ವಯಸ್ಸು ಮೀರಿ ವಿವಾಹವಾಗುವ ಗಂಡಸರಿಗೆ ಕಿವಿಮಾತು: ಸಂತಾನ ಸಮಸ್ಯೆಯ ಬಗ್ಗೆ ಅಧ್ಯಯನ ಹೇಳುವುದೇನು?
ಸಣ್ಣಪುಟ್ಟ ಕೆಲಸ ಮಾಡುವ, ಕೃಷಿಯಲ್ಲಿ ತೊಡಗಿಸಿಕೊಂಡಿರುವ ಹೀಗೆ ಕೆಲವೊಂದು ಕೆಲಸಗಳನ್ನು ಮಾಡುವ ಬಹಳಷ್ಟು ಯುವಕರಿಗೆ ಹುಡುಗಿಯರು ಸಿಗದ ಕಾರಣದಿಂದ ಮದುವೆಗಳು ತಡವಾಗುತ್ತಿವೆ. ಎಲ್ಲರೂ ಉನ್ನತ ಹುದ್ದೆಯಲ್ಲಿ ಇರುವವರನ್ನೇ ಬಯಸುತ್ತಿರುವುದರಿಂದ ಸಾಮಾನ್ಯ ವರ್ಗದ ವರರಿಗೆ ವಧು ಸಿಕ್ಕಿ ಅವರು ಮದುವೆಯಾಗುವ ಹೊತ್ತಿಗೆ ವಯಸ್ಸು ಮೀರುತ್ತಿದೆ. ಇನ್ನೊಂದೆಡೆ ಯುವಕರೇ ಲೈನಲ್ಲಿ ಸೆಟ್ಲ್ ಆದ ಮೇಲೆ ಆಗೋಣವೆಂದು ಮದುವೆಯನ್ನು ಮುಂದೆ ಹಾಕುತ್ತಿರುವುದರಿಂದಲೂ ಬಹಳಷ್ಟು ಮಂದಿಯ ಮದುವೆ ತಡವಾಗುತ್ತಿದೆ.
ಇವತ್ತಿನ ಪರಿಸ್ಥಿತಿಯಲ್ಲಿ ತಡವಾಗಿ ವಿವಾಹವಾಗುವುದರಿಂದ ದಾಂಪತ್ಯದಲ್ಲಿ ಸಮಸ್ಯೆಗಳು ಎದುರಾಗುತ್ತಿರುವುದರೊಂದಿಗೆ ಹುಟ್ಟುವ ಮಕ್ಕಳ ಮೇಲೆಯೂ ಪರಿಣಾಮ ಬೀರುತ್ತಿದೆ. ಹಿಂದಿನ ಕಾಲದ ಲೈಫ್ ಸ್ಟೈಲ್ ಬದಲಾಗಿರುವುದು, ಒತ್ತಡದ ಜೀವನ, ಜಂಕ್ ಫುಡ್ ಗಳಿಗೆ ಒತ್ತು ನೀಡಿರುವುದು ಹೀಗೆ ಹಲವು ಕಾರಣಗಳಿಂದ ನಮ್ಮ ಆರೋಗ್ಯವೂ ಮೊದಲಿನಂತಿಲ್ಲ. ಹೀಗಿರುವಾಗ ಕೆಲವೊಂದು ವಿಚಾರಗಳ ಬಗ್ಗೆ ಅರಿತು ಮುಂದುವರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜೀವನದಲ್ಲಿ ಮದುವೆ ಎನ್ನುವುದು ಮಹತ್ತರ ಘಟ್ಟವಾಗಿದೆ. ಸಂಗಾತಿಗಳಿಬ್ಬರು ಒಬ್ಬರನೊಬ್ಬರು ಅರಿತು ಬದುಕುವುದರ ಜತೆಗೆ ಮಕ್ಕಳನ್ನು ಹೆತ್ತು, ಲಾಲನೆ ಪಾಲನೆ ಮಾಡುವ ಜವಬ್ದಾರಿಯೂ ಇದೆ. ಮದುವೆಯ ಬಳಿಕ ಮುದ್ದಾದ ಮತ್ತು ಆರೋಗ್ಯವಂತ ಮಗುವನ್ನು ಬಯಸುವುದು ಸಹಜವೇ ಹೀಗಿರುವಾಗ ಮದುವೆಯ ಬಳಿಕ ಸಂತಾನ ಪಡೆಯುವುದೇ ಸಂಕಷ್ಟವಾಗಿ ಪರಿಣಮಿಸಿದರೆ ಅದು ದಾಂಪತ್ಯಕ್ಕೊಂದು ಕೊರತೆಯಾಗಿ ಕಾಡಲಾರಂಭಿಸುತ್ತದೆ.
ವಯಸ್ಸು ವೀರಿದರೆ ಆಪತ್ತಾಗಬಹುದು!
ಕೆಲವರು ಮದುವೆಯಾದ ಮೇಲೆ ಒಂದಷ್ಟು ವರ್ಷ ಆರಾಮಾಗಿದ್ದು ಆ ನಂತರ ಬದುಕಿಗೆ ಆರ್ಥಿಕ ಭದ್ರತೆ ಮಾಡಿಕೊಂಡು ಮಗುವಿನ ಬಗ್ಗೆ ಯೋಚಿಸೋಣ ಎನ್ನುವವರು ಇಲ್ಲದಿಲ್ಲ. ಆದರೆ ಮೊದಲೇ ವಯಸ್ಸು ಮೀರಿ ಮದುವೆಯಾದವರು ಇಂತಹ ತೀರ್ಮಾನಕ್ಕೆ ಬರುವುದು ಒಳ್ಳೆಯ ಲಕ್ಷಣವಲ್ಲ. ಇತ್ತೀಚೆಗಿನ ಜೀವಮಾನದಲ್ಲಿ ಬದುಕಿನಲ್ಲಿ ಬಹಳಷ್ಟು ಬದಲಾವಣೆಗಳಾಗಿದ್ದು, ಸಂತಾನ ಹೀನತೆ ಹೆಣ್ಣಿನಂತೆ ಗಂಡಿನಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆ.
ಹಿಂದಿನ ಕಾಲದಲ್ಲಿ ಮಕ್ಕಳಾಗದಿದ್ದರೆ ಹೆಣ್ಣಿನ ಮೇಲೆ ಆರೋಪ ಹೊರಿಸಿ ಗಂಡಸು ಬಚಾವು ಆಗುತ್ತಿದ್ದ ಆದರೆ ಈಗ ಹಾಗಿಲ್ಲ ಗಂಡಸಿನಲ್ಲಿಯೇ ಸಮಸ್ಯೆಗಳು ಕಾಣಿಸುತ್ತಿವೆ. ಆದ್ದರಿಂದ ಮದುವೆಯಾದ ತಕ್ಷಣವೇ ಮಗುವಿನ ಬಗ್ಗೆ ಯೋಚಿಸಿ ಸಂತಾನ ಪಡೆಯುವುದು ಅಗತ್ಯವಾಗಿದೆ ಎಂದರೆ ತಪ್ಪಾಗಲಾರದು. ತಡವಾಗಿ ಮದುವೆಯಾದರೆ ಪುರುಷರಲ್ಲಿ ಕೆಲವೊಂದು ಸಮಸ್ಯೆಗಳು ಕಾಣಿಸಲಿದೆಯಂತೆ ಆದ್ದರಿಂದ ತುಂಬಾ ಎಚ್ಚರಿಕೆ ವಹಿಸುವುದು ಅಷ್ಟೇ ಮುಖ್ಯವಾಗಿದೆ. ಹಣ ಆಸ್ತಿಗಳನ್ನು ಯಾವತ್ತು ಬೇಕಾದರೂ ಗಳಿಸಿಕೊಳ್ಳಬಹುದು. ಆದರೆ ವಯಸ್ಸು ಮತ್ತು ಆರೋಗ್ಯವನ್ನು ಕಳೆದು ಕೊಂಡರೆ ಅದನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.

ಅಧ್ಯಯನ ಹೇಳುವುದು ಏನು?
ವಯಸ್ಸಾಗುತ್ತಿದ್ದಂತೆಯೇ ತಂದೆಯಾಗಲು ಬೇಕಾದ ಫಲವತ್ತತೆ ಕಡಿಮೆಯಾಗುತ್ತದೆ. ಇದು ಸಂತನೋತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ. ಜತೆಗೆ ಹುಟ್ಟುವ ಮಕ್ಕಳಿಗೂ ಕೆಲವೊಂದು ತೊಂದರೆಗಳು ಕಾಣಿಸಬಹುದು. ವೈದ್ಯರ ಪ್ರಕಾರ ತಂದೆಗೆ ವಯಸ್ಸಾಗಿ ಹುಟ್ಟುವ ಮಗುವಿನಲ್ಲಿ ಮುಂದೆ ಮಾರ್ಫನ್ ಸಿಂಡ್ರೋಮ್, ಪಾಲಿಫಾರ್ಮೇಶನ್ ಇನ್ ಲಾರ್ಜ್ ಬಾವೆಲ್ ಮುಂತಾದ ಸಿಂಡ್ರೋಮ್ಗಳು ಕಾಣಿಸಿಕೊಳ್ಳಬಹುದು ಎನ್ನಲಾಗಿದೆ.
ಅಧ್ಯಯನದ ಪ್ರಕಾರ 30-34 ವಯಸ್ಸಿನ ಅವಧಿಯಲ್ಲಿ ತಂದೆಯಾಗುವವರ ಮಕ್ಕಳಲ್ಲಿ 1000ಕ್ಕೆ ಒಂದು ಮಗುವಿಗೆ, 40-45ವಯಸ್ಸಿನಲ್ಲಿ ತಂದೆಯಾದರೆ ಅಂಥವರಲ್ಲಿ 1000ಕ್ಕೆ 4 ಅಥವಾ 5 ಮಕ್ಕಳಿಗೆ ಹಾಗೂ 45 ವಯಸ್ಸಿನ ನಂತರ ತಂದೆಯಾದರೆ 1000ಕ್ಕೆ 37ಮಕ್ಕಳಿಗೆ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆಯಂತೆ! ಮಕ್ಕಳಲ್ಲಿ ಅನುವಂಶೀಯವಾಗಿ ಕಾಣಿಸಿಕೊಳ್ಳುವ ಅನೇಕ ತೊಂದರೆಗಳಿಗೆ ತಂದೆಯಾಗುವಾಗಿನ ವಯಸ್ಸು 40 ದಾಟಿರುವುದೇ ಮುಖ್ಯ ಕಾರಣ ಎಂದು ಹೇಳಲಾಗಿದೆ.
ಸುಖಮಯ ಜೀವನ ಸಾಧ್ಯ
ಒಟ್ಟಾರೆ ಹೇಳಬೇಕೆಂದರೆ ನಮ್ಮ ದಾಂಪತ್ಯದ ಜೀವನ ಆರೋಗ್ಯವಾಗಿದ್ದು, ಮುದ್ದಾದ ಮಗುವನ್ನು ಪಡೆಯಬೇಕಾದರೆ ಇವತ್ತು ನಾವು ಕೆಲವೊಂದು ವಿಚಾರಗಳನ್ನು ಅರಿತುಕೊಳ್ಳುವುದು ಬಹುಮುಖ್ಯವಾಗಿದೆ. ದಾಂಪತ್ಯದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಆರೋಗ್ಯವಾಗಿದ್ದರೆ ಮಾತ್ರ ಸುಖಮಯ ಜೀವನ ಸಾಧ್ಯ. ಹೀಗಾಗಿ ಮಗುವನ್ನು ಪಡೆಯ ವಯಸ್ಸು ಮಾತ್ರವಲ್ಲದೆ, ದುಶ್ಚಟಗಳಿಂದ ದೂರವಿರುವುದು ಅಷ್ಟೇ ಮುಖ್ಯವಾಗಿದೆ.












Click it and Unblock the Notifications