ಮಳೆ
ಸುಪ್ತದೀಪ್ತಿ
[email protected]
ಹನಿ ಹನಿಯು ಹನಿ ಹನಿದು ಸ್ಫಟಿಕ ಮಣಿ ಮಾಲೆ,
ಇಣುಕಿ ನೋಡಿದರಲ್ಲಿ ಮುತ್ತು ಮರ ಸಾಲೆ!
ಚಿಲಿಪಿಲಿಯ ದನಿಯಡಗಿ ಚಿಟಿಪಿಟಿಯ ಸದ್ದು,
ಉಷ್ಣವಡರಿದ ಬುವಿಗೆ ನಭ ಕೊಡುವ ಮದ್ದು.
ಮತ್ತು ಬರಿಸುವ ಹೊತ್ತು ಬಿತ್ತು ಮುತ್ತು,
ಚಿಣಮಿಣನೆ ಹೊಳೆದಿತ್ತು ಭೂದೇವಿ ನತ್ತು ;
ಅಬ್ಬರದ ಸಿಡಿಲ ದನಿ, ಬೊಬ್ಬಿಡುವ ಬಾನು,
ಹೊಂಚುಹಾಕಿತು ಒಮ್ಮೆ ಬಣ್ಣದ ಕಮಾನು.
ಲೋಕವಿದೆ ನೋಡೆಂದು ಹಣ ಕಿತ್ತು ಬೆಳಕು,
ದಿಟ್ಟನೆದೆ ನಡುಗಿಸಲು ಮಿಂಚಿತ್ತು ಛಳಕು;
ನಕ್ಕಿತ್ತು ಧರೆ ತಾನು ಮಿಂದೆನಿಂದೆಂದು,
ಉಕ್ಕಿತ್ತು ಸಾಗರದ ಎದೆಯುಬ್ಬಿ ಬಂದು.
ಹನಿಹನಿಯು ಅಮೃತವು, ಹನಿ-ಸೋನೆ-ಧಾರೆ,
ಜೀವ ಉಸಿರಾಡಿಹುದು ರವಿ-ನೀರೆ ಸೇರೆ.












Click it and Unblock the Notifications