• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೊಡ್ಡವರ ನೆನಪಿನಲ್ಲಿ ಹಿರಿಕಿರಿಯರೆಲ್ಲ ಒಂದಾದ ಕ್ಷಣ..

By Staff
|
  • ಚ.ಹ.ರಘುನಾಥ

ಮಾಸ್ತಿ ಹೀಗಿದ್ದರು-

  • ಜಿ.ಪಿ.ರಾಜರತ್ನಂ ಅವರಿಗೆ ಉದ್ಯೋಗ ಇಲ್ಲದಿದ್ದಾಗ ಪ್ರತಿ ತಿಂಗಳು 25 ರುಪಾಯಿ ಕೊಟ್ಟು ಕೆಲಸ ಕೊಟ್ಟಿದ್ದರು.
  • ಬೇಂದ್ರೆ ಅವರು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದಾಗ ಕೆಲವು ಸಮಯ ಪ್ರತಿ ತಿಂಗಳೂ ಜೀವನ ನಿರ್ವಹಣೆಗೆ ನೆರವು ನೀಡುತ್ತಿದ್ದರು.

‘ಮಾಸ್ತಿ ಕನ್ನಡದ ಆಸ್ತಿ’ಯಾದ ಬಗೆಯನ್ನು ನೆನಪಿಸಿಕೊಂಡವರು ನಾಡಿನ ಹಿರಿಯ ಕವಿ ಡಾ.ಜಿ.ಎಸ್‌.ಶಿವರುದ್ರಪ್ಪ .

ಕನ್ನಡ ಸಾಹಿತ್ಯದ ಅ ಆ ಇ ಈ ಬಲ್ಲವರೆಲ್ಲ ‘ಮಾಸ್ತಿ ಕನ್ನಡದ ಆಸ್ತಿ’ ಎನ್ನುವ ಡೈಲಾಗ್‌ ಡೆಲಿವರಿ ಮಾಡುತ್ತಾರೆ. ಆದರೆ, ಮಾಸ್ತಿ ಕನ್ನಡದ ಆಸ್ತಿ ಆದುದು ಹೇಗೆ? ಉಹ್ಞುಂ.. ಹೊಸ ಪೀಳಿಗೆಯ ಮಂದಿಗೆ ಮಾಸ್ತಿ ಪರಿಚಯವಿಲ್ಲ . ಮಾಸ್ತಿ ಅಷ್ಟೇ ಅಲ್ಲ , ಅವರ ಸಾಹಿತ್ಯದ ಪರಿಚಯವೂ ಅಷ್ಟಕ್ಕಷ್ಟೇ. ಮಾಸ್ತಿ ಕೆಲವರಿಗೆ ಕತೆಗಾರರಾಗಿ ಪ್ರಸಿದ್ಧರು, ಕೆಲವರಿಗೆ ಚಿಕ್ಕವೀರ ರಾಜೇಂದ್ರ ಕಾದಂಬರಿಯ ಲೇಖಕ ಎನ್ನುವ ಮೂಲಕ ಪರಿಚಿತರು ; ಸಮಗ್ರ ಸಾಹಿತ್ಯದ ಮಾತು ಬಂದಾಗ ಮಾಸ್ತಿ ಅಪ್ರಸಿದ್ಧರು! ಕನ್ನಡದ ಬಹುತೇಕ ಪ್ರಸಿದ್ಧರು ಇವತ್ತು ಜನಮನದಲ್ಲಿ ಉಳಿದುಕೊಂಡಿರುವುದು ತಮ್ಮ ಜನಪ್ರಿಯತೆಯ ಇತಿಹಾಸದ ಮೂಲಕವೇ ಹೊರತು, ಕೃತಿಗಳಿಂದಲ್ಲ . ಇದು ಕನ್ನಡ ಸಾಂಸ್ಕೃತಿಕ ವಾತಾವರಣ.

ನಮ್ಮ ಸಾಂಸ್ಕೃತಿಕ ವಲಯ ನೋಡಿ. ರಾಜಕಾರಣ ಕೊಳಕು ಎಂದು ಸಜ್ಜನರು ಅಸಹ್ಯ ಪಟ್ಟುಕೊಳ್ಳುವಂತೆಯೇ ರಾಜಕಾರಣ ಕೂಡ ನಾರುತ್ತಿದೆ. ಒಬ್ಬರ ಮುಖ ಕಂಡರೆ ಮತ್ತೊಬ್ಬರಿಗೆ ಮೈತುಂಬ ಮುಳ್ಳುಗಳು. ಮಾತು ಜಾಸ್ತಿ ಕೃತಿ ನಾಸ್ತಿ. ಪ್ರಶಸ್ತಿ-ಪೀಠಕ್ಕಾಗಿ ಕಚ್ಚಾಟ. ಇವೆಲ್ಲದರ ನಡುವೆ ಕನ್ನಡ ಸರಸ್ವತಿ ಎಲ್ಲಿ ಜೀವಂತಳಾಗಿದ್ದಾಳೆ ಎಂದು ಯಾರಾದರೂ ಹುಡುಕಿದರೆ, ಮರಳಿ ನಿಲ್ಲುವುದು ಹಳೆಯ ಕೃತಿಗಳ ಮುಂದೆಯೇ!

ಕನ್ನಡದ ಸಮಾರಂಭಗಳನ್ನೇ ನೋಡಿ : ಕವಿಗೋಷ್ಠಿಯಲ್ಲಿ ಕವಿತೆ ಓದುವ ಕವಿಗಳು ಮಾತ್ರ ಇರುತ್ತಾರೆ. ಅದೂ ಅವರ ಸರದಿ ಮುಗಿವರೆಗೆ ಮಾತ್ರ. ಪುಸ್ತಕ ಬಿಡುಗಡೆ ಸಮಾರಂಭಗಳು ಸಂಭ್ರಮ ಹುಟ್ಟಿಸುತ್ತಿಲ್ಲ . ತೇಜಸ್ವಿ, ಭೈರಪ್ಪ , ಅನಂತಮೂರ್ತಿ ಬಿಟ್ಟರೆ ಇತರೆ ಸಾಹಿತಿಗಳ ಪುಸ್ತಕ ಬಿಡುಗಡೆಯಾಗುವುದು ಗೊತ್ತಾಗುವುದೂ ಇಲ್ಲ . ಇವತ್ತು ಕನ್ನಡ ಸಾಹಿತ್ಯವೆಂದರೆ ದೈನಿಕಗಳ ಭಾನುವಾರದ ಪುರವಣಿ ಎನ್ನುವಂತಾಗಿದೆ. ನಾಳೆ ?

ಇಂಥದೊಂದು ದಯನೀಯ ಪರಿಸ್ಥಿತಿಯ ನಡುವೆ- ಜೂನ್‌.23 ರ ಭಾನುವಾರ ಬೆಂಗಳೂರಿನಲ್ಲಿ ಅಪರೂಪದ ಕಾರ್ಯಕ್ರಮ ನಡೆಯಿತು. ಜನ ಕಿಕ್ಕಿರಿದಿದ್ದರು. ಜಿ.ಎಸ್‌.ಶಿವರುದ್ರಪ್ಪ , ಪ್ರೊ.ಎಲ್‌.ಎಸ್‌.ಶೇಷಗಿರಿ ರಾವ್‌, ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌, ಯು.ಆರ್‌.ಅನಂತಮೂರ್ತಿ, ಎಚ್‌.ಎಸ್‌.ವೆಂಕಟೇಶಮೂರ್ತಿ, ಮತ್ತೂರು ಕೃಷ್ಣಮೂರ್ತಿ, ಪ್ರೊ.ಎಂ.ಎಚ್‌.ಚನ್ನಯ್ಯ, ಮಾವಿನಕೆರೆ ರಂಗನಾಥನ್‌, ಡಾ.ಪಿ.ವಿ.ನಾರಾಯಣ, ಉಮಾರಾವ್‌, ಜಿ.ನಾರಾಯಣ...
ಒಬ್ಬಿಬ್ಬರಲ್ಲ , ಹಿರಿ ಕಿರಿ ಸಾಹಿತಿ ಸಹೃದಯರ ದಂಡೇ ಅಲ್ಲಿ ನೆರೆದಿತ್ತು . ಇಷ್ಟೊಂದು ಮಂದಿ ಸಾಹಿತಿಗಳು ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲೂ ಒಂದಾಗುವುದು ಅಪರೂಪ. ಇಂಥದೊಂದು ಧನ್ಯ ಮಿಲನದಲ್ಲಿ ಸಾಹಿತಿ ಸಹೃದಯರೆಲ್ಲ ಒಂದಾದದ್ದು ‘ಮಾಸ್ತಿ’ ಹೆಸರಿನಲ್ಲಿ .

ಶೇಷಗಿರಿರಾಯರಿಗೆ ಮಾಸ್ತಿ ಪ್ರಶಸ್ತಿ ಪ್ರದಾನ
ಸಮತೂಕದ ಹಿರಿಯ ವಿಮರ್ಶಕ ಪ್ರೊ.ಎಲ್‌.ಎಸ್‌.ಶೇಷಗಿರಿರಾವ್‌ ಅವರಿಗೆ ಮಾಸ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಅದು. ಮಾಸ್ತಿಯನ್ನು ಸ್ಮರಿಸಿಕೊಳ್ಳಲೊಂದು ಅವಕಾಶ. ಮಾಸ್ತಿಯ ಹೆಸರಿನಲ್ಲಿ ಕನ್ನಡ ಸ್ಫೂರ್ತಿಯನ್ನು ಹಂಚುವ ಸಂದರ್ಭ.

ಶೇಷಗಿರಿರಾಯರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಜಿ.ನಾರಾಯಣ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿದ ಧನ್ಯತೆಯಲ್ಲಿದ್ದ ಶೇಷಗಿರಿರಾಯರು - ಸಾಹಿತ್ಯ ಹಾಗೂ ಸಾಹಿತ್ಯ ವಿಮರ್ಶೆಯ ಮೂಲಕ ಸಮುದಾಯ ಕಟ್ಟುವ ಅನಿವಾರ್ಯತೆಯ ಕುರಿತು ಮತನಾಡಿದರು.

ಎಲ್ಲ ಧರ್ಮಗಳಿಗಿಂತ ಮಿಗಿಲಾದುದು ಮಾನವ ಧರ್ಮ ಎಂದ ಎಲ್‌ಎಸ್‌ಎಸ್‌, ಧರ್ಮದ ಹೆಸರಿನಲ್ಲಿ ಕಣ್ಣು ಮುಚ್ಚಿಸುವ ಕೆಲಸ ನಡೆಯುತ್ತಿದೆ ಎಂದು ವಿಷಾದಿಸಿದರು. ಸಾಹಿತಿಗೆ ಸಮಗ್ರತೆ ಹಾಗೂ ಪ್ರಾಮಾಣಿಕತೆ ಇರಬೇಕು. ಮೌಲ್ಯಗಳಿಗೆ ಅನುಗುಣವಾಗಿ ಸಾಹಿತ್ಯ ರಚನೆ ಮಾಡಬೇಕು ಎಂದ ಶೇಷಗಿರಿರಾವ್‌, ಬದುಕನ್ನು ಅರ್ಥಮಾಡಿಕೊಳ್ಳಲು ಮನುಷ್ಯ ರೂಪಿಸಿಕೊಂಡ ಅತ್ಯಂತ ಅರ್ಥಪೂರ್ಣ ವಿಧಾನಗಳಲ್ಲಿ ಸಾಹಿತ್ಯ ಒಂದಾಗಿದೆ ಎಂದರು.

ಸನ್ಮಾನ, ಪ್ರಶಸ್ತಿ ಫಲಕ ಸ್ವೀಕರಿಸಿದ ಶೇಷಗಿರಿರಾವ್‌, ಪ್ರಶಸ್ತಿಯ ರೂಪದಲ್ಲಿ ನೀಡಿದ 25 ಸಾವಿರ ರುಪಾಯಿಗಳನ್ನು ಮಾಸ್ತಿ ಸಮಿತಿಗೇ ಹಿಂತಿರುಗಿಸಿದರು.

ಅಭಿನಂದನಾ ಭಾಷಣ ಮಾಡಿದ ಡಾ.ಪಿ.ವಿ.ನಾರಾಯಣ ಶೇಷಗಿರಿರಾಯರ ಸಮತೂಕದ ವಿಮರ್ಶೆಯ ವೈಶಿಷ್ಟ್ಯವನ್ನು ಬಣ್ಣಿಸಿದರು. ಕೃತಿಗಳ ಆಂತರ್ಯ ಹೊಗುವ ಮೂಲಕ, ಕೃತಿಯಲ್ಲಿನ ಸಾಹಿತ್ಯದ ಅಂಶಗಳನ್ನು ಶೇಷಗಿರಿರಾವ್‌ ಸಹೃದಯರಿಗೆ ಉಣಬಡಿಸಿದ್ದಾರೆ ಎಂದರು. ‘ಮಾಸ್ತಿ ಪ್ರಶಸ್ತಿ ಮಹನೀಯರು’ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ‘ಗಾಂಧಿ ಬಜಾರ್‌ನಲ್ಲಿ ಮಾಸ್ತಿ’ ಕವಿತೆ ಬರೆದ ಕವಿ ನಿಸಾರ್‌ ಅಹಮದ್‌- ಆಕಾಶಕ್ಕೆ ಆಕಾಶವೇ ಉಪಮೆಯಾದಂತೆ ಮಾಸ್ತಿ ಅವರಿಗೆ ಮಾಸ್ತಿಯೇ ಸಾಟಿ ಎಂದರು.

ಗಿರಿಭಾರ, ಹೂ ಹಗುರ !
ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ- ಮೂರನ್ನೂ ತಮ್ಮ ಬದುಕು ಬರಹಗಳಿಂದ ಶ್ರೀಮಂತಗೊಳಿಸಿದ ಚೇತನ ಮಾಸ್ತಿ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಎಸ್‌.ಶಿವರುದ್ರಪ್ಪ ಅಭಿಪ್ರಾಯಪಟ್ಟರು. ರಾಜರತ್ನಂ, ಬೇಂದ್ರೆ ಅವರಿಗೆ ಮಾಸ್ತಿ ಅವರು ನೀಡಿದ ನೆರವನ್ನು ಸ್ಮರಿಸಿಕೊಳ್ಳುವ ಮೂಲಕ ಮಾಸ್ತಿ ಅವರ ಹೃದಯ ಶ್ರೀಮಂತಿಕೆಯನ್ನು ಅವರು ಸ್ಮರಿಸಿಕೊಂಡರು.

ಗಿರಿಭಾರವಾದ ಅನೇಕ ಯೋಜನೆಗಳನ್ನು ಹೂ ಹಗುರ ಎನ್ನುವಂತೆ ನಿರ್ವಹಿಸಿದ ನಮ್ಮ ಕಾಲದ ಅತ್ಯಂತ ದೊಡ್ಡ ಶಕ್ತಿ ಶೇಷಗಿರಿರಾವ್‌ ಎಂದ ಶಿವರುದ್ರಪ್ಪ , ಮಾಸ್ತಿ ಹೆಸರಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಕೈಗೊಂಡಿರುವ ಮಾಸ್ತಿ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಮಾವಿನಕೆರೆ ರಂಗನಾಥನ್‌ ಅವರನ್ನು ಅಭಿನಂದಿಸಿದರು.

ಕುವೆಂಪು ಪ್ರಶಸ್ತಿ ನೀಡಲಿ, ಅದು ಜಿಎಸ್‌ಎಸ್‌ಗೇ ಸಿಗಲಿ
ಮಾಸ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕುವೆಂಪು ಪ್ರಶಸ್ತಿ ಸ್ಥಾಪನೆ ಕುರಿತು ದನಿಯೆತ್ತಿದವರು ಜಿ.ನಾರಾಯಣ. ಕುವೆಂಪು ಅವರ ಹೆಸರಿನಲ್ಲಿ ಕರ್ನಾಟಕ ಸರ್ಕಾರ ‘ರಾಷ್ಟ್ರಕವಿ’ ಪ್ರಶಸ್ತಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದ ಅವರು, ಮೊದಲ ‘ರಾಷ್ಟ್ರಕವಿ’ ಪ್ರಶಸ್ತಿಯನ್ನು ಶಿವರುದ್ರಪ್ಪನವರಿಗೇ ನೀಡಬೇಕು ಎಂದು ಸಲಹೆ ಮಾಡಿದರು. ಪ್ರಶಸ್ತಿ ಸ್ಥಾಪನೆಯ ಬಗೆಗೆ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ರಾಣಿ ಸತೀಶ್‌ ಅವರೊಂದಿಗೆ ಮಾತನಾಡಿರುವುದಾಗಿ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಮಾಸ್ತಿ ಸಮಿತಿಯ ದಶಮಾನೋತ್ಸವ ಸಂದರ್ಭದಲ್ಲಿ ಏರ್ಪಡಿಸಿದ್ದ ಕಾದಂಬರಿ ಸ್ಪರ್ಧೆಯ ಬಹುಮಾನಗಳನ್ನು ವಿತರಿಸಲಾಯಿತು. ಡಾ। ಜಾನಕಿ ಸುಂದರೇಶ್‌ ಅವರ ‘ಗೌರಿ’ , ಡಾ। ನಾ.ಮೊಗಸಾಲೆ ಅವರ ‘ಅರ್ಥ’ ಹಾಗೂ ದಮಯಂತಿ ನರೇಗಲ್‌ ಅವರ ‘ಯಯಾತಿ ಪ್ರಸಂಗ’ ಕಾದಂಬರಿಗಳಿಗೆ ಬಹುಮಾನ ನೀಡಲಾಯಿತು. ಬಹುಮಾನದ ಜೊತೆಗೆ ಬಹುಮಾನಿತ ಕಾದಂಬರಿಗಳನ್ನು ಪ್ರಕಟಿಸಿದ್ದು ಕಾರ್ಯಕ್ರಮದ ಇನ್ನೊಂದು ವಿಶೇಷ. ಹೇಮಂತ ಸಾಹಿತ್ಯ ಪ್ರಕಾಶನ ಪ್ರಕಟಿಸಿದ ಈ ಕೃತಿಗಳನ್ನು ಪ್ರೊ.ಎಂ.ಎಚ್‌.ಕೃಷ್ಣಯ್ಯ ಬಿಡುಗಡೆ ಮಾಡಿದರು.

ಬೆಂಗಳೂರಿನಲ್ಲಿ ಭಾನುವಾರ ಬಿಸಿಲಿಗೆ ರಜೆಯಿತ್ತು , ಆಕಾಶ ಮೋಡದಿಂದ ಭಾರವಾಗಿತ್ತು !

ಸಣ್ಣ ಕತೆಯಾದ ದೊಡ್ಡವರು

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X