ಏಕೀಕರಣ ಆಗಿದ್ದಾಯಿತು, ಆಗಬೇಕಾಗಿರುವುದುಬಾಕೀಕರಣ - ಚಂಪಾ
ಉತ್ತರ ಕರ್ನಾಟಕ- ಹೈದರಾಬಾದ್ ಕರ್ನಾಟಕ ಹಿಂದುಳಿಯಲು ರಾಜಧಾನಿ ಬಹಳ ದೂರ ಇದೆಯಂಬ ವಾದ ತುಸು ಮಟ್ಟಿಗೆ ಒಪ್ಪುವಂತಹುದು. ಶ್ರೀಸಾಮಾನ್ಯರು ಪ್ರತಿ ಸಾರಿ ಕೈಯ್ಯಲ್ಲಿ ಅರ್ಜಿ ಹಿಡಿದು ವಿಧಾನಸೌಧಕ್ಕೆ ಅಥವಾ ಹೈಕೋರ್ಟ್‌ಗೂ ಬಂದು ಹೋಗಲು ಸಾಧ್ಯವಿಲ್ಲ. ಅವರ ಅನುಕೂಲಕ್ಕಾಗಿ ಕೆಲವು ಪ್ರಮುಖ ಕಚೇರಿಗಳು ಹಾಗೂ ಇಲಾಖೆಗಳು ಈ ಭಾಗಕ್ಕೆ ಸ್ಥಳಾಂತರ ಆಗಬೇಕು. ಉತ್ತರ ಕರ್ನಾಟಕಕ್ಕೆ ರಾಜ್ಯದ ಎರಡನೇ ರಾಜಧಾನಿ ಅವಶ್ಯ. ಅದನ್ನು ಎಲ್ಲಿ ಸ್ಥಾಪಿಸಬೇಕೆಂಬುದು ಸಮಸ್ಯೆ ಅಲ್ಲ. ಆ ಭಾಗದ ಜನರಿಗೆ ಅನುಕೂಲವಾಗುವ ಪ್ರದೇಶದಲ್ಲಿ ರಾಜಧಾನಿ ಹೊಸದಾಗಿ ನಿರ್ಮಾಣ ಆದರೂ ಅಡ್ಡಿಯಿಲ್ಲ.
- ಹೀಗೆನ್ನುತ್ತಾರೆ ಚಂಪಾ.
ಧಾರವಾಡದಿಂದ ಬೆಂಗಳೂರಿಗೆ ವಲಸೆ ಬಂದಿರುವ ಚಂದ್ರಶೇಖರ ಪಾಟೀಲರು, ಈಗ ಕಟ್ಟಾ ಕನ್ನಡ ಕಟ್ಟಾಳು. ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಕನ್ನಡ ಪರ ವೇದಿಕೆಯ ಚಟುವಟಿಕೆಗಳಲ್ಲಿ ಚಂಪಾ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಚಂಪಾ ಇತ್ತೀಚೆಗೆ ಮಾತಿಗೆ ನಾಡು- ನುಡಿಯ ಬಗೆಗೆ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಇಲ್ಲಿವೆ-
ಅಖಂಡ ಕರ್ನಾಟಕದ ಮೊದಲ ಕೂಗು ಕೇಳಿ ಬಂದಿದ್ದೇ ಉತ್ತರ ಕರ್ನಾಟಕದಿಂದ. ಆದರೆ ಇಂದೇನಾಗಿದೆ? ಭೌಗೋಳಿಕವಾಗಿ ಕರ್ನಾಟಕದ ಏಕೀಕರಣ ಆದರೂ ಎರಡು ಮನಸ್ಸುಗಳು ಒಗ್ಗೂಡಲಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಉತ್ತರ ಕರ್ನಾಟಕದ ಬೆಳವಣಿಗೆಯೂ ಆಗಿಲ್ಲ.
ಏಕೀಕರಣದ ನಂತರ ಬೆಂಗಳೂರು ರಾಜ್ಯದ ಪ್ರಮುಖ ರಾಜಕೀಯ ಕೇಂದ್ರವಾಗಿ ಬೆಳೆಯಿತು. ಹಳೇ ಮೈಸೂರಿನ ಈ ಊರು ಬೃಹದಾಕಾರವಾಗಿ ಬೆಳೆಯುತ್ತಾ ಹೋಯಿತು. ಅದರ ಜೊತೆಗೇ ರಾಜ್ಯ ರಾಜಕಾರಣವೂ ಇಲ್ಲೇ ಬಲವಾಗಿ ತಳವೂರಿತು. ರಾಜ್ಯದ ಎಲ್ಲ ಭಾಗಗಳಿಗೆ ರಾಜಕೀಯ ಶಕ್ತಿ ವಿತರಣೆಯಾಗುವುದೆಂದು ಏಕೀಕರಣದ ಮುನ್ನ ವಿಶ್ವಾಸವಿಡಲಾಗಿತ್ತು. ಆದರೆ ಅದು ಹಾಗಾಗಲಿಲ್ಲ. ನ್ಯಾಯಬದ್ಧವಾಗಿ ಈಗ ರಾಜಕೀಯ ಶಕ್ತಿ ಸಮವಾಗಿ ವಿತರಣೆ ಆಗಲೇಬೇಕು. ರಾಜಕೀಯ ವಿಕೇಂದ್ರೀಕರಣ ಇಲ್ಲದೆ ಉತ್ತರ ಕರ್ನಾಟಕದ ಪ್ರಗತಿ ಬರೀ ಕನಸು.
ಗುಲ್ಬರ್ಗಾ- ಬೀದರ್ , ರಾಯಚೂರು ಅಂತಹ ಪ್ರದೇಶಗಳು ತೀರಾ ಹಿಂದುಳಿದಿದ್ದರೂ ಅಲ್ಲಿನ ಜನತೆ ಮೊನ್ನೆ ಮೊನ್ನೆಯವರೆಗೆ ದನಿಯೆತ್ತುತ್ತಿರಲಿಲ್ಲ. ಜನಪ್ರತಿನಿಧಿಗಳನ್ನು ಎಚ್ಚರಿಸುವಂತಹ ಚಳವಳಿ-ಜಾಗೃತಿಯೂ ತಲೆಯೆತ್ತಲಿಲ್ಲ. ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಲಕ್ಷ್ಯ ನೀಡಲಿಲ್ಲ.
ಹಳೇ ಮೈಸೂರು ಭಾಗಕ್ಕೆ ಹೋಲಿಸಿದರೆ ಈ ಭಾಗದಲ್ಲಿ ಜಾಗೃತಿ ಕಡಿಮೆಯೇ. ಚುನಾವಣೆಗಳಲ್ಲಿ ಮತದಾರರು ಉತ್ಸಾಹದಿಂದ ಪ್ರತಿನಿಧಿಗಳನ್ನು ಆರಿಸಿ ರಾಜಧಾನಿಗೆ ಕಳುಹಿಸಿದರು. ತದನಂತರ ಸುಮ್ಮನೇ ಮಲಗಿದರು...! ಅನ್ಯಾಯ ಶೋಷಣೆ ಸಹಿಸಿದರು !!
ಇತ್ತೀಚಿನ ದಿನಗಳಲ್ಲಿ ಈ ಭಾಗದ ಪರಿಸ್ಥಿತಿ ಸ್ವಲ್ಪ ಬದಲಾಗುತ್ತಿದೆ. ಜನರಲ್ಲಿ ಜಾಗೃತಿ ಬರಲಾರಂಭಿಸಿದೆ. ಜನಪರ ಕೆಲಸಗಳಿಗಾಗಿ ಶಾಸಕರು-ಮಂತ್ರಿಗಳನ್ನು ಅಡ್ಡ ಹಾಕಿ ಒತ್ತಾಯಿಸುವ ಕಾಲ ಬಂದಿದೆ. ಇದು ಸಮಾಧಾನಕರ ಸಂಗತಿ.
ದೇವರಾಜ ಅರಸು ಅವರು ಮುಖ್ಯಮಂತ್ರಿ ಆದಾಗ ಅವರಿಗೆ ಕನ್ನಡ ನಾಡಿನ ದೂರದ ಪ್ರದೇಶಗಳ ಬಗ್ಗೆ ಕಾಳಜಿ ಇತ್ತು. ಬೆಳಗಾವಿಯಲ್ಲಿ ಕನ್ನಡದ ಭದ್ರಕೋಟೆ ಕಟ್ಟಲು ಕೆಲವು ಇಲಾಖೆಗಳನ್ನು ಅಲ್ಲಿಗೆ ಸ್ಥಳಾಂತರಿಸಿದರು. ಈ ಕಾರ್ಯ ನಿರಂತರವಾಗಲಿಲ್ಲ. ಅಂತಹ ಕೆಲಸ ಮುಂದುವರೆದಾಗಲೇ ಅಭಿವೃದ್ಧಿ ಸಾಧ್ಯ.
ಬೆಂಗಳೂರಿನಲ್ಲಿರುವ ಸರಕಾರಿ ಕಚೇರಿಗಳು ಉತ್ತರ ಕರ್ನಾಟಕಕ್ಕೆ ಸ್ಥಳಾಂತರ ಆದ ಮಾತ್ರಕ್ಕೆ ಸರಕಾರದ ಜವಾಬ್ದಾರಿ ಮುಗಿಯಲಿಲ್ಲ. ಅಧಿಕಾರಿಗಳೂ ಅಲ್ಲೇ ವಾಸವಿದ್ದು ಕಡ್ಡಾಯವಾಗಿ ಕೆಲಸ ಮಾಡುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಿ. ಅಂತಹ ಆದೇಶವನ್ನು ಧಿಕ್ಕರಿಸುವ ಅಧಿಕಾರಿಯನ್ನು ಕೆಲಸದಿಂದ ಅಮಾನತು ಮಾಡುವಂತಾಗಬೇಕು.
ಸರಕಾರಿ ನೌಕರರು ಜನರ ಪರವೂ ಅಲ್ಲ, ವಿರೋಧಿಗಳೂ ಅಲ್ಲ. ಅದೊಂದು ಸುಸಜ್ಜಿತ ಯಂತ್ರ. ಜನರ ಅಪೇಕ್ಷೆಗಳಿಗೆ ತಕ್ಕಂತೆ ಯಂತ್ರವನ್ನು ನಡೆಸುವುದು ಸರಕಾರದ ಹೊಣೆ.
ಎಲ್ಲ ಅಕಾಡೆಮಿಗಳೂ ಬೆಂಗಳೂರಿನಲ್ಲೇ ಬೀಡುಬಿಟ್ಟಿವೆ. ಅವುಗಳಿಗೆ ಸದಸ್ಯರನ್ನು ನೇಮಿಸುವಾಗಲೂ ತಾರತಮ್ಯ ನಡೆದಿದೆ. ಜಾನಪದ, ಯಕ್ಷಗಾನ ಹಾಗೂ ಸಾಹಿತ್ಯ ಅಕಾಡೆಮಿಗಳು , ಗುಲ್ಬರ್ಗಾ , ಬೆಳಗಾವಿ, ಬಳ್ಳಾರಿಯಲ್ಲಿ ಸ್ಥಾಪನೆಯಾಗಬೇಕು.
ಆರು ಮಂದಿ ಸಚಿವರು ಇರುವ ಗುಲ್ಬರ್ಗಾ ಈಗಲೂ ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆ. ಅಭಿವೃದ್ದಿ ಯೋಜನೆಗಳು ಇಲ್ಲಿ ರೂಪುಗೊಂಡಿಲ್ಲ. ಮತ್ತೆ ಇಲ್ಲಿ ಪ್ರತ್ಯೇಕತೆ ಕೂಗೆದ್ದಿದೆ. ಮಾಜಿ ಸಚಿವ ವೈಜನಾಥ ಪಾಟೀಲ್ ಅವರೇ ಪ್ರತ್ಯೇಕತೆಗಾಗಿ ಒತ್ತಾಯಿಸುತ್ತಿದ್ದಾರೆ.
ಏಕೀಕರಣಕ್ಕಾಗಿ ಹೋರಾಟ ನಡೆಸಿದ ನಿವೃತ್ತ ಅಧಿಕಾರಿ ರಾಂ ಜಾದವ್ ಹೇಳಿರುವ ಮಾತು ನೆನಪಿಸಿಕೊಳ್ಳುವುದು ತಪ್ಪು. 'ಏಕೀಕರಣ ಆಗಿದ್ದಾಯಿತು. ಆಗಬೇಕಾಗಿರುವುದು ಬಾಕೀಕರಣ.'
(ವಿಜಯ ಕರ್ನಾಟಕ)












Click it and Unblock the Notifications