Vastu For Money : ಈ 7 ವಸ್ತುಗಳು ಮನೆಯಲ್ಲಿದ್ದರೆ ಸದಾ ನೆಲೆಯಾಗುತ್ತಾಳೆ ಧನ ಲಕ್ಷ್ಮೀ : ಸಾಲ ಬಾಧೆಗಳೆಲ್ಲಾ ತೀರುವುದು
ತಮ್ಮ ಮನೆಯಲ್ಲಿ ಯಾವಾಗಲೂ ಸಂತೋಷ, ಶಾಂತಿ ಮತ್ತು ಸಮೃದ್ಧಿ ಇರಬೇಕು ಎನ್ನುವುದೇ ಪ್ರತಿಯೊಬ್ಬರ ಬಯಕೆಯಾಗಿರುತ್ತದೆ. ಯಾವ ಮನೆಯಲ್ಲಿ ಪಾಸಿಟಿವಿಟಿ ಇರುವುದೋ ಆ ಮನೆಯ ಸದಸ್ಯರು ತುಂಬಾ ಸಂತೋಷದಿಂದ ಇರುವರು. ಮನೆಯಲ್ಲಿಯೂ ಯಾವಾಗಲೂ ಸಂತೋಷದ ವಾತಾವರಣ ನೆಲೆಯಾಗುವುದು. ಹಿಂದೂ ಧಾರ್ಮಿಕ ನಂಬಿಕೆಗಳು ಮತ್ತು ವಾಸ್ತು ಶಾಸ್ತ್ರದ ಪ್ರಕಾರ (Vastu Tips), ಲಕ್ಷ್ಮೀದೇವಿಯ ಆಶೀರ್ವಾದ ಮನೆಯ ಮೇಲೆ ಇದ್ದರೆ, ಸಂಪತ್ತು ಮತ್ತು ಸಮೃದ್ಧಿ ತಾನಾಗಿಯೇ ಹೆಚ್ಚಾಗುತ್ತದೆ ಎನ್ನುವ ನಂಬಿಕೆಯಿದೆ. ಹಾಗಾಗಿ ಮನೆಯಲ್ಲಿ ಕೆಲವು ಪವಿತ್ರ ವಸ್ತುಗಳನ್ನು ಇಟ್ಟು ಪೂಜಿಸುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದ ಮನೆ ಮತ್ತು ಮನೆ ಮಂದಿಯ ಮೇಲೆ ಇರುತ್ತದೆ ಎನ್ನಲಾಗಿದೆ.
ಮನೆಯಲ್ಲಿ ಇರಲಿ ಈ ಏಳು ವಸ್ತುಗಳು
ಶ್ರೀ ಯಂತ್ರ :
ಶ್ರೀ ಯಂತ್ರಕ್ಕೆ ವಾಸ್ತು ಮತ್ತು ಆಧ್ಯಾತ್ಮಿಕ ನಂಬಿಕೆಗಳಲ್ಲಿ ವಿಶೇಷ ಸ್ಥಾನವಿದೆ. ಪೂಜಾ ಕೋಣೆಯಲ್ಲಿ ಸ್ವಚ್ಛವಾದ ಸ್ಥಳದಲ್ಲಿ ಶ್ರೀ ಯಂತ್ರವನ್ನು ಇರಿಸಿದರೆ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗುವುದು. ಜನರು ಭಕ್ತಿಯಿಂದ ಶ್ರೀ ಯಂತ್ರವನ್ನು ಪೂಜಿಸಿದರೆ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುವುದು. ಈ ಕಾರಣದಿಂದಲೇ ಬಹಳಷ್ಟು ಮಂದಿ ಶ್ರೀ ಯಂತ್ರವನ್ನು ಪೂಜಿಸುತ್ತಾರೆ.

ದಕ್ಷಿಣವರ್ತಿ ಶಂಖ
ಹಿಂದೂ ಸಂಪ್ರದಾಯದ ಪ್ರಕಾರ ಶಂಖ ಎಂದರೆ ವಿಷ್ಣು ಮತ್ತು ಲಕ್ಷ್ಮೀಗೆ ಅತ್ಯಂತ ಪ್ರಿಯವಾದುದು. ದಕ್ಷಿಣವರ್ತಿ ಶಂಖವನ್ನು ಮನೆಯಲ್ಲಿ ಇಟ್ಟು ಪೂಜಿಸುವುದು ವಿಶೇಷವಾಗಿ ಶುಭ ಎನ್ನಲಾಗಿದೆ. ಇದನ್ನು ಪೂಜಾ ಕೋಣೆಯಲ್ಲಿ ಸ್ವಚ್ಛವಾದ ಸ್ಥಳದಲ್ಲಿ ಇಡಬೇಕು.
ತುಳಸಿ ಗಿಡ
ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರ ಸ್ಥಾನವಿದೆ. ಮನೆಯ ಅಂಗಳದಲ್ಲಿ ತುಳಸಿಗೆ ಒಂದು ಸ್ಥಾನ ಇದ್ದೇ ಇರುತ್ತದೆ. ಅಂಗಳ ಇಲ್ಲ ಎಂದಾದರೆ ಬಾಲ್ಕನಿಯಲ್ಲಿಯೋ ಕಿಟಕಿ ಸಂಧಿಯಲ್ಲಿಯೋ ಪಾಟ್‌ನಲ್ಲಿ ತುಳಸಿ ಹಾಕಿ ಇಟ್ಟುಕೊಳ್ಳುವುದಿದೆ. ಮನೆಯಂಗಳದಲ್ಲಿರುವ ತುಳಸಿಗೆ ಪ್ರತಿದಿನ ನೀರು ಹಾಕುವುದು, ಪೂಜೆ ಮಾಡುವುದು ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ದತಿ. ಸಂಜೆ ತುಳಸಿ ಗಿಡದ ಬಳಿ ದೀಪ ಹಚ್ಚುವುದರಿಂದ ಮನೆಯಲ್ಲಿ ಶಾಂತಿಯುತ ವಾತಾವರಣ ನಿರ್ಮಾಣವಾಗುತ್ತದೆ ಎನ್ನುವುದು ನಂಬಿಕೆ.
ಕವಡೆ:
ಕವಡೆಗಳನ್ನು ಲಕ್ಷ್ಮಿ ದೇವಿಗೆ ಸಂಬಂಧಿಸಿದ ಶುಭ ವಸ್ತುಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಕೆಲವು ಮನೆಯಲ್ಲಿ ಕವಡೆಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ದೇವರ ಕೋಣೆಯಲ್ಲಿ ಅಥವಾ ಹಣ, ಒಡವೆ ಇಡುವ ಜಾಗದಲ್ಲಿ ಇರಿಸಲಾಗುತ್ತದೆ. ಹಾಗೆ ಮಾಡುವುದರಿಂದ ಆರ್ಥಿಕ ಸ್ಥಿರತೆ ಬರುತ್ತದೆ ಎನ್ನುವ ನಂಬಿಕೆ ಇದೆ.
ಗೋಮತಿ ಚಕ್ರ :
ಕೆಲವು ಮನೆಗಳ ದೇವರ ಕೋಣೆಯಲ್ಲಿ ಗೋಮತಿ ಚಕ್ರಗಳನ್ನು ಇಡುವ ಸಂಪ್ರದಾಯವಿದೆ. ಇದು ಮನೆಯಲ್ಲಿ ಶಾಂತಿ ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆಯಂತೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಮೃದ್ಧಿಯನ್ನು ತರುತ್ತದೆ ಎನ್ನುವುದು ನಂಬಿಕೆ.
ಕಮಲದ ಹೂವು ಮತ್ತು ಕಮಲದ ಬೀಜಗಳು:
ಪುರಾಣಗಳ ಪ್ರಕಾರ, ಲಕ್ಷ್ಮೀ ದೇವಿಯು ಕಮಲದ ಹೂವಿನ ಮೇಲೆ ಕೂರುತ್ತಾಳೆ. ಲಕ್ಷ್ಮೀಗೆ ಕಮಲದ ಹೂವೆಂದರೆ ತುಂಬಾ ಇಷ್ಟ. ಆದ್ದರಿಂದ, ಪೂಜೆಯ ಸಮಯದಲ್ಲಿ ಕಮಲದ ಹೂವುಗಳನ್ನು ಬಳಸುವುದು ಅಥವಾ ಕಮಲದ ಬೀಜಗಳಿಂದ ಮಾಡಿದ ಮಾಲೆಗಳನ್ನು ಬಳಸುವುದು ಅತ್ಯಂತ ಶುಭ. ಇವುಗಳನ್ನು ಮನೆಯಲ್ಲಿ ಇಡುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದ ಸಿಗುತ್ತದೆಯಂತೆ. ಸಾಲ ಬಾಧೆ ತೀರುವುದಕ್ಕೂ ಇದು ಸಹಕಾರಿ ಎನ್ನಲಾಗಿದೆ.
ನವಿಲು ಗರಿ:
ವಾಸ್ತು ನಂಬಿಕೆಗಳ ಪ್ರಕಾರ ಮನೆಯಲ್ಲಿ ನವಿಲು ಗರಿಯನ್ನು ಇಟ್ಟುಕೊಳ್ಳುವುದರಿಂದ ನೆಗೆಟಿವಿಟಿ ದೂರವಾಗುವುದು. ಮನೆಯಲ್ಲಿ ಪಾಸಿಟಿವ್ ಎನರ್ಜಿ ಹರಿದಾಡುವುದು. ಕೆಲವರು ನವಿಲು ಗರಿಯನ್ನು ದೇವರ ಕೋಣೆಯಲ್ಲಿ ಇರಿಸಿದರೆ ಇನ್ನು ಕೆಲವರು ಮನೆಯಲ್ಲಿ ಅಲಂಕಾರದ ಭಾಗವಾಗಿ ಬಳಸುತ್ತಾರೆ. ಇದು ಮನೆಯ ಸಮೃದ್ದಿ ಹೆಚ್ಚಾಗಲು ಕಾರಣವಾಗುತ್ತದೆ ಎನ್ನುವ ನಂಬಿಕೆ ಇದೆ.
ಮನೆಯಲ್ಲಿ ಸಂಪತ್ತು, ಸಮೃದ್ದಿ, ಸಂತೋಷ ಹೆಚ್ಚಾಗಬೇಕಾದರೆ ಈ ವಸ್ತುಗಳನ್ನು ಮನೆಯಲ್ಲಿ ಇಡುವುದರ ಜೊತೆಗೆ, ಮನೆಯನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು ಕೂಡಾ ಬಹಳ ಮುಖ್ಯ.
ಮನೆಯಲ್ಲಿ ಕಸ, ಜೇಡರ ಬಲೆ, ಮುರಿದ, ತುಂಡಾದ ವಸ್ತುಗಳನ್ನು ಯಾವ ಕಾರಣಕ್ಕೂ ಇಟ್ಟುಕೊಳ್ಳಬಾರದು. ಮನೆಯ ಮುಖ್ಯ ದ್ವಾರ ಯಾವಾಗಲೂ ಸ್ವಚ್ಛವಾಗಿರಬೇಕು. ಸಂಜೆ ದೀಪ ಹಚ್ಚುವುದು ಸಹ ಹಿಂದೂ ಸಂಪ್ರದಾಯಗಳ ಭಾಗವಾಗಿದೆ.
ಈ ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಖಂಡಿತವಾಗಿಯೂ ಹಣ ಬರುತ್ತದೆ ಅಥವಾ ಆರ್ಥಿಕ ಸಮಸ್ಯೆಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತವೆ ಎಂದು ಹೇಳಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದ್ದರಿಂದ, ಇವುಗಳನ್ನು ಧಾರ್ಮಿಕ ನಂಬಿಕೆಯಾಗಿ ಮಾತ್ರ ನೋಡಬೇಕು. ಆರ್ಥಿಕವಾಗಿ ಉತ್ತಮ ಜೀವನಕ್ಕೆ ಉಳಿತಾಯ, ಸರಿಯಾದ ಹಣಕಾಸು ಯೋಜನೆ ಮತ್ತು ಕಠಿಣ ಪರಿಶ್ರಮವು ಅಷ್ಟೇ ಮುಖ್ಯವಾಗಿರುವುದು.


Click it and Unblock the Notifications
