ಚಿಂದೋಡಿ ಲೀಲಾಗೆ ಗುಬ್ಬಿ ವೀರಣ್ಣ ಪ್ರಶಸ್ತಿ
ಬೆಂಗಳೂರು : ಕರ್ನಾಟಕ ಸರ್ಕಾರ ಪ್ರತಿವರ್ಷ ಕೊಡುವ ಪ್ರತಿಷ್ಠಿತ 2002 ನೇ ಇಸವಿಯ ಡಾ.ಗುಬ್ಬಿ ವೀರಣ್ಣ ಪ್ರಶಸ್ತಿ ಖ್ಯಾತ ರಂಗ ಕಲಾವಿದೆ ಚಿಂದೋಡಿ ಲೀಲಾ ಅವರಿಗೆ ಸಂದಿದೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಂಟು ಮಂದಿ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್ ಶುಕ್ರವಾರ (ಮಾ.28) ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಪ್ರತಿ ಪ್ರಶಸ್ತಿಯು 1 ಲಕ್ಷ ರುಪಾಯಿ ನಗದು, ತಾಮ್ರದ ಫಲಕ, ಪುತ್ಥಳಿ, ಶಾಲು, ಗಂಧದ ಹಾರ ಮತ್ತು ಫಲ-ತಾಂಬೂಲಗಳನ್ನು ಒಳಗೊಂಡಿರುತ್ತದೆ.
ಏಪ್ರಿಲ್ 9ರಂದು ನಗರದಲ್ಲಿ ಸಮಾರಂಭ ನಡೆಸಿ, ಪ್ರಶಸ್ತಿಗಳನ್ನು ಪ್ರದಾನ ಮಾಡಲು ಯೋಚಿಸುತ್ತಿದ್ದೇವೆ. ಮುಖ್ಯಮಂತ್ರಿ ಕೃಷ್ಣ ಅವರಿಂದಲೇ ಪ್ರಶಸ್ತಿ ಪ್ರದಾನ ಮಾಡಿಸಲು ತೀರ್ಮಾನಿಸಿದ್ದು, ಅವರ ಒಪ್ಪಿಗೆ ಸಿಕ್ಕ ನಂತರ ಸಮಾರಂಭದ ದಿನವನ್ನು ಅಂತಿಮವಾಗಿ ಗೊತ್ತು ಮಾಡುತ್ತೇವೆ ಎಂದು ರಾಣಿ ಸತೀಶ್ ಹೇಳಿದರು.
ಚಿಂದೋಡಿ ಲೀಲಾ ಅವರಲ್ಲದೆ, 2002ನೇ ಇಸವಿಯ ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾದವರ ಪಟ್ಟಿ ಹೀಗಿದೆ-
ದಾನ ಚಿಂತಾಮಣಿ ಪ್ರಶಸ್ತಿ- ಗೀತಾ ನಾಗಭೂಷಣ್ (ಸಾಹಿತ್ಯ)
ಶಾಂತಲಾ ನಾಟ್ಯ ಪ್ರಶಸ್ತಿ- ಪದ್ಮಶ್ರೀ ಶಾಂತಾರಾವ್ (ನೃತ್ಯ)
ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ- ಜೆ.ಎಸ್.ಖಂಡೇರಾವ್ (ಚಿತ್ರಕಲೆ)
ಸಂತ ಶಿಶುನಾಳ ಷರೀಫ್ ಪ್ರಶಸ್ತಿ- ಹೊ.ನ.ರಾಘವೇಂದ್ರ ಉರುಫ್ ಗರ್ತಿಕೆರೆ ರಾಘಣ್ಣ (ವಚನ ಹಾಗೂ ಸುಗಮ ಸಂಗೀತ)
ಜಕಣಾಚಾರಿ ಪ್ರಶಸ್ತಿ- ಎಂ.ಕೆ.ಮೃತ್ಯುಂಜಯಾಚಾರ್ಯ (ಶಿಲ್ಪಕಲೆ)
ಕನಕಪುರಂದರ ಪ್ರಶಸ್ತಿ- ಪಂಚಾಕ್ಷರಿ ಮತಿಘಟ್ಟ (ಸಂಗೀತ)
ಜಾನಪದ ಶ್ರೀ ಪ್ರಶಸ್ತಿ- ಎಂ.ಆರ್.ಬಸಪ್ಪ (ಜಾನಪದ)
ಪಿಟೀಲು ಚೌಡಯ್ಯ ಪ್ರಶಸ್ತಿಯನ್ನು ಈ ಬಾರಿ ಪ್ರಕಟಿಸಿಲ್ಲ . 2002 ಹಾಗೂ 2003- ಎರಡೂ ಇಸವಿಗಳ ಪ್ರಶಸ್ತಿಗಳನ್ನು ಒಟ್ಟಿಗೇ ಪ್ರಕಟಿಸುವುದಾಗಿ ಸಚಿವೆ ರಾಣಿ ಸತೀಶ್ ಭರವಸೆ ಕೊಟ್ಟರು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications