ಕಾರ್ ಟೈರ್‌ನಷ್ಟು ದೊಡ್ಡ ಗಾತ್ರದ ಹೂವಿದು!ವಾರಗಳವರೆಗೆ ಅರಳಿ ನಿಲ್ಲುವ ಪುಷ್ಟ, ಮೈಲುಗಟ್ಟಲೆವರೆಗೆ ಹರಡುವುದು ವಾಸನೆ
ಜಗತ್ತಿನಲ್ಲಿ ಲಕ್ಷಾಂತರ ಬಗೆಯ ಹೂವುಗಳಿವೆ. ಕೆಲವು ಗಾತ್ರದಲ್ಲಿ ಚಿಕ್ಕದಾಗಿದ್ದರೆ ಇನ್ನು ಕೆಲವು ದೊಡ್ದದಿರುತ್ತವೆ. ಮತ್ತೆ ಕೆಲವು ಹೂವುಗಳು ತಮ್ಮ ವರ್ಣರಂಜಿತ ದಳಗಳಿಂದ ಗಮನ ಸೆಳೆಯುತ್ತವೆ. ಆದರೆ ರಫ್ಲೆಸಿಯಾ ಈ ಎಲ್ಲಾ ಹೂವುಗಳಿಂದ ಭಿನ್ನವಾಗಿದ್ದು ಎದ್ದು ಕಾಣುತ್ತದೆ. ಇದನ್ನು ವಿಶ್ವದ ಅತಿದೊಡ್ಡ ಏಕ ಹೂವು ಎಂದು ಪರಿಗಣಿಸಲಾಗಿದೆ. ಆದರೆ ಇದರ ಅತ್ಯಂತ ಗಮನಾರ್ಹ ಲಕ್ಷಣವೆಂದರೆ ಅದರ ಸೌಂದರ್ಯವಲ್ಲ, ಬದಲಾಗಿ ಅದರ ದುರ್ವಾಸನೆ. ಈ ಹೂವು ಕೊಳೆಯುತ್ತಿರುವ ಶವದಂತೆಯೇ ಕಟುವಾದ ವಾಸನೆಯನ್ನು ಹೊರಸೂಸುತ್ತದೆ. ಅದೂ ಮೈಲುಗಟ್ಟಲೆ ದೂರದವರೆಗೆ ಈ ಹೂವಿನ ವಾಸನೆ ಹರಡುತ್ತದೆ.
ಈ ಹೂವು ಸುಮಾರು ಒಂದು ಮೀಟರ್ ಗಾತ್ರದವರೆಗೆ ಇರಬಹುದು. ಅಂದರೆ ಈ ಹೂವುದ ಅರಳುವಾಗ ಅದು ದೊಡ್ಡ ಕಾರಿನ ಟೈರ್‌ನ ಗಾತ್ರದಂತೆ ಕಾಣುತ್ತದೆ. ಇದರ ತೂಕ ಕೂಡಾ 10 ರಿಂದ 12 ಕೆ.ಜಿ ಯಷ್ಟಿರುತ್ತದೆ. ಹೂವು ಕೆಂಪು-ಕಂದು ಬಣ್ಣವನ್ನು ಹೊಂದಿರುತ್ತದೆ. ಇದರ ದಪ್ಪ ದಳಗಳು ಮಾಂಸದಂತೆ ಕಾಣುತ್ತವೆ. ಇದು ಅದನ್ನು ಇನ್ನಷ್ಟು ವಿಶಿಷ್ಟವಾಗಿಸುತ್ತದೆ.

ವಾಸನೆಗೆಯೇ ಹೆಸರಾದ ಹೂವಿದು:
ಹೆಚ್ಚಿನ ಹೂವುಗಳು ತಮ್ಮ ಆಹ್ಲಾದಕರ ಪರಿಮಳದಿಂದ ಜನರನ್ನು ಮತ್ತು ಕೀಟಗಳನ್ನು ಆಕರ್ಷಿಸುತ್ತವೆ. ಆದರೆ ರಫ್ಲೆಸಿಯಾ ತುಂಬಾ ಭಿನ್ನವಾಗಿದೆ. ಈ ಹೂವು ಕೊಳೆಯುತ್ತಿರುವ ಶವದಂತೆ ದುರ್ವಾಸನೆಯನ್ನು ಹೊರಸೂಸುತ್ತದೆ. ಅದಕ್ಕಾಗಿಯೇ ಇದನ್ನು "ಶವದ ಹೂವು" (Corpse Flower) ಎಂದು ಕೂಡಾ ಕರೆಯಲಾಗುತ್ತದೆ. ಅಂದರೆ ಶವದಂತಹ ವಾಸನೆಯನ್ನು ಹೊಂದಿರುವ ಹೂವು. ಹೂವು ಏಕೆ ಅಷ್ಟು ಕೆಟ್ಟ ವಾಸನೆಯನ್ನು ಹೊರಸೂಸುತ್ತದೆ ಎನ್ನುವುದಕ್ಕೂ ಕಾರಣವಿದೆ.ವಿಜ್ಞಾನಿಗಳ ಪ್ರಕಾರ, ರಫ್ಲೆಸಿಯಾ ನೊಣಗಳನ್ನು ಆಕರ್ಷಿಸಲು ಈ ಪರಿಮಳವನ್ನು ಹೊರಸೂಸುತ್ತದೆ. ಈ ವಾಸನೆಯಿಂದ ನೊಣಗಳು ಹೂವಿನ ಕಡೆಗೆ ಆಕರ್ಷಿತವಾಗುತ್ತವೆ. ಈ ಮೂಲಕ ಪರಾಗಸ್ಪರ್ಶಕ್ಕೆ ಸಹಾಯ ಮಾಡುತ್ತವೆ. ಈ ಮೂಲಕ ಹೂವಿನ್ ಜೀವನ ಚಕ್ರ ಮಂದುವರೆಯುತ್ತದೆ.
ಸಾಮಾನ್ಯ ಸಸ್ಯಗಳಂತಲ್ಲ ಈ ಹೂವು:
ರಫ್ಲೆಸಿಯಾ ಬಗ್ಗೆ ಅತ್ಯಂತ ಆಶ್ಚರ್ಯಕರವಾದ ವಿಷಯವೆಂದರೆ ಅದು ಇತರ ಸಸ್ಯಗಳಂತೆ ಬೆಳೆಯುವುದಿಲ್ಲ. ಸಸ್ಯಗಳು ಸಾಮಾನ್ಯವಾಗಿ ಎಲೆಗಳು, ಕಾಂಡಗಳು ಮತ್ತು ಬೇರುಗಳನ್ನು ಹೊಂದಿರುತ್ತವೆ. ಆದರೆ ರಫ್ಲೆಸಿಯಾಕ್ಕೆ ಇದ್ಯಾವುದೂ ಇರುವುದಿಲ್ಲ. ಇದು ಪರಾವಲಂಬಿ ಸಸ್ಯವಾಗಿದ್ದು, ಇತರ ಸಸ್ಯಗಳ ಬೇರುಗಳಿಂದ ತನ್ನ ಆಹಾರ ಮತ್ತು ಅಗತ್ಯ ಪೋಷಕಾಂಶಗಳನ್ನು ಪಡೆಯುತ್ತದೆ. ಈ ಹೂವು ದೀರ್ಘಕಾಲದವರೆಗೆ ಅಡಗಿಕೊಂಡಿದ್ದು, ಇದ್ದಕ್ಕಿದ್ದಂತೆ ಅರಳುತ್ತದೆ.
ವಿಶ್ವದ ಅತಿ ದೊಡ್ಡ ಹೂವು ಎಲ್ಲಿ ಕಂಡುಬರುತ್ತದೆ?:
ರಫ್ಲೇಷಿಯಾ ಮುಖ್ಯವಾಗಿ ಆಗ್ನೇಯ ಏಷ್ಯಾದ ದಟ್ಟ ಕಾಡುಗಳಲ್ಲಿ ಕಂಡುಬರುತ್ತದೆ. ಇಂಡೋನೇಷ್ಯಾ, ಮಲೇಷ್ಯಾ, ಥೈಲ್ಯಾಂಡ್ ಮತ್ತು ಫಿಲಿಪೈನ್ಸ್‌ನ ಮಳೆಕಾಡುಗಳಲ್ಲಿ ಈ ಹೂವು ಹೆಚ್ಚಾಗಿ ಕಂಡು ಬರುತ್ತದೆ. ಈ ಹೂವು ಕಾಣಸಿಗುವುದು ಬಲು ಅಪರೂಪ. ಅರಣ್ಯನಾಶ ಮತ್ತು ಪರಿಸರ ಬದಲಾವಣೆಗಳು ಅವುಗಳ ಉಳಿವಿನ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಅನೇಕ ಪ್ರಭೇದಗಳು ಈಗ ಅಳಿವಿನಂಚಿನಲ್ಲಿವೆ. ಈ ಹೂವಿನ ಅತ್ಯಂತ ಗಮನಾರ್ಹ ಲಕ್ಷಣವೆಂದರೆ ವರ್ಷವಿಡೀ ಅರಳುವುದಿಲ್ಲ. ಒಮ್ಮೆ ಅರಳಿದ ಹೂವು 5 ರಿಂದ 7 ದಿನಗಳವರೆಗೆ ತನ್ನ ಸೌಂದರ್ಯವನ್ನು ಪ್ರದರ್ಶಿಸುತ್ತದೆ. ನಂತರ, ಅದು ಕ್ರಮೇಣ ಮಸುಕಾಗುತ್ತದೆ.
ಆಕರ್ಷಣೆಯ ಕೇಂದ್ರ ಬಿಂದು:
ಅದರ ಅಗಾಧ ಗಾತ್ರ ಮತ್ತು ವಿಶಿಷ್ಟ ರೂಪದಿಂದಾಗಿ ಈ ಹೂವು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಪ್ರಪಂಚದಾದ್ಯಂತದ ಜನರು ಇದನ್ನು ನೋಡಲು ಕಾಡುಗಳಿಗೆ ಭೇಟಿ ನೀಡುತ್ತಾರೆ. ಆದರೆ, ಅದರ ಕೆಟ್ಟ ವಾಸನೆಯು ಅನೇಕರಿಗೆ ಕಿರಿಕಿರಿ ಉಂಟುಮಾಡುವ ಕಾರಣ, ಅದರ ಬಳಿ ದೀರ್ಘಕಾಲ ನಿಲ್ಲುವುದು ಕಷ್ಟ. ಈ ಹೂವನ್ನು ನೋಡುವ ಅನುಭವವು ಸ್ಮರಣೀಯವಾಗಿದೆ.
ರಫ್ಲೆಸಿಯಾ ಬಗ್ಗೆ ಆಸಕ್ತಿದಾಯಕ ಸಂಗತಿಗಳು:
ರಫ್ಲೆಸಿಯಾವನ್ನು ವಿಶ್ವದ ಅತಿದೊಡ್ಡ ಏಕ ಹೂವು ಎಂದು ಪರಿಗಣಿಸಲಾಗಿದೆ. ಇದರ ಗಾತ್ರವು ಒಂದು ಮೀಟರ್ ವರೆಗೆ ತಲುಪಬಹುದು. ಕೆಲವು ಪ್ರಭೇದಗಳು 12 ಕಿಲೋಗ್ರಾಂಗಳಷ್ಟು ತೂಗಬಹುದು. ಈ ಹೂವು ಅರಳಲು ಹಲವು ವರ್ಷಗಳವರೆಗೆ ಕಾಯುತ್ತದೆ. ಒಮ್ಮೆ ಅರಳಿದ ಸರಿ ಸುಮಾರು ಒಂದು ವಾರಗಳವರೆಗೆ ಮಾತ್ರ ಬದುಕಬಲ್ಲದು.ಅರಳುವ ಮುನ್ನ ಈ ಹೂವಿನ ಮೊಗ್ಗು ಚೆಂಡಿನಂತೆ ಕಾಣಿಸುತ್ತದೆ.
ಪ್ರಕೃತಿಯಲ್ಲಿ ಏನೇ ನಡೆದರೂ ಅದರ ಹಿಂದೆ ಒಂದು ಕಾರಣವಿರುತ್ತದೆ. ಈ ಹೂವಿನ ವಾಸನೆ ನಮಗೆ ತಡೆಕೊಲ್ಳುವುದು ಸಾಧ್ಯವಾಗದೇ ಇರಬಹುದು. ಆದರೆ ಈ ಹೂವಿನ ಜೀನವ ಚಕ್ರ ಮುಂದುವರೆಯುವ=ವುದೇ ಈ ವಾಸನೆಯಿಂದ. ಪ್ರಕೃತಿಯು ಸುಂದರವಾದ ವಸ್ತುಗಳನ್ನು ಸೃಷ್ಟಿಸುವುದಲ್ಲದೆ, ನಮ್ಮನ್ನು ಯೋಚಿಸುವಂತೆಯೂ ಮಾಡುತ್ತದೆ. ಈ ವಿಶಿಷ್ಟ ಹೂವೇ ಅದಕ್ಕೆ ಸಾಕ್ಷಿ. ಅದರ ಗಾತ್ರ ಮತ್ತು ವಿಶಿಷ್ಟ ಗುಣಲಕ್ಷಣಗಳಿಂದಾಗಿ, ರಫ್ಲೆಸಿಯಾ ವಿಜ್ಞಾನಿಗಳು ಮತ್ತು ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿ ಉಳಿದಿದೆ.
(ಬರಹ: ರಂಜಿತಾ ಆರ್.ಕೆ.)


Click it and Unblock the Notifications
