Tulsi: ತುಳಸಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದನ್ನು ತಡೆಯುವುದು ಹೇಗೆ? ಈ ಅಂಶ ಬಹಳ ಮುಖ್ಯ ತಿಳಿದಿರಲಿ

Tulsi: ತುಳಸಿ ಸಾಧಾರಣ ಸಸ್ಯವಲ್ಲ. ಅದು ಬಹಳ ಪವಿತ್ರ ಮತ್ತು ಧಾರ್ಮಿಕ ಆಚರಣೆಯಲ್ಲಿ ಬಹಳ ಮಹತ್ವ ಪಡೆದುಕೊಂಡಿರುವ ಸಸಿ. ಬಹುತೇಕ ಪ್ರತಿ ಮನೆಯಂಗಳದಲ್ಲಿ ತುಳಸಿಗೆ ಒಂದು ಸ್ಥಾನ ಇದ್ದೇ ಇರುತ್ತದೆ. ಧಾರ್ಮಿಕವಾಗಿ ಮತ್ತು ಔಷಧೀಯವಾಗಿ ಬಹಳ ಪ್ರಾಮುಖ್ಯತೆ ಪಡೆದುಕೊಂಡಿರುವ ಗಿಡ ಈ ತುಳಸಿ. ಆದರೆ ಒಮ್ಮೊಮ್ಮೆ ತುಳಸಿ ಎಲೆಗಳ ಬಣ್ಣವು ಹಳದಿಯಾಗುವುದಕ್ಕೆ ಶುರುವಿಡುತ್ತದೆ. ಎಲೆಗಳ ಬಣ್ಣ ಹಳದಿಯಾಗುವುದು ಎಂದರೆ ಇನ್ನು ಕೆಲವು ದಿನಗಳಲ್ಲಿ ಗಿಡ ಮುದುಡಿ ನಿರ್ಜೀವವಾಗುತ್ತದೆ ಎಂದೇ ಅರ್ಥ.

ತುಳಸಿ ಗಟ್ಟಿಮುಟ್ಟಾದ ಸಸ್ಯ ಖಂಡಿತಾ ಅಲ್ಲ. ಹಾಗಂತ ಅಲ್ಪ ಬಾಳಿಕೆಯ ಗಿಡವೂ ಅಲ್ಲ. ಸರಿಯಾದ ಆರೈಕೆ ನೀಡಿದರೆ ಇದು ಎಲ್ಲಾ ಕಾಲದಲ್ಲಿಯೂ ಸೊಂಪಾಗಿ ಬೆಳೆಯುತ್ತದೆ. ಅದೇ ದೈನಂದಿನ ಆರೈಕೆಯಲ್ಲಿ ಮಾಡುವ ಸಣ್ಣ ತಪ್ಪುಗಳು ಕೂಡಾ ಈ ಸಸಿಯ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಈ ಸಸ್ಯದಲ್ಲಿನ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸುತ್ತಲೇ ಇರಬೇಕು. ಹೀಗಾದಾಗ ಮಾತ್ರ ತುಳಸಿ ಮುದುಡಿ ಹೋಗುವುದನ್ನು ತಡೆಬಹುದು.

Tulsi Leaves Turning Yellow Follow These Expert Care Tips Immediately Know Complete details

ತುಳಸಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಲು ಕಾರಣಗಳು

ತುಳಸಿ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದರ ಹಿಂದಿನ ಬಹು ಮುಖ್ಯ ಕಾರಣ, ಅತಿಯಾದ ನೀರು. ಗಿಡಕ್ಕೆ ನೀರು ಹೆಚ್ಚಾಗುತ್ತಿರುವಂತೆಯೇ ಬೇರುಗಳಿಗೆ ಹಾನಿಯಾಗುತ್ತದೆ. ಇದು ಬೇರುಗಳಿಗೆ ಎಷ್ಟು ಪ್ರಮಾಣದಲ್ಲಿ ಹಾನಿ ಉಂಟು ಮಾಡುತ್ತದೆಯೆಂದರೆ, ಅಗತ್ಯ ಪ್ರಮಾಣದ ಆಮ್ಲಜನಕವನ್ನು ಪಡೆಯಲು ಕೂಡಾ ಗಿಡಗಳಿಗೆ ಸಾಧ್ಯವಾಗುವುದಿಲ್ಲ.

ತುಳಸಿ ಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗಲು ಇನ್ನೊಂದು ಪ್ರಮುಖ ಕಾರಣ ಸೂರ್ಯನ ಬೆಳಕು. ತುಳಸಿ ಸಸ್ಯಗಳಿಗೆ ದ್ಯುತಿಸಂಶ್ಲೇಷಣೆ ಪ್ರಕ್ರಿಯೆಯನ್ನು ನಿರ್ವಹಿಸಲು ಹೆಚ್ಚಿನ ಸೂರ್ಯನ ಬೆಳಕು ಬೇಕಾಗುತ್ತದೆ. ಸೂರ್ಯನ ಬೆಳಕು ಕಡಿಮೆಯಾದಾಗ ಎಲೆಗಳು ತಮ್ಮ ಹಸಿರು ಬಣ್ಣವನ್ನು ಕಳೆದುಕೊಂಡು ಹಳದಿ ಬಣ್ಣಕ್ಕೆ ತಿರುಗುತ್ತವೆ. ಮಣ್ಣಿನ ಗುಣಮಟ್ಟ ಮತ್ತು ಅನಿರೀಕ್ಷಿತ ಹವಾಮಾನ ಪರಿಸ್ಥಿತಿಗಳು ಕೂಡಾ ಇದಕ್ಕೆ ಕಾರಣವಾಗುತ್ತವೆ.

ತುಳಸಿಯನ್ನು ಆರೋಗ್ಯವಾಗಿಡಲು ಎಷ್ಟು ನೀರು ಹಾಕಬೇಕು?

ತುಳಸಿ ಗಿಡಗಳ ಆರೈಕೆಯಲ್ಲಿ ನೀರು ಹಾಕುವುದು ಒಂದು ಪ್ರಮುಖ ಅಂಶವಾಗಿದೆ. ಈ ಸಸ್ಯವು ಸ್ವಲ್ಪ ತೇವಾಂಶವುಳ್ಳ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಆದರೆ ನೀರು ನಿಂತ ಮಣ್ಣಿನಲ್ಲಿ ತುಳಸಿ ಸರಿಯಾಗಿ ಬೆಳೆಯುವುದಿಲ್ಲ. ಸಸ್ಯಕ್ಕೆ ಯಾವಾಗ ನೀರು ಹಾಕಬೇಕೆಂದು ತಿಳಿದುಕೊಳ್ಳುವ ಸರಳ ಮಾರ್ಗವೆಂದರೆ ಮಣ್ಣನ್ನು ಪರಿಶೀಲಿಸುವುದು. ಮೇಲ್ಮೈಯಲ್ಲಿರುವ ಮಣ್ಣು ಒಣಗಿದಂತೆ ಕಂಡುಬಂದರೆ, ಆಗ ನೀರುಣಿಸಬೇಕು. ಸಸ್ಯಕ್ಕೆ ಹೆಚ್ಚು ನೀರು ಹಾಕದಂತೆ ಜಾಗೃತೆ ವಹಿಸುವುದು ಬಹಳ ಮುಖ್ಯ. ಬೇಸಿಗೆಯಲ್ಲಿ ತುಸು ಹೆಚ್ಚು ನೀರು ಹಾಕುವುದು ಅಗತ್ಯವಾಗಿರುತ್ತದೆ. ಆದರೆ, ಇಲ್ಲಿ ನೆನಪಿಸನಲ್ಲಿಡಬೇಕಾದ ಅಂಶ ಎಂದರೆ ತುಳಸಿಗೆ ಹಾಕುವ ಹೆಚ್ಚುವರಿ ನೀರು ಹೊರಕ್ಕೆ ಹೋಗಲು ದಾರಿಯಿರಬೇಕು.

ಸೂರ್ಯನ ಬೆಳಕು ಮತ್ತು ಸೂಕ್ತ ಸ್ಥಳ

ತುಳಸಿಗೆ ಪ್ರಕಾಶಮಾನವಾದ ಸೂರ್ಯನ ಬೆಳಕು ಬೇಕು. ಕನಿಷ್ಠ ಐದರಿಂದ ಆರು ಗಂಟೆಗಳ ಕಾಲ ನೇರವಾಗಿ ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ತುಳಸಿ ಇರಬೇಕು. ಯಾವುದೇ ಕಾರಣಕ್ಕೂ ತುಳಸಿಯನ್ನು ನೆರಳಿನ ಸ್ಥಳದಲ್ಲಿ ಅಥವಾ ಒಳಾಂಗಣದಲ್ಲಿ ಇಡಲೇ ಬಾರದು. ಇದು ಗಿಡವನ್ನು ದುರ್ಬಲಗೊಳಿಸುತ್ತದೆ. ಇದರಿಂದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.

ಮಣ್ಣಿನ ಗುಣಮಟ್ಟ ಮುಖ್ಯ

ಯಾವುದೇ ಸಸ್ಯದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಅದಕ್ಕೆ ಬಳಸುವ ಮಣ್ಣಿನ ಪ್ರಕಾರ ಒಂದು ಪ್ರಮುಖ ಅಂಶವಾಗಿದೆ. ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣಿನಲ್ಲಿ ತುಳಸಿ ಸೊಂಪಾಗಿ ಬೆಳೆಯುತ್ತದೆ. ಗೊಬ್ಬರ ಮತ್ತು ಮರಳು/ಕೋಕೋಪೀಟ್ ಸೇರಿಸಿದ ತೋಟದ ಮಣ್ಣನ್ನು ತುಳಸಿ ಗಿಡಕ್ಕೆ ಬಳಸಬಹುದು. ಮತ್ತೊಂದು ಪ್ರಮುಖ ಅಂಶವೆಂದರೆ ತುಳಸಿಕಟ್ಟೆಯಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಇನ್ನು ತುಳಸಿ ಕಟ್ಟೆಯಂತಿರುವ ಪಾಟ್‌ ನಲ್ಲಿ ಅಂದರೆ ತುಳಸಿ ಪಾಟ್‌ ನಲ್ಲಿ ಗಿಡವನ್ನು ನೆಡುವುದಾದರೆ ಕುಂಡದಿಂದ ನೀರು ಹೊರಕ್ಕೆ ಹೋಗಲು ಅನುವು ಮಾಡಿಕೊಡಬೇಕು. ಪಾಟ್‌ನಲ್ಲಿ ಹೆಚ್ಚು ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ತುಳಸಿ ಕಟ್ಟೆಯಲ್ಲಿ ಅಥವಾ ತುಳಸಿ ಪಾಟ್‌ನಲ್ಲಿ ನೀರು ನಿಂತರೆ ಬೇರು ಕೊಳೆತು ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ.

ಪೋಷಕಾಂಶಗಳು ಮತ್ತು ನಿಯಮಿತ ನಿರ್ವಹಣೆ

ತುಳಸಿ ಗಿಡಗಳಿಗೆ ಸಾವಯವ ಗೊಬ್ಬರಗಳನ್ನು ನೀಡಬೇಕಾಗುತ್ತದೆ. ನಿಯಮಿತವಾಗಿ ಸಸ್ಯಗಳಿಗೆ ಗೊಬ್ಬರ ಅಥವಾ ವರ್ಮಿ-ಗೊಬ್ಬರವನ್ನು ಸೇರಿಸುವ ಮೂಲಕ ಅದರ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶವನ್ನು ನೀಡಬಹುದು. ಸಸ್ಯಕ್ಕೆ ಸರಿಯಾದ ಪ್ರಮಾಣದಲ್ಲಿ ಪೋಷಕಾಂಶ ಸಿಕ್ಕಿದರೆ ಎಲೆ ಹಳದಿಯಾಗದಂತೆ ಮತ್ತು ಎಲೆಗಳು ಒಣಗದಂತೆ ತಡೆಯಬಹುದು. ಸಸ್ಯವು ಹೊಸ ಎಲೆಗಳನ್ನು ಬಿಡುವುದಕ್ಕೂ ಇದು ಸಹಾಯ ಮಾಡುತ್ತದೆ.

ಕೀಟಗಳು ಮತ್ತು ಪರಿಸರದ ಒತ್ತಡದಿಂದ ತುಳಸಿಯನ್ನು ರಕ್ಷಿಸುವುದು: ಗಿಡಹೇನುಗಳು, ಬಿಳಿ ನೊಣಗಳು ಮತ್ತು ಹುಳಗಳು ತುಳಸಿ ಎಲೆಗಳ ಮೇಲೆ ಪರಿಣಾಮ ಬೀರುತ್ತವೆ. ಈ ಕೀಟಗಳು ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಲು ಕಾರಣವಾಗಬಹುದು. ಹಾಗಾಗಿ ಸಸ್ಯವನ್ನು ಆಗಾಗ ಗಮನಿಸುತ್ತಿರಬೇಕು. ಕೀಟಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಬೇವಿನ ಎಣ್ಣೆಯನ್ನು ಎಲೆಗಳ ಮೇಲೆ ಸಿಂಪಡಿಸಬೇಕು.

ಹಳದಿ ಎಲೆಗಳನ್ನು ತಡೆಗಟ್ಟಲು ಸುಲಭ ವಿಧಾನಗಳು

*ಅಗತ್ಯವಿದ್ದಾಗ ಮಾತ್ರ ನಿಮ್ಮ ಗಿಡಕ್ಕೆ ನೀರು ಹಾಕಿ.
*ಸಾಕಷ್ಟು ಸೂರ್ಯನ ಬೆಳಕನ್ನು ಒದಗಿಸಿ ಮತ್ತು ಆರೋಗ್ಯಕರ ಮಣ್ಣನ್ನು ಬಳಸಿ. *ಸಾಂದರ್ಭಿಕವಾಗಿ, ಮಣ್ಣನ್ನು ಸಡಿಲಗೊಳಿಸಬೇಕಾಗುತ್ತದೆ.
* ತುಳಸಿ ಗಿಡಕ್ಕೆ ಸಾಕಷ್ಟು ಸೂರ್ಯನ ಬೆಳಕು ಸಿಗುತ್ತಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
*ಸಾಕಷ್ಟು ಸೂರ್ಯನ ಬೆಳಕು, ನೀರು ಮತ್ತು ಆರೋಗ್ಯಕರ ಮಣ್ಣಿನಿಂದ, ನಿಮ್ಮ ತುಳಸಿ ಸಸ್ಯವು ವರ್ಷವಿಡೀ ಆರೋಗ್ಯಕರ ಮತ್ತು ಹಸಿರಾಗಿರುತ್ತದೆ.

(ಬರಹ : ರಂಜಿತಾ ಆರ್‌.ಕೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+