Mango peel recipes: ವೆಸ್ಟ್ ಎಂದು ಎಸೆಯುವ ಮಾವಿನ ಹಣ್ಣಿನ ಸಿಪ್ಪೆಯಿಂದ ಈ ಟೇಸ್ಟಿ ತಿಂಡಿಗಳನ್ನು ಟ್ರೈ ಮಾಡಿ
ಹಣ್ಣುಗಳ ರಾಜ ಮಾವಿಗೆ ಬೇಸಿಗೆ ಕಾಲದಲ್ಲಿ ಭಾರಿ ಬೇಡಿಕೆ ಇರುತ್ತದೆ. ಉತ್ತಮ ರುಚಿಯ ಹೊರತಾಗಿ, ಹಣ್ಣು ಅದ್ಭುತ ಪೋಷಕಾಂಶಗಳ ಉಗ್ರಾಣವಾಗಿದೆ. ಆದರೆ, ಎರಡನೇ ಯೋಚನೆ ಮಾಡದೆ ಎಸೆಯುವ ಮಾವಿನ ಹಣ್ಣಿನ ಸಿಪ್ಪೆಯು ಏನೆಲ್ಲಾ ಔಷಧಿಯ ಗುಣಗಳನ್ನು ಹೊಂದಿದೆ ಎಂಬುದು ನಿಮಗೆ ತಿಳಿದಿದೆಯೇ? ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಒಳಗೊಂಡಂತೆ ಹಲವಾರು ರೋಗಗಳಿಗೆ ಇದು ರಾಮಬಾಣ!.
ಮಾವಿನ ಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಎ, ಸಿ, ಕೆ, ಫೋಲೇಟ್, ಮೆಗ್ನೀಸಿಯಮ್, ಕೋಲೀನ್, ಪೊಟ್ಯಾಸಿಯಮ್, ಫೈಬರ್, ಸಸ್ಯ ಸಂಯುಕ್ತಗಳು, ರೋಗ ನಿರೋಧಕಗಳು ಅಂಶಗಳಿವೆ. ಸಿಪ್ಪೆಯಲ್ಲಿರುವ ಕ್ಯಾರೊಟಿನಾಯ್ಡ್ಗಳು ಮತ್ತು ಪಾಲಿಫಿನಾಲ್ಗಳು ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

2008 ರಲ್ಲಿ ಪ್ರಕಟವಾದ ಒಕ್ಲಹೋಮ ಸ್ಟೇಟ್ ಯೂನಿವರ್ಸಿಟಿ ಅಧ್ಯಯನದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಮಾವಿನ ಸಿಪ್ಪೆಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಯುನಿವರ್ಸಿಟಿ ಆಫ್ ಕ್ವೀನ್ಸ್‌ಲ್ಯಾಂಡ್ ಸ್ಕೂಲ್ ಆಫ್ ಫಾರ್ಮಸಿಯ ಸಂಶೋಧನೆಯ ಪ್ರಕಾರ, ನಾಮ್ ಡಾಕ್ ಮೈ ಮತ್ತು ಇರ್ವ್ವಿನ್ ಎಂಬ ಎರಡು ಮಾವಿನ ಹಣ್ಣಿನ ಸಿಪ್ಪೆಗಳು ದೇಹದಲ್ಲಿ ಕೊಬ್ಬಿನ ಅಂಶಗಳನ್ನು ಕಡಿಮೆ ಮಾಡುತ್ತದೆ.
ಇಷ್ಟು ತಿಳಿದ ಮೇಲೆ ನೀವು ಹಣ್ಣನ್ನು ತಿಂದು ಸಿಪ್ಪೆ ಎಸಯಲು ಹೋಗುವಿದಿಲ್ಲ ಎಂಬುದು ಗೊತ್ತು. ಹಾಗಾದರೇ ಈ ಸಿಪ್ಪೆಯನ್ನು ಏನು ಮಾಡಬೇಕೆಂದು ನಿಮಗೆ ಪ್ರಶ್ನೆ ಬಂದಿದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಮಾವಿನ ಹಣ್ಣಿನ ಸಿಪ್ಪೆ ಬಳಸಿಕೊಂಡು ಮಾಡುವ ಕೆಲವು ಟೇಸ್ಟಿ ರೆಸಿಪಿಗಳನ್ನು ಇಲ್ಲಿ ನೀಡಲಾಗಿದೆ.
ಮಾವಿನ ಸಿಪ್ಪೆಯ ರೆಸಿಪಿಗಳು ಇಲ್ಲಿವೆ
1. ಮಾವಿನ ಸಿಪ್ಪೆಯ ಚಹಾ: ಪರಿಮಳಯುಕ್ತ ಮತ್ತು ಎನರ್ಜಿ ನೀಡುವ ಮಾವಿನ ಹಣ್ಣಿನ ಸಿಪ್ಪೆಯ ಚಹಾ ಮಾಡಲು, ಮೊದಲು ಮಾವಿನ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ. ಇದಕ್ಕೆ ಸ್ವಲ್ಪ ಜೇನುತುಪ್ಪ ಅಥವಾ ನಿಂಬೆ ರಸವನ್ನು ಸೇರಿಸಬಹುದು. ಇದು ರುಚಿಕರವಾಗಿರುವುದರ ಜೊತೆಗೆ, ಮಾವಿನ ಸಿಪ್ಪೆಯ ಚಹಾವು ವಿಟಮಿನ್‌ಗಳು ಮತ್ತು ರೋಗ ನಿರೋಧಕಗಳನ್ನು ಹೊಂದಿದ್ದು, ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

2. ಮಾವಿನ ಸಿಪ್ಪೆ ಉಪ್ಪಿನಕಾಯಿ: ಗರಿಗರಿಯಾದ ಮತ್ತು ಮಸಾಲೆಯುಕ್ತ ತಿಂಡಿ ಮಾಡಲು ಮಾವಿನ ಹಣ್ಣಿನ ಸಿಪ್ಪೆಯನ್ನು ಉಪ್ಪಿನಕಾಯಿ ಮಾಡಬಹುದು. ಸಿಪ್ಪೆಯನ್ನು ತೆಳುವಾದ ಹೋಳುಗಳಾಗಿ ಕತ್ತರಿಸಿ ಮತ್ತು ಅದನ್ನು ವಿನೆಗರ್, ಉಪ್ಪು ಮತ್ತು ಮಸಾಲೆಗಳೊಂದಿಗೆ ಬೆರೆಸಿ ಗಾಳಿಯಾಡದ ಡಬ್ಬಿಯಲ್ಲಿಡಿ. ಕೆಲವು ದಿನಗಳವರೆಗೆ ಮಾಗಲು ಬಿಡಿ. ಬಳಿಕ ತೆಗೆದು ಊಟದ ಜೊತೆಗೆ ಎಂಜಾಯ್ ಮಾಡಿ.
3. ಮಾವಿನ ಸಿಪ್ಪೆಯ ಚಟ್ನಿ: ರುಚಿಕರವಾದ ಮಾವಿನ ಹಣ್ಣಿನ ಸಿಪ್ಪೆಯ ಚಟ್ನಿಯನ್ನು ತಯಾರಿಸಲು, ಮಾವಿನ ಸಿಪ್ಪೆಯನ್ನು ನುಣ್ಣಗೆ ಕತ್ತರಿಸಿ. ಅದಕ್ಕೆ ಹಸಿರು ಮೆಣಸಿನಕಾಯಿಗಳು, ಶುಂಠಿ, ಬೆಳ್ಳುಳ್ಳಿ, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನು ಮತ್ತಷ್ಟು ಟೇಸ್ಟಿ ಮಾಡಲು ಬಯಸುವವರು ವಗ್ಗೆಣೆ ಕೂಡ ಹಾಕಿಕೊಳ್ಳಬಹುದು. ಇದನ್ನು ಮೆಣಸಿನಕಾಯಿ ಬಜ್ಜಿ, ಬಾಳೆಕಾಯಿ ಬಜ್ಜಿ, ಸಮೋಸಾ ಮತ್ತು ಸ್ಯಾಂಡ್‌ವಿಚ್‌ಗಳ ಜೊತೆಗೆ ಎಂಜಾಯ್ ಮಾಡಬಹುದು.
4. ಮಾವಿನ ಸಿಪ್ಪೆಯ ಜಾಮ್: ಜಾಮ್ ಮಾಡಲು ಮೊದಲು ಮಾವಿನ ಹಣ್ಣಿನ ಸಿಪ್ಪೆಯನ್ನು ಸಕ್ಕರೆ ಮತ್ತು ನೀರಿನಲ್ಲಿ ಹಾಕಿ ಅದು ಜಾಮ್ ಹದಕ್ಕೆ ಬರುವವರೆಗೆ ಕುದಿಸಬೇಕು. ಬಳಿಕ ಅದಕ್ಕೆ ಏಲಕ್ಕಿ ಅಥವಾ ದಾಲ್ಚಿನ್ನಿ ಸೇರಿಸಬೇಕು. ದಾಲ್ಚಿನ್ನಿ ಇಲ್ಲದಿದ್ದರೂ ನಡೆಯುತ್ತದೆ. ಈ ಜಾಮ್ ಅನ್ನು ಟೋಸ್ಟ್, ಪ್ಯಾನ್‌ಕೇಕ್‌ಗಳ ಮೇಲೆ, ಪೇಸ್ಟ್ರಿ ಮತ್ತು ಕೇಕ್‌ಗಳ ಒಳಗೆ ತುಂಬಿಸಿ ಟೇಸ್ಟ್ ಮಾಡಬಹುದು.
5. ಮಾವಿನ ಸಿಪ್ಪೆಯ ಪುಡಿ: ಹಣ್ಣನ್ನು ತಿಂದ ಬಳಿಕ ಮಾವಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಅಥವಾ ಡಿಹೈಡ್ರೇಟರ್‌ನಲ್ಲಿ ಒಣಗಿಸಬೇಕು. ಬಳಿಕ ಅದನ್ನು ನುಣ್ಣಗೆ ಪುಡಿ ಮಾಡಿ, ಒಂದು ಗಾಜಿನ ಡಬ್ಬದಲ್ಲಿ ತುಂಬಿಸಿ ಇಟ್ಟುಕೊಳ್ಳಿ. ಪುಡಿಮಾಡಿದ ಮಾವಿನ ಸಿಪ್ಪೆಯನ್ನು ಸೂಪ್‌ಗಳು ಮತ್ತು ಗ್ರೇವಿಗಳ ಮೇಲೆ ಹಾಕಿ ಅವುಗಳ ಸ್ವಾದ ಹೆಚ್ಚಿಸಬಹುದು.












Click it and Unblock the Notifications