ನಂತರ, ಬಹುತೇಕ ಎಲ್ಲಾ ರಾಷ್ಟ್ರಗಳಲ್ಲೂ ಮಾರ್ಚ್‌ 8 ನ್ನು ಅಂತರರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ದುಡಿಯುವ ಮಹಿಳೆಯರ ಹಕ್ಕುಗಳಿಗಾಗಿ ಮಹಿಳಾ ದಿನಾಚರಣೆ ಆರಂಭವಾಯಿತು. ಆದರೆ ಇಂದಿಗೂ ಅವರ ಸ್ಥಿತಿ ಹೆಚ್ಚೇನೂ ಸುಧಾರಣೆ ಆಗಿಲ್ಲ. ಈಗಂತೂ ಜಾಗತಿಕ ರಣದ ಅಬ್ಬರದಲ್ಲಿ ಬಿರುಗಾಳಿಯಲ್ಲಿ ತತ್ತರಿಸಿದ ಗುಬ್ಬಚ್ಚಿಯಂತಾಗಿದ್ದಾರೆ. ಹಾಗೆಂದು ಮಹಿಳೆಯರ ಸ್ಥಿತಿ ಮತ್ತು ಹಕ್ಕುಗಳಲ್ಲಿ ಸುಧಾರಣೆ ಆಗಿಲ್ಲವೆಂದಲ್ಲ. ಯಾವುದೇ ಕ್ಷೇತ್ರದಲ್ಲಾದರೂ ಅಸಾಧ್ಯವಾಗುವ ಮಟ್ಟಿಗೆ ಬದಲಾವಣೆ ಬಂದಿದೆ. ಮನೆವಾರ್ತೆಯ ಹೊರತು ಬೇರೆ ವಿಷಯಗಳನ್ನು ಮಾತನಾಡಲು ಮಹಿಳೆಯರು ಹಿಂಜರಿಯುವ ದಿನಗಳಿಂದ, ಖಾಸಗಿ ಎನಿಸುವ ಲೈಂಗಿಕ ಹಿಂಸೆಯ ಕುರಿತು ಸಮ ಮಾತನಾಡುವ ಹಾಗಾಗಿದೆ.

ಆದರೆ ಇವೆಲ್ಲಾ ಸಣ್ಣ ಪ್ರಮಾಣದ ಗೆಲುವಷ್ಟೆ. ಹಕ್ಕುಗಳಿಗಾಗಿ ಒಗ್ಗಟ್ಟು, ಪ್ರತಿಭಟನೆ ಮತ್ತು ಬದಲಾವಣೆಯ ಸಂಕೇತವಾದ ಈ ಮಹಿಳಾ ದಿನ, ಆಚರಣೆಯ ಅಬ್ಬರದಲ್ಲಿ ಅರ್ಥ ಕಳೆದುಕೊಳ್ಳದಿರಲಿ.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+